ಪದ್ಯ ೧: ಕೃಷ್ಣನು ಪಾಂಡವರ ಬಳಿ ಹೇಗೆ ವ್ಯವಹರಿಸುತ್ತಿದ್ದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀ ತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯಸಿಂಧುವಲಾ
ಶ್ರೀಲತಾಂಗಿಯರಮಣನಿನಿಬರೊ
ಳಾಳೊಡೆಯರಾರೆಂಬ ಭೇದವ
ಬೀಳುಕೊಟ್ಟೇ ನಡೆಸುತಿದ್ದನು ತನ್ನ ಮೈದುನರ (ಉದ್ಯೋಗ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರ ಉನ್ನತ ಏಳಿಗೆಯನ್ನು ಹೇಗೆ ತಾನೆ ಹೇಳಲಿ? ಕರುಣಾಸಾಗರನಾದ ಶ್ರೀಕೃಷ್ಣನು ಸೇವಕರು ಯಾರು ಒಡೆಯರು ಯಾರು ಎಂಬ ಭೇದವನ್ನೇ ಬಿಟ್ಟು ಮೈದುನರಾದ ಪಾಂಡವರೊಡನೆ ವ್ಯವಹರಿಸುತ್ತಿದ್ದನು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಪಾಲ: ಪೋಷಿಸುವ; ತನಯ: ಮಕ್ಕಳು, ಮಗ; ಉನ್ನತ: ಹಿರಿಯ, ಉತ್ತಮ; ಏಳಿಗೆ: ಬೆಳವಣಿಗೆ; ಕಾರುಣ್ಯ: ಕರುಣೆ, ದಯೆ; ಸಿಂಧು: ಸಾಗರ; ಶ್ರೀ: ಲಕ್ಷ್ಮಿ; ಶ್ರೀಲತಾಂಗಿ: ಲಕ್ಷ್ಮಿ; ಲತಾಂಗಿ: ಬಳ್ಳಿಯಂತಹ ದೇಹವಿರುವ, ಸುಂದರಿ; ರಮಣ: ನಲ್ಲ, ಪ್ರಿಯಕರ; ಇನಿಬರ್: ಇಷ್ಟು ಜನ; ಆಳು: ಸೇವಕ; ಒಡೆಯ: ರಾಜ; ಭೇದ: ವ್ಯತ್ಯಾಸ; ಬೀಳುಕೊಡು: ಕಳುಹಿಸಿಕೊಡು; ನಡೆಸು: ನಿರ್ವಹಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುಂತೀ +ತನಯರ್+ಉನ್ನತದ್
ಏಳಿಗೆಯನ್+ಏನೆಂಬೆನೈ +ಕಾರುಣ್ಯ+ಸಿಂಧುವಲಾ
ಶ್ರೀಲತಾಂಗಿಯ+ರಮಣನ್+ಇನಿಬರೊಳ್
ಆಳ್+ಒಡೆಯರ್+ಆರೆಂಬ +ಭೇದವ
ಬೀಳುಕೊಟ್ಟೇ +ನಡೆಸುತಿದ್ದನು +ತನ್ನ +ಮೈದುನರ

ಅಚ್ಚರಿ:
(೧) ಕೃಷ್ಣನನ್ನು (ವಿಷ್ಣು) ಶ್ರೀಲತಾಂಗಿಯ ರಮಣ, ಕಾರುಣ್ಯಸಿಂಧು ಎಂದು ಕರೆದಿರುವುದು
(೨) ಮೈದುನ – ಪಾಂಡವರಿಗೂ ಕೃಷ್ಣನಿಗು ಇರುವ ಸಂಬಂಧವನ್ನು ತಿಳಿಸಿರುವುದು

ಪದ್ಯ ೫೦: ಅರ್ಜುನನ್ನು ನೋಡಿದ ದೇವತೆಗಳು ಏನೆಂದು ಹೇಳಿದರು?

