ಪದ್ಯ ೫೯: ಭೀಮನು ಗಾಂಧಾರಿಗೆ ಏನೆಂದು ಬಿನ್ನೈಸಿದನು?

ಹೊರಿಸುವಡೆ ದುಷ್ಕೀರ್ತಿ ನಮ್ಮಲಿ
ಹೊರಿಗೆಯಾಯಿತು ನಾಭಿಯಿಂ ಕೆಳ
ಗೆರಗುವುದು ಗದೆಯಿಂದ ಸಲ್ಲದು ಶಸ್ತ್ರವಿದ್ಯೆಯಲಿ
ಅರಿಕೆಯಿಂದನ್ಯಾಯವೀ ಜಗ
ವರಿಯೆ ನಮ್ಮದು ತಾಯೆ ನೀ ಮನ
ಮುರಿಯದವಧರಿಸುವಡೆ ಬಿನ್ನಹವೆಂದನಾ ಭೀಮ (ಗದಾ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾಯೇ, ಹೊರಬೇಕೆಂದರೆ ನಾವು ದುಷ್ಕೀರ್ತಿಯನ್ನು ಹೊರುತ್ತೇವೆ. ಗದಾಯುದ್ಧದಲ್ಲಿ ನಾಭಿಯಿಂದ ಕೆಳಗೆ ಹೊಡೆಯುವುದು ಸಲ್ಲದು, ಈ ಅನ್ಯಾಯವನ್ನು ನಾವು ಮಾಡಿರುವುದು ಜಗತ್ತಿಗೇ ಗೊತ್ತಿದೆ, ನೀವು ಮನಸ್ಸನ್ನು ಮುರಿದುಕೊಳ್ಳದೆ ಕೇಳುವುದಾದರೆ ಬಿನ್ನೈಸುತ್ತೇವೆ ಎಂದು ಭೀಮನು ಗಾಂಧಾರಿಗೆ ನುಡಿದನು.

ಅರ್ಥ:
ಹೊರಿಸು: ಧರಿಸು, ಭಾರವನ್ನು ಹೇರು; ದುಷ್ಕೀರ್ತಿ: ಅಪಕೀರ್ತಿ; ನಾಭಿ: ಹೊಕ್ಕಳು; ಎರಗು: ಬೀಳು; ಸಲ್ಲದು: ಸರಿಹೊಂದು, ಒಪ್ಪಿಗೆಯಾಗು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಅರಿಕೆ: ವಿಜ್ಞಾಪನೆ; ಅನ್ಯಾಯ: ಸರಿಯಲ್ಲದ; ಜಗ: ಪ್ರಪಂಚ; ಅರಿ: ತಿಳಿ; ಮನ: ಮನಸ್ಸು; ಮುರಿ: ಸೀಳು; ಅವಧರಿಸು: ಮನಸ್ಸಿಟ್ಟು ಕೇಳು; ಬಿನ್ನಹ: ಕೋರಿಕೆ;

ಪದವಿಂಗಡಣೆ:
ಹೊರಿಸುವಡೆ +ದುಷ್ಕೀರ್ತಿ +ನಮ್ಮಲಿ
ಹೊರಿಗೆಯಾಯಿತು +ನಾಭಿಯಿಂ +ಕೆಳಗ್
ಎರಗುವುದು +ಗದೆಯಿಂದ +ಸಲ್ಲದು+ ಶಸ್ತ್ರವಿದ್ಯೆಯಲಿ
ಅರಿಕೆಯಿಂದ್+ಅನ್ಯಾಯವೀ +ಜಗವ್
ಅರಿಯೆ +ನಮ್ಮದು +ತಾಯೆ +ನೀ +ಮನ
ಮುರಿಯದ್+ಅವಧರಿಸುವಡೆ +ಬಿನ್ನಹವೆಂದನಾ+ ಭೀಮ

ಅಚ್ಚರಿ:
(೧) ಹೊರಿ, ಅರಿ – ೧-೨, ೪,೫ ಸಾಲಿನ ಮೊದಲ ಪದ
(೨) ಅರಿ, ಮುರಿ – ಪ್ರಾಸ ಪದ

ಪದ್ಯ ೪: ಅಶ್ವತ್ಥಾಮನು ಹೇಗೆ ಎಚ್ಚರದಿಂದಿದ್ದನು?

ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ಜಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟ ಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ (ಗದಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಲಿಕೆಯಿಂದ ಕೃಪ ಮತ್ತು ಕೃತವರ್ಮರು ಮಲಗಿದರು. ರಾಜರಿಗೆ ಗರುಡಿಯಾಚಾರ್ಯನಾದ, ರಾಜ್ಯಕಾರ್ಯದ ಭಾರವನ್ನು ಹೊತ್ತ ಅಶ್ವತ್ಥಾಮನು ಜೋರಾಗಿ ಉಸಿರಾಡದೆ, ನಿದ್ರೆಗೆ ಅವಕಾಶ ಕೊಡದೆ ತನ್ನ ಇಷ್ಟಸಿದ್ಧಿಯನ್ನು ಸಾಧಿಸುವ ಬಗೆಯೇನೆಂದು ಸಾಧಕ ಬಾಧಕಗಳನ್ನು ಚಿಂತಿಸುತ್ತಾ ಎಚ್ಚರದಿಂದಿದ್ದನು.

ಅರ್ಥ:
ಕುಸಿ: ಕೆಳಕ್ಕೆ ಬೀಳು; ಜೊಮ್ಮು: ನಿದ್ರೆಯ ಆವರಿಸುವ ಸ್ಥಿತಿ; ಜಾಡ್ಯ: ಸೋಮಾರಿತನ; ಝೊಂಪಿಸು: ಮೈಮರೆ, ಎಚ್ಚರ ತಪ್ಪು; ರಾಯ: ರಾಜ; ಗರುಡಿ: ವ್ಯಾಯಾಮ ಶಾಲೆ; ಜಸ: ಯಶಸ್ಸು, ಕೀರ್ತಿ; ಜಹಿ: ಸೋಲಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಹೊತ್ತು: ಧರಿಸು; ಹೊರಿಗೆ: ಭಾರ; ಉಸುರು: ಶ್ವಾಸ; ಮಿಡುಕು: ಅಲುಗು, ಕದಲು; ನಿದ್ರೆ: ಶಯನ; ನಿನಹು: ಜ್ಞಾಪಕ; ಮುಸುಕ: ಆವರಿಸು; ಉಗಿ: ಹೊರಹಾಕು; ಇಷ್ಟ: ಇಚ್ಛಿಸು, ಆಸೆಪಡು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ವಿಷಮ: ಕಷ್ಟಕರವಾದುದು; ಸಂಧಿ: ಸೇರಿಕೆ, ಸಂಯೋಗ; ಸರವು: ಜಾಡು, ದಾರಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕುಸಿದು +ಜೊಮ್ಮಿನ +ಜಾಡ್ಯದಲಿ+ ಝೊಂ
ಪಿಸಿದರ್+ಇಬ್ಬರು +ರಾಯ+ಗರುಡಿಯ
ಜಸದ+ ಜಹಿಯಲಿ+ ಸ್ವಾಮಿ+ಕಾರ್ಯದ+ ಹೊತ್ತ+ಹೊರಿಗೆಯಲಿ
ಉಸುರು +ಮಿಡುಕದೆ +ನಿದ್ರೆ +ನೆನಹಿನ
ಮುಸುಕನ್+ಉಗಿಯದೆ+ಇಷ್ಟ+ ಸಿದ್ಧಿಯ
ವಿಷಮ +ಸಮಸಂಧಿಗಳ+ ಸರಿವಿನೊಳ್+ಇರ್ದನಾ ದ್ರೌಣಿ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದಗಳು – ಜೊಮ್ಮಿನ ಜಾಡ್ಯದಲಿ ಝೊಂಪಿಸಿದರಿಬ್ಬರು
(೨) ಎಚ್ಚರದಿಂದಿರುವ ಸ್ಥಿತಿಯನ್ನು ವರ್ಣಿಸುವ ಪರಿ – ನಿದ್ರೆ ನೆನಹಿನಮುಸುಕನುಗಿಯದೆ

ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು