ಪದ್ಯ ೩೦: ಬಲರಾಮನು ಕೃಷ್ಣನನ್ನು ಏನೆಂದು ಪ್ರಶ್ನಿಸಿದನು?

ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂಉ ನುಡಿಯನೆ ಸಮಯವನು ಶಾಸ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ (ಗದಾ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತಿಗೆ ಉತ್ತರಿಸುತ್ತಾ, ಏನು ಹೇಳುತ್ತಿರುವೆ ಕೃಷ್ಣ, ಶಾಸ್ತ್ರಕ್ಕೆ ಅನುಸಾರವಾಗಿ ನಿನ್ನವರು ನಡೆದರೋ? ಧರ್ಮಜನು ಶಾಸ್ತ್ರ ವಿಚಾರವನ್ನು ಹೇಳಿರಲಿಲ್ಲವೆ? ನಾಭಿಯ ಕೆಳಗೆ ಗದೆಯಿಂದ ಹೊಡೆಯಬಾರದೆಂಬ ನಿಬಂಧವನ್ನು ಮೀರಿದವರಾರು ಎಂದು ಪ್ರಶ್ನಿಸಿದನು.

ಅರ್ಥ:
ತಿಳುಹು: ತಿಳಿಸು, ಹೇಳು; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಡೆ: ಚಲಿಸು, ಆಚರಿಸು; ಸೂನು: ಮಗ; ನುಡಿ: ಮಾತಾಡು; ಸಮಯ: ಕಾಲ; ಔಘ: ಗುಂಪು, ಸಮೂಹ; ಸಂಗತಿ: ಜೊತೆ, ಸಂಗಡ; ಹೀನ: ಕೆಟ್ಟದ್ದು, ಕಳಪೆ; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಹೊಯ್ಲು: ಏಟು, ಹೊಡೆತ; ಘಾಯ: ಪೆಟ್ಟು; ಒದಗು: ಲಭ್ಯ, ದೊರೆತುದು; ನಿಬಂಧ: ಕರಾರು, ಕಟ್ಟಳೆ; ಅಳಿ: ನಾಶ; ಹೇಳು: ತಿಳಿಸು;

ಪದವಿಂಗಡಣೆ:
ಏನ +ತಿಳುಹುವೆ +ನೀನು +ಶಾಸ್ತ್ರದೊಳ್
ಏನ +ನಡೆದರು +ನಿನ್ನವರು +ಯಮ
ಸೂನು +ನುಡಿಯನೆ +ಸಮಯವನು +ಶಾಸ್ರೌಘ+ಸಂಗತಿಯ
ಹೀನಗತಿ +ಪಡಿತಳದ +ಹೊಯ್ಲು
ತ್ತಾನ+ ಘಾಯದಲ್+ಒದಗಬೇಕೆಂಬ್
ಈ +ನಿಬಂಧನವ್+ಆರಲ್+ಅಳಿದುದು +ಕೃಷ್ಣ+ ಹೇಳೆಂದ

ಅಚ್ಚರಿ:
(೧) ಏನ – ೧, ೨ ಸಾಲಿನ ಮೊದಲ ಪದ

ಪದ್ಯ ೩೩: ಕೌರವನು ಭೀಮನ ಬಳಿ ಹೇಗೆ ನುಗ್ಗಿದನು?

ಎಲವೋ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ (ಗದಾ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಹೊಡೆತಗಳ ಪ್ರವಾಹದಲ್ಲಿ ಒಂದು ಕ್ಷಣ ಕೈನಿಂತುಹೋಯಿತು. ನಿನಗೆ ಆದ ಅಭ್ಯುದಯವು ಆಕಸ್ಮಿಕ. ನನ್ನ ಛಲವನ್ನು ನಿಲ್ಲಿಸುವೆನೆಮ್ದುಕೊಂಡಿದ್ದರೆ ಏಲು. ನನ್ನ ಹೊಡೆತಕ್ಕೆ ಹೆದರುವುದಾದರೆ ನಿನ್ನವರನ್ನು ಕರೆಸಿಕೋ, ಹಲವು ಹೊಡೆತಗಳಿಂದೇನು. ನಿನಗೆ ಇದೊಂದೇ ಹೊಡೆತ ಸಾಕು ಎನ್ನುತ್ತಾ ನುಗ್ಗಿದನು.

