ಪದ್ಯ ೧೫: ಭೀಮನ ಗದೆ ಕೌರವನ ಕಿರುದೊಡೆಯನ್ನು ಮುರಿಯಲು ಎಂದು ಸಿದ್ಧವಾಗಿತ್ತು?

ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ (ಗದಾ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಗರ್ಜಿಸುತ್ತಾ, ನಾನು ಈಗ ಸಿದ್ಧನಾಗಬೇಕಾಗಿಲ್ಲ, ನಮ್ಮ ಭಾಗದ ಭೂಮಿಯನ್ನು ಕೇಳಿದರೆ, ನೀನು ಸಾಧ್ಯವಿಲ್ಲ ಎಂದೆಯಲ್ಲಾ ಆಗಲೇ ಈ ಗದೆ ನಿನ್ನ ಕಿರುದೊಡೆಯನ್ನು ಮುರಿಯಲು ಸಿದ್ಧವಾಗಿತ್ತು. ಇನ್ನೊಮ್ಮೆ ನನ್ನನ್ನು ಹೊಡೆಯಲು ಬಂದು ನೋಡು, ಎನ್ನುತ್ತಾ ಭೀಮನು ಗದೆಯನ್ನು ತೂಗಿ ಗರ್ಜಿಸಿ ಕೌರವನನ್ನು ತುಡುಕಿದನು.

ಅರ್ಥ:
ಅನುವಾಗು: ಸಿದ್ಧನಾಗು; ಧರಿತ್ರಿ: ಭೂಮಿ; ಭಾಗ: ಅಂಶ, ಪಾಲು; ಬೇಡು: ಕೇಳು; ಮುರಿ: ಸೀಳು; ಗದೆ: ಮುದ್ಗರ; ಕಿರು: ಚಿಕ್ಕ; ತೊಡೆ: ಊರು; ತಾಗು: ಮುಟ್ತು; ನೋಡು: ವೀಕ್ಷಿಸು; ಮೈಲಾಗು: ದೇಹದ ಚುರುಕುತನ, ಚಳಕ; ಹೊಳೆ: ಪ್ರಕಾಶಿಸು; ಕೈದು: ಆಯುಧ; ತೂಗು: ಅಲ್ಲಾಡಿಸು; ತುಡುಕು: ಹೋರಾಡು, ಸೆಣಸು, ಮುಟ್ಟು; ಅರಸ: ರಾಜ; ಬೊಬ್ಬಿರಿ: ಗರ್ಜಿಸು; ಕಲಿ: ಶೂರ;

ಪದವಿಂಗಡಣೆ:
ಈಗಳ್+ಅನುವಾದೆನೆ +ಧರಿತ್ರಿಯ
ಭಾಗವನು +ಬೇಡಿದಡೆ+ ನೀ +ಮುರಿ
ದಾಗಲ್+ಅನುವಾದುದು +ಕಣಾ +ಗದೆ +ನಿನ್ನ+ ಕಿರುದೊಡೆಗೆ
ತಾಗಿ+ ನೋಡ್+ಇನ್ನೊಮ್ಮ್+ಎನುತ +ಮೈ
ಲಾಗಿನಲಿ +ಹೊಳೆಹೊಳೆದು +ಕೈದುವ
ತೂಗಿ +ತುಡುಕಿದನ್+ಅರಸನನು +ಬೊಬ್ಬಿರಿದು +ಕಲಿ +ಭೀಮ

ಅಚ್ಚರಿ:
(೧) ಭೀಮನ ಉತ್ತರ – ಧರಿತ್ರಿಯ ಭಾಗವನು ಬೇಡಿದಡೆ ನೀ ಮುರಿದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ

ಪದ್ಯ ೧೧: ಶಕುನಿಯ ಸೈನ್ಯವು ಎಲ್ಲಿ ಕಂಡಿತು?

ಮಸಗಿದುದು ಪರಿವಾರ ಕೌರವ
ವಸುಮತೀಶ್ವರ್ನರಕೆಯಲಿ ದಳ
ಪಸರಿಸಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ (ಗದಾ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಂಡವರ ಪರಿವಾರವು ಕೌರವನನ್ನು ಹುಡುಕಲು ಎಲ್ಲ ಕಡೆಗೆ ಚದುರಿ ನೋಡುತ್ತಿರಲು, ರಣರಂಗದ ಒಂದು ಮೂಲೆಯಲ್ಲಿ ಪತಾಕೆ, ಚಾಮರ, ಖಡ್ಗ, ಶ್ವೇತಚ್ಛತ್ರಗಳಿಂದ ಹೊಳೆಯುವ ಶಕುನಿಯ ಸೈನ್ಯವನ್ನು ಕಂಡರು.

ಅರ್ಥ:
ಮಸಗು: ಹರಡು; ಕೆರಳು; ಪರಿವಾರ: ಪರಿಜನ, ಸುತ್ತಲಿನವರು; ವಸುಮತಿ: ಭೂಮಿ; ವಸುಮತೀಶ್ವರ: ರಾಜ; ಅರಕೆ: ಕೊರತೆ; ದಳ: ಸೈನ್ಯ; ಪಸರಿಸು: ಹರಡು; ಅರಸಿ: ರಾಣಿ; ಕಂಡು: ನೋಡು; ಕಳ: ಯುದ್ಧ;ಮೂಲೆ: ಕೊನೆ; ಮಿಸುಪ: ಹೊಳೆ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೀಗುರಿ: ಚಾಮರ; ಝಳ: ತಾಪ; ಆಯ್ದ: ಕೆಲವು; ಸಿತ: ಬಿಳಿ; ಆತಪತ್ರ: ಛತ್ರಿ; ಪ್ರಸರ: ವಿಸ್ತಾರ, ಹರಹು; ಹೊಳೆ: ಪ್ರಕಾಶ; ಮೋಹರ: ಯುದ್ಧ;

ಪದವಿಂಗಡಣೆ:
ಮಸಗಿದುದು +ಪರಿವಾರ +ಕೌರವ
ವಸುಮತೀಶ್ವನ್+ಅರಕೆಯಲಿ +ದಳ
ಪಸರಿಸಿತು +ಬಿಡದ್+ಅರಸಿ +ಕಂಡರು +ಕಳನ +ಮೂಲೆಯಲಿ
ಮಿಸುಪ +ಸಿಂಧದ +ಸೀಗುರಿಯ +ಝಳ
ಪಿಸುವಡ್+ಆಯ್ದ +ಸಿತ+ಆತಪತ್ರ
ಪ್ರಸರದಲಿ +ಹೊಳೆಹೊಳೆವ +ಶಕುನಿಯ +ಬಹಳ +ಮೋಹರವ

ಅಚ್ಚರಿ:
(೧) ಶಕುನಿಯ ರಥವನ್ನು ವರ್ಣಿಸುವ ಪರಿ – ಮಿಸುಪ ಸಿಂಧದ ಸೀಗುರಿಯ ಝಳಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ

ಪದ್ಯ ೬೬: ಧರ್ಮಜನ ಆಯುಧವು ಹೇಗೆ ಕಂಡಿತು?

ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ
ಕುಡಿಮೊನೆಯ ಪಡಿಮುಖದಲೊದರುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ (ಶಲ್ಯ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಆ ಶಕ್ತಿಯು ಉದಯ ರವಿಯ ತೇಜದಿಂದ ಹೊಳೆ ಹೊಳೆಯುತ್ತಿತ್ತು. ನಕ್ಷತ್ರಗಳು ಥಳಥಳಿಸುತ್ತಾ ಬರುತ್ತವೆಂಬಂತೆ ಮಣಿಗಳಿಂದ ಅಲಂಕೃತವಾಗಿತ್ತು. ತುದಿಯ ಮೊನೆಯಲ್ಲಿ ಕಿಡಿಗಳನ್ನು ಸೂಸುತ್ತಿತ್ತು. ಧರ್ಮಜನು ಅದನ್ನು ಪ್ರಯೋಗಿಸಿದನು.

ಅರ್ಥ:
ತುಡುಕು: ಹೋರಾಡು, ಸೆಣಸು; ಹೊಸ: ನವೀನ; ರವಿ: ಸೂರ್ಯ; ತೇಜ: ಹೊಳಪು; ದಡಿ: ದಂಡೆ, ತೀರ; ಉಗಿದ: ಹೊರಹಾಕು; ಹೊಳೆ: ಪ್ರಕಾಶ; ಉಡು: ನಕ್ಷತ್ರ, ತಾರೆ; ನಿಕರ: ಗುಂಪು; ಉಚ್ಚಳಿಸು: ಮೇಲಕ್ಕೆ ಹಾರು; ಮಣಿ: ಬೆಲೆಬಾಳುವ ರತ್ನ; ಕಾಂತಿ: ಪ್ರಕಾಶ; ಕುಡಿ: ತುದಿ, ಕೊನೆ; ಮೊನೆ: ತುದಿ, ಕೊನೆ, ಹರಿತ; ಪಡಿ: ಸಮಾನವಾದುದು; ಮುಖ: ಆನನ; ಒದರು: ಕೊಡಹು; ಕಿಡಿ: ಬೆಂಕಿ; ಘಂಟ: ಗೆಜ್ಜೆ; ರವ: ಶಬ್ದ; ರಭಸ: ವೇಗ; ಝಡಪದ: ತ್ವರೆಯಿಂದ ಕೂಡಿದ; ಜೋಡಿಸು: ಕೂಡಿಸು; ಶಕ್ತಿ: ಬಲ; ಅವನೀಶ: ರಾಜ;

