ಪದ್ಯ ೧೫: ಬಂಡಿಗಳಲ್ಲಿ ಏನನ್ನು ತುಂಬಲಾಯಿತು?

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ (ಗದಾ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ನೀರಿನ ಬುದ್ದಲಿಗಳು, ಬಂಗಾರದ ಕಲಶ ಕೊಪ್ಪರಿಗೆಗಳು, ದೀಪದ ಕಂಬಗಳು, ಬಂಗಾರದ ಸರಪಣಿಹಾಕಿದ ಯಂತ್ರಚಾಲಿತ ಗೊಂಬೆಗಳು, ಮರಕತದ ಮಧುಪಾತ್ರೆಗಳು, ನೀಲದ ಕಲಶ, ವೈಢೂರ್ಯದ ತಟ್ಟೆಗಳನ್ನು ದೂತರು ತಂದು ಬಂಡಿಗಳಲ್ಲಿ ತುಂಬಿದರು.

ಅರ್ಥ:
ಕರ: ಹಸ್ತ; ಹೊಂಗಳಸ: ಚಿನ್ನದ ಕುಂಭ; ಉಪ್ಪರಿಗೆ: ಮಹಡಿ, ಸೌಧ; ದೀಪ: ಸೊಡರು; ಸ್ತಂಭ: ಕಂಬ; ಹೇಮ: ಚಿನ್ನ; ಸರಪಣಿ: ಸಂಕೋಲೆ, ಶೃಂಖಲೆ; ಮಣಿ: ಬೆಲೆಬಾಳುವ ರತ್ನ; ಜಂತ್ರ: ಯಂತ್ರ, ವಾದ್ಯ; ಜೀವ: ಉಸಿರಾಡುವ ದೇಹ; ಜೀವಪುತ್ರಿ: ಗೊಂಬೆ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಮಧು: ಜೇನು; ನೀಲ: ಉದ್ದ, ದೊಡ್ಡ; ಕರಗ: ಕಲಶ; ವೈಡೂರಿಯ: ನವರತ್ನಗಳಲ್ಲಿ ಒಂದು; ಪಡಿಗ: ಪಾತ್ರೆ; ಚರರು: ದೂತರು; ಒಟ್ಟು: ಸೇರಿಸು; ಬಂಡಿ: ರಥ; ಭಾರ: ದೊಡ್ಡ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಕರವತಿಗೆ +ಹೊಂಗಳಸ +ಹೊಂಗ್
ಉಪ್ಪರಿಗೆ +ದೀಪಸ್ತಂಭ +ಹೇಮದ
ಸರಪಣಿಯ+ ಮಣಿಮಯದ +ಜಂತ್ರದ +ಜೀವಪುತ್ರಿಗಳ
ಮರಕತದ +ಮಧುಪಾತ್ರೆ +ನೀಲದ
ಕರಗ+ ವೈಡೂರಿಯದ +ಪಡಿಗವ
ಚರರು +ತಂದೊಟ್ಟಿದರು +ಬಂಡಿಗೆ +ಭಾರ+ಸಂಖ್ಯೆಯಲಿ

ಅಚ್ಚರಿ:
(೧) ಹೊಂಗಳಸ ಹೊಂಗೊಪ್ಪರಿಗೆ – ಪದಗಳ ಬಳಕೆ
(೨) ಯಂತ್ರದ ಗೊಂಬೆ ಎಂದು ಹೇಳಲು – ಜಂತ್ರದ ಜೀವಪುತ್ರಿಗಳ

ಪದ್ಯ ೨೦: ದ್ರೋಣನು ರಣರಂಗವನ್ನು ಹೇಗೆ ಹೊಕ್ಕನು?

ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ (ದ್ರೋಣ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸುತ್ತಲೂ ಮಹಾರಥರು, ಮಕುಟಧಾರಿಗಳಾದ ರಾಜರ ಗುಂಪು, ಅವರ ಸುತ್ತ ಚಾಮರ, ಛತ್ರಧಾರರು, ದಟ್ಟವಾಗಿ ಬರುವ ರಾಯ, ರಾವುತರು, ಇರಲು, ಬಂಗಾರದ ರಥಕ್ಕೆ ಕಟ್ಟಿದ ಶ್ರೇಷ್ಠವಾದ ಕುದುರೆಗಳು ತವಕದಿಂದ ನುಗ್ಗುತ್ತಿರಲು, ಕಲಶಧ್ವಜನಾದ ದ್ರೋಣನು ಯುದ್ಧರಂಗಕ್ಕೆ ಹೊಕ್ಕನು.

