ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ಪದ್ಯ ೭: ಕೌರವನು ಎಲ್ಲಿ ಸೇರಿದನೆಂದು ಸಂಜಯನು ತಿಳಿಸಿದನು?

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ (ಗದಾ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನನ್ನು ಸಂತೈಸುತ್ತಾ ಒಂದು ಸರೋವರದ ತೀರಕ್ಕೆ ಕರೆದುಕೊಂಡು ಹೋಗಿ, ಗದೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ತಂದೆಗೆ ಈ ವಿಷಯವನ್ನು ಹೇಳು ಎಂದು ನನಗೆ ತಿಳಿಸಿ, ಎಲ್ಲಾ ಕಡೆಯೂ ನೋಡಿ, ನೀರಿನಲ್ಲಿ ಮುಳುಗಿದನು. ಆನಂತರ ನನಗೆ ಮತ್ತೆ ಕಾಣಿಸಲಿಲ್ಲ ಎಂದು ಸಂಜಯನು ಕೃಪ ಅಶ್ವತ್ಥಾಮರಿಗೆ ತಿಳಿಸಿದನು.

ಅರ್ಥ:
ಬಂದು: ಆಗಮಿಸು; ಸಂತ: ಸೌಖ್ಯ, ಕ್ಷೇಮ; ಸರಸಿ: ಸರೋವರ; ತಡಿ: ದಡ; ಅಳವು: ಅಳತೆ, ನೆಲೆ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಗದೆ: ಮುದ್ಗರ; ಬಾಹು: ತೋಳು; ಬಾಹುಮೂಲ: ಕಂಕಳು; ತಂದೆ: ಜನಕ; ಅರುಹು: ತಿಳಿಸು, ಹೇಳು; ಹಿಂದೆ: ಭೂತ; ಮುಂದೆ: ಎದುರು; ಎಡಬಲ: ಅಕ್ಕ ಪಕ್ಕ; ನೀರು: ಜಲ; ಹೊಕ್ಕು: ಸೇರು; ಕಾಣೆ: ತೊರಾದಾಗು; ಅವನಿಪನ: ರಾಜ;

ಪದವಿಂಗಡಣೆ:
ಬಂದನ್+ಎನ್ನನು +ಸಂತವಿಡುತಲದ್
ಒಂದು +ಸರಸಿಯ +ತಡಿಯಲ್+ಅಳವಡೆ
ನಿಂದು +ಸಂವರಿಸಿದನು+ ಗದೆಯನು +ಬಾಹುಮೂಲದಲಿ
ತಂದೆಗ್+ಅರುಹೆಂದ್+ಎನಗೆ +ಹೇಳಿದು
ಹಿಂದೆ +ಮುಂದ್+ಎಡ+ಬಲನನಾರೈ
ದಂದವಳಿಯದೆ +ನೀರ+ ಹೊಕ್ಕನು +ಕಾಣೆನ್+ಅವನಿಪನ

ಅಚ್ಚರಿ:
(೧) ಎಲ್ಲಾ ದಿಕ್ಕುಗಳು ಎಂದು ಹೇಳುವ ಪರಿ – ಹಿಂದೆ ಮುಂದೆಡಬಲ
(೨) ಕಂಕಳು ಎಂದು ಹೇಳುವ ಪರಿ – ಬಾಹುಮೂಲ

ಪದ್ಯ ೩೨: ಧರ್ಮಜನು ಯುದ್ಧವು ಯಾರಿಗಿರಲಿ ಎಂದನು?

ರಾಯದಳದಲಿ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ (ಗದಾ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನ ಸುತ್ತಲಿದ್ದ ಚತುರಂಗ ಸೈನ್ಯದ ಸಾವು, ವೀರರನ್ನು ಹೆದರಿಸಿತು. ಕೃಪ, ಭೋಜ, ಅಶ್ವತ್ಥಾಮರು ದೊಡ್ಡ ದೊಡ್ಡ ಸೇನಾಧಿಪತಿಗಳಿಗಿದಿರಾಗಿ ನಿಂತರು. ಈ ಯುದ್ಧ ನನಗಿರಲಿ ಎಂದು ಧರ್ಮಜನು ಶತ್ರು ಸೇನೆಯನ್ನು ಹೊಗಲು, ಕಿವಿವರೆಗೆ ಬಾಣವನ್ನು ಸೆಳೆದಿದ್ದ ಅರ್ಜುನನು ಇದನ್ನು ಕಂಡನು.

ಅರ್ಥ:
ರಾಯ: ರಾಜ; ದಳ: ಸೈನ್ಯ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬೀಯ: ವ್ಯಯ, ಹಾಳು; ಬೆದರಿಸು: ಹೆದರಿಸು; ಅದಟ: ಶೂರ, ಪರಾಕ್ರಮಿ; ಬಲು: ಬಹಳ; ನಾಯಕ: ಒಡೆಯ; ಇದಿರು: ಎದುರು; ಒಡ್ಡು: ರಾಶಿ, ಸಮೂಹ; ಸುತ: ಮಗ; ರಣ: ಯುದ್ಧ; ಹೊಕ್ಕು: ಸೇರು; ಬಳಿಕ: ನಂತರ; ಆಯತ: ವಿಶಾಲವಾದ; ಅಸ್ತ್ರ: ಶಸ್ತ್ರ; ಕಂಡು: ನೋಡು; ಅದ್ಭುತ: ಆಶ್ಚರ್ಯ; ಕರ್ಣ: ಕಿವಿ;

ಪದವಿಂಗಡಣೆ:
ರಾಯ+ದಳದಲಿ +ಚಾತುರಂಗದ
ಬೀಯ +ಬೆದರಿಸಿತ್+ಅದಟರನು +ಬಲು
ನಾಯಕರಿಗ್+ಇದಿರೊಡ್ಡಿದರು +ಕೃಪ +ಭೋಜ +ಗುರು+ಸುತರು
ಆಯಿತೀ +ರಣವೆನುತ+ ಪಾಂಡವ
ರಾಯ +ಹೊಕ್ಕನು +ಬಳಿಕಲಾ +ಕ
ರ್ಣಾಯತ+ಅಸ್ತ್ರನು+ ಕಂಡನ್+ಅರ್ಜುನನಾ +ಮಹಾದ್ಭುತವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀಯ ಬೆದರಿಸಿತದಟರನು ಬಲುನಾಯಕರಿಗಿದಿರೊಡ್ಡಿದರು