ಪದವಿಂಗಡಣೆ:
ತುಡುಕಿದನು +ಹೊಸ+ರವಿಯ +ತೇಜದ
ದಡಿಯನ್+ಉಗಿದಂದದಲಿ +ಹೊಳೆಹೊಳೆವ್
ಉಡು+ನಿಕರವ್+ಉಚ್ಚಳಿಪವೊಲು +ಮಣಿಮಯದ +ಕಾಂತಿಗಳ
ಕುಡಿ+ಮೊನೆಯ +ಪಡಿ+ಮುಖದಲ್+ಒದರುವ
ಕಿಡಿಯ +ಘಂಟಾ+ರವದ +ರಭಸದ
ಝಡಪದಲಿ +ಜೋಡಿಸಿದ +ಶಕ್ತಿಯಲಿಟ್ಟನ್+ಅವನೀಶ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಡುಕಿದನು ಹೊಸರವಿಯ ತೇಜದದಡಿಯನುಗಿದಂದದಲಿ; ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ

ಪದ್ಯ ೯: ಧರ್ಮಜನ ಮನಸ್ಥಿತಿ ಹೇಗಿತ್ತು?

ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧರಿಯದ
ತಳಿತ ಭೀತಿಗೆ ಕಾಲ್ವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹಶ್ರಮವನ್ನಾರಿಸಿಕೊಳ್ಳಲು ತಾಂಬೂಲವನ್ನು ಜರೆಯುತ್ತಾ ಅದರ ರಸದಲ್ಲಿ ಸ್ವಲ್ಪ ಸಮಾಧಾನವಾದರೂ ಮೇಲೆದ್ದು ಬರುವ ಆಯಾಸದಿಂದ ನೊಂದ, ನಟನೆಯ ನಗೆಯನ್ನು ಬೀರುವ, ಕಳವಳಗೊಂಡು ಕಣ್ಣುಗಳನ್ನು ತೆರೆದು ಮುಚ್ಚುವ, ಛಲ ಹಿಂಗಿ ಧೈರ್ಯವುಡುಗಿ ಭೀತಿ ತುಂಬಿ ಹರಿಯುತ್ತಿದ್ದ ಚಂಚಲ ಮನಸ್ಸಿನ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಹೊಳೆ: ಪ್ರಕಾಶ; ತಂಬುಲ: ಎಲೆ ಅಡಿಕೆ; ರಸ: ಸಾರ; ಮುಳುಗು: ಮೀಯು, ಕಾಣದಾಗು; ಮೂಡು: ತುಂಬು, ಹುಟ್ಟು; ಢಗೆ: ಕಾವು, ಧಗೆ; ತೊಡಹು: ಸೇರಿಕೆ; ಮೆಲುನಗೆ: ಮಂದಸ್ಮಿತ; ಕಳವಳ: ಗೊಂದಲ; ಮುಕ್ಕುಳಿಸು: ಹೊರಹಾಕು; ಆಲಿ: ಕಣ್ಣು; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಛಲ: ನೆಪ, ವ್ಯಾಜ; ವಿಡಾಯಿ: ಶಕ್ತಿ, ಆಡಂಬರ; ಧೈರ್ಯ: ಎದೆಗಾರಿಕೆ, ಕೆಚ್ಚು; ತಳಿತ: ಚಿಗುರು; ಭೀತಿ: ಭಯ; ಕಾಲ: ಸಮ್ಯ; ಅಳಿ: ನಾಶ; ಮನ: ಮನಸ್ಸು; ಭೂಪಾಲ: ರಾಜ; ಕಂಡು: ನೋಡು;

ಪದವಿಂಗಡಣೆ:
ಹೊಳೆಹೊಳೆದು +ತಂಬುಲದ +ರಸದಲಿ
ಮುಳುಗಿ +ಮೂಡುವ +ಢಗೆಯ+ ತೊಡೆಹದ
ಮೆಲುನಗೆಯ +ಕಳವಳವನ್+ಅರೆ+ ಮುಕ್ಕುಳಿಸಿದ್+ಆಲಿಗಳ
ಹಿಳಿದ +ಛಲದ +ವಿಡಾಯಿ +ಧರಿಯದ
ತಳಿತ +ಭೀತಿಗೆ +ಕಾಲವೊಳೆಯಾದ್
ಅಳಿಮನದ +ಭೂಪಾಲನ್+ಇರವನು +ಕಂಡನಾ +ಪಾರ್ಥ

ಅಚ್ಚರಿ:
(೧) ವೈರುಧ್ಯ ಭಾವನೆಗಳನ್ನು ವಿವರಿಸುವ ಪದ್ಯ – ಹೊಳೆಹೊಳೆದು ತಂಬುಲದ ರಸದಲಿ ಮುಳುಗಿ ಮೂಡುವ ಢಗೆಯ ತೊಡೆಹದ ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ

ಪದ್ಯ ೫೧: ಕರ್ಣನು ಯಾವ ಬಾಣವನ್ನು ಹೊರತೆಗೆದನು?

ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇಂದ್ರನು ಕೊಟ್ಟ ಶಕ್ತಿಯಿಂದುದುರುವ ಕಿಡಿಗಳಿಗೆ ಹೊಮ್ಮುವ ಉರಿಗೆ ಎರಡು ಬಲಗಳೂ ಹರ್ಷ ವಿಷಾದಗಳಿಗೊಳಗಾದವು. ಪಾಂಡವರು ವಿಷಾದಿಸಿದರೆ, ಕೌರವರು ಹರ್ಷಿಸಿದರು. ಆ ಶಕ್ತಿಗೆ ಬಿಳೀಯ ಚೌರಿಗಳನ್ನು ಕಟ್ಟಿತ್ತು. ಅಣಸುಗಳಿಗೆ ಗಂಟೆಗಳನ್ನು ಕಟ್ಟಿತ್ತು. ಅದರ ಅಲಗು ಥಳಥೈಸುತ್ತಿತ್ತು. ಕರ್ಣನು ಮಹಾಶಕ್ತಿಯನ್ನು ಕೈಯಲ್ಲಿ ಹಿಡಿದು ತೂಗಿದನು.

ಅರ್ಥ:
ತಳಿತ: ಚಿಗುರಿದ; ಕಿಡಿ: ಬೆಂಕಿ; ಕೈದು: ಆಯುಧ; ಮೈ: ತನು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಉಭಯ: ಎರಡು; ಬಲ: ಸೈನ್ಯ; ಅಗ್ಗಳ: ಶ್ರೇಷ್ಠ; ಹರುಷ: ಸಂತೋಷ; ವಿಷಾದ: ನಿರುತ್ಸಾಹ, ದುಃಖ; ವಾರಿಧಿ: ಸಾಗರ; ಕಾಲುಹೊಳೆ: ಕಾಲುನಡಿಗೆ, ದಾಟಬಹುದಾದ ಹೊಳೆ; ಬಿಳಿ: ಶ್ವೇತ; ಚೌರಿ: ಚೌರಿಯ ಕೂದಲು; ಎಸೆ: ತೋರು; ಆವಳಿ: ಗುಂಪು; ಅಣಸು: ಆಕ್ರಮಿಸು; ಹೊಗರು: ಪ್ರಕಾಶ; ಉಗುಳು: ಹೊರತರು; ಹೊಳೆ: ಪ್ರಕಾಶ; ಧಾರೆ: ಮಳೆ, ವರ್ಷ; ಭಾರಿ: ದೊಡ್ಡ; ಶಕ್ತಿ: ಬಲ; ತೂಗು: ಅಲ್ಲಾಡು;

ಪದವಿಂಗಡಣೆ:
ತಳಿತ +ಕಿಡಿಗಳ+ ಕೈದುವಿನ +ಮೈ
ಝಳದ +ಝಾಡಿಯೊಳ್+ಉಭಯ +ಬಲಗ್
ಅಗ್ಗಳದ +ಹರುಷ +ವಿಷಾದ +ವಾರಿಧಿ +ಕಾಲು+ಹೊಳೆಯಾಯ್ತು
ಬಿಳಿಯ +ಚೌರಿಗಳ್+ಎಸೆಯೆ +ಘಂಟಾ
ವಳಿಗಳ್+ಅಣಸಿನ +ಹೊಗರನ್+ಉಗುಳುವ
ಹೊಳೆವ +ಧಾರೆಯ +ಭಾರಿಶಕ್ತಿಯ +ತೂಗಿದನು +ಕರ್ಣ

ಅಚ್ಚರಿ:
(೧) ವಿರುದ್ಧ ಪದ – ಹರುಷ, ವಿಷಾದ
(೨) ಹೊಗರು, ಝಳ, ಝಾಡಿ, ಹೊಳೆ – ಸಾಮ್ಯಾರ್ಥ ಪದಗಳು

ಪದ್ಯ ೫: ಯುಧಿಷ್ಠಿರನು ಹೇಗೆ ತೋರಿದನು?

ತಮದ ಗಂಟಲನೊಡೆದು ಹಾಯ್ದ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು
ವಿಮಲ ಬಹಳ ಕ್ಷತ್ರರಶ್ಮಿಗ
ಳಮಮ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನುದಾರ ತೇಜದಲಿ (ವಿರಾಟ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕತ್ತಲಿನ ಗಂಟಲನ್ನು ಸೀಳಿ ಹೊರ ಬರುವ ಸೂರ್ಯನಮ್ತೆ, ತಾನು ಜೀವನೆಂಬ ಭ್ರಾಂತಿಯನ್ನು ಕಳೆದುಕೊಂಡ ಆತ್ಮನಂತೆ, ಕ್ಷಾತ್ರ ತೇಜಸ್ಸು ದಿಕ್ಕು ದಿಕ್ಕುಗಳನ್ನು ಬೆಳಗುತ್ತಿರಲು, ಯುಧಿಷ್ಠಿರನು ಮಹಾತೇಜಸ್ಸಿನಿಂದ ಬೆಳಗಿದನು.