ಅರ್ಥ:
ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ರಾಜಾವಳಿ: ರಾಜರ ಗುಂಪು; ಚಮರ: ಚಾಮರ; ಛತ್ರ: ಕೊಡೆ; ಪಾಳಿ: ಸರದಿ, ಸಾಲು; ಸೆಳೆ: ಜಗ್ಗು, ಎಳೆ; ಆಯುಧ: ಶಸ್ತ್ರ; ಹೆಗಲು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊಳೆ: ಪ್ರಕಾಶ; ಹೇಮ: ಚಿನ್ನ; ರಥ: ಬಂಡಿ; ಹೂಡು: ಅಣಿಗೊಳಿಸು; ತಿಲಕ: ಶ್ರೇಷ್ಠ; ಕುದುರೆ: ಅಶ್ವ; ನೆಗಹು: ಮೇಲೆತ್ತು; ನಿಗುರು: ಚಾಚಿರುವಿಕೆ; ಕಳಶ: ಕುಂಭ; ಸಿಂಧ: ಬಾವುಟ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ

ಪದವಿಂಗಡಣೆ:
ಬಳಿಯ +ಸುಮಹಾರಥರ+ ರಾಜಾ
ವಳಿಯ +ಚಮರ+ಚ್ಛತ್ರ +ಪಾಳಿಯ
ಸೆಳೆದಡ್+ಆಯುಧ +ಹೆಗಲ +ತೆಕ್ಕೆಯ +ರಾಯ +ರಾವುತರ
ಹೊಳೆವ +ಹೇಮದ +ರಥಕೆ +ಹೂಡಿದ
ತಿಲಕ+ಕುದುರೆಯ +ನೆಗಹಿ +ನಿಗುರುವ
ಕಳಶ +ಸಿಂಧದ +ದ್ರೋಣ +ಹೊಕ್ಕನು +ಕಾಳೆಗದ +ಕಳನ

ಅಚ್ಚರಿ:
(೧) ದ್ರೋಣನ ಆಗಮನ – ಹೊಳೆವ ಹೇಮದ ರಥಕೆ ಹೂಡಿದ ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ

ಪದ್ಯ ೫೫: ಮಿಕ್ಕ ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕ ವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕಗಿರಿ ಸಹಿತ (ಅರಣ್ಯ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಕದ್ವೀಪ ಕ್ಷೀರಾಬ್ಧಿಗಳು ಅರವತ್ತು ನಾಲ್ಕು ಲಕ್ಷ, ಪುಷ್ಕರ ಸಿಹಿ ನೀರು ಸಮುದ್ರಗಳ್ ಒಂದು ಕೋಟಿ ಇಪ್ಪತ್ತೆಂಟು ಲಕ್ಷ, ಲೋಕಾಲೋಕಗಿರಿಯನ್ನು ಸೇರಿಸಿ ಚಿನ್ನದಂತಹ ಭೂಮಿಯು ಎರಡು ಕೋಟಿ ಐವತ್ತಾರು ಲಕ್ಷ ಯೋಜನ ವಿಸ್ತಾರ.

ಅರ್ಥ:
ಲಕ್ಕ: ಲಕ್ಷ; ಕ್ಷೀರ: ಹಾಲು; ಪುಷ್ಕರ: ಕಮಲ; ಸುಜಲ: ನಿರ್ಮಲವಾದ ನೀರು; ದ್ವಯ: ಎರಡು; ಹೇಮ: ಚಿನ್ನ; ಭೂಮಿ: ಧರಿಣಿ; ಸಹಿತ: ಜೊತೆ;

ಪದವಿಂಗಡಣೆ:
ಲಕ್ಕ +ತಾನರವತ್ತು+ ನಾಲ್ಕಾ
ಗಿಕ್ಕು +ಶಾಕ +ಕ್ಷೀರ +ಕೋಟಿಯ
ಲಕ್ಕ +ವಿಪ್ಪತ್ತೆಂಟು +ಪುಷ್ಕರ+ ಸುಜಲವೊಂದಾಗಿ
ಮಿಕ್ಕ+ ಕೋಟಿ+ದ್ವಯದ +ಮೇಲಣ
ಲಕ್ಕವ್+ಐವತ್ತಾರು +ಯೋಜನ
ವಕ್ಕು +ಹೇಮದ +ಭೂಮಿ +ಲೋಕಾಲೋಕಗಿರಿ+ ಸಹಿತ

ಅಚ್ಚರಿ:
(೧) ೬೪, ೧೨೮, ೨೫೬ – ಸಂಖ್ಯೆಗಳ ಬಳಕೆ

ಪದ್ಯ ೬: ಕೃಷ್ಣನ ರಥವು ಹೇಗೆ ಸಿದ್ಧವಾಯಿತು?

