ಪದ್ಯ ೯: ಸಂಜಯನು ಯಾರ ನಡಿಗೆಯನ್ನು ನೋಡಿದನು – ೨?

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ (ಗದಾ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಡವಿ ಬೀಳುವಂತಹ ಜಾಗಗಳನ್ನು ದಾಟಿ, ರಕ್ತದ ಮಡುವುಗಳಲ್ಲಿ ಗದೆಯನ್ನೂರಿ ಕಾಲಿಡಲು ಜಾಗವನ್ನು ಹುಡುಕಿಕೊಂಡು ನಡುಗುತ್ತಾ ಕುಣೀಯುವ ಮೂಂಡಗಳನ್ನು ಗದೆಯಿಂದ ಅಪ್ಪಳಿಸಿ ದೊಡ್ಡ ಆನೆಗಳ ದೇಹವನ್ನು ಹತ್ತಿಳಿದು ಹೊಯ್ದಾಡಿ ಬಳಲಿ ಮೇಲುಸಿರು ಹತ್ತಿ ನಡುಗುತ್ತಾ ನಿಲ್ಲುತ್ತಿದ್ದನು.

ಅರ್ಥ:
ಎಡಹು: ಬೀಳು; ತಲೆ: ಶಿರ; ದಾಂಟಿ: ದಾಟು; ರಕುತ: ನೆತ್ತರು; ಮಡು: ಹಳ್ಳ, ಕೊಳ್ಳ; ಗದೆ: ಮುದ್ಗರ; ಊರು: ನೆಲೆಸು; ನೆಲೆ: ಭೂಮಿ, ಜಾಗ; ಪಡೆದು: ದೊರಕಿಸು; ಕಂಪಿಸು: ನಡುಗು; ಕುಣಿ: ನರ್ತಿಸು; ಮುಂಡ: ಶಿರವಿಲ್ಲದ ದೇಹ; ಅಪ್ಪಳಿಸು: ತಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಹೇರಾನೆ: ದೊಡ್ಡ ಗಜ; ಹೇರೊಡಲು: ದೊಡ್ಡದಾದ ಶರೀರ; ಹತ್ತಿಳಿ: ಮೇಲೇರಿ ಕೆಳಗಿಳಿ; ಝೊಂಪಿಸು: ಭಯಗೊಳ್ಳು; ಮಿಡುಕು: ನಡುಕ, ಕಂಪನ; ಬಳಲು: ಆಯಾಸಗೊಳ್ಳು; ಉರ್ಧ್ವಶ್ವಾಸ: ಏದುಸಿರು, ಮೇಲುಸಿರು; ಲಹರಿ: ರಭಸ, ಆವೇಗ;

ಪದವಿಂಗಡಣೆ:
ಎಡಹು+ತಲೆಗಳ +ದಾಂಟಿ +ರಕುತದ
ಮಡುವಿನಲಿ +ಗದೆಯೂರಿ +ನೆಲೆಗಳ
ಪಡೆದು +ಕಂಪಿಸಿ +ಕುಣಿವ +ಮುಂಡವ+ ಗದೆಯಲ್+ಅಪ್ಪಳಿಸಿ
ಅಡಿಗಡಿಗೆ +ಹೇರಾನೆಗಳ +ಹೇ
ರೊಡಲ +ಹತ್ತಿಳಿದ್+ಏರಿ+ ಝೊಂಪಿಸಿ
ಮಿಡುಕಿ +ನಿಲುವನು +ಬಳಲಿದ್+ಊರ್ಧ್ವಶ್ವಾಸ+ ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೇರಾನೆಗಳ ಹೇರೊಡಲ ಹತ್ತಿಳಿದೇರಿ
(೨) ನಿಲ್ಲಲು ಜಾಗವನ್ನು ವಿವರಿಸುವ ಪರಿ – ರಕುತದ ಮಡುವಿನಲಿ ಗದೆಯೂರಿ ನೆಲೆಗಳ ಪಡೆದು

ಪದ್ಯ ೧೪: ಎರಡೂ ಸೈನ್ಯದ ಯುದ್ಧವು ಹೇಗೆ ನಡೆಯಿತು?

ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ (ಗದಾ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯ ರಭಸದಿಂದ ಬಂದಿತು. ಈ ಸೈನ್ಯ ಚಕ್ಕನೆ ಇದಿರಾಯಿತು. ಆನೆ ಕುದುರೆಗಳು ನುಗ್ಗಿದವು. ಆ ಸೈನ್ಯದ ಈ ಸೈನ್ಯದ ಯೋಧರು ಗಾಯಗೊಂಡು, ರಕ್ತ ಸಮುದ್ರದಲ್ಲಿ ಎರಡೂ ಸೇನೆಗಳು ಮುಳುಗಿದವು.

ಅರ್ಥ:
ಬಂದು: ಆಗಮಿಸು; ಮೋಹರ: ಯುದ್ಧ; ಸಘಾಡ: ರಭಸ; ನಿಂದು: ನಿಲ್ಲು; ಬಲ: ಶಕ್ತಿ, ಸೈನ್ಯ; ಸೂಠಿ: ವೇಗ; ಹಯವೃಂದ: ಕುದುರೆಗಳ ಗುಂಪು; ಬಿಟ್ಟವು: ತೊರೆ, ಬಿಡು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡದಾದ ಗಜ; ಸರಿಸ: ವೇಗ, ರಭಸ; ನೊಂದು: ನೋವು; ಆಚೆ: ಹೊರಭಾಗ; ಭಟ: ಸೈನಿಕ; ಘಾಯ: ಪೆಟ್ಟು; ಉಭಯ: ಎರಡು; ಮಂದಿ: ಜನ; ಬಿದ್ದು: ಬೀಳು; ಚೂಣಿ: ಮುಂದೆ; ಅದ್ದು: ತೋಯು; ರುಧಿರ: ರಕ್ತ; ಜಲಧಿ: ಸಾಗರ;

ಪದವಿಂಗಡಣೆ:
ಬಂದುದಾ+ ಮೋಹರ+ ಸಘಾಡದಿ
ನಿಂದುದ್+ಈ+ ಬಲ+ ಸೂಠಿಯಲಿ +ಹಯ
ವೃಂದ +ಬಿಟ್ಟವು +ತೂಳಿದವು +ಹೇರಾನೆ +ಸರಿಸದಲಿ
ನೊಂದುದ್+ಆಚೆಯ +ಭಟರು +ಘಾಯದೊ
ಳೊಂದಿತ್+ಈಚೆಯ +ವೀರರ್+ಉಭಯದ
ಮಂದಿ +ಬಿದ್ದುದು +ಚೂಣಿ+ಅದ್ದುದು +ರುಧಿರ+ಜಲಧಿಯಲಿ

ಅಚ್ಚರಿ:
(೧) ನೊಂದುದಾಚೆಯ ಭಟರು ಘಾಯದೊಳೊಂದಿತೀಚೆಯ ವೀರರ್ – ಆಚೆ, ಈಚೆ ಪದಗಳ ಪ್ರಯೋಗ

ಪದ್ಯ ೬: ಅರ್ಜುನನ ಮೇಲೆ ಯಾರು ಆಕ್ರಮಣ ಮಾಡಿದರು?

