ಪದ್ಯ ೮೮: ಯುಧಿಷ್ಠಿರ ನಾರದರನ್ನು ಹೇಗೆ ಹೊಗಳಿದರು?

ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವ ಮುನಿ ನಿನಗಾರು ಸರಿಯೆಂದ (ಸಭಾ ಪರ್ವ, ೧ ಸಂಧಿ, ೮೮ ಪದ್ಯ)

ತಾತ್ಪರ್ಯ:
“ಎಲೈ ನಾರದರೇ, ಮುನಿಶ್ರೇಷ್ಠರೆ, ನೀವು ಬೋಧಿಸಿದ ಪವಿತ್ರವಾದ ರಾಜನೀತಿಯ ಮಾತುಗಳಲ್ಲಿ ಕೆಲವನ್ನು ನಾನು ಆಅರಿಸುತ್ತಿದ್ದೇನೆ, ಮಿಕ್ಕ ಕೆಲವನ್ನು ಆಚರಿಸುತ್ತೇನೆ. ಎಲೈ ದೇವರ್ಷಿಯೇ, ಭೂಮಿಗಿಳಿದು ನೀತಿಯಿಂದ ಜಾರಿದ ಜನರನ್ನು ತಿದ್ದಿ ಬೋಧಿಸುವ ನಿಮಗೆ ಯಾರುತಾನೆ ಸರಿ” ಎಂದು ನಾರದರನ್ನು ಯುಧಿಷ್ಠಿರನು ಹೊಗಳಿದನು.

ಅರ್ಥ:
ಮುನಿ: ಋಷಿ; ರಚಿಸು: ರೂಪಿಸು; ನಿರ್ಮಳ: ಸ್ವಚ್ಛವಾದ, ಪವಿತ್ರ; ನೃಪಾಲ: ರಾಜ, ನಯ: ರಾಜನೀತಿ; ಪ್ರಪಂಚ: ಭೂಮಿ, ಭೂಗೋಲ; ಬಳಸು: ಉಪಯೋಗಿಸು; ಕೆಲ: ಸ್ವಲ್ಪ; ಉರೆ: ಸುಳಿ:ವಿಶೇಷವಾಗಿ; ಇಳಿದು: ಕೆಳಗೆ ಬಂದು; ಧರಣಿ: ಭೂಮಿ; ಸುಳಿ:ಗೋಚರವಾಗು; ಸ್ಖಲಿತ: ಅಪರಾಧ, ಕೆಳಗೆ ಬಿದ್ದವ; ನೀತಿ:ಮಾರ್ಗ ದರ್ಶನ; ಜಡ:ಸೋಮಾರಿ; ತಿದ್ದು: ಸರಿಪಡಿಸು; ತಿಳುಹು: ತಿಳುವಳಿಕೆ ಹೇಳು; ಸುಲಭ: ನಿರಯಾಸ; ದೇವ: ದೈವಸ್ವರೂಪ; ಸರಿ: ಸಮ;

ಪದವಿಂಗಡಣೆ:
ಎಲೆ +ಮುನಿಯೆ +ನೀವ್ +ರಚಿಸಿದ್+ಈ+ ನಿ
ರ್ಮಳ +ನೃಪಾಲ+ನಯ +ಪ್ರಪಂಚವ
ಬಳಸಿದೆನು+ ಕೆಲ+ ಕೆಲವನಿನ್+ಉರೆ+ ಬಳಸುವೆನು +ಕೆಲವ
ಇಳಿದು +ಧರಣಿಗೆ +ಸುಳಿದು +ನೀತಿ
ಸ್ಖಲಿತ +ಜಡರನು +ತಿದ್ದಿ +ತಿಳುಹುವ
ಸುಲಭ+ತನದಲಿ +ದೇವ +ಮುನಿ +ನಿನಗಾರು +ಸರಿಯೆಂದ

ಅಚ್ಚರಿ:
(೧) ಕೆಲ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಬಳಸಿದೆನು, ಬಳಸುವೆನು – ಭೂತ ಮತ್ತು ಭವಿಷ್ಯತ್ಕಾಲದ ಪ್ರಯೋಗ – ೩ ಸಾಲು
(೩) ದೇವಮುನಿ – ನಾರದರನ್ನು ಸಂಭೋದಿಸಿರುವುದು
(೪) ನಾರದರು ಭೂಮಿಗೆ ಬಂದ ಔಚಿತ್ಯವನ್ನು ವಿವರಿಸಿರುವುದು – ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ ಸುಲಭತನದಲಿ

ಪದ್ಯ ೮೭: ನಾರದರ ಮಾತು ಕೇಳಿದ ಯುಧಿಷ್ಠಿರನ ಮನಸ್ಸು ಹೇಗೆ ಸ್ಪಂದಿಸಿತು?

