ಪದ್ಯ ೧೨: ಶಕುನಿಯ ಸೈನ್ಯದ ಸ್ಥಿತಿ ಏನಾಯಿತು?

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ (ಗದಾ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸ್ವಲ್ಪ ದೂರದಲ್ಲೇ ಅದೋ, ಸುಯೋಧನನ ಸೈನ್ಯ ಕಾಣುತ್ತಿದೆ. ಮುತ್ತಿರಿ ಎಂದು ಕೂಗುತ್ತಾ ಭೀಮಾರ್ಜುನಾರ ಚತುರಂಗ ಸೈನ್ಯವು ದಾಳಿಯಿಟ್ಟಿರು. ಶಕುನಿಯ ಸೈನ್ಯವು ಭುಜಬಲ ಪರಾಕ್ರಮದಿಂದ ಕಾದಿತು. ಆದರೆ ಅದರ ಮಾನ ಮೌನತಾಳಿತು (ಸೋತರು).

ಅರ್ಥ:
ಒಡ್ಡು: ರಾಶಿ, ಸಮೂಹ; ನಸು: ಸ್ವಲ್ಪ; ದೂರ: ಅಂತರ; ಕವಿ: ಆವರಿಸು; ಧಾಳಿ: ಲಗ್ಗೆ, ಮುತ್ತಿಗೆ; ರಥ: ಬಂಡಿ; ಚೂಣಿ: ಮೊದಲು; ಹೊದರು: ಗುಂಪು, ಸಮೂಹ; ಹಳಚು: ತಾಗು, ಬಡಿ; ಭಟ: ಸೈನಿಕ; ಭುಜ: ಬಾಹು; ಗರ್ವ: ಅಹಂಕಾರ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ; ಶೌರ್ಯ: ಸಾಹಸ, ಪರಾಕ್ರಮ; ಮದ: ಅಹಂಕಾರ; ಮಡ: ಹಿಮ್ಮಡಿ, ಹರಡು; ಮುರಿ: ಸೀಳು; ಸಿಲುಕು: ಹಿಡಿ; ಮಾನ: ಮರ್ಯಾದೆ; ಮೋನ: ಮೌನ;

ಪದವಿಂಗಡಣೆ:
ಅದೆ+ ಸುಯೋಧನನ್+ಒಡ್ಡು +ನಸುದೂ
ರದಲಿ +ಕವಿಕವಿ+ಎನುತ +ಧಾಳಿ
ಟ್ಟುದು +ಚತುರ್ಬಲ +ಭೀಮಪಾರ್ಥರ +ರಥದ +ಚೂಣಿಯಲಿ
ಹೊದರು +ಹಳಚಿತು +ಭಟರು +ಭುಜ+ಗ
ರ್ವದಲಿ +ಗರುವರ +ಗಾಢ +ಶೌರ್ಯದ
ಮದಕೆ +ಮಡ+ಮುರಿಯಾಯ್ತು +ಸಿಲುಕಿತು+ ಮಾನ +ಮೋನದಲಿ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ

ಪದ್ಯ ೨೬: ಶಲ್ಯನ ಬೆಂಬಲಕ್ಕೆ ಯಾರು ಬಂದರು?

ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತುಸಾವಿರ ಹೊದರುದೆಗೆದವು ಶಲ್ಯನೆಡಬಲಕೆ (ಶಲ್ಯ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಂಕುಶವನ್ನು ನೆತ್ತಿಗೊತ್ತಿ ಬೆರಳಿನೀಮ್ದ ಕಿವಿಗಳನ್ನೊತ್ತಿ ಸೊಂಡಿಲಿಗೆ ಪರಿಘವನ್ನು ಕೊಟ್ಟು ಎಂಟು ಸಾವಿರ ಆನೆಗಳನ್ನು ಕದನಕ್ಕೆ ಬಿಟ್ಟರು. ಗೊಂಡೆಗಳು ಸುತ್ತಲೂ ತೂಗುತ್ತಿರಲು, ಝಲ್ಲೈರ್ಗಳು ಹಾರಾಡುತ್ತಿರಲು ಹತ್ತು ಸಾವಿರ ರಥಗಳು ಶಲ್ಯನ ಬೆಂಬಲಕ್ಕೆ ಬಂದವು.

