ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ

ಪದ್ಯ ೧೦: ಸಂಜಯನು ಯಾರ ನಡಿಗೆಯನ್ನು ನೋಡಿದನು – ೩?

ಓಡದಿಹ ನರಿ ಹದ್ದು ಕಾಗೆಗೆ
ಕೂಡೆ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ (ಗದಾ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಓಡಿ ಹೋಗದಿರುವ ಹದ್ದು, ಕಾಗೆ, ನರಿಗಳಿಗೆ ಅವನು ಗದೆಯನ್ನು ಬೀಸಿ ಓಡಿಸುತ್ತಿದ್ದನು. ಹೆಣಗಳನ್ನು ತಿನ್ನುವ ರಾಕ್ಷಸರನ್ನು ನೋಡುತ್ತಿದ್ದನು. ಅಲ್ಲಿ ಶಾಕಿನಿಯರು ಕೈಗಳಿಂದ ತೋಡಿ ಮಿದುಳುಗಳನ್ನು ಬಾಯಲ್ಲಿಟ್ಟುಕೊಳ್ಳುತ್ತಿದ್ದರು. ಕರುಳುಗಳನ್ನು ತಿಂದು ಚೀತ್ಕರಿಸುತ್ತಿದ್ದರು. ತಲೆ ಬುರುಡೆಗಳಲ್ಲಿ ರಕ್ತಪಾನವನ್ನು ಮಾಡುತ್ತಿದ್ದರು.

ಅರ್ಥ:
ಓಡು: ಧಾವಿಸು; ಹದ್ದು: ಗರುಡ ಜಾತಿಗೆ ಸೇರಿದ ಹಕ್ಕಿ; ಕಾಗೆ: ಕಾಕ; ಕೂಡೆ: ಜೊತೆ; ಗದೆ: ಮುದ್ಗರ; ಬೀಸು: ಒಗೆ, ಎಸೆ; ಬಿಡೆ: ತೊರೆದು; ನೋಡು: ವೀಕ್ಷಿಸು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಹೇರಾಳ: ಬಹಳ; ರಕ್ಕಸ: ರಾಕ್ಷಸ; ತೋಡು: ಹಳ್ಳ; ಕೈ: ಹಸ್ತ; ಮಿದುಳ: ಮಸ್ತಿಷ್ಕ; ಬಾಡು: ಕಳೆಗುಂದು; ಕರುಳು: ಪಚನಾಂಗ; ಚೀತ್ಕೃತಿ: ಕೂಗು, ಗರ್ಜಿಸು; ತಲೆ: ಶಿರ; ತನಿ: ಹೆಚ್ಚಾಗು; ರಕುತ: ನೆತ್ತರು; ಪಾನ: ಕುಡಿ; ಶಾಕಿನಿ: ರಾಕ್ಷಸಿ; ಜನ: ಗುಂಪು;

ಪದವಿಂಗಡಣೆ:
ಓಡದಿಹ +ನರಿ +ಹದ್ದು +ಕಾಗೆಗೆ
ಕೂಡೆ +ಗದೆಯನು +ಬೀಸುವನು +ಬಿಡೆ
ನೋಡುವನು +ಹೆಣ+ತಿನಿಹಿಗಳ +ಹೇರಾಳ +ರಕ್ಕಸರ
ತೋಡು+ಕೈಗಳ +ಮಿದುಳ +ಬಾಯ್ಗಳ
ಬಾಡು+ಕರುಳಿನ +ಚೀತ್ಕೃತಿಯ +ತಲೆ
ಯೋಡುಗಳ+ ತನಿ+ರಕುತ+ಪಾನದ +ಶಾಕಿನೀಜನವ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಓಡದಿಹ ನರಿ ಹದ್ದು ಕಾಗೆಗೆಕೂಡೆ ಗದೆಯನು ಬೀಸುವನು

ಪದ್ಯ ೫೫: ಪಾರ್ಥನು ದುರ್ಯೋಧನನನ್ನು ಏಕೆ ಪ್ರಶಂಶಿಸಿದನು?