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮನೋಮಧುವ್ರತವುಬ್ಬಿತೊಲವಿನಲಿ
ರೋಮಪುಳಕದ ರುಚಿರ ಭಾವ
ಪ್ರೇಮ ಪೂರಿತ ಹರುಷ ರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೭ ಪದ್ಯ)

ತಾತ್ಪರ್ಯ:
ನಾರದರು ರಾಜಧರ್ಮದ ಬಗ್ಗೆ ಸವಿಸ್ತ್ರಾರವಾಗಿ ವಿವರಿಸಿದನ್ನು ಕೇಳಿದ ಧರ್ಮರಾಯನ ಮನಸ್ಸು ದುಂಬಿಯಹಾಗೆ ನಾರದರ ವಚನ ರಚನೆಯೆಂಬ ಕಮಲದ ಮಕರಂದವನ್ನು ಸವಿದು ಉಬ್ಬಿತು. ಧರ್ಮಜನು ರೋಮಾಂಚನಗೊಂಡನು. ಚಿತ್ತದ ಭಾವವು ಪ್ರೇಮಪೂರ್ಣವಾಯಿತು, ಹರ್ಷದ ಮಹಾನದಿಯಲ್ಲಿ ಧರ್ಮರಾಯನ ಮನಸ್ಸು ಮುಳುಗಿ ಎದ್ದಹಾಗೆ ಅನುಭವವಾಯಿತು.

ಅರ್ಥ:
ಮುನೀಂದ್ರ: ಮುನಿಶ್ರೇಷ್ಠ; ಮುನಿ: ಋಷಿ; ವಚನ: ಮಾತು; ರಚನ: ಸೃಷ್ಠಿ, ನಿರ್ಮಾಣ; ತಾಮರಸ: ಕಮಲ; ಮಕರಂದ: ಜೇನು; ಕೇಳಿ: ಆಲಿಸಿ; ಮಹೀಶ: ರಾಜ; ಮನ: ಮನಸ್ಸು, ಚಿತ್ತ; ಮಧು: ಜೇನು, ಮಕರಂದ; ಉಬ್ಬು: ಹಿಗ್ಗು; ಒಲವು:ಪ್ರೀತಿ, ಪ್ರೇಮ; ರೋಮ: ಕೂದಲು; ಪುಳಕ:ಮೈನವಿರೇರುವಿಕೆ, ರೋಮಾಂಚನ; ರುಚಿರ:ಸೌಂದರ್ಯ, ಚೆಲುವು; ಭಾವ: ಭಾವನೆ; ಪ್ರೇಮ:ಒಲವು; ಪೂರಿತ: ತುಂಬಿದ; ಹರುಷ: ಸಂತೋಷ; ರಸ:ರುಚಿ; ಉದ್ದಾಮ:ಶ್ರೇಷ್ಠ; ನದಿ: ಸರೋವರ; ಮುಳುಗು: ನೀರಿನಲ್ಲಿ ಮೀಯು; ಮೂಡು: ತೋರು, ಹೊರಬರುವುದು; ಅರಸ: ರಾಜ; ಮಧುವ್ರತ: ಜೇನು, ಭ್ರಮರ;

ಪದವಿಂಗಡಣೆ:
ಆ+ ಮುನೀಂದ್ರನ+ ವಚನ+ ರಚನಾ
ತಾಮರಸ +ಮಕರಂದ +ಕೇಳಿಯಲ್
ಈ +ಮಹೀಶ +ಮನೋ+ಮಧುವ್ರತವ್+ಉಬ್ಬಿತ್+ಒಲವಿನಲಿ
ರೋಮಪುಳಕದ+ ರುಚಿರ+ ಭಾವ
ಪ್ರೇಮ +ಪೂರಿತ +ಹರುಷ +ರಸದ್
ಉದ್ದಾಮ +ನದಿಯಲಿ+ ಮುಳುಗಿ +ಮೂಡಿದನ್+ಅರಸ+ ಕೇಳೆಂದ

