ಪದ್ಯ ೧೩: ಯುದ್ಧಕ್ಕೆ ಯಾರು ಬಂದರು?

ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ (ದ್ರೋಣ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಈ ಸೈನ್ಯದಲ್ಲೂ ಸುಭಟರು ಉಬ್ಬೆದ್ದು ರಣಭೂಮಿಗಿಳಿದರು. ಅವರು ಝಳಪಿಸುವ ಆಯುಧಗಳ ಕಾಂತಿ ಕಣ್ಣು ಕುಕ್ಕುತ್ತಿತ್ತು. ಭೂಮಿಯು ಅತಳಕ್ಕೆ ಕುಸಿಯಿತೋ ಎಂಬಮ್ತೆ ಆನೆಗಳು ಬಂದವು. ಲೆಕ್ಕವಿಲ್ಲದಷ್ಟು ರಥಗಳು ಪದಾತಿಗಳು ಯುದ್ಧಕ್ಕೆ ಬಂದರು.

ಅರ್ಥ:
ಎದ್ದು: ಮೇಲೇಳು; ಕಟಕ: ಯುದ್ಧ; ಬಲ: ಶಕ್ತಿ; ಮಿಂಡೆದ್ದು: ಉತ್ಸಾಹದಿಂದ ಉಬ್ಬಿ; ಸುಭಟ: ಪರಾಕ್ರಮಿ; ಸಮರಭೂಮಿ: ಯುದ್ಧಭೂಮಿ; ಹೊದ್ದು: ಸೇರು; ಝಳ: ಶಾಖ; ಹೊಗರು: ಕಾಂತಿ, ಪ್ರಕಾಶ; ಹೊಳಹು: ಪ್ರಕಾಶ; ಅವನಿ: ಭೂಮಿ; ಹೊದರು: ಗುಂಪು; ನಡೆದು: ಚಲಿಸು; ದಂತಿಘಟೆ: ಆನೆಯ ಗುಂಪು; ಬರುತಿದ್ದು: ಆಗಮಿಸು; ಅಗಣಿತ: ಅಸಂಖ್ಯಾತ; ರಥ: ಬಂಡಿ; ಪದಾತಿ: ಕಾಲಾಳು; ಆಹವ: ಯುದ್ಧ; ಅಂಗಣ: ಅಂಗಳ;

ಪದವಿಂಗಡಣೆ:
ಎದ್ದುದ್+ಈ+ ಕಟಕದಲಿ +ಬಲ +ಮಿಂ
ಡೆದ್ದು +ಸುಭಟರು +ಸಮರ+ಭೂಮಿಯ
ಹೊದ್ದಿದರು +ಝಳಪಿಸುವಡ್+ಆಯ್ದದ +ಹೊಗರ +ಹೊಳಹುಗಳ
ಅದ್ದುದ್+ಅತಳಕೆ +ಅವನಿಯೆನೆ +ಹೊದ
ರೆದ್ದು +ನಡೆದುದು +ದಂತಿಘಟೆ +ಬರು
ತಿದ್ದುದ್+ಅಗಣಿತ +ರಥ +ಪದಾತಿಗಳ್+ಆಹವಾಂಗಣಕೆ

ಅಚ್ಚರಿ:
(೧) ಕಟಕ, ಆಹವ – ಸಮನಾರ್ಥಕ ಪದ

ಪದ್ಯ ೨೨: ಭೀಷ್ಮನಿಗೆ ತಲೆದಿಂಬನ್ನು ಅರ್ಜುನನು ಹೇಗೆ ಸಿದ್ಧಪಡಿಸಿದನು?

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ (ಭೀಷ್ಮ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮಗು ಅರ್ಜುನ, ಬಾಣಗಳ ಹಾಸಿಗೆ ಚೆಂದವಾಗಿದೆ, ಆದರೆ ಬಾಣಗಳ ತಲೆದಿಂಬನ್ನು ಏರ್ಪಡಿಸು ಎಂದು ಭೀಷ್ಮನು ಹೇಳಲು, ಅರ್ಜುನನು ಎದ್ದು ಐದು ಬಾಣಗಳನ್ನು ನೆಲಕ್ಕೆ ನೆಟ್ಟು, ಭೀಷ್ಮನಿಗೆ ತಲೆದಿಂಬನ್ನು ಏರ್ಪಡಿಸಿದನು.

ಅರ್ಥ:
ಮಗ: ಸುತ; ಕೇಳು: ಆಲಿಸು; ಕೂರಂಬು: ಹರಿತವಾದ ಬಾಣ; ಹಾಸಿಕೆ: ಮಂಚ; ಚೆಂದ: ಸೊಗಸು; ಹೊಗರು: ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು, ಖಡ್ಗ; ತಲೆ: ಶಿರ; ಇಂಬು: ಆಶ್ರಯ; ರಚಿಸು: ನಿರ್ಮಿಸು; ಕೈಕೊಂಡು: ಧರಿಸು; ಬಿಗಿ: ಒತ್ತು, ಅಮುಕು, ಗಟ್ಟಿ; ಮಂಡಿಸು: ಕೂಡು, ಬಾಗಿಸು; ಹೊಗರು: ಕಾಂತಿ, ಪ್ರಕಾಶ; ಕವಲು: ಟಿಸಿಲು, ಕವಲೊಡೆದ ಕೊಂಬೆ; ಎಚ್ಚು: ಬಾಣಪ್ರಯೋಗ ಮಾದು; ನೆಗಹು: ಮೇಲೆತ್ತು; ಮಸ್ತಕ: ತಲೆ; ಕುಮಾರ: ಮಗ; ಬಿಲು: ಬಿಲ್ಲು, ಚಾಪ;