ಅರ್ಥ:
ನೆತ್ತಿ: ಶಿರ; ಅಂಕುಶ: ಹಿಡಿತ, ಹತೋಟಿ; ಬೆರಳು: ಅಂಗುಲಿ; ಒತ್ತು: ಆಕ್ರಮಿಸು, ಮುತ್ತು; ಕಿವಿ: ಕರ್ಣ; ಕರ: ಹಸ್ತ; ಪರಿಘ: ಗದೆ; ಮತ್ತ: ಸೊಕ್ಕು; ಗಜ: ಆನೆ; ಘಟೆ: ಗುಂಪು; ನೂಕು: ತಳ್ಳು; ಸಾವಿರ: ಸಹಸ್ರ; ಸುತ್ತು: ಆವರಿಸು; ಝಲ್ಲಿ: ಕುಚ್ಚು, ತೋರಣ; ಝಲ್ಲರಿ: ಕುಚ್ಚು, ಗೊಂಡೆ; ಬಲು: ಹೆಚ್ಚು; ಹತ್ತುಗೆ: ಪಕ್ಕ, ಸಮೀಪ; ಬಿರುಬು: ಆವೇಶ; ತೇರು: ಬಂಡಿ; ಹೊದರು: ಗುಂಪು, ಸಮೂಹ; ತೆಗೆ: ಹೊರತರು; ಎಡಬಲ: ಅಕ್ಕ ಪಕ್ಕ;

ಪದವಿಂಗಡಣೆ:
ನೆತ್ತಿಯಗತೆಗಳ್+ಅಂಕುಶದ +ಬೆರಳ್
ಒತ್ತು+ಕಿವಿಗಳ +ಕರದ +ಪರಿಘದ
ಮತ್ತ+ಗಜಘಟೆಗಳನು +ನೂಕಿದರ್+ಎಂಟು +ಸಾವಿರವ
ಸುತ್ತು +ಝಲ್ಲಿಯ +ಝಲ್ಲರಿಯ+ ಬಲು
ಹತ್ತುಗೆಯ +ಬಿರುಬುಗಳ +ತೇರಿನ
ಹತ್ತು+ಸಾವಿರ +ಹೊದರು+ತೆಗೆದವು +ಶಲ್ಯನ್+ಎಡಬಲಕೆ

ಅಚ್ಚರಿ:
(೧) ಝಲ್ಲಿಯ ಝಲ್ಲರಿಯ – ಝ ಕಾರದ ಜೋಡಿ ಪದ
(೨) ಒತ್ತು, ಸುತ್ತು, ಹತ್ತು – ಪದಗಳ ಬಳಕೆ

ಪದ್ಯ ೩೦: ಕೌರವ ಸೈನಿಕರು ಯಾರ ಮೇಲೆ ಮುತ್ತಿಗೆ ಹಾಕಿದರು?

ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ (ದ್ರೋಣ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಿಸ್ಸಾಳಗಳನ್ನು ಮೇಲಿಂದ ಮೇಲೆ ಹೊಡೆಯುತ್ತಾ, ಮತ್ತೆ ಮತ್ತೆ ಬೊಬ್ಬಿಡುತ್ತಾ, ಕೇಕೆ ಹೊಡೆಯುತ್ತಾ, ಮಸೆದ ಕತ್ತಿಗಲನ್ನು ಹಿಡಿದು ಮತ್ಸರದಿಂದ ಕುದಿಯುತ್ತಾ ಕೌರವ ಸೈನಿಕರು ಗುಂಪು ಗುಂಪಾಗಿ ಇದೇ ಹೊತ್ತು ಎಂದು ನುಗ್ಗಲು, ಶ್ರೀಕೃಷ್ಣನು ಅರ್ಜುನನ ಬಳಿಗೆ ರಥವನೊಯ್ದನು.