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು (ಗದಾ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅರ್ಜುನನ ಮೇಲೆ ಆಕ್ರಮಣ ಮಾಡಿತು. ರಥಗಳು ವೇಗದಿಂದ ನುಗ್ಗಿದವು. ಗಜಘಟೆಗಳು ಮುಂದಾದವು. ಜೋಡಿ ಬೆರಳುಗಳಿಂದ ಬಾಣವನ್ನೆಳೆದು ಬಿಲ್ಲುಗಾರರು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟು ಅವನ ಆಕ್ರಮಣವನ್ನು ತಡೆದರು. ಈಟಿಯನ್ನು ಹಿಡಿದವರು ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು, ಮುತ್ತು; ದುವ್ವಾಳಿ: ತೀವ್ರಗತಿ, ಓಟ; ರಥ: ಬಂಡಿ; ನಿವಹ: ಗುಂಪು; ಬಿಡು: ತೊರೆ; ಕುದುರೆ: ಅಶ್ವ; ಸೂಠಿ: ವೇಗ; ಅವಗಡಿಸು: ಕಡೆಗಣಿಸು, ಸೋಲಿಸು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡ ಆನೆ; ಸಂದಣಿಸು: ಗುಂಪುಗೂಡು; ಸವಡಿ: ಜೊತೆ, ಜೋಡಿ; ಸೇದು: ಸೆಳೆ, ದೋಚು; ಅಂಬು: ಬಾಣ; ತವಕ: ಬಯಕೆ, ಆತುರ; ತರುಬು: ತಡೆ, ನಿಲ್ಲಿಸು; ಬಲುಬಿಲ್ಲವರು: ಶ್ರೇಷ್ಠನಾದ ಬಿಲ್ಲುಗಾರ; ಮೊನೆ: ತುದಿ; ಮೋಹಿತ: ಆಕರ್ಷ್ತಿಸಲ್ಪಟ್ಟ; ಮಿಕ್ಕ: ಉಳಿದ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಕವಿದುದಿದು +ದುವ್ವಾಳಿಸುತ +ರಥ
ನಿವಹ +ಬಿಟ್ಟವು +ಕುದುರೆ +ಸೂಠಿಯಲ್
ಅವಗಡಿಸಿ +ತೂಳಿದವು +ಹೇರಾನೆಗಳು +ಸಂದಣಿಸಿ
ಸವಡಿ+ಬೆರಳಲಿ +ಸೇದುವ್+ಅಂಬಿನ
ತವಕಿಗರು +ತರುಬಿದರು +ಬಲುಬಿ
ಲ್ಲವರು +ಮೊನೆ+ಮುಂತಾಗಿ +ಮೋಹಿತು +ಮಿಕ್ಕ +ಸಬಳಿಗರು

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊನೆ ಮುಂತಾಗಿ ಮೋಹಿತು ಮಿಕ್ಕ
(೨) ಬಿಲ್ಲುಗಾರರನ್ನು ವಿವರಿಸುವ ಪರಿ – ಸವಡಿವೆರಳಲಿ ಸೇದುವಂಬಿನ ತವಕಿಗರು ತರುಬಿದರು

ಪದ್ಯ ೧೮: ಭೀಷ್ಮನೆದುರು ಯಾರು ಪುನಃ ಬಂದು ನಿಲ್ಲುತ್ತಿದ್ದರು?

ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ (ಭೀಷ್ಮ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೀಷ್ಮನು ಕುದುರೆಗಳ ಸೈನ್ಯವನ್ನು ಕಡಿದು ಹಾಕಿದರು. ಹೇರಾನೆಗಳನ್ನು ಕೆಡವಿದರು. ರಥಗಳನ್ನು ಕಡಿದು ಕಾಲಾಳುಗಳನ್ನು ಕೊಚ್ಚಿದನು. ಆದರೂ ದೇಹದ ಮೇಲಿನ ಮೋಹವನ್ನು ಬಿಟ್ಟು ಪಾಂಡವ ದಳವು ಮತ್ತೆ ಮತ್ತೆ ಗರ್ಜಿಸಿ ಭೀಷ್ಮನೆದುರಿಗೆ ಬಂದು ನಿಲ್ಲುತ್ತಿತ್ತು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತುರಗ: ಕುದುರೆ; ದಳ: ಸೈನ್ಯ; ಕೆಡಹು: ನಾಶಮಾಡು; ಹೇರಾನೆ: ದೊಡ್ಡದಾದ ಆನೆ; ತಡೆ: ನಿಲ್ಲಿಸು; ಕಡಿ: ಕತ್ತರಿಸು; ಒಗ್ಗು: ಗುಂಪು; ರಥ: ಬಂಡಿ; ಉರೆ: ಹೆಚ್ಚು; ಕೊಚ್ಚು: ಕತ್ತರಿಸು; ಕಾಲಾಳು: ಸೈನಿಕರು; ಹೊಡಕರಿಸು: ಕಾಣಿಸು; ಹೊದರು: ಗುಂಪು; ಮುಂದಕೆ: ಎದುರು; ನಡೆ: ಚಲಿಸು; ಕೈಮಾಡು: ಹೋರಾಡು; ಕಾಯ: ದೇಹ; ತೊಡಕು: ಸಿಕ್ಕು, ಗೋಜು; ತೆಕ್ಕೆ: ಗುಂಪು; ಕಟ್ಟು: ಬಂಧಿಸು; ಭಟ: ಸೈನಿಕ; ನಾಕ: ಸ್ವರ್ಗ;

