ಪದ್ಯ ೨೦: ಜರಾಸಂಧನ ಸೆರೆಯಲ್ಲಿ ಯಾವ ರಾಜರಿದ್ದರು?

ಅರಸ ಕೇಳ್ನೂರೊಂದು ವಂಶದ
ಧರಣಿಪರು ಮಾಗಧನ ಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸು ಬಲಗರ್ವಿತರಸಂಖ್ಯಾತರಿಹರೆಂದ (ಸಭಾ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ಕೇಳು, ಜರಾಸಂಧನ ಸೆರೆಯಲ್ಲಿ ನೂರೊಂದು ವಂಶದ ರಾಜರಿದ್ದಾರೆ. ಅವರನ್ನು ಬೇಗ ಬಿಡಿಸಬೇಕು. ಭಗದತ್ತ, ಬಾಹ್ಲಿಕ, ನರಕ ವೃದ್ಧಕ್ಷತ್ರ ಮೊದಲಾದ ಬಲದಿಂದ ಗರ್ವಿತರಾದ ರಾಜರು ಲೆಕ್ಕವಿಲ್ಲದಷ್ಟು ಜನರಿದ್ದಾರೆ.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವಂಶ: ಕುಲ; ಧರಣಿ: ಭೂಮಿ; ಮನೆ: ಗೃಹ; ಸೆರೆ: ಬಂಧನ; ಬಿಡಿಸು: ನಿವಾರಿಸು; ನಿರಂತರ: ಯಾವಾಗಲು; ದುರುಳ: ದುಷ್ಟ; ಬಲ: ಶಕ್ತಿ; ಗರ್ವ: ಹೆಮ್ಮೆ; ಅಸಂಖ್ಯಾತ: ಬಹಳ; ಆಯ: ರೀತಿ;

ಪದವಿಂಗಡಣೆ:
ಅರಸ +ಕೇಳ್+ನೂರೊಂದು +ವಂಶದ
ಧರಣಿಪರು +ಮಾಗಧನ +ಮನೆಯಲಿ
ಸೆರೆಯಲ್+ಐದರೆ +ಬಿಡಿಸಬೇಕು +ನಿರಂತರ್+ಆಯದಲಿ
ದುರುಳನವ +ಭಗದತ್ತ +ಬಾಹ್ಲಿಕ
ನರಕ+ ವೃದ್ಧಕ್ಷತ್ರ+ ಮೊದಲಾದ್
ಅರಸು +ಬಲ+ಗರ್ವಿತರ್+ಅಸಂಖ್ಯಾತರ್+ಇಹರೆಂದ

ಅಚ್ಚರಿ:
(೧) ಅರಸು – ೧, ೬ ಸಾಲಿನ ಮೊದಲ ಪದ
(೨) ಭಗದತ್ತ, ಬಾಹ್ಲಿಕ, ನರಕ, ವೃದ್ಧಕ್ಷತ್ರ – ರಾಜರ ಹೆಸರು

ಪದ್ಯ ೧೯: ಜರಾಸಂಧನು ಯುಧಿಷ್ಠಿರನ ಮೇಲೆ ಕೋಪಗೊಳ್ಳಲು ಕಾರಣವೇನು?

ಮಾವದೇವನ ಮುರಿದೊಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು
ನಾವು ನಾನಾ ದುರ್ಗದಲಿ ಸಂ
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆಂದ (ಸಭಾ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕಂಸನನು ನಾನು ಸಂಹಾರಮಾಡಿದ ನಂತರ, ಅವನ ಪತ್ನಿಯರಾದ ಅಸ್ತಿ, ಪ್ರಪ್ತಿ ಯರು ತಮ್ಮ ತಂದೆಯಾದ ಜರಾಸಂಧನ ಬಳಿ ದೂರಿದರು. ಕೋಪಗೊಂಡ ಜರಾಸಂಧನು ಮಧುರೆಯ ಮೇಳೆ ದಂಡೆತ್ತಿ ಬಂದನು. ನಾನು ಓಡಿಹೋಗಿ ಅನೇಕ ಕೋಟೆಗಳಲ್ಲಿ ಸೇರಿಕೊಂಡು ಅವನೊಡನೆ ಯುದ್ಧಮಾಡಿ ಓಡಿಹೋಗೆ ದ್ವಾರಕೆಯನ್ನು ಕಟ್ಟಿಕೊಂಡೆ. ಈಗ ನಾನು ನಿಮ್ಮೊಡನೆ ಸೇರಿದರೆ ಅವನು ನಿಮ್ಮ ಮೇಲೆ ಕೋಪಗೊಳ್ಳುವುದಿಲ್ಲವೆ ಎಂದು ಶ್ರೀಕೃಷ್ಣನು ಯುಧಿಷ್ಠಿರನನ್ನು ಕೇಳಿದ.