ಅರ್ಥ:
ಒದರು: ಕೊಡಹು, ಜಾಡಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನಿರಂತರ: ಯಾವಾಗಲು; ಸೂಳು: ಆರ್ಭಟ, ಬೊಬ್ಬೆ; ಹೊದರು: ಗುಂಪು, ಸಮೂಹ; ಹೊಸ: ನವೇನ; ಮಸೆ: ಹರಿತವಾದುದು; ಅಡಾಯ್ದು: ಅಡ್ಡ ಬಂದು; ಸಾಲ: ಸುತ್ತು, ಪ್ರಾಕಾರ; ಸಂದಣಿ: ಗುಂಪು; ಸದರ: ಸಲಿಗೆ, ಸಸಾರ; ಹೊತ್ತು: ಹೊರು; ಗೆಲವು: ಜಯ; ಕುದುಕುಳಿ: ವ್ಯಾಕುಲ ಮನಸ್ಸಿನವನು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಾಣು: ತೋರು; ಗದಗದಿಸು: ನಡುಗು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಒದರಿ +ಮೇಲಿಕ್ಕಿದರು +ನಿಸ್ಸಾ
ಳದ +ನಿರಂತರ+ ಸೂಳುವೊಯ್ಲಿನ
ಹೊದರುಗಳ +ಹೊಸ +ಮಸೆ+ಅಡಾಯ್ದದ +ಸಾಲ +ಸಂದಣಿಯ
ಸದರವ್+ಈ+ ಹೊತ್+ಎನುತ +ಗೆಲವಿನ
ಕುದುಕುಳಿಗಳ್+ಉರವಣಿಸೆ +ಕಾಣುತ
ಗದಗದಿಸಿ +ಮುರವೈರಿ +ಚಾಚಿದನ್+ಅರ್ಜುನಗೆ +ರಥವ

ಅಚ್ಚರಿ:
(೧) ಕುದುಕುಳಿ, ಗದಗದಿಸಿ – ಪದಗಳ ಬಳಕೆ

ಪದ್ಯ ೫೨: ಕರ್ಣನೇಕೆ ಕೋಪಗೊಂಡನು?

ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ (ದ್ರೋಣ ಪರ್ವ, ೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಗದೆಯ ಬಡಿತದಿಂದ ನೊಂದು ಕರ್ಣನು ಬಹಳ ಕೋಪಗೊಂಡನು. ಅವನ ರೋಮಗಳು ಜೋಲು ಬಿದ್ದವು. ನಟ್ಟ ನೋಟದಿಂದ ನೋಡುವ ತನ್ನ ಕಣ್ಣುಗಳು ಕೆಂಪಾಗಿ ಕೋಪವನ್ನು ಕಾರಿದವು. ಅವನ ಮೀಸೆಗಳು ಕುಣಿದವು. ಹೃದಯವು ಕುದಿಯಿತು. ದೇಹ ಕಾವೇರಿತು. ಆಗ ಕರ್ಣನು ಹೋಗಬೇಡ ಹೋಗಬೇಡ ಎಂದು ಕೂಗಿ ಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ನೊಂದು: ನೋವು; ಕೋಪ: ಖತಿ; ಅದಿರು: ನಡುಕ, ಕಂಪನ; ಸೈಗೆಡೆ: ನೇರವಾಗಿ ಕೆಳಕ್ಕೆ ಬೀಳು; ರೋಮ: ಕೂದಲು; ಹೊದರು: ಗುಂಪು, ಸಮೂಹ; ಬಿಡುಗಣ್ಣ: ಬಿಟ್ಟಕಣ್ಣು; ಕೆಂಪು: ರಕ್ತವರ್ಣ; ಕುಣಿ: ನರ್ತಿಸು; ಕುದಿ: ಮರಳು; ಹೃದಯ: ಎದೆ; ಕಾದ: ಬಿಸಿಯಾದ; ದೇಹ: ತನು; ಕದನ: ಯುದ್ಧ; ಕಲಿ: ಶೂರ; ರವಿ: ಸೂರ್ಯ; ಸೂನು: ಮಗ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಗದೆಯ +ಹೊಯ್ಲಲಿ +ನೊಂದು +ಕೋಪದೊಳ್
ಅದಿರೆನುತ +ಸೈಗೆಡೆದ +ರೋಮದ
ಹೊದರುಗಳ +ಬಿಡುಗಣ್ಣ +ಕೆಂಪಿನ +ಕುಣಿವ +ಮೀಸೆಗಳ
ಕುದಿದ +ಹೃದಯದ +ಕಾದ+ ದೇಹದ
ಕದನ+ಕಲಿ +ರವಿಸೂನು +ಮೇಲಿ
ಕ್ಕಿದನು +ಫಡ +ಹೋಗದಿರು +ಹೋಗದಿರ್+ಎನುತ+ ತೆಗೆದ್+ಎಚ್ಚ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ ಕುದಿದ ಹೃದಯದ ಕಾದ ದೇಹದ