ಪದವಿಂಗಡಣೆ:
ಕಡಿದು +ಬಿಸುಟನು +ತುರಗ +ದಳವನು
ಕೆಡಹಿದನು +ಹೇರಾನೆಗಳ +ತಡೆ
ಗಡಿದನ್+ಒಗ್ಗಿನ +ರಥವನ್+ಉರೆ +ಕೊಚ್ಚಿದನು +ಕಾಲಾಳ
ಹೊಡಕರಿಸಿ+ ಹೊದರೆದ್ದು +ಮುಂದಕೆ
ನಡೆನಡೆದು+ ಕೈಮಾಡಿ +ಕಾಯದ
ತೊಡಕನೊಲ್ಲದೆ +ತೆಕ್ಕೆಗೆಟ್ಟಿತು +ಭಟರು +ನಾಕದಲಿ

ಅಚ್ಚರಿ:
(೧) ಭಟರ ಛಲವನ್ನು ವಿವರಿಸುವ ಪರಿ – ಕಾಯದತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ

ಪದ್ಯ ೩೪: ಕರ್ಣನ ಮಕ್ಕಳ ಪರಾಕ್ರಮವು ಹೇಗಿತ್ತು?

ಕಡಿದು ಬಿಸುಟರು ತೇರುಗಳನಡ
ಗೆಡಹಿದರು ಹೇರಾನೆಗಳ ಕೆಲ
ಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ
ತುಡುಕಿದರೆ ಕಾಲಾಳನಟ್ಟೆಯ
ನುಡಿಯಲರಿಯೆನು ಕರ್ಣತನುಜರ
ಕಡುಹು ನಕುಲಾದಿಗಳ ಬೆದರಿಸಿತರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕರ್ಣಪುತ್ರರಾದ ವೃಷಸೇನ ಮತ್ತು ಸುಷೇಣರು ಪಾಂಡವರ ತೇರುಗಳನ್ನು ಕಡಿದು ಕೆಡಹಿದರು. ಆನೆ ಕುದುರೆಗಳು ಸುರಿಯುವ ರಕ್ತದಲ್ಲಿ ನೆನೆದು ಹೋದವು. ಕಾಲಾಳುಗಳು ಮೇಲೆ ಬಂದರೆ ಅವರ ಅಟ್ಟೆಯನ್ನೇ ಕಡಿದು ಹಾಕಿದರು. ಅವರ ಪರಾಕ್ರಮವನ್ನು ಕಂಡ ನಕುಲನೇ ಮೊದಲಾದವರು ಬೆದರಿದರು.

ಅರ್ಥ:
ಕಡಿ: ಸೀಳು, ತುಂಡರಿಸು; ಬಿಸುಟು: ಬಿಸಾಕು, ಹೊರಹಾಕು; ತೇರು: ರಥ; ಅಡಗೆಡಹು: ಅಡ್ಡಹಾಕು; ಹೇರಾನೆ: ದೊಡ್ಡದಾದ ಆನೆ; ಕೆಲ: ಸ್ವಲ್ಪ; ಕಡೆ: ಸೀಳು; ಔಕು: ಒತ್ತು, ಹಿಚುಕು; ಕುದುರೆ: ಅಶ್ವ; ನನೆದು: ತೊಯ್ದು; ಬಸಿ: ಒಸರು, ಸ್ರವಿಸು, ಜಿನುಗು; ನೆತ್ತರು: ರಕ್ತ; ತುಡುಕು: ಹೋರಾಡು, ಸೆಣಸು; ಕಾಲಾಳು: ಸೈನ್ಯ; ನುಡಿ: ಮಾತು; ಅರಿ: ತಿಳಿ; ತನುಜ: ಮಕ್ಕಳು; ಕಡುಹು: ಸಾಹಸ, ಹುರುಪು; ಬೆದರಿಸು: ಹೆದರು; ಅರಸ: ರಾಜ; ಕೇಳು: ಆಲಿಸು; ಅಟ್ಟೆ: ತಲೆಯಿಲ್ಲದ ದೇಹ;