ಅರ್ಥ:
ಮಾವ: ತಾಯಿಯ ತಮ್ಮ; ಮುರಿ: ಕೊಲ್ಲು, ಹೊಡೆ; ದೇವಿ: ರಾಣಿ; ದೂರು: ಮೊರೆ, ಅಹವಾಲು; ವಿಗಡ:ಶೌರ್ಯ, ಪರಾಕ್ರಮ; ದಂಡೆತ್ತು: ಸೇನೆಯಿಂದ ಆಕ್ರಮಿಸು; ನಾನಾ: ಹಲವಾರು; ದುರ್ಗ: ಕೋಟೆ; ಸಂಭಾವಿಸು:ನಿಭಾಯಿಸು; ಕೂಡು: ಸೇರು; ಮುನಿಸು: ಕೋಪಗೊಳ್ಳು; ಭೂಪ: ರಾಜ;

ಪದವಿಂಗಡಣೆ:
ಮಾವ+ದೇವನ +ಮುರಿದೊಡ್+ಆತನ
ದೇವಿಯರು +ಬಳಿಕ+ಎಮ್ಮ +ದೂರಿದರ್
ಆ +ವಿಗಡ +ಮಗಧಂಗೆ +ಮಧುರೆಯ +ಮೇಲೆ +ದಂಡಾಯ್ತು
ನಾವು+ ನಾನಾ +ದುರ್ಗದಲಿ +ಸಂ
ಭಾವಿಸಿದೆವ್+ಆತನನು +ನಿಮ್ಮೊಡ
ನಾವು +ಕೂಡಿದೊಡ್+ಆತ +ಮುನಿಯನೆ+ ಭೂಪ +ಕೇಳೆಂದ

ಅಚ್ಚರಿ:
(೧) ಕಂಸನನ್ನು ಮಾವದೇವ ಎಂದು ಕರೆದಿರುವುದು
(೨) ೧ ಸಾಲಿನ ೨ ಪದಗಳು “ಮ” ಕಾರದಿಂದಿರುವುದು – ಮಾವದೇವನ ಮುರಿದೊಡಾತನ
(೩) ನಾವು – ೪, ೬ ಸಾಲಿನ ಮೊದಲ ಪದ

ಪದ್ಯ ೧೮: ಸಮುದ್ರ ಮಧ್ಯದಲ್ಲಿ ಕೃಷ್ಣನು ಊರನ್ನು ಕಟ್ಟಲು ಕಾರಣವೇನು?

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭಂಗಕೆ ಬಂದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರಕಟ್ಟಿದೆವರಸ ಕೇಳೆಂದ (ಸಭಾ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಇಂತಹ ದುಷ್ಟರಾಜರ ಸಮೂಹದ ನಡುವೆ ಕೆಲವರನ್ನು ನಾನು ಸಂಹರಿಸಿದೆ, ಕೆಲವರು ಕೊಬ್ಬಿದ ಮೃತ್ಯುದೇವತೆಯಂತಿರುವ ಮಗಧರಾಜ ಜರಾಸಂಧನತರ ಪಕ್ಕಕೆ ಸರಿಯುವನಲ್ಲ, ಸುಮ್ಮನಿರುವವನಲ್ಲ. ನಂತರ ನನಗೆ ಮತ್ತು ಅವನಿಗೂ ಬಲವಾದ ವಿರೋಧ ಬಂದು ಕಲಹವಾಯಿತು. ಅವನ ಹಾವಳಿಯನ್ನು ತಾಳಲಾರದೆ ನಾನು ಸಮುದ್ರ ಮಧ್ಯದಲ್ಲಿ ಊರನ್ನು ಕಟ್ಟಿಕೊಂಡೆ.

ಅರ್ಥ:
ಕೆಲರು: ಕೆಲವರು, ಸ್ವಲ್ಪ; ಕೈ: ಹಸ್ತ; ಕೊಲೆ: ಸಾಯಿಸು, ವಧೆ; ಭಂಗ: ತುಂಡು, ಅಡ್ಡಿ; ಮಲೆವರ: ಕೊಬ್ಬಿದ; ಮಾರಿ: ಮೃತ್ಯುದೇವತೆ, ಭಯಂಕರ; ಬಳಿಕ: ನಂತರ; ಬಲ: ಶಕ್ತಿ, ಸಾಮರ್ಥ್ಯ; ವಿರೋಧ: ತಡೆ, ಅಡ್ಡಿ; ತೊಳಸು: ಘರ್ಷಣೆ, ತಿಕ್ಕಾಟ; ತೋಟಿ: ಕಲಹ, ಕಾದಾಟ; ಜಲಧಿ: ಸಮುದ್ರ; ಮಧ್ಯ: ನಡುಭಾಗ; ಊರು: ಪುರ; ಅರಸ: ರಾಜ; ಇದಿರು: ಎದುರು;

ಪದವಿಂಗಡಣೆ:
ಕೆಲವ್+ಅರಿದರ್+ಒಳು +ನಮ್ಮ +ಕೈಯಲಿ
ಕೊಲೆಗೆ +ಭಂಗಕೆ+ ಬಂದು+ ಬಿಟ್ಟರು
ಕೆಲಕೆ+ ಸರಿವವನಲ್ಲ +ಮಲೆವರ +ಮಾರಿ +ಮಾಗಧನು
ಬಳಿಕ್+ಎಮಗೆ +ಬಲವದ್+ವಿರೋಧದ
ತೊಳಸು +ಬಿದ್ದುದು +ತೋಟಿಗಾರದೆ
ಜಲಧಿ+ ಮಧ್ಯದಲ್+ಊರಕಟ್ಟಿದೆವ್+ಅರಸ +ಕೇಳೆಂದ