ಪದ್ಯ ೬೦: ಮಹಾಂಕುಶಕ್ಕೆ ಯಾರು ಅಡ್ಡ ಬಂದರು?

ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು (ದ್ರೋಣ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರಾ, ಈ ಮಹ ಅಂಕುಶವು ಎಷ್ಟರದು! ಕೃಷ್ಣಭಕ್ತರು ಎಷ್ಟು ಅಪಾಯಗಳನ್ನು ತಪ್ಪಿಸಿಕೊಂಡು ಬದುಕುವುದಿಲ್ಲ ಉರಿಕೆಂಡವು ಒರಲೆಯ ಬಾಯಿಗೆ ದಕ್ಕೀತೇ? ಕಿಡಿಯ ತೆಕ್ಕೆಗಳು, ಹೊಗೆಯ ಹೊರಳಿಗಳಿಂದ ಸುತ್ತುವರಿದು ಬರುತ್ತಿದ್ದ ಆ ಮಹಾಂಕುಶಕ್ಕೆ ಅಡ್ಡಬಂದು ಶ್ರೀಕೃಷ್ಣನು ತನ್ನ ಎದೆಯನ್ನು ಚಾಚಿದನು.

ಅರ್ಥ:
ಪಾಡು: ಸ್ಥಿತಿ; ಏಸು: ಎಷ್ಟು; ಅಪಾಯ: ತೊಂದರೆ; ಒದೆ: ತುಳಿ, ಮೆಟ್ಟು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಸದರ: ಸಲಿಗೆ, ಸಸಾರ; ಉರಿ: ಬೆಂಕಿ; ಕೆಂಡ: ಇಂಗಳ; ಒರಲು: ಅರಚು, ಕೂಗಿಕೊಳ್ಳು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಹೊಗೆ: ಧೂಮ; ಹೇರಾಳ: ದೊಡ್ಡ, ವಿಶೇಷ; ಬಹ: ಬಹಳ; ದಿವ್ಯ: ಶ್ರೇಷ್ಠ; ಆಯುಧ: ಶಸ್ತ್ರ; ಚಾಚು: ಹರಡು; ವಕ್ಷ: ಹೃದಯ; ಸ್ಥಳ: ಜಾಗ; ಅಸುರಾರಾತಿ: ಕೃಷ್ಣ; ಅಡಹಾಯ್ದು: ಅಡ್ಡಬಂದು; ಹಾಯ್ದು: ಹೋರಾಡು; ಹಾಯ್ದ: ಮೇಲೆಬಿದ್ದು;