ಹರಿಯನೆಚ್ಚನು ಫಲುಗುಣನ ತನು
ಬಿರಿಯೆ ಬಿಗಿದನು ಶರವನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ವರ ಕಪೀಂದ್ರನ ಘಾಸಿಮಾಡಿದ
ನುರವಣಿಸಿ ಕವಿದೆಸುವ ಭೂಪನ
ಭರದ ಬಲುವೇಗಾಯ್ಲತನವನು ಹೊಗಳಿದನು ಪಾರ್ಥ (ದ್ರೋಣ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಶ್ರೀಕೃಷ್ಣಾರ್ಜುನರ ಮೈಯಲ್ಲಿ ಬಾಣಗಳನ್ನು ನೆಡಿಸಿದನು. ರಥಕ್ಕೆ ಕಟ್ಟಿದ ಕುದುರೆಗಳ ಮೈಯಲ್ಲಿ ಅನೇಕ ಬಾಣಗಳು ಚುಚ್ಚಿಕೊಂಡವು. ಹನುಮಂತನು ಗಾಯಗೊಂಡನು. ಹೀಗೆ ರಭಸದಿಂದ ಬಾಣ ಪ್ರಯೋಗ ಮಾಡುವ ದುರ್ಯೋಧನನ ಕುಶಲತೆಯನ್ನು ಕಂಡು ಅರ್ಜುನನು ಹೊಗಳಿದನು.

ಅರ್ಥ:
ಹರಿ: ಕೃಷ್ಣ; ಎಚ್ಚು: ಬಾಣ ಪ್ರಯೋಗ ಮಾಡು; ಫಲುಗುಣ: ಅರ್ಜುನ; ತನು: ದೇಹ; ಬಿರಿ: ಬಿರುಕು; ಬಿಗಿ: ಭದ್ರ, ಗಟ್ಟಿ; ಶರ: ಬಾಣ; ರಥ: ಬಂಡಿ; ತುರಗ: ಅಶ್ವ; ಒಡಲು: ದೇಹ; ಹೂಳು: ಹೂತು ಹಾಕು; ಹೇರಾಳ: ಬಹಳ; ಅಂಬು: ಬಾಣ; ವರ: ಶ್ರೇಷ್ಠ; ಕಪೀಂದ್ರ: ಹನುಮಂತ; ಘಾಸಿ: ಪೆಟ್ಟು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕವಿ: ಆವರಿಸು; ಭೂಪ: ರಾಜ; ಭರ: ಹೆಚ್ಚಳ, ವೇಗ; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ಹರಿಯನ್+ಎಚ್ಚನು +ಫಲುಗುಣನ +ತನು
ಬಿರಿಯೆ +ಬಿಗಿದನು +ಶರವನ್+ಆ+ ರಥ
ತುರಗದ್+ಒಡಲಲಿ+ ಹೂಳಿದನು +ಹೇರಾಳದ್+ಅಂಬುಗಳ
ವರ +ಕಪೀಂದ್ರನ +ಘಾಸಿಮಾಡಿದನ್
ಉರವಣಿಸಿ +ಕವಿದ್+ಎಸುವ +ಭೂಪನ
ಭರದ+ ಬಲುವೇಗಾಯ್ಲತನವನು +ಹೊಗಳಿದನು +ಪಾರ್ಥ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭೂಪನ ಭರದ ಬಲುವೇಗಾಯ್ಲತನವನು

ಪದ್ಯ ೬೯: ಸೈನ್ಯದ ಸೈನಿಕರ ಸ್ಥಿತಿ ಹೇಗಿತ್ತು?

ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ (ದ್ರೋಣ ಪರ್ವ, ೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಕೆಲವರು ಮಡಿದರು. ಕೆಲವರು ಕೊರಳಿನಲ್ಲಿ ಪ್ರಾಣಗಳನ್ನು ಹಿಡಿದರು, ಕೆಲವರು ಗಾಯಗೊಂಡರು, ಕೆಲವರ ಮೂಳೆಗಳು ಪುಡಿಪುಡಿಯಾದವು. ಕೆಲವರು ರಥಗಳನ್ನು ಬಿಟ್ಟು ಓಡಿಹೋದರು. ಬಿರುಗಾಳಿಗೆ ಮೇಘಸೈನ್ಯವು ಹಾರಿ ಹೋಗುವಂತೆ, ದೊರೆಗೆ ತಮ್ಮ ಮೈಗಳನ್ನು ಮಾಇಕೊಂಡವರು ಹಿಂಡೊಡೆದು ಹೋದರು. ಅರ್ಜುನನು ಅವರ ನಡುವೆ ನುಗ್ಗಿ ಯಥೇಚ್ಛವಾಗಿ ಬಾಣಗಳಿಂದ ಘಾತಿಸಿದನು.

ಅರ್ಥ:
ಮಡಿ: ಸಾವು; ಕೆಲಬರು: ಕೆಲವರು; ಕೊರಳು: ಗಂಟಲು; ಅಸು: ಪ್ರಾಣ; ಹಿಡಿ: ಗ್ರಹಿಸು; ಘಾಯ: ಪೆಟ್ಟು; ಎಲು: ಮೂಳೆ; ಒಡೆ: ಚೂರಾಗು; ಕೈದು: ಆಯುಧ; ರಥ: ಬಂಡಿ; ಬಿಸುಟು: ಹೊರಹಾಕು; ಹೊಡೆ: ಏಟು, ಹೊಡೆತ; ಬಿರುಗಾಳಿ: ಜೋರಾದ ಗಾಳಿ; ಮುಗಿಲು: ಆಗಸ; ಒಡ್ಡೊಡೆ: ಗುಂಪನ್ನು ಒಡೆ; ಮಾರಿ: ಕ್ಷುದ್ರ ದೇವತೆ; ಹಿಂಡು: ಗುಂಪು; ಹೇರಾಳ: ಅಧಿಕ; ಹೊಕ್ಕು: ಸೇರು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಮಡಿದು +ಕೆಲಬರು +ಕೊರಳಲ್+ಅಸುಗಳ
ಹಿಡಿದು +ಕೆಲಬರು +ಘಾಯವಡೆದ್+ಎಲು
ವೊಡೆದು +ಕೆಲಬರು +ಕೈದು +ರಥವನು +ಬಿಸುಟು +ಕೆಲಕೆಲರು
ಹೊಡೆವ +ಬಿರುಗಾಳಿಯಲಿ +ಮುಗಿಲ್
ಒಡ್ಡೊಡೆದವೊಲು +ಮೈಮಾರಿಗಳು +ಹಿಂ
ಡೊಡೆದುದೈ +ಹೇರಾಳದಲಿ +ಹೊಕ್ಕ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಮಡಿದು, ಹಿಡಿದು, ಒಡೆದು; ಹೊಡೆ, ಒಡ್ಡೊಡೆ, ಹಿಂಡೊಡೆ – ಪ್ರಾಸ ಪದಗಳು
(೨) ಹ ಕಾರದ ತ್ರಿವಳಿ ಪದಗಳು – ಹಿಂಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ

ಪದ್ಯ ೧೮: ಭೀಷ್ಮನ ಪಕ್ಕದಲ್ಲಿ ಯಾರು ನಿಂತರು?

ಬಂದು ಭೀಷ್ಮನ ಚರಣ ಸೀಮೆಯ
ಲಂದು ಕಾಯವ ಕೆಡಹಿ ವಿಗತಾ
ನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ
ಒಂದು ಮಗ್ಗುಲ ಕೆಲದೊಳಿವರೈ
ತಂದು ನಿಂದರು ಗುರು ಕೃಪಾದಿಗ
ಳೊಂದು ಮಗ್ಗುಲ ಸಾರಿ ನಿಂದರು ಕೃಷ್ಣ ಪಾಂಡವರು (ಭೀಷ್ಮ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೌರವನು ಭೀಷ್ಮನ ಚರಣ ಪ್ರದೇಶದಲ್ಲಿ ದೇಹವನ್ನು ನೆಲಕ್ಕೆ ಕೆಡಹಿ, ಆನಂದವನ್ನು ಕಳೆದುಕೋಂಡು, ಹೊರಳಾಡಿದನು. ಒಂದು ಮಗ್ಗುಲಲ್ಲಿ ದ್ರೋಣ, ಕೃಪಾದಿಗಳು ಬಂದು ನಿಮ್ತರು. ಕೃಷ್ಣನೂ ಪಾಂಡವರೂ ಇನ್ನೊಂದು ಪಕ್ಕಕ್ಕೆ ಹೋಗಿ ನಿಂತರು.