ಅಚ್ಚರಿ:
(೧) “ಮ” ಕಾರದ ತ್ರಿವಳಿ ಪದ – ಮಲೆವರ ಮಾರಿ ಮಾಗಧನು
(೨) ಕೆಲ – ೧, ೩ ಸಾಲಿನ ಮೊದಲ ಪದ
(೩) ತೊಳಸು, ತೋಟಿ – ಸಮನಾರ್ಥಕ ಪದ

ಪದ್ಯ ೧೭: ಯಾವ ರಾಜರು ಕ್ರೂರರ ಪಟ್ಟಿಯಲ್ಲಿದ್ದರು?

ಕಾಲಯವನನು ದಂತವಕ್ರ ನೃ
ಪಾಲರಲಿ ದುರುದುಂಬಿಗಳು ಶಿಶು
ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ
ಖೂಳರೀರ್ವರು ಹಂಸಡಿಬಿಕರು
ಸಾಲುವನ ಮುರನರಕರಾಳನ
ಮೇಳವವನೇನೆಂಬೆನೈ ಭೂಪಾಲ ಕೇಳೆಂದ (ಸಭಾ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜಸೂಗ ಯಾಗಕ್ಕೆ ನಿನ್ನನ್ನು ವಿರೋಧಿಸುವ ರಾಜರು ಎಂತಹವರು ಎಂದು ತಿಳಿದಿದ್ದಿಯೆ?, ಕೇಳು, ಕಾಲಯಮನ ಸಮನಾದನು ದಂತವಕ್ರ, ರಾಜರಲ್ಲೆಲ್ಲಾ ಪರಮದುಷ್ಟ ಶಿಶುಪಾಲನು, ಪೌಂಡ್ರಕರು ನಮಗೆ ಸರಿಸಮಾನಬಲರು, ಹಂಸಬಡಿಕರು ಮಹಾ ನೀಚರು, ಮುರನೆನ್ನುವನು ಮನುಷ್ಯರಲ್ಲೇ ಮಹಾಕ್ರೂರಿ, ಇವರೆಲ್ಲರ ಸಂಗತಿಯನ್ನು ಹೇಳುವುದಾದರೂ ಹೇಗೆ?

ಅರ್ಥ:
ಕಾಲಯವ: ಪ್ರಳಯಕಾಲದ ರುದ್ರ; ನೃಪ: ರಾಜ; ದುರುದುಂಬಿ: ದುಷ್ಟ; ಸಮ: ಸರಿಸಮಾನ; ಖೂಳ: ದುಷ್ಟ; ಕರಾಳ: ಭಯಂಕರ; ಮೇಳ: ಗುಂಪು; ಭೂಪಾಲ: ರಾಜ; ಸಾಲು: ಗುಂಪು, ಸಮರ್ಥ;

ಪದವಿಂಗಡಣೆ:
ಕಾಲಯವನನು +ದಂತವಕ್ರ +ನೃ
ಪಾಲರಲಿ +ದುರುದುಂಬಿಗಳು +ಶಿಶು
ಪಾಲ +ಪೌಂಡ್ರಕರ್+ಎಂಬರಿಗೆ +ಸಮದಂಡಿಯೆಮ್ಮೊಡನೆ
ಖೂಳರೀರ್ವರು +ಹಂಸಡಿಬಿಕರು
ಸಾಲುವನ +ಮುರ+ನರ+ಕರಾಳನ
ಮೇಳವವನೇನ್+ಎಂಬೆನೈ +ಭೂಪಾಲ+ ಕೇಳೆಂದ

ಅಚ್ಚರಿ:
(೧) ದಂತವಕ್ರ, ಶಿಶುಪಾಲ, ಪೌಂದ್ರಕ, ಹಂಸಡಿಬಕ, ಮುರ – ಕ್ರೂರ ರಾಜರ ಹೆಸರುಗಳು
(೨) ಪಾಲ – ೨, ೩ ಸಾಲಿನ ಮೊದಲ ಪದ
(೩) ನೃಪಾಲ, ಭೂಪಾಲ – ರಾಜ ಪದದ ಸಮನಾರ್ಥಕ ಪದ

ಪದ್ಯ ೧೬: ಪಾಂಡವರಿಗೆ ವೈರಿಗಳಾರು?

