ಪದ್ಯ ೭: ಪಾಂಡವರ ಸೈನ್ಯವನ್ನು ಯಾರು ಆಕ್ರಮಣ ಮಾಡಿದರು?

ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೭ ಪದ್ಯ
)

ತಾತ್ಪರ್ಯ:
ಕೌರವ ವೀರರೆಲ್ಲರೂ ಅರ್ಜುನನತ್ತ ಹೋಗಿ ಅವನನ್ನು ಒಂದು ಕಡೆಗೆ ತೆಗೆದು ಯುದ್ಧವನ್ನಾರಂಭಿಸಿದರು. ಇತ್ತ ಭೀಷ್ಮನು ಬಾಣಗಳ ಹೊರೆಗಳ ಕಟ್ಟುಗಳನ್ನು ಕಿತ್ತು ಶತ್ರುಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಪಾಂಡವ ಸೈನ್ಯದ ಬೆನ್ನುಹತ್ತಿದನು.

ಅರ್ಥ:
ವಿಗಡ: ಶೌರ್ಯ, ಪರಾಕ್ರಮ; ಅನಿಬರು: ಅಷ್ಟುಜನ; ನೆರೆ: ಸೇರು, ಜೊತೆಗೂಡು; ತೆಗೆ: ಹೊರಹಾಕು; ಹೊಗೆ: ಧುಮುಗುಡು; ಅಂತ್ಯ: ಕೊನೆ; ರುದ್ರ: ಶಿವ, ಭಯಂಕರವಾದ; ಅಗ್ಗ: ಶ್ರೇಷ್ಠ; ಕಣ್ಣು: ನೇತ್ರ; ಶಿಖಿ: ಬೆಂಕಿ; ಬಿಗಿ: ಕಟ್ಟು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹರಿ: ಸೀಳು; ಬಿಲ್ಲು: ಚಾಪ; ಉಗುಳು: ಹೊರಹಾಕು; ಅಂಬು: ಬಾಣ; ಅಳವಿ: ಶಕ್ತಿ, ಯುದ್ಧ; ತೆಗೆ: ಹೊರತರು; ಬಲ: ಶಕ್ತಿ, ಸೈನ್ಯ; ಬೆಂಬತ್ತಿ: ಹಿಂಬಾಲಿಸು; ಖಾತಿ: ಕೋಪ;

ಪದವಿಂಗಡಣೆ:
ವಿಗಡರ್+ಅನಿಬರು +ನೆರೆದು +ಪಾರ್ಥನ
ತೆಗೆದರ್+ಅತ್ತಲು +ಭೀಷ್ಮನ್+ಇತ್ತಲು
ಹೊಗೆದನ್+ಅಂತ್ಯದ +ರುದ್ರನ್+ಅಗ್ಗದ +ಕಣ್ಣ +ಶಿಖಿಯಂತೆ
ಬಿಗಿದ +ಹೊದೆಗಳ +ಹರಿದು +ಬಿಲ್ಲಿಂದ್
ಉಗುಳಿಸಿದನ್+ಅಂಬುಗಳನ್+ಅಳವಿಗೆ
ತೆಗೆದು+ ಪಾಂಡವ +ಬಲವ +ಬೆಂಬತ್ತಿದನು +ಖಾತಿಯಲಿ

ಅಚ್ಚರಿ:
(೧) ಬಾಣ ಬಿಟ್ಟನು ಎಂದು ಹೇಳುವ ಪರಿ – ಬಿಲ್ಲಿಂದುಗುಳಿಸಿದನಂಬುಗಳನಳವಿಗೆ

ಪದ್ಯ ೩೪: ಅರ್ಜುನನು ಹೇಗೆ ಯುದ್ಧಕ್ಕನುವಾದನು?

ರಣಕೆ ತವಕಿಸಿ ಬಳಿಕ ತಾಗುವ
ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ (ಭೀಷ್ಮ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತವಕದಿಂದ ಬಂದು, ಬಾಣಗಳ ಹೊಡೆತಕ್ಕೆ ಹೆದರಿ ಓಡಿಹೋಗುವುದು ಇದೆಂತಹ ಕುದುರೆಯಂತಹ ಗುಣ! ಈ ಭಂಡರು ಹೋಗಲಿ ಕಳಿಸಿ ಬಿಡು ಎನ್ನುತ್ತಾ ಅರ್ಜುನನು ತನ್ನ ಗಾಂಡೀವ ಬಿಲ್ಲಿನ ಹೆದೆಯನ್ನು ನುಡಿಸಿ, ಸಿಂಹಗರ್ಜನೆ ಮಾಡಿ ಬಾಣಗಳನ್ನು ಹಿಡಿದು ಯುದ್ಧಕ್ಕನುವಾದನು.