ಅರ್ಥ:
ಬಂದು: ಆಗಮಿಸು; ಚರಣ: ಪಾದ; ಸೀಮೆ: ಎಲ್ಲೆ; ಕಾಯ: ರಕ್ಷಿಸು; ಕೆಡಹು: ಬೀಳು; ವಿಗತ: ಕಳೆದು; ಆನಂದ: ಸಂತಸ; ಭೂಪತಿ: ರಾಜ; ಹೊರಳು: ಬೀಳು; ಹೇರಾಳ: ಬಹಳ; ಶೋಕ: ದುಃಖ; ಮಗ್ಗುಲ: ಪಕ್ಕ, ಪಾರ್ಶ್ವ; ಕೆಲ: ಪಕ್ಕ, ಮಗ್ಗುಲು; ಐತಂದು: ಬಂದು ಸೇರು; ನಿಂದರು: ನಿಲ್ಲು; ಸಾರು: ಬಳಿ ಸೇರು;

ಪದವಿಂಗಡಣೆ:
ಬಂದು +ಭೀಷ್ಮನ +ಚರಣ +ಸೀಮೆಯಲ್
ಅಂದು+ ಕಾಯವ +ಕೆಡಹಿ +ವಿಗತ
ಆನಂದ +ಭೂಪತಿ +ಹೊರಳಿದನು+ ಹೇರಾಳ +ಶೋಕದಲಿ
ಒಂದು +ಮಗ್ಗುಲ +ಕೆಲದೊಳ್+ಇವರ್
ಐತಂದು +ನಿಂದರು +ಗುರು +ಕೃಪಾದಿಗಳ್
ಒಂದು +ಮಗ್ಗುಲ+ ಸಾರಿ +ನಿಂದರು +ಕೃಷ್ಣ +ಪಾಂಡವರು

ಅಚ್ಚರಿ:
(೧) ದುಃಖಿತನಾದನು ಎಂದು ಹೇಳುವ ಪರಿ – ವಿಗತಾನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ

ಪದ್ಯ ೬೪: ಅರ್ಜುನನು ಯಾವುದನ್ನು ಬಯಸಿದನು?

