ಪದ್ಯ ೬೫: ಧರ್ಮಜನು ಯಾವ ಆಯುಧವನ್ನು ಹೊರತೆಗೆದನು?

ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ (ಶಲ್ಯ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ತನ್ನ ಶಸ್ತ್ರಾಸ್ತ್ರಗಳಲ್ಲಿ ಒಂದು ದಿವ್ಯಾಯುಧವನ್ನು ಆರಿಸಿ ತೆಗೆದನ್. ಸುಡುತ್ತಿರುವ ರೇಖೆಯಿಂದೊಡಗೂಡಿದ ಗಂಟೆಗಳಿರುವ, ಹೊಳೆಯುವ ಬಂಗಾರದ ಗರಿಗಳುಳ್ಳ, ಬಾಯಿಧಾರೆಗೆ ತೈಲವನ್ನು ಹಚ್ಚಿದ, ಚೌರಿಗಳಿರುವ ಶತ್ರುವಿನ ಆಯುಷ್ಯದ ಕಡೆಯ ಹಗಲಾದ ಅವನನ್ನು ನುಂಗಬಲ್ಲ ಶಕ್ತ್ಯಾಯುಧವನ್ನು ತೆಗೆದನು.

ಅರ್ಥ:
ಆಯಿ: ಶೋಧಿಸು, ಹೊರತೆಗೆ; ಶಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಆಯುಧ: ಅಸ್ತ್ರ; ಅರೆಬಳಿ: ; ತಪನೀಯ: ಸುಡುತ್ತಿರುವ; ರೇಖೆ: ಗೆರೆ, ಗೀಟು; ಕುಣಿ: ನರ್ತಿಸು; ಗಂಟೆ: ಕಿರುಗೆಜ್ಜೆ; ಹೊಳೆ: ಪ್ರಕಾಶಿಸು; ಹೊಂಗರಿ: ಚಿನ್ನದ ಗರಿ (ರೆಕ್ಕೆ); ಧಾರೆ: ಮಳೆ; ತೈಲ: ಎಣ್ಣೆ; ಲೇಪನ: ಹಚ್ಚು; ಆಯತ: ನೆಲೆ, ವಿಶಾಲವಾದ; ಚೌರಿ: ಚೌರಿಯ ಕೂದಲು; ರಿಪು: ವೈರಿ; ಭಟ: ಸೈನಿಕ; ಆಯುಷ: ಜೀವಿತದ ಅವಧಿ; ಕಡೆ: ಕೊನೆ; ಭುಕ್ತಿ: ಸುಖಾನುಭವ, ಭೋಗ; ಶಕ್ತಿ: ಬಲ; ನೃಪತಿ: ರಾಜ;

ಪದವಿಂಗಡಣೆ:
ಆಯಿದನು+ ಶಸ್ತ್ರಾಸ್ತ್ರದಲಿ +ದಿ
ವ್ಯಾಯುಧವನ್+ಅರೆಬಳಿದ +ವರ +ತಪ
ನೀಯ+ರೇಖೆಯ +ಕುಣಿವ +ಗಂಟೆಯ +ಹೊಳೆವ +ಹೊಂಗರಿಯ
ಬಾಯಿಧಾರೆಯ +ತೈಲ+ಲೇಪನದ್
ಆಯತದ +ಚೌರಿಗಳ +ರಿಪು+ಭಟನ್
ಆಯುಷದ +ಕಡೆವಗಲ+ ಭುಕ್ತಿಯ +ಶಕ್ತಿಯನು +ನೃಪತಿ

ಅಚ್ಚರಿ:
(೧) ಆಯುಧ, ಶಸ್ತ್ರ – ಸಾಮ್ಯಾರ್ಥ ಪದ
(೨) ಆಯುಧದ ವರ್ಣನೆ – ತಪನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ

ಪದ್ಯ ೫೦: ನಾರಾಯಣಾಸ್ತ್ರವು ಯಾರ ಪಾದವನ್ನು ಸೇರಿತು?

ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆ ಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು (ದ್ರೋಣ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕರಿದಾದ ಹೊಗೆಯ ಹೊರಳಿಗಳು ಇಲ್ಲವಾದವು. ಸಿಡಿಯುವ ಕಿಡಿಗಳು ಕಾಣಲಿಲ್ಲ. ಬಂಗಾರದ ಗರಿಯ ನಾರಾಯಣಾಸ್ತ್ರವು ಹೊಳೆಯುತ್ತಾ ಬಂದು ಶ್ರೀಕೃಷ್ಣನ ಪಾದಾರವಿಂದಗಳಲ್ಲಡಗಿತು. ಭಯ ಹೋಗಿತು. ಪಾಂಡವ ಸೈನ್ಯದಲ್ಲಿ ಅಸಂಖ್ಯಾತ ನಿಸ್ಸಾಳಗಳು ಮೊರೆದವು.

ಅರ್ಥ:
ಮುರಿ: ಸೀಳು; ಕಬ್ಬೊಗೆ: ದಟ್ಟವಾದ ಹೊಗೆ; ಹೊದರು: ತೊಡಕು, ತೊಂದರೆ; ಹೊರಳು: ತಿರುವು, ಬಾಗು; ಹರೆ: ವ್ಯಾಪಿಸು; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿ; ನೆರವಿ: ಗುಂಪು, ಸಮೂಹ; ನಸಿ: ಹಾಳಾಗು, ನಾಶವಾಗು; ಹೊಂಗರಿ: ಚಿನ್ನದ ಬಣ್ಣವನ್ನು ಹೋಲುವ ಬಾಣದ ಹಿಂಭಾಗ; ಹೊಳೆ: ಪ್ರಕಾಶ; ಮುರಹರ: ಕೃಷ್ಣ; ಪಾದಾರವಿಂದ: ಚರಣ ಕಮಲ; ಹೊರೆ: ರಕ್ಷಣೆ, ಆಶ್ರಯ; ಅಡಗು: ಅವಿತುಕೊಳ್ಳು; ಹೋಯ್ತು: ತೆರಳು; ಭಯ: ಅಂಜಿಕೆ; ಉಬ್ಬರ: ಅತಿಶಯ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಮುರಿಮುರಿದು+ ಕಬ್ಬೊಗೆಯ +ಹೊದರಿನ
ಹೊರಳಿ +ಹರೆದುದು+ ಸೂಸು+ಕಿಡಿಗಳ
ನೆರವಿ+ ನಸಿದುದು +ನಿಮಿರ್ದ +ಹೊಂಗರಿ+ಅಂಬು +ಹೊಳೆ +ಹೊಳೆದು
ಮುರಹರನ +ಪಾದಾರವಿಂದದ
ಹೊರೆಯೊಳ್+ಅಡಗಿತು+ ಹೋಯ್ತು +ಭಯವ್
ಉಬ್ಬರದೊಳಗೆ +ಬೊಬ್ಬಿರಿದವ್+ಉರು + ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಮುರಿಮುರಿ, ಹೊಳೆ ಹೊಳೆ – ಜೋಡಿ ಪದಗಳು
(೨) ಹ ಕಾರದ ತ್ರಿವಳಿ ಪದ – ಹೊದರಿನ ಹೊರಳಿ ಹರೆದುದು; ಹೊಂಗರಿಯಂಬು ಹೊಳೆ ಹೊಳೆದು
(೩) ನ ಕಾರದ ತ್ರಿವಳಿ ಪದ – ನೆರವಿ ನಸಿದುದು ನಿಮಿರ್ದ

ಪದ್ಯ ೨೦: ಹಂಸವ್ಯೂಹವು ಅರ್ಜುನನೆದುರು ಏಕೆ ನಿಲ್ಲಲಿಲ್ಲ?

