ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ

ಪದ್ಯ ೩೨: ಅರ್ಜುನನು ಹೇಗೆ ತೆರಳಿದನು?

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗೆಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ (ಅರಣ್ಯ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಬತ್ತಳಿಕೆಯನ್ನು ಬೆನ್ನಿಗೆ ಬಿಗಿದನು. ಬಿಲ್ಲನ್ನು ಹಿಡಿದನು. ಬಂಗಾರದ ಹಿಡಿಕೆಯುಳ್ಳ ಕತ್ತಿ, ಕಠಾರಿಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಅದಕ್ಕೆ ಹೊಂದುವಹಾಗೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಂಡನು. ಶಿವನನ್ನು ಕುರಿತ ತಪಸ್ಸಿನ ಸಂತಸ, ಅಣ್ಣ ತಮ್ಮಂದಿರನ್ನು ಬಿಡಬೇಕಾದ ನೋವು ಇವೆರಡು ಮನಸ್ಸನ್ನು ಆಗಸದವರೆಗೂ ಕೊರೆಯುತ್ತಿರಲು, ಪರಾಕ್ರಮಿ, ಗುಣಗಳಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮಜನನ್ನು ಬೀಳ್ಕೊಂಡು ತನ್ನ ತಪಸ್ಸಿಗೆ ತೆರಳಿದನು.

ಅರ್ಥ:
ಬಿಗಿ: ಬಂಧಿಸು, ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನ: ಚಿನ್ನ; ಖಡುಗ: ಕತ್ತಿ; ಯುಗ: ನೊಗ, ಹಿಡಿಕೆ; ಕಠಾರಿ: ಚೂರಿ, ಕತ್ತಿ; ಚಾಪ: ಬಿಲ್ಲು; ತೆಗೆದು: ಹೊರತಂದು; ಅಳವಡಿಸು: ಸರಿಪಡಿಸು; ಬದ್ದುಗೆ: ವಸ್ತ್ರದ ಕೊನೆ; ದಾರ: ಹಗ್ಗ; ಗೊಂಡೆ:ಕುಚ್ಚು; ದುಗುಡ: ದುಃಖ; ಹರುಷ: ಸಂತಸ; ಮುಗಿಲು: ಆಗಸ, ಮೇಲುಭಾಗ; ತಲೆ: ಶಿರ; ಒತ್ತು: ಒತ್ತಡ, ಮುತ್ತು; ಇಟ್ಟೆಡೆ: ಇಕ್ಕಟ್ಟು; ಗುಣ: ನಡತೆ, ಸ್ವಭಾವ; ಮೌಳಿ: ಶಿರ; ಮಣಿ: ಬೆಲೆಬಾಳುವ ರತ್ನ; ಕಲಿ: ಶೂರ; ಬೀಳ್ಕೊಂಡು: ತೆರಳು; ನಿಜ: ತನ್ನ; ಅಗ್ರಜ: ಅಣ್ಣ;

ಪದವಿಂಗಡಣೆ:
ಬಿಗಿದ +ಬತ್ತಳಿಕೆಯನು +ಹೊನ್ನಾ
ಯುಗದ +ಖಡುಗ +ಕಠಾರಿ +ಚಾಪವ
ತೆಗೆದನ್+ಅಳವಡೆಗಟ್ಟಿ+ ಬದ್ದುಗೆ+ದಾರ +ಗೊಂಡೆಯವ
ದುಗುಡ +ಹರುಷದ +ಮುಗಿಲ +ತಲೆ
ಒತ್ತುಗಳಿಗ್+ಎಟ್ಟೆಡೆಯಾಗಿ +ಗುಣ ಮೌ
ಳಿಗಳ ಮಣಿ +ಕಲಿಪಾರ್ಥ +ಬೀಳ್ಕೊಂಡನು +ನಿಜಾಗ್ರಜನ

ಅಚ್ಚರಿ:
(೧) ಅರ್ಜುನನ ಗುಣವಿಶೇಷಗಳು – ಗುಣ ಮೌಳಿಗಳ ಮಣಿ, ಕಲಿಪಾರ್ಥ
(೨) ಆಯುಧದ ವರ್ಣನೆ – ಹೊನ್ನಾಯುಗದ ಖಡುಗ ಕಠಾರಿ ಚಾಪ