ಹರೆದು ಮೋಹಿಸುವೀ ಚರಾಚರ
ನೆರೆದು ನಿಮ್ಮಯ ರೋಮಕೂಪದ
ಹೊರೆಯೊಳಗೆ ಹೊಳೆದಾಡುತಿಹುದೆಂಬಗ್ಗಳಿಕೆಗಳಿಗೆ
ಹುರುಳೆನಿಪ ಹೇರಾಳದಂಗದ
ಸಿರಿಯ ತೋರೈ ಕೃಷ್ಣ ನಿರ್ಮಲ
ಪರಮತತ್ವವನೊಲ್ಲೆ ನಿಮ್ಮಯ ಭಕ್ತಿ ಸಾಕೆಂದ (ಭೀಷ್ಮ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ವಿಸ್ತಾರವಾಗಿ ಹರಡಿ ಮೋಹಿಸುತ್ತಿರುವ ಚರಾಚರಾತ್ಮಕವಾದ ಈ ಜಗತ್ತು, ನಿನ್ನ ರೋಮಕೂಪದೊಳಗೆ ಹುದುಗಿದೆ ಎಂಬ ಹೆಚ್ಚಿನ ರೂಪವನ್ನು ನನಗೆ ತೋರಿಸು. ನಿರ್ಮಲವಾದ ಪರಮತತ್ತ್ವವನ್ನು ನಾನು ಒಳ್ಳೆ, ನಿನ್ನ ಭಕ್ತಿಯೇ ಸಾಕು, ದೇಹ ಬುದ್ಧಿಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಹರೆದು:ವ್ಯಾಪಿಸು; ಮೋಹಿಸು: ಆಸೆಪಡು; ಚರಾಚರ: ಚಲಿಸುವ-ಚಲಿಸದಿರುವ; ನೆರೆ: ಜೊತೆಗೂಡು; ರೋಮ: ಕೂದಲು; ಕೂಪ: ಹಳ್ಳ, ಗುಳಿ; ಹೊರೆ:ರಕ್ಷಣೆ, ಆಶ್ರಯ; ಹೊಳೆ: ಪ್ರಕಾಶ; ಅಗ್ಗಳಿಕೆ: ಶ್ರೇಷ್ಠ; ಹುರುಳು: ವಸ್ತು, ಪದಾರ್ಥ, ಸಾರ; ಹೇರಾಳ: ವಿಶೇಷ; ಸಿರಿ: ಐಶ್ವರ್ಯ; ತೋರು: ಗೋಚರಿಸು; ನಿರ್ಮಲ: ಶುದ್ಧ; ಪರಮ: ಶ್ರೇಷ್ಠ; ತತ್ವ: ಸಿದ್ಧಾಂತ, ನಿಯಮ; ಒಲ್ಲೆ: ಬೇಡ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸಾಕು: ನಿಲ್ಲಿಸು;

ಪದವಿಂಗಡಣೆ:
ಹರೆದು +ಮೋಹಿಸುವ+ಈ+ ಚರಾಚರ
ನೆರೆದು +ನಿಮ್ಮಯ +ರೋಮ+ಕೂಪದ
ಹೊರೆಯೊಳಗೆ +ಹೊಳೆದಾಡುತಿಹುದೆಂಬ್ + ಅಗ್ಗಳಿಕೆಗಳಿಗೆ
ಹುರುಳೆನಿಪ +ಹೇರಾಳದ್+ ಅಂಗದ
ಸಿರಿಯ+ ತೋರೈ +ಕೃಷ್ಣ +ನಿರ್ಮಲ
ಪರಮ+ತತ್ವವನ್+ಒಲ್ಲೆ+ ನಿಮ್ಮಯ +ಭಕ್ತಿ+ ಸಾಕೆಂದ

ಅಚ್ಚರಿ:
(೧) ಹರೆದು, ಹೇರಾಳ, ಹುರುಳು, ಹೊರೆ – ಹ ಕಾರದ ಪದಗಳ ಬಳಕೆ

ಪದ್ಯ ೧೧: ಅರ್ಜುನನಿಗೆ ನಾರದರು ಯಾವ ಹಿತವಚನ ನುಡಿದರು?

ಹರಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರೆಸುವುದು ತತ್ಸಮಯ ಸೈರಿಸು ನೃಪನ ಕಣ್ಮನವ
ಹೊರೆವ ಹೇರಾಳದ ಮಹಾಸಂ
ಗರವಹುದು ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ (ಅರಣ್ಯ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವೇ ಮೊದಲಾದ ಮಹಾಸ್ತ್ರಗಳ ಲೀಲೆಯನ್ನು ಯುಧಿಷ್ಠಿರನು ನೋಡಲು ಇಚ್ಛಿಸಿದರೆ, ಆ ಕಾಲವೂ ಬರುತ್ತದೆ, ಅಲ್ಲಿಯವರೆಗೂ ನಿಮ್ಮಣ್ಣ ಕಣ್ಣು ಮತ್ತು ಮನಸ್ಸುಗಳು ಕಾಯಬೇಕು. ಈ ಅಸ್ತ್ರ ಪ್ರಯೋಗವು ಸಾರ್ಥಕವಾಗುವಂತಹ ಮಹಾಯುದ್ಧವಾಗುತ್ತದೆ. ಮುಂದಾಗುವುದನ್ನು ಹೇಳುವುದು ಉಚಿತವಲ್ಲ ಎಂದು ನಾರದರು ಹೇಳಿದರು.