ಬಿಲುರವದ ಮೊಳಗಿನಲಿ ಕೃಷ್ಣನ
ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ
ನಿಲುವ ಹಂಸವ್ಯೂಹವೆಲ್ಲಿಯ
ದೆಲೆ ಮಹೀಪತಿ ಕೇಳು ನಿನ್ನ
ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ (ದ್ರೋಣ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಆ ಯುದ್ಧದ ಬಗೆಯನ್ನು ಸಂಜಯನು ಹೀಗೆ ಹೇಳಿದನು, ಬಿಲ್ಲಿನ ಶಬ್ದವೇ ಗುಡುಗು, ಕಪ್ಪಾದ ಮೈಬಣ್ಣದ ಕಾಂತಿಯೇ ಮೋಡಗಳು, ಚಿನ್ನದ ಗರಿಗಳೇ ಬಾಣಗಳ ಸೋಣೆ ಮಳೆ, ಗರಿಗಳ ಗಾಳಿ ಇದರೆದಿರು ಹಂಸವ್ಯೂಹ ನಿಂತೀತೇ? ನಿನ್ನ ಸೈನ್ಯದ ವೀರರ ವಿಧಿಯನ್ನು ಏನೆಂದು ಹೇಳಲಿ?

ಅರ್ಥ:
ಬಿಲು: ಬಿಲ್ಲು, ಚಾಪ; ರವ: ಶಬ್ದ; ಮೊಳಗು: ಧ್ವನಿ, ಸದ್ದು; ಕಾಂತಿ: ಪ್ರಕಾಶ; ಮೈ: ದೇಹ; ಆವಳಿ: ಸಾಲು, ಗುಂಪು; ಹೊಂಗರಿ: ಚಿನ್ನದ ಗರಿ; ಗಾಳಿ: ವಾಯು; ಸರಳು: ಬಾಣ; ಸೋನೆ: ಮಳೆ, ವೃಷ್ಟಿ; ನಿಲುವು: ಇರುವಿಕೆ, ಸ್ಥಿತಿ; ವ್ಯೂಹ: ಗುಂಪು; ಮಹೀಪತಿ: ರಾಜ; ಕೇಳು: ಆಲಿಸು; ಅಗ್ಗಳೆ: ಶ್ರೇಷ್ಠ; ಸುಭಟ: ಪರಾಕ್ರಮಿ; ವಿಧಿ: ನಿಯಮ; ನಗು: ಹರ್ಷ;

ಪದವಿಂಗಡಣೆ:
ಬಿಲುರವದ +ಮೊಳಗಿನಲಿ +ಕೃಷ್ಣನ
ಫಲುಗುಣನ +ಮೈಕಾಂತಿ +ಮೇಘಾ
ವಳಿಗಳಲಿ +ಹೊಂಗರಿಯ+ ಗಾಳಿಯ +ಸರಳಸೋನೆಯಲಿ
ನಿಲುವ +ಹಂಸವ್ಯೂಹವ್+ಎಲ್ಲಿಯದ್
ಎಲೆ+ ಮಹೀಪತಿ +ಕೇಳು +ನಿನ್ನ
ಗ್ಗಳೆಯ +ಸುಭಟರ+ ವಿಧಿಯನೆಂದನು +ಸಂಜಯನು +ನಗುತ

ಅಚ್ಚರಿ:
(೧) ಕವಿಯ ಕಲ್ಪನೆ – ಮಳೆಗಾಲ ಬಂದೊಡನೆ ಹಂಸಗಳು ಮಾನಸ ಸರೋವರಕ್ಕೆ ಹಾರಿ ಹೋಗತ್ತವೆ, ಏಕೆಂದರೆ ಕೆರೆ ಕೊಳ ಸರೋವರಗಳ ನೀರು ರಾಡಿಯಾಗುತ್ತದೆ.
(೨) ಉಪಮಾನದ ಪ್ರಯೋಗ – ಬಿಲುರವದ ಮೊಳಗಿನಲಿ ಕೃಷ್ಣನ ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ

ಪದ್ಯ ೨೨: ಬೇಡರು ಅಡವಿಯಲ್ಲಿ ಹೇಗೆ ಸಾಗಿದರು?