ಅರ್ಥ:
ತಮ: ಅಂಧಕಾರ; ಗಂಟಲು: ಕಂಠ; ಒಡೆ: ಸೀಳು; ಹಾಯ್ದು: ಹೋರಾಡು; ದ್ಯುಮಣಿ: ಸೂರ್ಯ; ಜೀವ: ಪ್ರಾಣ; ಭ್ರಮೆ: ಭ್ರಾಂತಿ, ಉನ್ಮಾದ; ಕವಚ: ಹೊದಿಕೆ; ಕಳೆ: ನಿವಾರಿಸು; ಹೊಳೆ: ಪ್ರಕಾಶಿಸು; ವಿಮಲ: ನಿರ್ಮಲ; ಬಹಳ: ತುಂಬ; ಕ್ಷತ್ರ: ಕ್ಷತ್ರಿಯ; ರಶ್ಮಿ: ಕಿರಣ; ಅಮಮ: ಅಬ್ಬಬ್ಬ; ದೆಸೆ: ದಿಕ್ಕು; ಬೆಳಗು: ಹೊಳೆ; ಉತ್ತಮ: ಶ್ರೇಷ್ಠ; ಎಸೆ: ತೋರು; ಉದಾರ: ಧಾರಾಳ, ಶ್ರೇಷ್ಠವಾದ; ತೇಜ: ಪ್ರಕಾಶ;

ಪದವಿಂಗಡಣೆ:
ತಮದ+ ಗಂಟಲನ್+ಒಡೆದು +ಹಾಯ್ದ
ದ್ಯುಮಣಿ +ಮಂಡಲದಂತೆ +ಜೀವ
ಭ್ರಮೆಯ +ಕವಚವ+ ಕಳೆದು +ಹೊಳೆಹೊಳೆವ+ಆತ್ಮನಂದದೊಳು
ವಿಮಲ +ಬಹಳ +ಕ್ಷತ್ರ+ರಶ್ಮಿಗಳ್
ಅಮಮ +ದೆಸೆಗಳ+ ಬೆಳಗೆ+ ರಾಜೋ
ತ್ತಮ +ಯುಧಿಷ್ಠಿರ +ದೇವನ್+ಎಸೆದನ್+ಉದಾರ +ತೇಜದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಮದ ಗಂಟಲನೊಡೆದು ಹಾಯ್ದದ್ಯುಮಣಿ ಮಂಡಲದಂತೆ; ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು

ಪದ್ಯ ೪೧: ಊರ್ವಶಿಯ ಎತ್ತಿದ ಕೈ ಹೇಗೆ ಹೊಳೆಯುತ್ತಿತ್ತು?

ತುಳುಕಿತದ್ಭುತ ರೋಷ ಸುಯ್ಲಿನ
ಝಳಹೊಡೆದು ಮೂಗುತಿಯ ಮುತ್ತಿನ
ಬೆಳಕು ಕಂದಿತು ಕುಂದಿತಮಲಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ದಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಊರ್ವಶಿಗೆ ಬಹಳ ಕೋಪವು ಆವರಿಸಿತು, ಉಕ್ಕಿದ ಕೋಪಕ್ಕೆ ಆಕೆಯು ನಿಟ್ಟುಸಿರು ಬಿಟ್ಟಳು, ಆ ಕೋಪದ ಉಸಿರಿನ ಶಾಖಕ್ಕೆ ಮೂಗಿತಿಯ ಮುತ್ತಿನ ಬೆಳಕು ಕಂದಿತು, ಮುಖ ಕಮಲದ ಕಾಮ್ತಿಯು ಕುಂದಿತು, ಊರ್ವಹ್ಸಿಯು ಕೈಯೆತ್ತಲು, ಅವಳ ಹಸ್ತದ ಕೆಂಪು, ಬೆರಳುಗಳ ಉಗುರುಗಳ ಬೆಡಗು ಮಣಿ ಮುದ್ರಿಕೆಯ ಕಿರಣಗಳಿಂದ ಅವಳ ಹಸ್ತವು ಶೋಭಿಸಿತು.

ಅರ್ಥ:
ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಅದ್ಭುತ: ಅತ್ಯಾಶ್ಚರ್ಯಕರವಾದ, ವಿಸ್ಮಯ; ರೋಷ: ಕೋಪ; ಸುಯ್ಲು: ನಿಟ್ಟುಸಿರು; ಝಳ: ಕಾಂತಿ, ಶಾಖ; ಹೊಡೆ: ತಾಗು; ಮೂಗುತಿ: ಮೂಗಿನ ಆಭರಣ; ಮುಖ: ಆನನ; ಅಂಬುಜ: ಕಮಲ; ಮುತ್ತು: ಬೆಲೆಬಾಳುವ ರತ್ನ; ಬೆಳಕು: ಕಾಂತಿ; ಕಂದು: ಕಡಿಮೆಯಾಗು, ಮಾಸು; ಕುಂದು: ಕೊರತೆ; ಅಮಲ: ನಿರ್ಮಲ; ಚ್ಛವಿ: ಕಾಂತಿ; ಹೊಳೆ: ಪ್ರಕಾಶಿಸು; ಕೆಂದಳದ: ಕೆಂಪಾದ; ಸೆಳ್ಳು: ಚೂಪಾದ; ಉಗುರು: ನಖ; ಮಯೂಖ: ಕಿರಣ, ರಶ್ಮಿ; ಮುದ್ರಿಕೆ: ಮುದ್ರೆಯುಳ್ಳ ಉಂಗುರ; ದಳ: ಗುಂಪು, ಸಾಲು; ಮರೀಚಿ: ಕಿರಣ, ರಶ್ಮಿ, ಕಾಂತಿ; ಹಸ್ತ: ಕೈ;

