ಪದ್ಯ ೯೧: ಹರಿಶ್ಚಂದ್ರ ಮತ್ತು ಪಾಂಡು ಯಾರ ಸಭೆಯಲ್ಲಿದ್ದಾರೆ?

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿ ರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ (ಸಭಾ ಪರ್ವ, ೧ ಸಂಧಿ, ೯೧ ಪದ್ಯ)

ತಾತ್ಪರ್ಯ:
ವೇದ ವಿಧಿಯಂತೆ ಹರಿಶ್ಚಂದ್ರನೇ ಮೊದಲಾದ ರಾಜರು ರಾಜಸೂಯಯಾಗವನ್ನು ಮಾಡಿ ಇಂದ್ರನಿಗೆ ಸರಿಮಿಗಿಲಾಗಿ ಸ್ವರ್ಗದಲ್ಲಿದ್ದಾರೆ. ಯಮನ ಸಭೆಯು ದೇವೆಂದ್ರನ ಸಭೆಯಂತೆಯೇ ಇದೆ. ಅಲ್ಲಿ ನಿಮ್ಮ ತಂದೆಯಾದ ಪಾಂಡುರಾಜನು ದುಃಖಭರಿತನಾಗಿ ಯಮನ ಸಮೀಪದಲ್ಲಿದ್ದಾನೆ.

ಅರ್ಥ:
ವೈದಿಕ: ವೇದ ವಿಧಿಯಂತೆ; ಉಕ್ತಿ: ಹೇಳಿಕೆ; ಆದಿ: ಮುಂತಾದ; ರಾಯ: ರಾಜ; ಇನಿಬರ್: ಇಷ್ಟುಜನ; ಸರಿಮಿಗಿಲು: ಸರಿಸಮ; ಪುರುಹೂತ: ಇಂದ್ರ; ಉಪಾದಿ: ಅಂತೆ, ಸಮನಾಗಿ; ಆಸ್ಥಾನ: ದರ್ಬಾರು; ವಿಷಾದ: ದುಃಖ; ಆಯ್ಯ: ತಂದೆ; ಸಮೀಪ: ಹತ್ತಿರ;

ಪದವಿಂಗಡಣೆ:
ವೈದಿಕ+ಉಕ್ತಿಗಳಲಿ +ಹರಿಶ್ಚಂ
ದ್ರಾದಿ +ರಾಯರು +ರಾಜಸೂಯದೊಳ್
ಆದರನ್+ಇನಿಬರೊಳ್+ಅಗ್ಗಳೆಯರ್+ಇಂದ್ರಂಗೆ +ಸರಿಮಿಗಿಲು
ಆದೊಡ್+ಆ+ ಪುರುಹೂತ +ಸಭೆಯೋ
ಪಾದಿ +ಯಮನ+ಆಸ್ಥಾನವಲ್ಲಿ +ವಿ
ಷಾದದಲಿ +ನಿಮ್ಮ್+ಅಯ್ಯನ್+ಇಹನ್+ಆತನ +ಸಮೀಪದಲಿ

ಅಚ್ಚರಿ:
(೧) ಇಂದ್ರನನ್ನು ಪುರುಹೂತ ನೆಂದು ಕರೆದಿರುವುದು
(೨) ೩, ೬ ಸಾಲಿನ ಕೊನೆ ಪದ “ಸ”ಕಾರ ವಾಗಿರುವುದು – ಸರಿಮಿಗಿಲು, ಸಮೀಪದಲಿ
(೩) ಸಭೆ ಆಸ್ಥಾನ – ಸಾಮ್ಯಪದಗಳು

ಪದ್ಯ ೯೦: ಇಂದ್ರನ ಸಭೆಯ ವೈಶಿಷ್ಟ್ಯವೇನು?