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನು ಸೇರುವರೆ ಕೌರವ
ರದರೊಳಗ್ಗದ ಕರ್ಣಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕಂಸನ
ಮದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆಂದ (ಸಭಾ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೇ, ನಿಮ್ಮವರಾದ ಕೌರವರನ್ನೇ ಮೊದಲು ತೆಗೆದುಕೊಳ್ಳೋಣ, ದುರ್ಯೋಧನನ ಜೊತೆಗೂಡಿದ ಕರ್ಣ, ಶಕುನಿ, ಜಯದ್ರಥಾದಿಗಳು ನಿಮ್ಮ ಏಳಿಗೆಯನ್ನು ಸಹಿಸುವರೇ? ಅವರು ಹೊಟ್ಟೆಯಲ್ಲೇ ಕುದಿಯುತ್ತಾರೆ. ಅದಲ್ಲದೆ ಕಂಸನ ಪರಿವಾರ ನಿಮ್ಮ ವಿರೋಧಿಗಳು, ಜರಾಸಂಧನ ವಿಷಯವನ್ನು ಏನೆಂದು ವರ್ಣಿಸಲಿ ಎಂದು ಕೃಷ್ಣನು ಹೇಳಿದನು.

ಅರ್ಥ:
ಮೊದಲು: ಮುಂಚೆ; ಅಭ್ಯುದಯ: ಏಳಿಗೆ; ಸೇರುವರೆ: ಸಹಿಸುವರೆ; ಅಗ್ಗ: ಶ್ರೇಷ್ಠ; ಆದಿ: ಮೊದಲಾದ; ಕುತುಕುಳಿ:ವ್ಯಾಕುಲ, ಚಿತ್ತಸ್ವಾಸ್ಥ್ಯವಿಲ್ಲದ; ಮದಮುಖ: ಅಹಂಕಾರದಿಂದ ಕೂಡಿದ; ಪರಿವಾರ: ಸಂಸಾರ, ಪರಿಜನ; ಹೊರೆ:ಹತ್ತಿರ, ವಂಚನೆ; ಬಣ್ಣಿಸು: ವಿವರಿಸು, ಹೇಳು;

ಪದವಿಂಗಡಣೆ:
ಮೊದಲಲೇ +ನಿಮ್ಮವರು +ನಿಮ್ಮ್
ಅಭ್ಯುದಯವನು +ಸೇರುವರೆ +ಕೌರವರ್
ಅದರೊಳ್+ಅಗ್ಗದ +ಕರ್ಣ+ಶಕುನಿ+ ಜಯದ್ರಥಾದಿಗಳು
ಕುದುಕುಳಿಗಳ್+ಈಚೆಯಲಿ +ಕಂಸನ
ಮದಮುಖನ +ಪರಿವಾರವಿದೆ+ ದೂ
ರದಲಿ +ಮಗಧನ +ಹೊರೆಯಲದನೇ +ಬಣ್ಣಿಸುವೆನೆಂದ

ಅಚ್ಚರಿ:
(೧) ನಿಮ್ಮ – ಪದದ ಬಳಕೆ – ೨ ಬಾರಿ, ೧ ಸಾಲು – ನಿಮ್ಮವರು ನಿಮ್ಮ
(೨) ಕೌರವ, ಕರ್ಣ, ಶಕುನಿ, ಕಂಸ, ಜಯದ್ರಥ, ಜರಾಸಂಧ – ಹೆಸರುಗಳನ್ನು ಬಳಸಿರುವುದು
(೩) ಕುದುಕುಳಿ – ಹೊಟ್ಟೆಕಿಚ್ಚನ್ನು ವರ್ಣಿಸುವ ಪದ

ಪದ್ಯ ೧೫: ಕೃಷ್ಣನು ಯುಧಿಷ್ಠಿರನನ್ನು ಹೇಗೆ ಠೀಕಿಸುತ್ತಾನೆ?

ಕೆದರಿ ಸಪ್ತದ್ವೀಪ ಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮುಂದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ (ಸಭಾ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸಪ್ತದ್ವೀಪಗಳ ಎಲ್ಲಾ ಒಡೆಯರನ್ನೂ ಯುದ್ಧದಲ್ಲಿ ಪರಾಭವಗೊಳಿಸಿ ಮಾಡುವ ಈ ರಾಜಸೂಯಯಾಗವು ಈ ಕಾಲದಲ್ಲಿ ಕೈಗೊಳ್ಳಲು ಯಾರಿಗೆ ಸಾಧ್ಯ? ಅಂತಃಪುರದ ಹೆಂಗಸರು, ದಾಸಿಯರ ಮುಂದೆ ಉಬ್ಬಿ ಸಂಕಲ್ಪ ಮಾಡಿಬಿಟ್ಟಿದ್ದೀಯಾ? ನಾರದರು ಕೊಟ್ಟ ಹೊಡೆತ ಬಹುದೊಡ್ಡದು ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ತಿಳಿಸಿದನು.