ಪದವಿಂಗಡಣೆ:
ಇದರ+ ಪಾಡೇನ್+ಏ‍ಸ್+ಅಪಾಯವನ್
ಒದೆದು +ಕಳೆಯರು +ಕೃಷ್ಣ+ಭಕ್ತರು
ಸದರವೇ+ ಉರಿ+ಕೆಂಡವ್+ಒರಲೆಯ +ಬಾಯ್ಗೆ +ಭಾವಿಸಲು
ಹೊದರು+ಕಿಡಿಗಳ+ ಹೊಗೆಯ+ ಹೇರಾ
ಳದಲಿ+ ಬಹ+ ದಿವ್ಯಾಯುಧಕೆ+ ಚಾ
ಚಿದನು+ ವಕ್ಷಸ್ಥಳವನ್+ಅಸುರ+ಅರಾತಿ+ಅಡಹಾಯ್ದು

ಅಚ್ಚರಿ:
(೧) ಕೃಷ್ಣನನ್ನು ಅಸುರಾರಾತಿ ಎಂದು ಕರೆದಿರುವುದು
(೨) ಕೃಷ್ಣನು ರಕ್ಷಿಸುವ ಪರಿ – ಹೇರಾಳದಲಿ ಬಹ ದಿವ್ಯಾಯುಧಕೆ ಚಾಚಿದನು ವಕ್ಷಸ್ಥಳವನಸುರಾರಾತಿ

ಪದ್ಯ ೭: ರಣವಾದ್ಯಗಳ ಶಬ್ದವು ಹೇಗೆ ಹೊಮ್ಮಿದವು?

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು (ಭೀಷ್ಮ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ಸೂರ್ಯನು ಇನ್ನೂ ಉದಯವಾಗದ ಮುಂಚೆಯೇ ರಣರಂಗದಲ್ಲಿ ವೈರಿ ಸೈನ್ಯವು ಹೊಕ್ಕ ಸುದ್ದಿ ನಮ್ಮವರ ಪಾಳಯಕ್ಕೆ ರಣವಾದ್ಯಗಳಾದ ನಿಸ್ಸಾಳ, ಕಹಳೆಗಳ ಸದ್ದಿನಿಂದ ತಿಳಿಯಿತು. ಆ ಶಬ್ದವು ಅಷ್ಟೂ ಜನರ ಕಿವಿಗಳನೊಡೆದು ಎಲ್ಲಾ ದಿಕ್ಕುಗಳನ್ನು ಆವರಿಸಿದವು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ: ರಣರಂಗ; ಹೊದರು: ಗುಂಪು, ಸಮೂಹ; ವೈರಿ: ಶತ್ರು; ಸೇನೆ: ಸೈನ್ಯ; ಹದ: ಸರಿಯಾದ ಸ್ಥಿತಿ; ಪಾಳಯ: ಬಿಡಾರ; ಬಂದು: ಆಗಮಿಸು; ದಳ: ಸೈನ್ಯ; ಕಳಕಳಿ: ಉತ್ಸಾಹ; ಸದೆ: ಹೊಡಿ, ಬಡಿ; ಕೊಲ್ಲು; ಅನಿಬರು: ಅಷ್ಟು ಜನ; ಕಿವಿ: ಕರ್ಣ; ಒಡೆ: ಚೂರುಮಾದು; ತುಂಬು: ಆವರಿಸು; ನಿಸ್ಸಾಳ: ಚರ್ಮವಾದ್ಯ; ಔಘ: ಗುಂಪು, ಸಮೂಹ; ದಿಕ್ಕು: ದಿಶೆ; ತುದಿ: ಅಗ್ರ, ಮೇಲ್ಭಾಗ; ತಿವಿ: ಚುಚ್ಚು; ಮೀರು: ಹೆಚ್ಚಾಗು; ಗಳಹು:ಪ್ರಲಾಪಿಸು; ಗೌರು:ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;