ಜನಪ ಕೇಳುತ್ಸೇದ ಶತಯೋ
ಜನ ತದರ್ಧದೊಳಗಲದಳತೆ ಯಿ
ದೆನಿಪುದಿಂದ್ರ ಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ (ಸಭಾ ಪರ್ವ, ೧ ಸಂಧಿ, ೯೦ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೆ ಕೇಳು, ” ಊರ್ಧ್ವಲೋಕದಲ್ಲಿರುವ ಇಂದ್ರನ ಸಭೆಯು ಒಂದು ನೂರು ಯೋಜನ ಉದ್ದವಿದ್ದು ಅದರ ಅಗಲ ೫೦ ಯೋಜವದಿದೆ. ಅಲ್ಲಿ ಎಲ್ಲಾ ದೇವತೆಗಳು ವಾಸಿಸುತ್ತಾರೆ, ರಾಜರಲ್ಲಿ ಯಯಾತಿ ಆತನ ತಂದೆ ನಹುಷ, ನೃಗ, ನಳ, ಭರತ ಪುರೂರವ ಮೊದಲಾದ ರಾಜರು ಸಮಸ್ತಯಜ್ಞಗಳನ್ನೂ ಮಾಡಿ ಸ್ವರ್ಗದಲ್ಲಿರುವ ಆ ಸಭೆಯಲ್ಲಿ ಸ್ಥಾನ ಪಡೆದಿದ್ದಾರೆ” ಎಂದು
ನಾರದರು ವಿವರಿಸಿದರು

ಅರ್ಥ:
ಜನಪ: ರಾಜ; ಕೇಳು: ಆಲಿಸು; ಉತ್ಸೇದ: ಎತ್ತರ; ಶತ: ನೂರು; ಯೋಜನ: ಅಳತೆಯ ಪ್ರಮಾಣ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಅಗಲ:ವಿಸ್ತಾರ;ಇಂದ್ರ: ಶಕ್ರ; ಸ್ಥಾನ: ವಾಸಿಸುವ ಪ್ರದೇಶ; ಅಖಿಳ: ಎಲ್ಲಾ; ಸುರ: ದೇವತೆಗಳು; ನಿಕರ: ಗುಂಪು; ಜನಕ: ತಂದೆ; ಕ್ರತು:ಯಾಗ, ಯಜ್ಞ; ಸಾಧಿಸು: ಸ್ವಾಧೀನ ಪಡಿಸಿಕೊಳ್ಳು; ಸಭೆ: ದರ್ಬಾರು;

ಪದವಿಂಗಡಣೆ:
ಜನಪ+ ಕೇಳ್+ ಉತ್ಸೇದ +ಶತಯೋ
ಜನ +ತದ್+ಅರ್ಧದೊಳ್+ಅಗಲದ್+ಅಳತೆ+ ಯಿದ್
ಎನಿಪುದ್+ಇಂದ್ರ +ಸ್ಥಾನ+ಅಲ್ಲಿಹುದ್+ಅಖಿಳ +ಸುರನಿ+ಕರ
ಜನಪರಲ್ಲಿ +ಯಯಾತಿ+ ಆತನ
ಜನಕ +ನೃಗ +ನಳ +ಭರತ +ಪೌರವರ್
ಎನಿಪರ್+ಅಖಿಳ +ಕ್ರತುಗಳಲಿ +ಸಾಧಿಸಿದರ್+ಆ+ ಸಭೆಯ

ಅಚ್ಚರಿ:
(೧) ಜನಪ – ೧, ೪ ಸಾಲಿನ ಮೊದಲ ಪದ
(೨) ಜನ – ೧,೨, ೪, ೫ ಸಾಲಿನ ಮೊದಲ ಪದ
(೩) ೩, ೬ ಸಾಲಿನ ಕೊನೆಯ ಎರಡು ಪದ “ಸ” ಕಾರದಿಂದ ಪ್ರಾರಂಭ – ಸ್ಥಾನವಲ್ಲಿಹುದಖಿಳ ಸುರನಿಕರ, ಸಾಧಿಸಿದರಾ ಸಭೆಯ