ಪದವಿಂಗಡಣೆ:
ತುಳುಕಿತ್+ಅದ್ಭುತ +ರೋಷ +ಸುಯ್ಲಿನ
ಝಳ+ಹೊಡೆದು +ಮೂಗುತಿಯ +ಮುತ್ತಿನ
ಬೆಳಕು +ಕಂದಿತು +ಕುಂದಿತ್+ಅಮಲ+ಚ್ಛವಿ +ಮುಖಾಂಬುಜದ
ಹೊಳೆ +ಹೊಳೆವ +ಕೆಂದಳದ +ಸೆಳ್ಳ್+ಉಗು
ರೊಳ+ ಮಯೂಖದ+ ಮಣಿಯ+ ಮುದ್ರಿಕೆ
ದಳ +ಮರೀಚಿಯಲ್+ಎಸೆದುದ್+ಎತ್ತಿದ +ಹಸ್ತ+ಊರ್ವಶಿಯ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮಯೂಖದ ಮಣಿಯ ಮುದ್ರಿಕೆದಳ ಮರೀಚಿಯಲೆಸೆದುದೆತ್ತಿದ
(೨) ಬೆಳಕು, ಹೊಳೆ, ಮರೀಚಿ, ಝಳ, ಚ್ಛವಿ, ಮಯೂಖ – ಸಮನಾರ್ಥಕ ಪದಗಳು

ಪದ್ಯ ೪೬: ದ್ರೌಪದಿಯನ್ನು ಯಾರು ಸುತ್ತುವರೆದಿದ್ದರು?

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನ ಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯಲಹರಿಗಳ
ಎಳನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ (ಸಭಾ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾಗಿ ಹೊಳೆಯುವ ಕಣ್ಣುಗಳ ಕಾಂತಿ, ಮುಖದಲ್ಲಿ ಥಳಥಳಿಸುವ ಬೆಳಕಿನ ಹೊಳಪು, ಧರಿಸಿದ ಆಭರಣಗಳ ರತ್ನಗಳ ಕಿರಣಗಳು, ಸೊಬಗಿನ ಉಲ್ಲಾಸದ ಪ್ರವಾಹ, ಸುಂದರವಾದ ಹಲ್ಲುಗಳು, ಮಂದಸ್ಮಿತ, ಮುತ್ತಿನ ಹಾರ, ಉಗುರುಗಳ ಕಾಂತಿಗಳಿಂದ ಬೆಳಕಿನ ಬಳಗದಂತೆ ಶೋಭಿಸುವ ತರುಣಿಯರು ದ್ರೌಪದಿಯ ಸುತ್ತ ನೆರೆದಿದ್ದರು.

ಅರ್ಥ:
ಹೊಳೆ: ಕಾಂತಿ, ಹೊಳಪು; ಕಂಗಳು: ನಯನ, ಅಂಬಕ; ಕಾಂತಿ: ಪ್ರಕಾಶ; ಥಳಥಳ: ಬೆಳಕು, ಕಾಂತಿಯನ್ನು ವರ್ಣಿಸುವ ಪದ; ವದನ: ಮುಖ; ಪ್ರಭೆ: ಕಾಂತಿ; ರತ್ನ: ಬೆಲೆಬಾಳುವ ಮಣಿ; ಆವಳಿ: ಸಾಲು; ಬಹುವಿಧ: ಬಹಳ, ಹಲವಾರು; ರಶ್ಮಿ: ಕಾಂತಿ; ಲಾವಣ್ಯ: ಚೆಲುವು; ಲಹರಿ: ಕಾಂತಿ, ಪ್ರಭೆ, ಅಲೆ; ಎಳನಗೆ: ಮಂದಸ್ಮಿತ; ಸುಲಿಪಲ್ಲ: ಶುಭ್ರವಾಗಿ ಹೊಳೆಯುವ ಹಲ್ಲು; ಮುಕ್ತಾವಳಿ: ಮುತ್ತಿನಹಾರ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಬೆಳಗು: ಬೆಳಕು; ಬಳಗ: ಸಂಬಂಧಿಕ, ಗುಂಪು; ಬಾಲಕಿ: ಹುಡುಗಿ; ಸತಿ: ಸ್ತ್ರೀ; ಬಳಸು: ಹತ್ತಿರ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿಗಳ+ ಥಳ
ಥಳಿಪ +ವದನ +ಪ್ರಭೆಯ +ರತ್ನಾ
ವಳಿಯ +ಬಹುವಿಧ+ ರಶ್ಮಿಗಳ +ಲಾವಣ್ಯ+ಲಹರಿಗಳ
ಎಳನಗೆಯ +ಸುಲಿಪಲ್ಲ +ಮುಕ್ತಾ
ವಳಿಯ +ನಖ+ ದೀಧಿತಿಯ+ ಬೆಳಗಿನ
ಬಳಗವನೆ+ ಬಾಲಕಿಯರಿದ್ದರು +ಸತಿಯ +ಬಳಸಿನಲಿ