ಅರ್ಥ:
ಕೆದರು:ಬೆದಕು; ಸಪ್ತ: ಏಳು; ದ್ವೀಪ: ನೀರಿನಿಂದ ಸುತ್ತುವರಿದ ಭೂಭಾಗ, ನಡುಗಡ್ಡೆ; ಪತಿ: ರಾಜ; ಸದೆ: ಹೊಡೆ, ಕೊಲ್ಲು; ರಚಿಸು: ನಿರ್ಮಿಸು; ಹದ: ಸರಿಯಾದ; ಅಂಗೈಸು: ಕೈಗೊಳ್ಳು; ವರ್ತಮಾನ: ವಿದ್ಯಮಾನ, ಸದ್ಯದ; ಸುದತಿ: ರೂಪವತಿ, ಹೆಂಗಸು; ಸೂಳೆ: ದಾಸಿ; ಉಬ್ಬು: ಹಿಗ್ಗು, ಗರ್ವಿಸು; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ದುರ್ಘಟ: ಕೆಟ್ಟಕೆಲಸ; ಗಂಡಾಂತರ; ವಿಘಾತಿ:ಕೇಡು, ಹಾನಿ, ಹೊಡೆತ; ಬಲುಹು: ತುಂಬ;

ಪದವಿಂಗಡಣೆ:
ಕೆದರಿ +ಸಪ್ತದ್ವೀಪ +ಪತಿಗಳ
ಸದೆದು +ರಚಿಸುವ +ರಾಜಸೂಯದ
ಹದನನಂಗೈಸುವನದ್+ಆರ್+ಈ+ ವರ್ತಮಾನದಲಿ
ಸುದತಿಯರ +ಸೂಳೆಯರ +ಮುಂದ್
ಉಬ್ಬಿದೆಯಲಾ +ನಾರದನ +ಘಲ್ಲಣೆ
ಗಿದು +ಸುದುರ್ಘಟವಿಂದು +ಬಿದ್ದ +ವಿಘಾತಿ +ಬಲುಹೆಂದ

ಅಚ್ಚರಿ:
(೧) ಸಪ್ತದ್ವೀಪಗಳು – ಈಗಿನ ೭ ಖಂಡಗಳನ್ನು ಹೋಲುವುದೆ?
(೨) ಯುಧಿಷ್ಠಿರನನ್ನು ಹಂಗಿಸುವ ಪರಿ: ಸುದತಿಯರ ಸೂಳೆಯರ ಮುಂದುಬ್ಬಿದೆಯಲಾ
(೩) ದುರ್ಘಟ – ಕೆಟ್ಟಕೆಲಸ, ಆದರೆ ಇಲ್ಲಿ ಸುದುರ್ಘಟ ಪದದ ಪ್ರಯೋಗ, ಒಳ್ಳೆಯ ಕೆಟ್ಟಕೆಲಸ ಎಂದು ಅರ್ಥೈಸುವುದಾದರು, ಇದು ವ್ಯಂಗ್ಯವಾಗಿ ಶ್ರೀಕೃಷ್ಣನು ಯುಧಿಷ್ಠಿರನಿಗೆ ಹೇಳುವ ಪರಿ

ಪದ್ಯ ೧೪: ಕೃಷ್ಣನು ಯುಧಿಷ್ಠಿರನ ನಿರ್ಧಾರವನ್ನು ಮಕ್ಕಳಾಟವೆಂದೇಕೆ ಹೇಳಿದನು?

ನಕ್ಕನಸುರ ವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ (ಸಭಾ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಮಾತನ್ನು ಕೇಳಿದ ಶ್ರೀಕೃಷ್ಣನು “ನಾರದರು ಬೀಸಿದ ಬಲೆಗೆ ನೀವು ಸಿಕ್ಕಿಬಿದ್ದಿರಿ, ಅಯ್ಯೋ, ತಂದೆಗೆ ದ್ರೋಹಮಾಡಬಾರದೆಂದು ನೀವು ಸಿಕ್ಕಿಬಿದ್ದಿರೆ? ಭೂಮಂಡಲದ ರಾಜರು ಸುಲಭವಾಗಿ ಒಪ್ಪುವರೆಂದು ನೀವು ತಿಳಿದಿದ್ದೀರ? ಅತಿಶಯ ಕಷ್ಟದಿಂದ ಸಾಧಿಸಬಹುದಾರ ಈ ಯಾಗದ ಆಕ್ರಮಣಕ್ಕೆ ರಾಜನ ಮನಸ್ಸು ಬಲಿಯಾಯಿತೆ? ಇದೇನು ಮಕ್ಕಳಾಟವೇ ಎಂದು ಶ್ರೀಕೃಷ್ಣನು ತಲೆಯಲ್ಲಾಡಿಸಿದನು.

ಅರ್ಥ:
ನಕ್ಕು: ಸಂತೋಷಿಸು; ಅಸುರ: ರಾಕ್ಷರ; ವಿರೋಧಿ: ವೈರಿ; ಅಸುರವಿರೋಧಿ: ಕೃಷ್ಣ; ಮುನಿ: ಋಷಿ (ಇಲ್ಲಿ ನಾರದರು); ಹಾಯಿಕ್ಕು: ಹಾಕು; ಬಲೆ: ಜಾಲ; ಅಕಟ: ಅಯ್ಯೋ; ಸಿಕ್ಕಿ: ಸೆರೆಯಾಗು; ಸ್ವಾಮಿದ್ರೋಹ: ಒಡೆಯನಿಗೆ ಮೋಸಮಾಡುವುದು; ಸದರ: ಸುಲಭ, ಸರಾಗ; ನೃಪ: ರಾಜ; ಅಕ್ಕಜ: ಹೊಟ್ಟೆಕಿಚ್ಚು, ಅಸೂಯೆ; ಮಖ: ಯಾಗ; ಚೂಣಿ: ಮುಂಭಾಗ; ಚುಕ್ಕಿ: ಬಿಂದು, ಚಿಹ್ನೆ; ಮನ: ಮನಸ್ಸು; ಮಹೀಶ: ರಾಜ; ಆಟ: ಕ್ರೀಡೆ; ತೂಗು: ಅಲ್ಲಾಡಿಸು; ಸಿರಿಮುಡಿ: ಶಿರ, ತಲೆ;

ಪದವಿಂಗಡಣೆ:
ನಕ್ಕನಸುರ+ ವಿರೋಧಿ +ಮುನಿ +ಹಾ
ಯಿಕ್ಕಿದನಲಾ +ಬಲೆಯನ್+ಅಕಟಾ
ಸಿಕ್ಕಿದಿರಲಾ+ ಸ್ವಾಮಿ+ದ್ರೋಹರು +ಸದರವೇ +ನೃಪರು
ಅಕ್ಕಜದ+ ಮಖವಿದರ+ ಚೂಣಿಗೆ
ಚುಕ್ಕಿಯಾಯಿತು+ ಮನ+ಮಹೀಶನ
ಮಕ್ಕಳಾಟಿಕೆಯಾಯ್ತ್+ಎನುತ +ತೂಗಿದನು +ಸಿರಿಮುಡಿಯ

ಅಚ್ಚರಿ:
(೧) ಪ್ರಾಸ ಪದಗಳು: ಇಕ್ಕಿ, ಚುಕ್ಕಿ, ಸಿಕ್ಕಿ
(೨) ಮಹೀಶ, ನೃಪ – ರಾಜ ಪದದ ಸಮನಾರ್ಥಕ ಪದ, ೩, ೫ ಸಾಲಿನ ಕೊನೆ ಪದ
(೩) ಕೃಷ್ಣನನ್ನು ಅಸುರವಿರೋಧಿ ಎಂದು ಕರೆದಿರುವುದು

ಪದ್ಯ ೧೩: ಧರ್ಮರಾಯನು ಕೃಷ್ಣನಲ್ಲಿ ಏನೆಂದು ಬೇಡಿದನು?

ತಿರುಗಿದರೆ ಸಂಕಲ್ಪ ಹಾನಿಯ
ಪರಮ ಪಾತಕವಿದು ಮಹಾನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವಸಾ
ಗರದಿನಿದು ಮಿಗಲೇ ಮುರಾಂತಕಯೆಂದನಾ ಭೂಪ (ಸಭಾ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗವನ್ನು ಮಾಡುವ ಸಂಕಲ್ಪದಿಂದ ಹಿಂದಿರುಗಿದರೆ, ಈ ಸಂಕಲ್ಪವನ್ನು ಮುರಿದ ಮಹಾಪಾಪ ನಮ್ಮನ್ನು ಕಾಡುತ್ತದೆ, ಅದಲ್ಲದೆ, ನಾರದರು ಈ ವಿಷಯವನ್ನು ದೇವಲೋಕದಲ್ಲೆಲ್ಲಾ ಹರಡಿ ನಮ್ಮನ್ನು ನಾಚಿಕೆಗೇಡು ಮಾಡುತ್ತಾರೆ, ಈ ಪರಿಹಾಸ್ಯದ ಸಾಗರದಿಂದ ನಮ್ಮನ್ನು ದಾಟಿಸು ಒಡೆಯ ಶ್ರೀಕೃಷ್ಣ, ಭವಸಾಗರವನ್ನು ದಾಟಿಸುವ ನಿನಗೆ ಇದು ದೊಡ್ಡದೇನಲ್ಲಾ ಎಂದು ಕೃಷ್ಣನಲ್ಲಿ ಯುಧಿಷ್ಠಿರನು ಬೇಡಿದ

ಅರ್ಥ:
ತಿರುಗು: ಹಿಂದೆ ನೋಡು, ಹಿಮ್ಮೆಟ್ಟು; ಸಂಕಲ್ಪ: ನಿರ್ಧಾರ, ನಿರ್ಣಯ; ಹಾನಿ: ಕೇಡು, ನಾಶ; ಪರಮ: ಶ್ರೇಷ್ಠ; ಪಾತಕ: ಪಾಪ; ನಿಷ್ಠುರ: ಕಠಿಣವಾದುದು, ಒರಟಾದುದು; ಮಖ: ಯಾಗ; ಅಮರ: ದೇವತೆ; ಮುನಿಪತಿ: ಋಷಿ; ಅಮರಮುನಿಪತಿ: ನಾರದ; ದೇವಲೋಕ: ಸ್ವರ್ಗ; ಹರಹು: ಹರಡು; ಪರಿಹಾಸ್ಯ:ಹಾಸ್ಯಾಸ್ಪದವಾದ; ಸಾಗರ: ಸಮುದ್ರ; ದಾಟಿಸು: ಹಾದುಹೋಗು; ಜೀಯ: ಒಡೆಯ; ಭವಸಾಗರ: ಸಂಸಾರದ ಸಾಗರ; ಮಿಗಿಲು: ಹೆಚ್ಚು; ಮುರಾಂತಕ: ಕೃಷ್ಣ; ಭೂಪ: ರಾಜ;