ಅರ್ಥ:
ವಿಘಾತ: ನಾಶ, ಧ್ವಂಸ; ಕೈದು: ಆಯುಧ; ತೆರಹು: ಬಿಚ್ಚು, ತೆರೆ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ; ಅಭ್ಯುದಯ: ಏಳಿಗೆ; ಛಲ: ನೆಪ, ವ್ಯಾಜ; ಬಿಡಿಸು: ತೊರೆ; ಏಳು: ಮೇಲೆ ಹತ್ತು; ಮನ: ಮನಸ್ಸು; ಅಳುಕು: ಹೆದರು; ಕರೆ: ಬರೆಮಾದು; ಹೊಯ್ಲು: ಹೊಡೆ; ಹೊಕ್ಕು: ಸೇರು; ಮಹೀಪಾಲ: ರಾಜ;

ಪದವಿಂಗಡಣೆ:
ಎಲವೋ+ ಭೀಮ +ವಿಘಾತಿಗಳ +ಕೈ
ದೊಳಸಿನಲಿ +ತೆರಹಾಯ್ತು +ನೀನ್
ಇಟ್ಟಳಿಸುವಡೆ +ನಿನಗಾದುದ್+ಆಕಸ್ಮಿಕವದ್+ಅಭ್ಯುದಯ
ಛಲವ +ಬಿಡಿಸುವಡ್+ಏಳು +ನೀ +ಮನವ್
ಅಳಕುವಡೆ +ನಿನ್ನವರ+ ಕರೆ +ಹೊ
ಯ್ಲೊಳಗಿದೊಂದೇ +ಹೊಯ್ಲೆನುತ +ಹೊಕ್ಕನು +ಮಹೀಪಾಲ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು

ಪದ್ಯ ೨೦: ದುರ್ಯೋಧನನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ (ಗದಾ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೌರವನು ಲೆಕ್ಕಹಾಕಿ ವೇಗದಿಂದ ಭೀಮನನ್ನು ಹೊಡೆಯಲು, ಅವನ ದುರದೃಷ್ಟದಿಂದ ಹೊಡೆತ ಭೀಮನಿಂದ ದೂರವಾಗಿತ್ತು. ಆ ಕ್ರೋಧದಿಂದ ಭೀಮನನ್ನು ಸೀಳಲು ಗದೆಯಿಂದ ಹೊಡೆಯಲು, ಭೀಮನು ಚಲಿಸಿ ವೇಗವಾಗಿ ತನ್ನ ಪಾದದ ಚಲನೆಯಿಂದ ಆ ಹೊಡೆತದಿಂದ ತಪ್ಪಿಸಿಕೊಂಡನು.

ಅರ್ಥ:
ಲಾಗು: ನೆಗೆಯುವಿಕೆ, ಲಂಘನ; ಲಳಿ: ರಭಸ; ತಾಗು: ಮುಟ್ಟು; ಅವನೀಶ: ರಾಜ್; ಭಾಗದೇಯ: ಅದೃಷ್ಟ; ಹೊಯ್ಲು: ಹೊಡೆತ; ಹೊರಗೆ: ಆಚೆ, ದೂರ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ಉಬ್ಬು: ಹೆಚ್ಚು, ಅಧಿಕ; ನೃಪತಿ: ರಾಜ; ವಿಭಾಗಿಸು: ಒಡೆ, ಸೀಳು; ಅನಿಲಜ: ಭೀಮ; ತನು: ದೇಹ; ಬೇಗ: ಶೀಘ್ರ; ಕಳಚು: ಸಡಲಿಸು; ಪಯ: ಪಾದ; ಬವರಿ:ತಿರುಗುವುದು; ಬವರ: ಕಾಳಗ, ಯುದ್ಧ;