ಘನ ಗಳಾಹಕ ಸೈನ್ಯ ಸುಗ್ರೀ
ವನನು ನಿರ್ಮಳ ಮೇಘಪುಷ್ಪನ
ನನುವಿನಲಿ ಹೂಡಿದನು ದಾರುಕ ಹೇಮಮಯ ರಥವ
ಧನುವ ಶಸ್ತ್ರಾಸ್ತ್ರವ ಸುದರ್ಶನ
ಕನಕ ಕವಚ ಕೃಪಾಣವನು ಸ್ಯಂ
ದನದೊಳಿಳುಹೆಂದಸುರರಿಪು ಸಾತ್ಯಕಿಗೆ ನೇಮಿಸಿದ (ಉದ್ಯೋಗ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೃಷ್ಣನ ಸಾರಥಿಯಾದ ದಾರುಕನು ಮೇಘಪುಷ್ಪನ ಅನುವಿನಲ್ಲಿ ಹೇಮಮಯವಾದ ರಥವನ್ನು ಹೂಡಿದನು. ಕೃಷ್ಣನು ಸಾತ್ಯಕಿಗೆ ರಥದಲ್ಲಿ ಶಸ್ತ್ರಾಸ್ತ್ರಗಳು, ಧನು, ಸುದರ್ಶನ, ಚಿನ್ನದ ಕವಚ ಕೃಪಾಣವನು ಇಡಲು ಅಪ್ಪಣೆ ಮಾಡಿದನು.

ಅರ್ಥ:
ಘನ: ಶ್ರೆಷ್ಠ; ಬಳಾಹಕ: ಮೋಸ; ಸೈನ್ಯ: ಸೇನೆ; ಸುಗ್ರೀವ: ಒಳ್ಳೆಯ ಕುತ್ತಿಗೆ ಉಳ್ಳವನು, ಕಿಷ್ಕಿಂದೆಯ ರಾಜ; ನಿರ್ಮಳ: ಶುದ್ಧತೆ, ಸ್ವಚ್ಛತೆ; ಮೇಘ: ಮೋಡ; ಪುಷ್ಪ: ಹೂವು; ಅನುವು: ಸೊಗಸು, ಅನುಕೂಲ; ಹೂಡು: ಅಣಿಗೊಳಿಸು; ದಾರುಕ: ಕೃಷ್ಣನ ಸಾರಥಿ; ಹೇಮ: ಚಿನ್ನ; ರಥ: ಬಂಡಿ; ಧನು: ಬಿಲ್ಲು; ಶಸ್ತ್ರ: ಆಯುಧ; ಸುದರ್ಶನ: ಚಕ್ರಾಯುಧ; ಕನಕ: ಹೇಮ, ಚಿನ್ನ; ಕವಚ: ಹೊದಿಕೆ; ಕೃಪಾಣ: ಕತ್ತಿ, ಖಡ್ಗ; ಸ್ಯಂದನ: ರಥ; ಇಳುಹು: ಇಳಿಸು; ಅಸುರರಿಪು: ಕೃಷ್ಣ; ಅಸುರ: ರಾಕ್ಷಸ; ರಿಪು: ವೈರಿ; ನೇಮಿಸು: ಅಪ್ಪಣೆ ಮಾಡು; ಮೇಘಪುಷ್ಪ: ಒಬ್ಬನ ಹೆಸರು;

ಪದವಿಂಗಡಣೆ:
ಘನ +ಬಳಾಹಕ +ಸೈನ್ಯ +ಸುಗ್ರೀ
ವನನು +ನಿರ್ಮಳ +ಮೇಘಪುಷ್ಪನನ್
ಅನುವಿನಲಿ +ಹೂಡಿದನು +ದಾರುಕ +ಹೇಮಮಯ +ರಥವ
ಧನುವ +ಶಸ್ತ್ರಾಸ್ತ್ರವ +ಸುದರ್ಶನ
ಕನಕ +ಕವಚ +ಕೃಪಾಣವನು +ಸ್ಯಂ
ದನದೊಳ್+ಇಳುಹ್+ಎಂದ್+ಅಸುರರಿಪು+ ಸಾತ್ಯಕಿಗೆ+ ನೇಮಿಸಿದ

ಅಚ್ಚರಿ:
(೧) ಹೇಮ, ಕನಕ; ರಥ, ಸ್ಯಂದನ – ಸಮನಾರ್ಥಕ ಪದ
(೨) ‘ಕ’ ಕಾರದ ತ್ರಿವಳಿ ಪದ – ಕನಕ ಕವಚ ಕೃಪಾಣ

ಪದ್ಯ ೪೨: ಯಜ್ಞದಲ್ಲಿ ಪಾಲ್ಗೊಂಡವರಿಗೆ ಯಾವ ಉಡುಗೊರೆ ದೊರೆಯಿತು?

ವರಸದಸ್ಯಾದಿಗಳ ದಕ್ಷಿಣೆ
ಬರಹಕಿಮ್ಮಡಿ ನೂರು ಮಡಿ ಸಾ
ವಿರದ ಮಡಿ ವರ ಹೇಮ ವಸ್ತ್ರಾಭರಣ ಗೋವ್ರಜವ
ಅರಸನಿತ್ತನು ಮಖ ನಿಯೋಗೋ
ತ್ಕರರಿಗನುಪಮ ಭೂರಿ ಜನಕಾ
ದರಿಸಿ ಕೊಟ್ಟನು ಹೊತ್ತು ನಡೆದುದು ಸಕಲ ಜನಧನವ (ಸಭಾ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶ್ರೇಷ್ಠರಾದ ಸದಸ್ಯ, ಹೋತೃ, ಅಧ್ವರ್ಯ, ಉದ್ಗಾತೃ, ಮತ್ತಿತರ ಋತ್ವಿಜರಿಗೆ ಕೊಡಬೇಕೆಂದು ಹೇಳಿದ ದಕ್ಷಿಣೆಗೆ ಇಮ್ಮಡಿ, ನೂರ್ಮಡಿ, ಸಾವಿರಮಡಿ ದಕ್ಷಿಣೆ, ಭಂಗಾರ, ವಸ್ತ್ರ, ಆಭರಣ ಮತ್ತು ಗೋವುಗಳನ್ನು ಧರ್ಮರಾಜನು ಕೊಟ್ಟನು. ಯಜ್ಞಕಾರ್ಯದಲ್ಲಿ ನಿಯೋಜಿತರಾದವರಿಗೂ ಸಹ ಉಡುಗೊರೆಗಳನ್ನು ನೀಡಿದನು. ಸಮಸ್ತರಿಗೂ ಸನ್ಮಾನಪೂರ್ವಕವಾಗಿ ಹಣ ಮೊದಲಾದವುಗಳನ್ನು ಕೊಟ್ಟನು.

ಅರ್ಥ:
ವರ: ಶ್ರೇಷ್ಠ; ಸದಸ್ಯ: ಸಂಘ; ದಕ್ಷಿಣೆ: ಸಂಭಾವನೆ; ಇಮ್ಮಡಿ: ಎರಡು ಪಟ್ಟು; ನೂರು: ಶತ; ಸಾವಿರ: ಸಹಸ್ರ; ಹೇಮ: ಚಿನ್ನ; ವಸ್ತ್ರ: ಬಟ್ಟೆ; ಆಭರಣ: ಒಡವೆ; ಗೋವು: ಹಸು; ವ್ರಜ: ಗುಂಪು; ಅರಸ: ರಾಜ; ಇತ್ತ: ನೀಡಿದ; ನಿಯೋಗ: ಗುಂಪು; ಉತ್ಕರ:ರಾಶಿ, ಸಮೂಹ; ಅನುಪಮ: ಉತ್ಕೃಷ್ಟವಾದುದು; ಭೂರಿ:ಹೆಚ್ಚು; ಜನ: ಮನುಷ್ಯ ಸಮುದಾಯ; ಆದರ: ಗೌರವ; ಕೊಟ್ಟನು: ನೀಡು; ಹೊತ್ತು: ಹತ್ತಿಕೊಳ್ಳು; ಸಕಲ: ಎಲ್ಲಾ; ಧನ: ಐಶ್ವರ್ಯ;