ಪದವಿಂಗಡಣೆ:
ಉದಯವಾಗದ +ಮುನ್ನ +ಕಳನೊಳು
ಹೊದರುಗಟ್ಟಿದ +ವೈರಿ+ಸೇನೆಯ
ಹದನ್+ಇವರ+ ಪಾಳಯಕೆ +ಬಂದುದು +ದಳದ +ಕಳಕಳಿಕೆ
ಸದೆದುದ್+ಅನಿಬರ +ಕಿವಿಯನ್+ಒಡೆ +ತುಂ
ಬಿದವು +ನಿಸ್ಸಾಳ+ಔಘ +ದಿಕ್ಕಿನ
ತುದಿಯ +ತಿವಿದವು +ಮೀರಿ +ಗಳಹುವ+ ಗೌರು+ಕಹಳೆಗಳು

ಅಚ್ಚರಿ:
(೧) ಶಬ್ದದ ತೀವ್ರತೆ – ಸದೆದುದನಿಬರ ಕಿವಿಯನೊಡೆ ತುಂಬಿದವು ನಿಸ್ಸಾಳೌಘ ದಿಕ್ಕಿನ ತುದಿಯ ತಿವಿದವು

ಪದ್ಯ ೨೫ : ಕೃಷ್ಣನ ವಿಶ್ವರೂಪ ದರ್ಶನ ಹೇಗಿತ್ತು?

ವಿದುರನಿಂತೆನುತಿರಲು ಮಿಂಚಿನ
ಹೊದರು ಹುರಿಗೊಂಡಂತೆ ರವಿ ಶತ
ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ
ಸದೆದುದಾಸ್ಥಾನವನು ಘನತೇ
ಜದಲಹರಿಲೀಲೆಯಲಿ ಹರಿ ತೋ
ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ (ಉದ್ಯೋಗ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ವಿದುರನು ಹೀಗೆ ಕೃಷ್ಣನ ಮಹಿಮೆಯನ್ನು ಹೇಳುತ್ತಿರಲು, ಕೃಷ್ಣನು ತನ್ನ ಪ್ರಕಾಶಮಾನವಾದ ದೇಹವನ್ನು ಕೊಡವಿ ನೆಟ್ಟನೆ ನಿಂತನು, ಮಿಂಚಿನ ಬಳ್ಳಿಗಳು ಹುರಿಗೊಂಡವೋ ಎಂಬಂತೆ ನೂರು ಸೂರ್ಯರು ಅವನ ದೇಹದಿಂದ ಉದುರಿದವು ಆ ತೇಜಸ್ಸಿನ ಹೊಳೆಯು ಆಸ್ಥಾನದ ಕಣ್ಣು ಕುಕ್ಕಿಸಿತು. ಶ್ರೀ ಕೃಷ್ಣನು ಆ ಮಹಾಸಭೆಗೆ ತನ್ನ ವಿಶ್ವರೂಪವನ್ನು ತೋರಿದನು.

ಅರ್ಥ:
ಮಿಂಚು: ಹೊಳಪು, ಕಾಂತಿ; ಹೊದರು:ಬಿರುಕು; ಹುರಿಗೊಳ್ಳು:ಹೊಂದಿಕೊಳ್ಳು; ರವಿ: ಭಾನು, ಸೂರ್ಯ; ಶತ: ನೂರು; ಉದುರು: ಕೆಳಗೆ ಬೀಳು; ಮೈ: ತನು; ಮುರಿ:ಸೀಳು; ನಿಂದಡೆ: ನಿಲ್ಲು; ದೇವ: ಭಗವಂತ; ರಂಗ: ಸಭೆ; ಸದೆ: ಹೊಡೆ; ಆಸ್ಥಾನ: ಸಭೆ, ದರ್ಬಾರು; ಘನತೆ: ಪ್ರತಿಷ್ಠೆ; ತೇಜ: ಕಾಂತಿ; ಲಹರಿ: ಚುರುಕು, ಪ್ರಭೆ; ಲೀಲೆ:ಆನಂದ; ಹರಿ: ವಿಷ್ಣು; ತೋರು: ಕಾಣಿಸು; ನಿರುಪಮ:ಸಾಟಿಯಿಲ್ಲದ, ಅತಿಶಯವಾದ; ವಿಶ್ವರೂಪ: ಎಲ್ಲ ಕಡೆಗೂ ವ್ಯಾಪಿಸಿದ (ಕೃಷ್ಣನ) ರೂಪ; ಮಹಾ: ಶ್ರೇಷ್ಠ;