ಅಚ್ಚರಿ:
(೧) ಹೊಳೆ, ಕಾಂತಿ, ಪ್ರಭೆ, ರಶ್ಮಿ, ಲಹರಿ, ದೀಧಿತಿ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಬೆಳಗಿನ ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ

ಪದ್ಯ ೧೯: ಕರ್ಣನು ಹೇಗೆ ಪ್ರಜ್ವಲಿಸಿದನು?

ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳ ದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ (ಕರ್ಣ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನ ಆಭರಣಗಳು ನಕ್ಷತ್ರದಂತೆ ಮಿನುಗುತ್ತಿದ್ದವು. ಅವನ ದೇಹಕಾಂತಿಯು ಚಂದ್ರಮಂಡಲದ ಪ್ರಭೆಯಂತೆ ಸುತ್ತಲೂ ಹಬ್ಬುತ್ತಿತ್ತು. ಅವನ ಪ್ರತಾಪದ ಸೂರ್ಯಕಿರಣಗಳು ಮೂರುಲೋಕದಲ್ಲೂ ಝಳಪಿಸುತ್ತಿತ್ತು, ಹೀಗೆ ಕರ್ಣನು ತನ್ನ ದಿವ್ಯತೇಜಸ್ಸಿನಿಂದ ರಾರಾಜಿಸುತ್ತಿದ್ದನು.

ಅರ್ಥ:
ಹೊಳೆ: ಪ್ರಕಾಶಿಸು; ಆಭರಣ: ಒಡವೆ; ತಾರೆ: ನಕ್ಷತ್ರ: ಆವಳಿ: ಸಾಲು, ಗುಂಪು; ಪೂರ್ಣ: ಪೂರ್ತಿ; ಶಶಿ: ಚಂದ್ರ; ಮಂಡಲ: ವರ್ತುಲಾಕಾರ; ತನು: ದೇಹ; ಕಾಂತಿ: ಪ್ರಕಾಶ; ತಿವಿ: ಚಚ್ಚು, ಹಬ್ಬು; ನಿಖಿಳ: ಎಲ್ಲಾ; ದಿಗುತಟ: ದಿಕ್ಕುಗಳು; ತಳಿತ: ಚಿಗುರಿದ; ವಿಕ್ರಮ: ಗತಿ, ಗಮನ, ಹೆಜ್ಜೆ; ಶೂರ, ಸಾಹಸ; ಸುಪ್ರತಾಪ: ಪೌರುಷ; ಉಜ್ವಲಿತ: ಹೊಳೆಯುವ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಜಗತ್ರಯ: ಮೂರು ಲೋಕ; ಝಳ: ಪ್ರಕಾಶ, ಕಾಂತಿ; ಎಸೆ: ತೋರು; ದಿವ್ಯ: ಶ್ರೆಷ್ಠ; ತೇಜ: ಕಾಂತಿ;

ಪದವಿಂಗಡಣೆ:
ಹೊಳೆಹೊಳೆದವ್+ಆಭರಣ +ತಾರಾ
ವಳಿಗಳಂತಿರೆ+ ಪೂರ್ಣ+ಶಶಿ+ಮಂ
ಡಲದವೊಲು +ತನುಕಾಂತಿ +ತಿವಿದುದು +ನಿಖಿಳ +ದಿಗುತಟವ
ತಳಿತ+ ವಿಕ್ರಮ+ ಸುಪ್ರತಾಪೋ
ಜ್ವಲಿತ+ಸೂರ್ಯಪ್ರಭೆ +ಜಗತ್ರಯ
ದೊಳಗೆ +ಝಳಪಿಸೆ+ ಕರ್ಣನ್+ಎಸೆದನು +ದಿವ್ಯ+ತೇಜದಲಿ

ಅಚ್ಚರಿ:
(೧) ಹೊಳೆ, ಉಜ್ವಲಿತ, ಪ್ರಭೆ, ಝಳ – ಸಮಾನಾರ್ಥಕ ಪದಗಳು
(೨) ಉಪಮಾನದ ಪ್ರಯೋಗ – ಹೊಳೆಹೊಳೆದವಾಭರಣ ತಾರಾವಳಿಗಳಂತಿರೆ; ಪೂರ್ಣಶಶಿಮಂ
ಡಲದವೊಲು ತನುಕಾಂತಿ; ತಳಿತ ವಿಕ್ರಮ ಸುಪ್ರತಾಪೋಜ್ವಲಿತಸೂರ್ಯಪ್ರಭೆ

ಪದ್ಯ ೩೩: ಕೌರವರಿಗೆ ಕೃಷ್ಣನನ್ನು ಕಟ್ಟಲು ಏಕೆ ಶಂಕೆಯಾಯಿತು?