ಬಗೆಯನವ ಶಕುನವ ಮೃಗವ್ಯದ
ಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊಂಗರಿಯ ಬಿಲುಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮುಂದೆ ಮುಂದೆ ಪುಳಿಂದ ಸಂದೋಹ (ಅರಣ್ಯ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬೇಟೆಯ ವ್ಯಸನದಲ್ಲಿ ಸಿಕ್ಕ ಮನೋವೃತ್ತಿಯುಳ್ಳವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವು ವಿವೇಕೆ ಜ್ಞಾನ ಇರುವುದೇ? ಭೀಮನು ಶುಭ ಅಶುಭಗಳನ್ನು ಲೆಕ್ಕಿಸಲಿಲ್ಲ. ಬಂಗಾರದ ಕಾಂತಿಯುಳ್ಳ ರೆಕ್ಕೆಗಳಿಂದ ಅಲಂಕೃತಗೊಂಡು, ಬಿಲ್ಲು ಬಾಣಗಳನ್ನು ಹಿಡಿದ ಬೇಡರು ಅಡವಿಯನ್ನು ಬೆರಗುಗೊಳಿಸುತ್ತಾ ಅಡವಿಯಲ್ಲಿ ಭೀಮನ ಮುಂದೆ ನಡೆದರು.

ಅರ್ಥ:
ಬಗೆ: ಆಲೋಚನೆ, ಯೋಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಮೃಗವ್ಯ: ಬೇಟೆ; ಸೊಗಡು: ತೀಕ್ಷ್ಣವಾದ ಗಂಧ; ಸಿಲುಕು: ಬಂಧನ; ಮನ: ಮನಸ್ಸು; ವೃತ್ತಿ: ನಡವಳಿಕೆ, ಸ್ಥಿತಿ; ವಿವೇಕ: ಯುಕ್ತಾಯುಕ್ತ ವಿಚಾರ; ಧರ್ಮ: ಧಾರಣೆ ಮಾಡಿದುದು; ವಿಚಾರ: ಪರ್ಯಾಲೋಚನೆ, ವಿಮರ್ಶೆ; ವಿಸ್ತಾರ: ಹರಹು; ಹೊಗರು: ಪ್ರಕಾಶಿಸು, ಕಾಂತಿ; ಒಗು: ಹೊರಹೊಮ್ಮುವಿಕೆ; ಹೊಂಗರಿ: ಚಿನ್ನದ ರೆಕ್ಕೆ; ಬಿಲು: ಚಾಪ; ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ನಡೆ: ಚಲಿಸು; ಅಡವಿ: ಕಾಡು; ಬೆಗಡು: ಆಶ್ಚರ್ಯ, ಬೆರಗು; ಮುಂದೆ: ಮುನ್ನ, ಎದುರು; ಪುಳಿಂದ: ಬೇಡ; ಸಂದೋಹ: ಗುಂಪು;

ಪದವಿಂಗಡಣೆ:
ಬಗೆಯನವ+ ಶಕುನವ +ಮೃಗವ್ಯದ
ಸೊಗಡಿನಲಿ +ಸಿಲುಕಿದ+ ಮನೋ +ವೃ
ತ್ತಿಗಳೊಳ್+ಉಂಟೆ +ವಿವೇಕ +ಧರ್ಮ +ವಿಚಾರ+ ವಿಸ್ತಾರ
ಹೊಗರೊಗುವ+ ಹೊಂಗರಿಯ+ ಬಿಲು+ಸರ
ಳುಗಳ +ಹೊದೆಗಳ+ ನಡೆದುದ್+ಅಡವಿಯ
ಬೆಗಡುಗೊಳಿಸುತ +ಮುಂದೆ +ಮುಂದೆ +ಪುಳಿಂದ +ಸಂದೋಹ

ಅಚ್ಚರಿ:
(೧) ವ್ಯಸನಕ್ಕೀಡಾದ ಮನಸ್ಸಿನ ಸ್ಥಿತಿ – ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃ
ತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