ಪದವಿಂಗಡಣೆ:
ತಿರುಗಿದರೆ +ಸಂಕಲ್ಪ +ಹಾನಿಯ
ಪರಮ+ ಪಾತಕವಿದು +ಮಹಾ+ನಿ
ಷ್ಠುರದ +ಮಖವಿನ್ನ್+ಅಮರ +ಮುನಿಪತಿ+ ದೇವಲೋಕದಲಿ
ಹರಹುವನು +ಪರಿಹಾಸ್ಯಮಯ +ಸಾ
ಗರವ +ದಾಟಿಸು +ಜೀಯ +ಭವಸಾ
ಗರದಿನಿದು+ ಮಿಗಲೇ +ಮುರಾಂತಕ+ಯೆಂದನಾ +ಭೂಪ

ಅಚ್ಚರಿ:
(೧) ಸಾಗರ – ೫, ೬ ಸಾಲಿನ ಮೊದಲ ಪದ
(೨) ಕೃಷ್ಣನನ್ನು ಜೀಯ, ಮುರಾಂತಕ ಎಂದು ಕರೆದಿರುವುದು, ೫,೬ ಸಾಲು
(೩) ಹಾನಿ ಪದದ ಬಳಕೆ, ೧ ಸಾಲು – ಹಾನಿಯ, ೨ ಸಾಲು – ಮಹಾನಿಷ್ಠುರ

ಪದ್ಯ ೧೨: ಯುಧಿಷ್ಠಿರನು ಯಾವ ಸಂಕಲ್ಪವನ್ನು ಮಾಡಿದ್ದನು?

ಪಿತನ ಪರಮ ಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲ ಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ (ಸಭಾ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ನಮ್ಮ ತಂದೆ ಪಾಂಡು ಮಹಾರಾಜರು ಉತ್ತಮ ಗತಿಯನ್ನು ಪಡೆದು ಅವರನ್ನು ಪ್ರಸನ್ನಗೊಳಿಸಲು ನಾರದರು ತಿಳಿಸಿದಂತೆ ಅತ್ಯಂತ ಪವಿತ್ರವಾದ ರಾಜಸೂಯಯಾಗವನ್ನು ಮಾಡಲು ನಾನು ಸಂಕಲ್ಪಬದ್ಧನಾಗಿದ್ದೇನೆ. ಈ ಯಾಗವಾದರು ಮಹಾಯಾಗ, ಇದಕ್ಕೆ ಬಹಳ ಹಣಬೇಕಾಗುತ್ತದೆ, ನನ್ನ ಈ ನಿರ್ಧಾರವನ್ನು ಸಮರ್ಥಿಸಲು ಎಲ್ಲಾ ರಾಜರು ಒಪ್ಪದಿರಬಹುದು, ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು?

ಅರ್ಥ:
ಪಿತ: ತಂದೆ; ಪರಮ: ಶ್ರೇಷ್ಠ; ಪೀತಿ: ಒಲವು; ಉನ್ನತ: ಹಿರಿಯ, ಉತ್ತಮ; ಗತಿ: ದಾರಿ; ನಿರ್ಮಳ: ನಿರಾಳ, ಸ್ವಚ್ಛ; ಕ್ರತು: ಯಾಗ; ಸಾಧನ: ಸಹಾಯ; ಮುನಿ: ಋಷಿ; ಉಪದೇಶ: ಬೋಧಿಸುವುದು; ಸಕಲ: ಎಲ್ಲಾ; ಧರಣಿ: ಭೂಮಿ; ಧರಣೀಪತಿ: ರಾಜ; ಅರ್ಥ: ಹಣ; ಗುಣ:ನಡತೆ, ಸ್ವಭಾವ; ಈಯು: ಕೊಡು; ವ್ರತ: ಆಚಾರ; ಸಂಕಲ್ಪ:ನಿರ್ಧಾರ, ನಿರ್ಣಯ; ಹದ: ಸರಿಯಾದ ಸ್ಥಿತಿ;

ಪದವಿಂಗಡಣೆ:
ಪಿತನ +ಪರಮ +ಪ್ರೀತಿಗ್+ಉನ್ನತ
ಗತಿಗೆ +ನಿರ್ಮಳ +ರಾಜಸೂಯ
ಕ್ರತುವೆ +ಸಾಧನವೆಂದು +ಮುನಿಯುಪದೇಶಿಸಿದ+ ತನಗೆ
ಕ್ರತು +ಮಹಾಕ್ರತು +ಸಕಲ +ಧರಣೀ
ಪತಿಗಳ್+ಅರ್ಥವ+ ಗುಣದಲ್+ಈಯರು
ವ್ರತವೆನಗೆ +ಸಂಕಲ್ಪವಾಯ್ತ್+ಇದಕೇನು +ಹದನೆಂದ