ಅರ್ಥ:
ರಣ: ರಣರಂಗ; ತವಕ: ಬಯಕೆ, ಆತುರ; ಬಳಿಕ: ನಂತರ; ತಾಗು: ಎದುರಿಸು, ಮೇಲೆ ಬೀಳು; ಕಣಿ: ನೋಟ, ನೆಲೆ; ದಾಳಿ: ಆಕ್ರಮಣ; ತಳ್ಳು: ನೂಕು; ವಾರುವ: ಕುದುರೆ; ಗುಣ: ನಡತೆ; ಭಂಡ: ನಾಚಿಕೆ ಇಲ್ಲದವನು; ಇವದಿರು: ಇಷ್ಟು ಜನ; ಹೋಗು: ತೆರಳು, ಗಮಿಸು; ಹೇಳು: ತಿಳಿಸು; ಕೆಣಕು: ರೇಗಿಸು; ಬಿಲು: ಬಿಲ್ಲು; ಉರು: ಹೆಚ್ಚು; ಮಾರ್ಗಣ: ಬಾಣ, ಅಂಬು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಸಮರಾಂಗಣ: ಯುದ್ಧರಂಗ, ರಣರಣ್ಗ; ಸಮ್ಮುಖ: ಎದುರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ರಣಕೆ +ತವಕಿಸಿ +ಬಳಿಕ +ತಾಗುವ
ಕಣಿಯ +ದಾಳಿಗೆ +ತಳ್ಳು+ವಾರುವ
ಗುಣವ್+ಇದೆಂತುಟೊ +ಭಂಡರ್+ಇವದಿರ +ಹೋಗ+ಹೇಳೆನುತ
ಕೆಣಕಿದನು +ಬಿಲುದಿರುವನ್+ಉರು +ಮಾ
ರ್ಗಣದ +ಹೊದೆಗಳ +ಕೆದರಿ +ಸಮರಾಂ
ಗಣಕೆ +ಸಮ್ಮುಖನಾದನ್+ಅರ್ಜುನ +ಸಿಂಹನಾದದಲಿ

ಅಚ್ಚರಿ:
(೧) ಸೈನಿಕರ ಗುಣವನ್ನು ಹೋಲಿಸುವ ಪರಿ – ರಣಕೆ ತವಕಿಸಿ ಬಳಿಕ ತಾಗುವ ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ

ಪದ್ಯ ೩: ಯುದ್ಧವು ಹೇಗೆ ಆರಂಭವಾಯಿತು?

ವಿನುತ ಭೀಷ್ಮನು ಗಜರೆ ದುರಿಯೋ
ಧನನು ಬಿಲುಗೊಳಲಾತನನುಜರು
ಧನುವ ತುಡುಕೆ ಸುಶರ್ಮ ಶಲ್ಯರು ಸರಳ ಹೊದೆಗೆದರೆ
ಮೊನೆಗಣೆಯನಳವಡಿಸೆ ಗುರು ಗುರು
ತನುಜನಸ್ತ್ರವ ತಿರುಹೆ ಸೇನಾ
ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ (ಭೀಷ್ಮ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಭೀಷ್ಮನು ಗರ್ಜಿಸಲು ದುರ್ಯೋಧನನೂ ಕೌರವರೂ ಬಿಲ್ಲು ಹಿಡಿದರು. ಸುಶರ್ಮ ಶಲ್ಯರು ಬಾಣಗಳನ್ನು ಕೆದರಿದರು. ದ್ರೋಣ ಅಶ್ವತ್ಥಾಮ ಅಸ್ತ್ರಗಳನ್ನು ತೂಗಿದರು. ಸೈನ್ಯ ಸಮುದ್ರವು ಗರ್ಜಿಸಲು ಸಂಕುಲ ಸಮರವು ಆರಂಭವಾಯಿತು.

ಅರ್ಥ:
ವಿನುತ: ಹೊಗಳಲ್ಪಟ್ಟ; ಗಜರು: ಗರ್ಜನೆ, ಆರ್ಭಟ; ಬಿಲು: ಬಿಲ್ಲು, ಚಾಪ; ಅನುಜ: ತಮ್ಮ; ಧನು: ಬಿಲ್ಲು; ತುಡುಕು: ಬೇಗನೆ ಹಿಡಿಯುವುದು; ಸರಳು: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಮೊನೆ: ಚೂಪು; ಕಣೆ: ಬಾಣ; ಅಳವಡಿಸು: ಜೋಡಿಸು; ಗುರು: ಆಚಾರ್ಯ; ತನುಜ: ಮಗ; ಅಸ್ತ್ರ: ಆಯುಧ; ತಿರುಹು: ತಿರುಗಿಸು; ವನ: ಕಾಡು; ಗರ್ಜಿಸು: ಆರ್ಭಟಿಸು; ಸಂಕುಲ: ಗುಂಪು; ಸಮರ: ಯುದ್ಧ; ಸೌರಂಭ: ಸಡಗರ;