ಪದವಿಂಗಡಣೆ:
ವರ+ಸದಸ್ಯ+ಆದಿಗಳ+ ದಕ್ಷಿಣೆ
ಬರಹಕ್+ಇಮ್ಮಡಿ +ನೂರು +ಮಡಿ+ ಸಾ
ವಿರದ+ ಮಡಿ+ ವರ+ ಹೇಮ +ವಸ್ತ್ರಾಭರಣ+ ಗೋವ್ರಜವ
ಅರಸನ್+ಇತ್ತನು +ಮಖ +ನಿಯೋಗ
ಉತ್ಕರರಿಗ್+ಅನುಪಮ +ಭೂರಿ +ಜನಕ್
ಆದರಿಸಿ+ ಕೊಟ್ಟನು +ಹೊತ್ತು +ನಡೆದುದು +ಸಕಲ +ಜನಧನವ

ಅಚ್ಚರಿ:
(೧) ಮಡಿ ಪದದ ಬಳಕೆ – ೩ ಬಾರಿ

ಪದ್ಯ ೨೧: ಮಹಾಭಾರತದ ಹಿರಿಮೆ ಏನು?

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿ ದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ (ಆದಿ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಚಿನ್ನದ ಕೊಳಗು ಮತ್ತು ಕೊಂಬುಗಳಿಂದ ಅಲಂಕೃತವಾದ, ಸಾವಿರ ಕಪಿಲೆ ಹಸುಗಳನ್ನು ಚಂದ್ರಗ್ರಹಣ, ಸೂರ್ಯಗ್ರಹಣ ಕಾಲದಲ್ಲಿ ಗಂಗಾನದಿಯ ತೀರದಲ್ಲಿ ಒಂದು ನೂರು ಬ್ರಾಹ್ಮಣರಿಗೆ ದಾನಮಾಡಿ ಕೃಷ್ಣಾರ್ಪಣಮಸ್ತು ಎಂದು ಹೇಳಿ ಸಿಗುವ ಫಲವು ಈ ಮಹಾಭಾರತದ ಒಂದು ಅಕ್ಷರವನ್ನು ಕೇಳಿದವರಿಗೆ ಸಿಗುತ್ತದೆ.

ಅರ್ಥ:
ಹೇಮ: ಚಿನ್ನ; ಖುರ:ಗೊರಸು, ಕೊಳಗು; ಶೃಂಗ: ಪ್ರಾಣಿಯ ಕೊಂಬು, ಕೋಡು; ಆಭರಣ: ಒಡವೆ; ಕಾಮಧೇನು: ಹಸು, ಆಕಳು; ಸಹಸ್ರ: ಸಾವಿರ; ಕಪಿಲೆ:ಕಂದು ಬಣ್ಣದ ಹಸು; ಸೋಮ: ಚಂದ್ರ; ಸೂರ್ಯ: ರವಿ; ಗ್ರಹಣ:ಹಿಡಿಯುವುದು; ಸುರನದಿ: ಗಂಗೆ; ತೀರ:ತಟ; ಮುಕುಂದ: ಕೃಷ್ಣ; ಅರ್ಪಣೆ:ಒಪ್ಪಿಸುವುದು; ಶತ: ನೂರು; ಭೂಮಿ: ಧರಿತ್ರಿ; ದೇವರು: ಭಗವಂತ; ಫಲ: ಲಾಭ; ಅಕ್ಷರ:ಲಿಪಿ, ಬರಹ;

ಪದವಿಂಗಡಣೆ:

ಹೇಮ +ಖುರ+ ಶೃಂಗ+ಆಭರಣದಲಿ
ಕಾಮಧೇನು +ಸಹಸ್ರ +ಕಪಿಲೆಯ
ಸೋಮ +ಸೂರ್ಯಗ್ರಹಣದಲಿ+ ಸುರನದಿಯ +ತೀರದಲಿ
ಶ್ರೀಮುಕುಂದಾರ್ಪಣ+ವೆನಿಸಿ+ ಶತ
ಭೂಮಿ +ದೇವರಿಗಿತ್ತ+ ಫಲವಹುದ್
ಈ +ಮಹಾಭಾರತದೊಳ್+ಒಂದ್+ಅಕ್ಷರವ +ಕೇಳ್ದರಿಗೆ

ಅಚ್ಚರಿ:
(೧) ಬ್ರಾಹ್ಮಣರಿಗೆ ಭೂಮಿ ದೇವರು; ಗಂಗೆಗೆ ಸುರನದಿ; ಎಂದು ಹೇಳಿರುವುದು
(೨) ಹೇಮ, ಸೋಮ – ಪ್ರಾಸ ಪದ