ಪದವಿಂಗಡಣೆ:
ಕಡಿದು +ಬಿಸುಟರು +ತೇರುಗಳನ್+ಅಡ
ಗೆಡಹಿದರು+ ಹೇರಾನೆಗಳ +ಕೆಲ
ಕಡೆಯಲ್+ಔಕುವ +ಕುದುರೆ +ನನೆದವು +ಬಸಿವ +ನೆತ್ತರಲಿ
ತುಡುಕಿದರೆ+ ಕಾಲಾಳನ್+ಅಟ್ಟೆಯ
ನುಡಿಯಲ್+ಅರಿಯೆನು +ಕರ್ಣ+ತನುಜರ
ಕಡುಹು +ನಕುಲಾದಿಗಳ +ಬೆದರಿಸಿತ್+ಅರಸ +ಕೇಳೆಂದ

ಅಚ್ಚರಿ:
(೧) ಯುದ್ಧದ ಘೋರದೃಶ್ಯ: ಹೇರಾನೆಗಳ ಕೆಲಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ

ಪದ್ಯ ೪೨: ಗಗನಚುಂಬಿ ನೇರಲೆ ಮರದ ವೈಶಿಷ್ಟ್ಯಗಳೇನು?

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು (ಸಭಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಗಗನಚುಂಬಿ ನೇರಳೆ ಮರದ ಹಣ್ಣುಗಳು ಆನೆಯಗಾತ್ರವನ್ನು ಹೊಂದಿತ್ತು. ಆ ಹಣ್ಣು ಕೆಳಗೆ ಕಬ್ಬಿಣದ ಕಲ್ಲುಗಳ ಮೇಲೆ ಬಿದ್ದು, ಒಡೆದು ಅದರ ರಸವು ಅತಿಶಯ ಪ್ರಮಾಣದಲಿ ಹರಿದು ಹೊಳೆಯಾಯಿತು. ಆ ರಸವು ಅಮೃತ ಸಮಾನವಾಗಿತ್ತು. ಆ ಹೊಳೆಯ ಎರಡು ದಡಗಳು ಬಂಗಾರವಾದವು.

ಅರ್ಥ:
ಫಲ: ಹಣ್ಣು; ಹೇರ: ಹೆಚ್ಚು, ದೊಡ್ಡ; ಆನೆ: ಕರಿ; ತೋರು: ಕಾಣಿಸು; ಗಿರಿ: ಬೆಟ್ಟ; ಶಿಲ: ಕಲ್ಲು; ಹೊದರು: ಗುಂಪು; ಹೊಳೆ: ಸರೋವರ; ರಸ: ದ್ರವ; ಲಾಲಾ, ಮಧು; ಸುಧ: ಅಮೃತ; ಸುವರ್ಣ: ಚಿನ್ನ; ನದಿ: ಹೊಳೆ; ತಡ: ದಡ; ಜಲ: ನೀರು; ಸ್ಪರ್ಶ: ಮುಟ್ಟು; ಬಿದ್ದು: ಕೆಳಗೆ ಬೀಳು; ಒಡೆದು: ಚೂರಾಗು;

ಪದವಿಂಗಡಣೆ:
ಅದರ + ಫಲ +ಹೇರ್+ಆನೆಗಳ+ ತೋ
ರದಲ್+ಇಹವು +ಗಿರಿಸಾರ+ಶಿಲೆಗಳ
ಹೊದರಿನಲಿ+ ಬಿದ್ದೊಡೆದು +ಹೊಳೆಯಾದುದು +ಮಹಾರಸದ
ಅದು +ಸುಧಾಮಯವಾಯ್ತು +ಜಂಬೂ
ನದಿ+ ಜಲಸ್ಪರ್ಶದಲಿ+ ಜಾಂಬೂ
ನದ +ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು

ಅಚ್ಚರಿ:
(೧) “ಜ” ಕಾರದ ಪದಗಳ ರಚನೆ – ಜಂಬೂನದಿ ಜಲಸ್ಪರ್ಶದಲಿ ಜಾಂಬೂನದ
(೨) ಹೊಳೆ, ನದಿ – ಸಮನಾರ್ಥಕ ಪದ