ಪದವಿಂಗಡಣೆ:
ಮಗನೆ +ಕೇಳೈ +ಪಾರ್ಥ +ಕೂರಂ
ಬುಗಳ+ ಹಾಸಿಕೆ+ ಚೆಂದವಾಯಿತು
ಹೊಗರ್ +ಅಲಗ +ತಲೆಗ್+ಇಂಬ+ ರಚಿಸ್+ಎನೆ +ಪಾರ್ಥ +ಕೈಕೊಂಡು
ಬಿಗಿದ +ಬಿಲುಗೊಂಡ್+ಎದ್ದು +ಮಂಡಿಸಿ
ಹೊಗರ+ ಕವಲ್+ಅಂಬ್+ಐದನ್+ಎಚ್ಚನು
ನೆಗಹಿದನು +ಮಸ್ತಕವನ್+ಆ+ ಗಂಗಾ+ಕುಮಾರಕನ

ಅಚ್ಚರಿ:
(೧) ಬಾಣದ ಹಾಸಿಗೆಯನ್ನು ವರ್ಣಿಸುವ ಪರಿ – ಕೂರಂಬುಗಳ ಹಾಸಿಕೆ ಚೆಂದವಾಯಿತು

ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ

ಪದ್ಯ ೧: ದುರ್ಯೋಧನನು ಯಾವ ಹೊತ್ತಿನಲ್ಲಿ ತನ್ನ ಅರಮನೆಯನ್ನು ಸೇರಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಿತ್ತಲು
ಮೇಲು ಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮೊಗದ
ತಾಳಿಗೆಯ ನಿರ್ದ್ರವದ ಮತ್ಸರ
ದೇಳಿಗೆಯಲಿಕ್ಕಡಿಯ ಮನದ ನೃ
ಪಾಲ ಹೊಕ್ಕನು ನಡುವಿರುಳು ನಿಜ ರಾಜಮಂದಿರವ (ಸಭಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದುಃಖಭರಿತನಾಗಿ ಮುಸುಕು ಹಾಕಿಕೊಂಡು ದುರ್ಯೋಧನನು ಸಿಡಿಮಿಡಿಯ ಹೊಗೆಯನ್ನು ತನ್ನ ಮುಖದಲ್ಲಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ನಡುರಾತ್ರಿಯಲ್ಲಿ ತನ್ನ ಅರಮನೆಯನ್ನು ಸೇರಿದನು. ಕೋಪದ ತಾಪದಿಂದ ಅವನ ನಾಲಿಗೆ ಗಂಟಲುಗಳು ಒಣಗಿ ಹೋಗಿದ್ದವು. ಮತ್ಸರವು ಹೆಚ್ಚಾಗಿ ಏನು ಮಾಡಬೇಕೆಂಬುದು ತಿಳಿಯದೆ ಮನಸ್ಸು ಕವಲೊಡೆದಿತ್ತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ರಾಯ: ರಾಜ; ಮೇಲು: ಹೊರಗಡೆ; ಮುಸುಕು: ಆವರಿಸು, ಹೊದಿಕೆ; ಹೊತ್ತು: ಉದ್ವೇಗಗೊಳ್ಳು; ದುಗುಡ: ದುಃಖ; ಹೊಗರ: ಹೊಗೆ: ಧೂಮ; ಮೊಗ: ಮುಖ; ತಾಳಿಗೆ: ಗಂಟಲು; ದ್ರವ: ನೀರು, ರಸ; ನಿರ್ದ್ರವ: ಒಣಗಿದ ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಏಳಿಗೆ: ಅಭ್ಯುದಯ; ಇಕ್ಕಡಿ: ಎರಡು ಕಡೆ; ಮನ: ಮನಸ್ಸು; ನೃಪಾಲ: ರಾಜ; ಹೊಕ್ಕು: ಸೇರು; ಇರುಳು: ರಾತ್ರಿ; ನಡು: ಮಧ್ಯ; ನಿಜ: ತನ್ನ; ರಾಜಮಂದಿರ: ಅರಮನೆ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನ್+ಇತ್ತಲು
ಮೇಲು+ ಮುಸುಕಿನ+ ಹೊತ್ತ +ದುಗುಡದ +ಹೊಗರ+ ಹೊಗೆಮೊಗದ
ತಾಳಿಗೆಯ+ ನಿರ್ದ್ರವದ +ಮತ್ಸರದ್
ಏಳಿಗೆಯಲ್+ಇಕ್ಕಡಿಯ +ಮನದ +ನೃ
ಪಾಲ +ಹೊಕ್ಕನು +ನಡುವ್+ಇರುಳು +ನಿಜ +ರಾಜಮಂದಿರವ

ಅಚ್ಚರಿ:
(೧) ಧರಿತ್ರೀಪಾಲ, ನೃಪಾಲ – ಸಮನಾರ್ಥಕ ಪದ
(೨) ಅವಮಾನ/ಕೋಪದ ಚಿತ್ರಣ – ತಾಳಿಗೆಯ ನಿರ್ದ್ರವದ ಮತ್ಸರ ದೇಳಿಗೆಯಲಿಕ್ಕಡಿಯ ಮನದ ನೃಪಾಲ