ಅಚ್ಚರಿ:
(೧) ೧ ಸಾಲಿನ ಎಲ್ಲಾ ಪದ “ಪ” ಕಾರದಿಂದ ಪ್ರಾರಂಭ: ಪಿತನ ಪರಮ ಪ್ರೀತಿಗುನ್ನತ
(೨) ಕ್ರತು – ೨ ಬಾರಿ ಪ್ರಯೋಗ – ಕ್ರತು ಮಹಾಕ್ರತು – ೪ ಸಾಲು
(೩) ಕ್ರತು – ೩, ೪ ಸಾಲಿನ ಮೊದಲ ಪದ

ಪದ್ಯ ೧೧: “ಪಾಂಡವರು ಸರ್ಮರ್ಥರಾದರು ಏನು ಫಲ” ವೆನ್ನಲು ಯುಧಿಷ್ಠಿರನಿಗೆ ಕಾರಣವೇನು?

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ
ಮುನಿಯ ಹೇಳಿಕೆ ಬೊಪ್ಪಗಮರೇಂ
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆಂದ (ಸಭಾ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ರಾಕ್ಷಸರಾಗಲಿ, ಕೌರವರ ಸೇನೆಯಾಗಲಿ ಇವರಿಂದ ನನಗೆ ಯಾವ ಭಯವೂ ಇಲ್ಲ, ಏಕೆಂದರೆ ನಿಮ್ಮ ಪಾದಕಮಲಗಳು ನನಗೆ ಶಿರಸ್ತ್ರಾಣವಾಗಿವೆ. ಆದರೆ ನಾರದ ಮುನಿಗಳು ನಮ್ಮ ತಂದೆ ಪಾಂಡುಮಹಾರಾಜರಿಗೆ ದೇವೆಂದ್ರನ ಆಸ್ಥಾನದಲ್ಲಿ ಸ್ಥಾನವಿಲ್ಲವೆಂದು ಹೇಳಿದರು. ನಾವು ಇಷ್ಟು ಬಲಶಾಲಿಯಾಗಿದ್ದರು ನಮ್ಮ ತಂದೆಯವರು ಈ ಸ್ಥಿತಿಯಲ್ಲಿದ್ದಾರೆ, ನಮ್ಮ ಸಾಮರ್ಥ್ಯಕ್ಕೆ ಏನು ಫಲ? ಎಂದು ಯುಧಿಷ್ಠಿರನು ಕೃಷ್ಣನನ್ನು ಕೇಳಿದನು.

ಅರ್ಥ:
ದನುಜ: ರಾಕ್ಷಸ; ಸೇನೆ: ಸೈನ್ಯ; ಭಯ: ಅಂಜಿಕೆ; ಭಾರಿ: ದೊಡ್ಡದು; ಘನ: ಶ್ರೇಷ್ಠ; ಪದ: ಪಾದ; ವನಜ: ಕಮಲ; ಸೀಸಕ:ಶಿರಸ್ತ್ರಾಣ; ಉತ್ತಮಾಂಗ: ಶಿರಸ್ಸು; ಮುನಿ: ಋಷಿ; ಹೇಳಿಕೆ: ನುಡಿ; ಬೊಪ್ಪ: ತಂದೆ; ಅಮರ: ದೇವತೆ; ಅಮರೇಂದ್ರ: ಇಂದ್ರ; ಸಮರಸ: ಸಮಾನವಾದ ಭಾವನೆ; ಗಡ:ಅಲ್ಲವೆ; ಇನಿಬರು: ಇಷ್ಟು; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ಫಲ: ಪ್ರಯೋಜನ;

ಪದವಿಂಗಡಣೆ:
ದನುಜರಲಿ +ಕುರುಸೇನೆಯಲಿ +ಭಯ
ವೆನಗೆ +ಭಾರಿಯೆ +ನಿಮ್ಮ +ಘನ +ಪದ
ವನಜವಿದು +ಸೀಸಕವಲೇ+ ತನ್ನ್+ಉತ್ತಮಾಂಗದಲಿ
ಮುನಿಯ +ಹೇಳಿಕೆ+ ಬೊಪ್ಪಗ್+ಅಮರೇಂ
ದ್ರನಲಿ+ ಸಮರಸವಿಲ್ಲ+ ಗಡ +ನಮ್ಮ್
ಇನಿಬರಲಿ+ ಸಾಮರ್ಥ್ಯವಿದ್ದುದಕೇನು+ ಫಲವೆಂದ

ಅಚ್ಚರಿ:
(೧) ಪಾದಕಮಲ ಎಂದು ಹೇಳಲು – ಪದವನಜ ಪದದ ಬಳಕೆ
(೨) ದನುಜ, ವನಜ – ಪ್ರಾಸ ಪದ ೧, ೩ ಸಾಲಿನ ಮೊದಲ ಪದ