ಅರ್ಥ:
ಹರ: ಶಿವ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಲೀಲೆ: ಆನಂದ, ಸಂತೋಷ; ಅರಸ: ರಾಜ; ನೋಡು: ವೀಕ್ಷಿಸು; ಬೇಹು: ಗುಪ್ತಚಾರಿಕೆ; ಬೆರೆ: ಕೂಡು, ಸೇರು; ಸಮಯ: ಕಾಲ; ಸೈರಿಸು: ತಾಳು, ಸಹಿಸು; ನೃಪ: ರಾಜ; ಕಣ್ಮನ: ಕಣ್ಣು ಮತ್ತು ಮನಸ್ಸು; ಹೊರೆ: ರಕ್ಷಣೆ, ಆಶ್ರಯ; ಹೇರಾಳ: ದೊಡ್ಡ, ವಿಶೇಷ; ಮಹಾ: ದೊಡ್ಡ; ಸಂಗರ: ಯುದ್ಧ; ಮುಂದಣ: ಮುಂದೆ; ಕಥೆ: ವಿಚಾರ; ವಿಸ್ತರ: ವಿವರಣೆ; ವಿರಚಿಸ: ನಿರೂಪಿಸು, ರಚಿಸು; ಅನುಚಿತ: ಸರಿಯಲ್ಲ; ಮುನಿಪ: ಋಷಿ;

ಪದವಿಂಗಡಣೆ:
ಹರ+ಮಹಾಸ್ತ್ರ+ಆದಿಗಳ+ ಲೀಲೆಯನ್
ಅರಸ+ ನೋಡಲು+ ಬೇಹುದಾದರೆ
ಬೆರೆಸುವುದು +ತತ್ಸಮಯ +ಸೈರಿಸು+ ನೃಪನ+ ಕಣ್ಮನವ
ಹೊರೆವ +ಹೇರಾಳದ +ಮಹಾಸಂ
ಗರವಹುದು +ಮುಂದಣ +ಕಥಾ+ವಿ
ಸ್ತರವ +ವಿರಚಿಸಬಾರದ್+ಅನುಚಿತವ್+ಎಂದನಾ +ಮುನಿಪ

ಅಚ್ಚರಿ:
(೧) ಮುಂದೆ ಆಗುವುದನ್ನು ಹೇಳಬಾರದೆಂದು ಹೇಳುವ ಪರಿ – ಮುಂದಣ ಕಥಾವಿ
ಸ್ತರವ ವಿರಚಿಸಬಾರದನುಚಿತವೆಂದನಾ ಮುನಿಪ

ಪದ್ಯ ೩೦: ನಂದೀಶ್ವರನ ಯುದ್ಧದ ಪರಿ ಹೇಗಿತ್ತು?

ದಿಂಡುದರಿದನು ದಾನವರ ಕಡಿ
ಖಂಡಮಯವಾಯ್ತವನಿ ರಕುತದ
ದೊಂಡೆಗೆಸರಿನೊಳದ್ದುದಗಣಿತ ರಥಗಜಾಶ್ವಚಯ
ಹಿಂಡೊಡೆದು ಹೇರಾಳ ರಕ್ಕಸ
ದಿಂಡೆಯರು ಧಿಮ್ಮೆನಲು ಹೊಯ್ದರು
ಖಂಡಪರಶುವಿನಾಳು ಹೊಯ್ದನು ಸಾಲಹೆಣ ಹರೆಯೆ (ಕರ್ಣ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಂದೀಶ್ವರನು ರಾಕ್ಷಸರನ್ನು ಬಾಳೆಯ ದಿಂಡನ್ನು ಕೊಚ್ಚುವಂತೆ ಕೊಚ್ಚಿ ಹಾಕಿದನು. ಮಾಂಸಖಂಡಗಳು ರಣಭೂಮಿಯನ್ನಾವರಿಸಿದವು. ರಕ್ತದ ಕೆಸರಿನಲ್ಲಿ ಲೆಕ್ಕವಿಲ್ಲದಷ್ಟು ರಥ, ಕುದುರೆ, ಆನೆಗಳು ಮುಳುಗಿದವು. ರಾಕ್ಷಸ ಸಮೂಹವು ಚದುರಿ ಹೋಗುವಂತೆ ಹೊಯ್ದನು. ಶಿವನ ಯೋಧನಾದ ನಂದೀಶ್ವರನ ಕಾಳಗಳಲ್ಲಿ ಸಾಲುಹೆಣಗಳು ಬಿದ್ದವು.