ಪದವಿಂಗಡಣೆ:
ವಿದುರನ್+ಇಂತೆನುತಿರಲು +ಮಿಂಚಿನ
ಹೊದರು +ಹುರಿಗೊಂಡಂತೆ+ ರವಿ +ಶತ
ಉದುರಿದವು+ ಮೈ +ಮುರಿದು +ನಿಂದಡೆ +ದೇವ+ರಂಗದಲಿ
ಸದೆದುದ್+ಆಸ್ಥಾನವನು +ಘನ+ತೇ
ಜದ+ಲಹರಿ+ಲೀಲೆಯಲಿ +ಹರಿ +ತೋ
ರಿದನು +ನಿರುಪಮ +ವಿಶ್ವರೂಪವನಾ +ಮಹಾಸಭೆಗೆ

ಅಚ್ಚರಿ:
(೧) ಸಭೆ, ಆಸ್ಥಾನ, ರಂಗ – ಸಮಾನಾರ್ಥಕ ಪದ

ಪದ್ಯ ೬೨: ಇಂದ್ರತೇಜಃಪುಂಜದ ಪಾಂಡವರನ್ನು ಕಂಡ ದ್ರುಪದನ ಪ್ರತಿಕ್ರಿಯೆ ಹೇಗಿತ್ತು?

ಮನದ ಝೋಮ್ಮಿನ ಜಡಿವರೋಮಾಂ
ಚನದ ಹುದುಗುವ ಹೊದರುಗಂಗಳ
ಜಿನುಗುವಾತಿನ ಹೂತ ಹರುಷದ ಹೊಂಗಿದುತ್ಸವದ
ಕೊನರೊ ಬೆವರಿನ ಕಳಿದ ಚಿಂತೆಯ
ಮನದ ಭಾವದ ರಾಗರಸದು
ಬ್ಬಿನಲಿ ಹೊಂಪುಳಿವೋದನವರನು ಕಂಡು ಪಾಂಚಾಲ (ಆದಿ ಪರ್ವ, ೧೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ದ್ರುಪದನು ಪಂಚಪಾಂಡವರನ್ನು ತನ್ನ ದಿವ್ಯನಯನಗಳಿಂದ ನೋಡಿದಾಗ ಅವರು ಇಂದ್ರರಾಗಿ ಗೋಚರಿಸಿದರು. ಆ ದೃಷ್ಯವನ್ನು ನೋಡಿ ಅವನ ಮೈ ಝುಮ್ಮೆಂದಿತು. ರೋಮಾಂಚನಗೊಂಡ ದ್ರುಪದನು ಕಣ್ಣುಗಳನ್ನು ಸ್ವಲ್ಪವೆ ತೆಗೆದು ನೋಡಿದನು. ಮಾತು ಅಲ್ಪಸ್ವಲ್ಪವಾಗಿ ಬಾಯಿಂದ ಬರುತ್ತಿತ್ತು. ಹರ್ಷಲತೆ ಹೂಬಿಟ್ಟಿತು, ಉತ್ಸವವು ಚಿಗುರೊಡೆಯಿತು, ಚಿಂತೆ ಕಳೆದುಕೊಂಡ ದ್ರುಪದನು ಅತಿಶಯ ಸಂತೋಷದಲ್ಲಿ ಮುಳುಗಿದನು.