ಮುಂದೆ ರಥವೆಸಗಿದನು ಪಾರ್ಥನು
ಬಂದನುತ್ತರ ಸಹಿತ ವಹಿಲದೊ
ಳಂದು ಬಡಗಣದೆಸಗೆ ಮೇಲಣ ಸುರರು ನೋಡುತಿರೆ
ಇಂದಿನಾಹವದೊಳಗೆ ನರ ರಿಪು
ವೃಂದವನು ಜಯಿಸುವನೆನುತಲಾ
ನಂದದಿಂದವೆ ಹರುಷಿಯಾದನು ವೀರನಾರಯಣ (ವಿರಾಟ ಪರ್ವ, ೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನು ನಡೆಸುತ್ತಾ ಉತ್ತರದಿಕ್ಕಿಗೆ ಬಂದನು. ದೇವತೆಗಳು ಆಕಾಶದಲ್ಲಿ ಇದನ್ನು ನೋಡುತ್ತಿದ್ದರು. ಇಂದಿನ ಯುದ್ಧದಲ್ಲಿ ಅರ್ಜುನನು ಶತ್ರು ಸಮೂಹವನ್ನು ಗೆಲ್ಲುವನೆಂದು ತಿಳಿದು ವೀರನಾರಾಯಣನು ಹರ್ಷಿಸಿದನು.

ಅರ್ಥ:
ಮುಂದೆ: ಆಮೇಲೆ; ರಥ: ಬಂಡಿ; ಉತ್ತರ:ಉತ್ತರದಿಕ್ಕು; ಸಹಿತ: ಜೊತೆ; ವಹಿಲ: ವೇಗ, ಪ್ರವಾಹ; ಬಡಗ: ಉತ್ತರ; ಸುರ: ದೇವತೆ; ನೋಡು: ವೀಕ್ಷಿಸು; ಆಹವ: ಯುದ್ಧ; ನರ: ಮನುಷ್ಯ (ಇಲ್ಲಿ ಅರ್ಜುನ); ರಿಪು: ವೈರಿ; ವೃಂದ: ಗುಂಪು; ಜಯಿಸು: ಗೆಲುವು; ಆನಂದ: ಸಂತೋಷ; ಹರುಷ: ಸಂತೋಷ; ಎಸಗು: ಮಾಡು; ದೆಸೆ: ದಿಕ್ಕು;

ಪದವಿಂಗಡಣೆ:
ಮುಂದೆ +ರಥವ್+ಎಸಗಿದನು +ಪಾರ್ಥನು
ಬಂದನ್+ಉತ್ತರ +ಸಹಿತ+ ವಹಿಲದೊಳ್
ಅಂದು +ಬಡಗಣ+ದೆಸಗೆ +ಮೇಲಣ +ಸುರರು +ನೋಡುತಿರೆ
ಇಂದಿನ+ಆಹವದೊಳಗೆ+ ನರ+ ರಿಪು
ವೃಂದವನು +ಜಯಿಸುವನ್+ಎನುತಲ್
ಆನಂದದಿಂದವೆ+ ಹರುಷಿಯಾದನು+ ವೀರನಾರಯಣ

ಅಚ್ಚರಿ:
(೧) ಆನಂದ, ಹರುಷ – ಸಮನಾರ್ಥಕ ಪದ
(೨) ಅರ್ಜುನನ ಸಾರಥ್ಯವನ್ನು ಕಂಡು ವೀರನಾರಯಣ (ಕೃಷ್ಣ) ಸಂತೋಷನಾದನು ಎಂದು ವರ್ಣಿಸಿರುವುದು
(೩) ಉತ್ತರ, ಬಡಗ – ೨, ೩ ಸಾಲಿನಲ್ಲಿ ಬರುವ ಪದ, ಉತ್ತರ ಕುಮಾರ ಮತ್ತು ಉತ್ತರ ದಿಕ್ಕು ಎಂದು ಅರ್ಥೈಸಬೇಕು
(೩) ಸಂತೋಷದಿಂದ ಸಂತಸಪಡೆಯುವುದು – ಪದ ಪ್ರಯೋಗ – ಆನಂದದಿಂದವೆ ಹರುಷಿಯಾದನು.