ಪದವಿಂಗಡಣೆ:
ಲಾಗಿಸುತ +ಲಳಿಯೆದ್ದು +ಭೀಮನ
ತಾಗಿಸಿದನ್+ಅವನೀಶನ್+ಆತನ
ಭಾಗಧೇಯವನ್+ಏನನೆಂಬೆನು +ಹೊಯ್ಲು+ ಹೊರಗಾಯ್ತು
ಬೇಗುದಿಯಲ್+ಉಬ್ಬೆದ್ದು+ ನೃಪತಿ +ವಿ
ಭಾಗಿಸಿದನ್+ಅನಿಲಜನ +ತನುವನು
ಬೇಗದಲಿ +ಕಳಚಿದನು +ಪವನಜ +ಪಯದ +ಬವರಿಯಲಿ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಲಾಗಿಸುತ ಲಳಿಯೆದ್ದು; ಹೊಯ್ಲು ಹೊರಗಾಯ್ತು; ಪವನಜ ಪಯದ
(೨) ಬ ಕಾರದ ಪದಗಳ ಬಳಕೆ – ಭಾಗಧೇಯ, ಬೇಗುದಿ, ಬೇಗ, ಬವರಿ

ಪದ್ಯ ೧೪: ಸೈನಿಕರ ನಡುವೆ ಯುದ್ಧವು ಹೇಗೆ ಮುಂದುವರೆಯಿತು?

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು (ಶಲ್ಯ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಟರೆಲ್ಲರೂ ಸಂಕೋಚವನ್ನು ಬಿಟ್ಟು ಶಕ್ತಿಮೀರಿ ಹಾಣಾಹಾಣಿ ಯುದ್ಧದಲ್ಲಿ ತೊಡಗಿದರು. ಆಯುಧಗಳು ತಾಕಿ ಖಣಿಖಟಿಲು ಸದ್ದು ಕೇಳಿ ಕಿಡಿಗಳುರುಳಿದವು. ಉಬ್ಬಣಗಳು ತಾಕಲಾಡಿದವು. ಭಲ್ಯ ಈಟಿಗಳಿಂದ ವೈರಿಗಳನ್ನು ಹಣಿದರು. ಬಿಲ್ಲಾಳುಗಳು, ಸೂತರು, ರಥಿಕರು ಸಮರೋದ್ಯೋಗದಲ್ಲಿ ನಿರತರಾದರು.

ಅರ್ಥ:
ಕೇಣ: ಹೊಟ್ಟೆಕಿಚ್ಚು; ಭಟ: ಸೈನಿಕ; ಹಾಣಾಹಾಣಿ: ಹಣೆ ಹಣೆಯ ಯುದ್ಧ; ಮಸಗು: ಹರಡು; ಕೆರಳು; ಖಣಿಖಟಿಲು: ಬಾಣದ ಶಬ್ದವನ್ನು ವಿವರಿಸುವ ಪದ; ಹೋಯ್ದ್: ಹೊಡೆ; ಬಿರು: ಬಿರುಸಾದುದು, ಗಟ್ಟಿಯಾದ;
ಕಿಡಿ: ಬೆಂಕಿ; ಹಿರಿ: ಹೆಚ್ಚು; ಉಬ್ಬಣ: ಚೂಪಾದ ಆಯುಧ; ಹೊಯ್ಲು: ಏಟು, ಹೊಡೆತ; ಹೂಣಿಕೆ: ಶಪಥ, ಪ್ರತಿಜ್ಞೆ; ಸಬಳ: ಈಟಿ, ಭರ್ಜಿ; ಸೂತ: ಸಾರಥಿ; ರಥಿಕ: ರಥದ ಮೇಲೆ ಕುಳಿತು ಯುದ್ಧ ಮಾಡುವವ; ಜಾಣತಿ: ಜಾನತನ; ಬಿಲ್ಲವರ: ಬಿಲ್ಲುಗಾರ; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲುಹು: ಬಲ, ಶಕ್ತಿ;

ಪದವಿಂಗಡಣೆ:
ಕೇಣವಿಲ್ಲದೆ +ಭಟರ +ಹಾಣಾ
ಹಾಣಿ +ಮಸಗಿತು +ಖಣಿಖಟಿಲ+ ಹೊ
ಯ್ದಾಣೆಗಳ+ ಬಿರು+ಕಿಡಿಯ +ಹಿರಿ+ಉಬ್ಬಣದ+ ಹೊಯ್ಲುಗಳ
ಹೂಣಿಕೆಯ +ಸಬಳಿಗರೊಳ್+ಇಮ್ಮೈ
ಗಾಣಿಕೆಯ +ಬಲು+ಸೂತ+ರಥಿಕರ
ಜಾಣತಿಯ +ಬಿಲ್ಲವರ+ ಧಾಳಾಧೂಳಿ +ಬಲುಹಾಯ್ತು

ಅಚ್ಚರಿ:
(೧) ಹಾಣಾಹಾಣಿ, ಖಣಿಖಟಿಲ, ಧಾಳಾಧೂಳಿ – ಪದಗಳ ಬಳಕೆ

ಪದ್ಯ ೬೮: ಭೀಮನು ಯುದ್ಧರಂಗವನ್ನು ಹೇಗೆ ಪ್ರವೇಶಿಸಿದನು?

ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದ ವೋಲವ
ಗಡಿಸಿ ಹೊಕ್ಕನು ಗದೆಯ ಘಾಡವ ಹೊದರ ಹೊಯ್ಲಿನಲಿ (ದ್ರೋಣ ಪರ್ವ, ೨ ಸಂಧಿ, ೬೮ ಪದ್ಯ
)

ತಾತ್ಪರ್ಯ:
ಫಡ, ಧರ್ಮಜನನ್ನು ಹಿಡಿ ಎಂದವರು ಯಾರು? ಬಾಯ್ಬಡಿಕರು ಕೂಗಿಕೊಂಡ ಮಾತ್ರಕ್ಕೆ ಏನಾದೀತು? ಎಂದು ಗರ್ಜಿಸಿ ಸಮುದ್ರದ ತೆರೆಗಳನ್ನು ಮುರಿಯುವ ಮಂದರ ಪರ್ವತದಂತೆ ಗದೆಯನ್ನು ಹಿಡಿದು ಸುತ್ತುತ್ತಾ ವೈರಿಗಳನ್ನು ಬಡಿದುಹಾಕುತ್ತಾ ಭೀಮನು ಯುದ್ಧರಂಗವನ್ನು ಹೊಕ್ಕನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹಿಡಿ: ಬಂಧಿಸು; ಬಾಯ್ಬಡಿಕ: ಪೊಳ್ಳುಮಾತು, ಬಡಾಯಿ; ಪುತ್ರ: ಮಗ; ಹೊಕ್ಕು: ಸೇರು; ಉರವಣೆ: ಆತುರ, ಅವಸರ; ಕಡಲ: ಸಾಗರ; ಕಡುಹು: ಸಾಹಸ, ಹುರುಪು; ಬಹಳ: ತುಂಬಾ; ಲಹರಿ: ರಭಸ, ಆವೇಗ; ಮುರಿ: ಸೀಳು; ಮಂದರ: ಪರ್ವತದ ಹೆಸರು; ಅವಗಡ: ಅಸಡ್ಡೆ; ಹೊಕ್ಕು: ಸೇರು; ಗದೆ: ಮುದ್ಗರ; ಘಾಡಿಸು: ವ್ಯಾಪಿಸು; ಹೊದರು: ಗುಂಪು, ಸಮೂಹ; ಹೊಯ್ಲು: ಏಟು, ಹೊಡೆತ;

ಪದವಿಂಗಡಣೆ:
ಫಡ+ಫಡ+ಆರೋ +ಧರ್ಮಪುತ್ರನ
ಹಿಡಿವವರು+ ಬಾಯ್ಬಡಿಕರೈ+ ಕಾ
ಳ್ಗೆಡೆದಡ್+ಏನಹುದ್+ಎನುತ +ಹೊಕ್ಕನು +ಭೀಮನ್+ಉರವಣಿಸಿ
ಕಡಲ +ಕಡುಹಿನ +ಬಹಳ +ಲಹರಿಯನ್
ಒಡೆ+ಮುರಿವ +ಮಂದರದವೋಲ್+ಅವ
ಗಡಿಸಿ +ಹೊಕ್ಕನು +ಗದೆಯ +ಘಾಡವ +ಹೊದರ +ಹೊಯ್ಲಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಕಡುಹಿನ ಬಹಳ ಲಹರಿಯನೊಡೆಮುರಿವ ಮಂದರದವೋಲ್