ಅರ್ಥ:
ಮನ: ಮನಸ್ಸು, ಚಿತ್ತ; ಝೊಂಪು: ಮೈಮರೆವು; ಝಂಪಿಸು: ಹೊಳೆ, ಪ್ರಕಾಶಿಸು; ಜಡಿ: ತುಂಬು, ವ್ಯಾಪಿಸು; ರೋಮಾಂಚನ: ಮೈಗೂದಲು ನಿಮಿರುವಿಕೆ, ಪುಳಕ; ಹುದುಗು:ಸೇರು, ಕೂಡು, ತುಂಬಿಸು; ಹೊದರು: ತೊಂದರೆ, ಕುಳಿ, ಪೊದೆ; ಕಂಗಳು: ಕಣ್ಣು; ಜಿನುಗು: ತೊಟ್ಟಿಕ್ಕು ; ಹೂತ:ಹೂಬಿಟ್ಟ, ಅರಳಿದ; ಹರುಷ: ಸಂತೋಷ; ಹೊಂಗು: ಹಿಗ್ಗು, ಹೊಳೆ, ಉತ್ಸಾಹಿಸು; ಉತ್ಸವ: ಹಬ್ಬ, ಸಮಾರಂಭ; ಕೊನರ್: ಚಿಗುರು, ಅಭಿವೃದ್ಧಿ ಹೊಂದು; ಬೆವರು: ಹೆದರು, ಸ್ವೇದಗೊಳ್ಳು; ಕಳಿ: ತೀರಿದ ಮೇಲೆ, ನಂತರ; ಚಿಂತೆ: ಯೋಚನೆ; ಭಾವ: ಬಾವನೆ, ಚಿತ್ತವೃತ್ತಿ; ರಾಗ: ಒಲುಮೆ, ಪ್ರೀತಿ, ಹಿಗ್ಗು; ರಸ: ಸಾರ; ಉಬ್ಬು: ಹಿಗ್ಗು; ಹೊಂಪು:ಹೆಚ್ಚಲು, ಹಿರಿಮೆ; ಕಂಡು: ನೋಡಿ; ಪಾಂಚಾಲ: ದ್ರುಪದ;

ಪದವಿಂಗಡಣೆ:
ಮನದ +ಝೋಮ್ಮಿನ+ ಜಡಿವ+ರೋಮಾಂ
ಚನದ +ಹುದುಗುವ +ಹೊದರು+ಕಂಗಳ
ಜಿನುಗು+ವಾತಿನ +ಹೂತ +ಹರುಷದ +ಹೊಂಗಿದುತ್ಸವದ
ಕೊನರೊ +ಬೆವರಿನ+ ಕಳಿದ+ ಚಿಂತೆಯ
ಮನದ +ಭಾವದ +ರಾಗರಸದ್
ಉಬ್ಬಿನಲಿ +ಹೊಂಪುಳಿವೋದನ್+ಅವರನು +ಕಂಡು +ಪಾಂಚಾಲ

ಅಚ್ಚರಿ:
(೧) ದ್ರುಪದನಲ್ಲಾದ ಭಾವಗಳನ್ನು ಸರೆದಿಡಿದಿರುವ ಬಗೆ: ಆ ದೃಷ್ಯವನ್ನು ಕಣ್ಣು ನೋಡಲಾಗಲಿಲ್ಲ – ಹುದುಗುವ ಹೊದರುಗಂಗಳ; ಮಾತು ಬರಲಿಲ್ಲ – ಜಿನುಗುವಾತಿನ; ಹರ್ಷಗೊಳ್ಳಕ್ಕೆ ಪ್ರಾರಂಭಿಸಿದನು – ಹೂತ ಹರುಷದ ಹೊಂಗಿದು; ಉತ್ಸವ ಚಿಗುರಿತು – ಉತ್ಸವದ ಕೊನರೊ;
(೨) “ಹ” ಕಾರದ ಪದಗಳು – ಹುದುಗು, ಹೊದರು, ಹೂತ, ಹರುಷ, ಹೊಂಗಿದ, ಹೊಂಪು
(೩) ಮನದ – ೧, ೫ ಸಾಲಿನ ಮೊದಲ ಪದ