ಅಚ್ಚರಿ:
(೧) ೧, ೩, ೬ ಸಾಲು, ಆ, ಈ, ಉ ಕಾರದಿಂದ ಪ್ರಾರಂಭ
(೨) “ಮ” ಕಾರದ ಜೋಡಿ ಪದಗಳು – ಮಹೀಶ ಮನೋಮಧುವ್ರತ, ಮುಳುಗಿ ಮೂಡಿದ
(೩) ಯುಧಿಷ್ಠಿರನ ಮನಸ್ಸಿನ ಚಿತ್ರಣ: ಹರುಷ ರಸದುದ್ದಾಮ ನದಿಯಲಿ ಮುಳುಗಿ ಮೂಡಿದನರಸ

ಪದ್ಯ ೮೬: ನಾರದರು ಯುಧಿಷ್ಠಿರನನ್ನು ಯಾರಿಗೆ ಹೋಲಿಸಿದರು?

ನೃಗನ ಭರತನ ದುಂದುಮಾರನ
ಸಗರನ ಪುರೂರವ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳುವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೮೬ ಪದ್ಯ)

ತಾತ್ಪರ್ಯ:
ನೃಗ, ಭರತ, ದುಂದುಮಾರ, ಸಗರ, ಪುರೂರವ, ಯಯಾತಿಯ ಮಗನಾದ ಪುರು, ನಹುಷ, ಕಾರ್ತವೀರ್ಯ, ನಳ, ದಶರಥ, ಇವರಲ್ಲದೆ ಚಂದ್ರವಂಶ ಮತ್ತು ಸೂರ್ಯವಂಶಗಳಲ್ಲಿ ಹುಟ್ಟಿ ಭೂಮಿಯನ್ನಾಳಿದ ಹಲವು ರಾಜರಿದ್ದಾರೆ, ಇವರೆಲ್ಲರಿಗೆ ನೀನು ಸರಿಸಮವೋ ಹೆಚ್ಚೋ ಎಂದು ಗಣಿಸುವ ರಾಜನೀತಿ ನಿನ್ನಲ್ಲಿದೆಯೆ, ಎಂದು ನಾರದರು ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ಹಗಲು: ದಿನ; ಇರುಳು: ರಾತ್ರಿ; ವಲ್ಲಭ: ಪ್ರಭು, ಒಡೆಯ; ವಂಶ: ಕುಲ; ವಿಗಡ: ಶೌರ್ಯ, ಸಾಹಸ; ಸೂನು: ಪುತ್ರ; ಮಿಗಿಲು: ಹೆಚ್ಚು; ನೀತಿ:ಮಾರ್ಗ, ದರ್ಶನ; ರಾಯ: ರಾಜ;

ಪದವಿಂಗಡಣೆ:
ನೃಗನ +ಭರತನ+ ದುಂದುಮಾರನ
ಸಗರನ+ ಪುರೂರವ+ ಯಯಾತಿಯ
ಮಗನ +ನಹುಷನ +ಕಾರ್ತವೀರ್ಯನ +ನಳನ+ ದಶರಥನ
ಹಗಲ್+ಇರುಳು+ವಲ್ಲಭರ+ ವಂಶದ
ವಿಗಡರಲಿ +ಯಮಸೂನು +ಸರಿಯೋ
ಮಿಗಿಲೊ+ಎನಿಸುವ +ನೀತಿಯುಂಟೇ +ರಾಯ +ನಿನಗೆಂದ

ಅಚ್ಚರಿ:
(೧) ಮೊದಲ ೩ ಸಾಲುಗಳಲ್ಲಿ ೧೦ ರಾಜರ ಹೆಸರನ್ನು ಹೇಳಿರುವುದು
(೨) ವಲ್ಲಭ, ರಾಯ – ಸಮನಾರ್ಥಕ ಪದ