ಅರ್ಥ:
ದಿಂಡು:ಬಾಳೆಯ ಕಾಂಡದ ತಿರುಳು; ಅರಿ: ನಾಶಮಾಡು; ಉದುರು: ಕೆಳಗೆ ಬೀಳು, ಉದಿರು; ದಾನವ: ರಾಕ್ಷಸ; ಕಡಿ: ತುಂಡು, ಹೋಳು; ಖಂಡ: ತುಂಡು, ಚೂರು; ಅವನಿ: ಭೂಮಿ; ರಕುತ: ರಕ್ತ, ನೆತ್ತರು; ದೊಂಡೆ: ಗಂಟಲು, ಕಂಠ; ಕೆಸರು: ರಾಡಿ; ಅದ್ದು: ತೋಯ್ದು; ಅಗಣಿತ: ಲೆಕ್ಕವಿಲ್ಲದ; ರಥ: ಬಂಡಿ; ಗಜ: ಆನೆ; ಅಶ್ವ: ಕುದುರೆ; ಚಯ: ಸಮೂಹ, ರಾಶಿ; ಹಿಂಡು: ಗುಂಪು; ಒಡೆ: ಸೀಳು; ಹೇರಾಳ: ಬಹಳ; ರಕ್ಕಸ: ರಾಕ್ಷಸ, ದಾನವ; ದಿಂಡೆ: ದುಷ್ಟ, ನೀಚ; ಧಿಮ್ಮನೆ: ಅನುಕರಣ ಶಬ್ದ; ಹೊಯ್ದು: ಹೊಡೆ; ಖಂಡಪರಶು: ಶಿವ; ಆಳು: ದಾಸ; ಖಂಡಪರಶುವಿನಾಳು: ನಂದಿ; ಸಾಲು: ಸಮೂಹ; ಹೆಣ: ಜೀವವಿಲ್ಲದ ದೇಹ; ಹರೆ:ಚೆದುರು;

ಪದವಿಂಗಡಣೆ:
ದಿಂಡುದ್+ಅರಿದನು +ದಾನವರ ಕಡಿ
ಖಂಡಮಯವಾಯ್ತ್+ಅವನಿ +ರಕುತದ
ದೊಂಡೆ+ಕೆಸರಿನೊಳ್+ಅದ್ದುದ್+ಅಗಣಿತ +ರಥ+ಗಜ+ಅಶ್ವ+ಚಯ
ಹಿಂಡೊಡೆದು +ಹೇರಾಳ +ರಕ್ಕಸ
ದಿಂಡೆಯರು +ಧಿಮ್ಮೆನಲು+ ಹೊಯ್ದರು
ಖಂಡಪರಶುವಿನಾಳು+ ಹೊಯ್ದನು +ಸಾಲಹೆಣ+ ಹರೆಯೆ

ಅಚ್ಚರಿ:
(೧) ಹೊಯ್ದು- ೫, ೬ ಸಾಲಿನಲ್ಲಿ ಬರುವ ಪದ
(೨) ದಿಂಡೆಯರು ದಿಮ್ಮೆನಲು – ದ ಕಾರದ ಜೋಡಿ ಪದ
(೩) ಉಪಮಾನದ ಪ್ರಯೋಗ – ದಿಂಡುದರಿದನು ದಾನವರ ಕಡಿ ಖಂಡಮಯವಾಯ್ತ್; ಅವನಿ ರಕುತದ ದೊಂಡೆಗೆಸರಿನೊಳದ್ದುದಗಣಿತ ರಥಗಜಾಶ್ವಚಯ;