ಒಳಗೆ ಹೊಳೆದನು ಬಾಹ್ಯದೊಳು ಪ್ರ
ಜ್ವಲಿಸಿದನು ತಾನಲ್ಲದನ್ಯರ
ಬಳಕೆ ಮತ್ತೊಂದಿಲ್ಲದಂತಿರೆ ಕೂಡೆ ತೋರಿದನು
ಒಳಗೆ ಬಿಗಿವೆವೊ ಹೊರಗೆ ಕೃಷ್ಣನ
ಸಿಲುಕಿಸುವೆವೋ ತಿಳಿಯೆ ಕೃಷ್ಣರು
ಹಲಬರಾಗಿಹರಾರ ಕಟ್ಟುವೆವೆಂದರಾ ಖಳರು (ಉದ್ಯೋಗ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸರ್ವಾಂತರ್ಯಾಮಿಯಾದ ಕೃಷ್ಣನು ಒಳಗೂ ಹೊರಗೂ ಎಲ್ಲಡೆಯೂ ಪ್ರಜ್ವಲಿಸಿದನು. ತಾನೊಬ್ಬನಲ್ಲದೆ ಇನ್ನೊಂದಿಲ್ಲವೆಂಬುದನ್ನು ಕೌರವನಿಗೆ ತೋರಿದನು. ಆಗ ಕೌರವರು ಮತ್ತು ಅವನ ಸಹಚರರೂ ನೋಡಲು ಆಸ್ಥಾನದೊಳಗೂ ಹೊರಗೂ ಕಂಡವರೆಲ್ಲ ಕೃಷ್ಣರಂತೆ ಕಂಡರು, ಹಲವು ಜನ ಕೃಷ್ಣರು ಒಳಗೂ, ಹೊರಗೂ ಇರುವುದನ್ನು ಕಂಡು ಅವನನ್ನು ಆಸ್ಥಾನದೊಳಗೆ ಕಟ್ಟಬೇಕೋ ಹೊರಗೆ ಕಟ್ಟಬೇಕೋ ಎಂಬ ಶಂಕೆ ಆ ಕೌರವರಿಗೆ ಮೂಡಿತು.

ಅರ್ಥ:
ಒಳಗೆ: ಅಂತರ್ಯ; ಹೊಳೆ: ಪ್ರಕಾಶಿಸು; ಬಾಹ್ಯ: ಹೊರಗೆ; ಪ್ರಜ್ವಲಿಸು: ಹೊಳೆ; ಅನ್ಯ: ಬೇರೆ; ಬಳಕೆ: ಉಪಯೋಗ; ತೋರು: ಪ್ರಕಟಿಸು; ಕೂಡೆ: ಜೊತೆ; ಬಿಗಿ: ಕಟ್ಟು; ಸಿಲುಕಿಸು: ಬಂಧನಕ್ಕೊಳಗಾದುದು; ತಿಳಿ: ಗೊತ್ತುಮಾಡು; ಹಲಬ: ಹಲವು, ಬಹಳ; ಆರ: ಯಾರನ್ನು; ಕಟ್ಟು: ಬಂಧಿಸು; ಖಳ: ದುಷ್ಟ;

ಪದವಿಂಗಡಣೆ:
ಒಳಗೆ +ಹೊಳೆದನು +ಬಾಹ್ಯದೊಳು +ಪ್ರ
ಜ್ವಲಿಸಿದನು +ತಾನಲ್ಲದ್+ಅನ್ಯರ
ಬಳಕೆ +ಮತ್ತೊಂದಿಲ್ಲದಂತಿರೆ +ಕೂಡೆ +ತೋರಿದನು
ಒಳಗೆ +ಬಿಗಿವೆವೊ +ಹೊರಗೆ +ಕೃಷ್ಣನ
ಸಿಲುಕಿಸುವೆವೋ +ತಿಳಿಯೆ +ಕೃಷ್ಣರು
ಹಲಬರಾಗಿಹರ್+ಆರ +ಕಟ್ಟುವೆವೆಂದರಾ +ಖಳರು

ಅಚ್ಚರಿ:
(೧) ಒಳಗೆ, ಹೊರಗೆ – ವಿರುದ್ಧ ಪದಗಳು
(೨) ಬಾಹ್ಯ, ಹೊರಗೆ; ಬಿಗಿ, ಸಿಲುಕಿಸು, ಕಟ್ಟು; ಪ್ರಜ್ವಲಿಸು, ಹೊಳೆ – ಸಮಾನಾರ್ಥಕ ಪದ
(೩) ಕೃಷ್ಣ – ೪, ೫ ಸಾಲಿನ ಕೊಎನ್ ಪದ