ಪದವಿಂಗಡಣೆ:
ವಿನುತ+ ಭೀಷ್ಮನು +ಗಜರೆ +ದುರಿಯೋ
ಧನನು +ಬಿಲುಗೊಳಲ್+ಆತನ್+ಅನುಜರು
ಧನುವ +ತುಡುಕೆ +ಸುಶರ್ಮ+ ಶಲ್ಯರು +ಸರಳ +ಹೊದೆ+ಕೆದರೆ
ಮೊನೆಗಣೆಯನ್+ಅಳವಡಿಸೆ +ಗುರು +ಗುರು
ತನುಜನ್+ಅಸ್ತ್ರವ +ತಿರುಹೆ +ಸೇನಾ
ವನಧಿ +ಗರ್ಜಿಸಲಾಯ್ತು +ಸಂಕುಲ+ಸಮರ +ಸೌರಂಭ

ಅಚ್ಚರಿ:
(೧) ಸೇನೆಯನ್ನು ಕಾಡಿಗೆ ಹೋಲಿಸುವ ಪರಿ – ಸೇನಾವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ

(೨) ಅನುಜ, ತನುಜ – ಪದಗಳ ಬಳಕೆ
(೩) ಸರಳ, ಕಣೆ; ಬಿಲು, ಧನು – ಸಮನಾರ್ಥಕ ಪದ

ಪದ್ಯ ೬೬: ದುರ್ಯೋಧನನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕುನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುದತಿರಥರು (ವಿರಾಟ ಪರ್ವ, ೯ ಸಂಧಿ, ೬೬ ಪದ್ಯ)

ತಾತ್ಪರ್ಯ:
ಕೌರವನು ತನ್ನ ಯೋಧರ ಹಂಗಿನಲ್ಲಿರುವ ದೊರೆಯೇ? ಸೈನ್ಯದ ವೀರರ ಸೋಲು ರಾಜನ ಸೋಲೇ? ಕೌರವ ಸೈನ್ಯ ಉರಿಯಿತೇ? ರಾಜನೆಲ್ಲಿ? ಎಂದು ಪ್ರಲಾಪಿಸುವ ನಾಯಿಗಳ ಬಾಯನ್ನು ಸೀಳು, ಆಚೆಗೆ ನೂಕು, ಎಂದು ವಂಧಿ ಮಾಗಧರು ಹೇಳುತ್ತಿರಲು, ಯುದ್ಧಕ್ಕೆ ಬೇಕಾದ ಬಾಣಗಳನ್ನು ಬತ್ತಳಿಕೆಯಲ್ಲಿ ತುಂಬಿ, ರಥದ ಬಾವುಟಕ್ಕೆ ಹಾವಿನ ಲಾಂಛನವನ್ನು ಧರಿಸಿ ಸಾರಥಿಯು ಸಿದ್ಧಪಡಿಸಲು, ರಾಜನ ರಥದ ಸುತ್ತಲೂ ಮಹಾ ಪರಾಕ್ರಮಿಗಳು ಸೇರಿದರು.

ಅರ್ಥ:
ಸೀಳು: ಚೂರು, ತುಂಡು; ನಾಯಿ: ಶ್ವಾನ; ಕೆಲಬಲ: ಅಕ್ಕಪಕ್ಕ; ಆಳು: ಸೈನಿಕ; ಹಂಗು: ದಾಕ್ಷಿಣ್ಯ; ದೊರೆ: ರಾಜ; ಸುಭಟ: ಪರಾಕ್ರಮಿ; ಸೋಲು: ಪರಾಭವ; ರಾಯ: ರಾಜ; ನೂಕು: ತಳ್ಳು; ಕೋಲ: ಬಾಣ; ಹೊದೆ: ಬತ್ತಳಿಕೆ; ಕೆದರು: ಚದುರಿಸು; ಸಿಂಧ: ಬಾವುಟ; ಹಾವು: ಉರಗ; ಹಾಯ್ಕು: ಇಡು, ಇರಿಸು, ತೊಡು; ಮೇಳವಿಸು: ಸೇರು, ಜೊತೆಯಾಗು; ಅವನಿಪ: ರಾಜ; ರಥ: ಬಂಡಿ; ನೆರೆ: ಸೇರು, ಜೊತೆಗೂಡು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಸೀಳು+ ನಾಯ್ಗಳ +ಬಾಯ +ಕೆಲಬಲ
ದಾಳ +ಹಂಗಿನ+ ದೊರೆಯೆ +ಸುಭಟರ
ಸೋಲವದು+ ರಾಯರಿಗೆ+ ಸೋಲವೆ+ ನೂಕು+ನೂಕೆನುತ
ಕೋಲ +ಹೊದೆಗಳ +ಕೆದರಿ+ ಸಿಂಧದ
ಮೇಲೆ +ಹಾವನು +ಹಾಯ್ಕಿ +ಸಾರಥಿ
ಮೇಳವಿಸಲ್+ಅವನಿಪನ+ ರಥವನು +ನೆರೆದುದ್+ಅತಿರಥರು

ಅಚ್ಚರಿ:
(೧) ರಾಜನನ್ನು ಬೆಂಬಲಿಸುವ ಪರಿ – ಸುಭಟರ ಸೋಲವದು ರಾಯರಿಗೆ ಸೋಲವೆ ನೂಕುನೂಕೆನುತ