ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವಿವರಿಸಿದನು?

ಬೀಳುಕೊಂಡನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಹೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ (ಗದಾ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಮ್ನಿಯಿಂದ ಬೀಳ್ಕೊಂಡು ಅರಸನನ್ನು ಹುಡುಕುತ್ತಾ ಹೋಗುವಾಗ ಸಾಲು ಹೆಣಗಳೊಟ್ಟಿಲ ಮೇಲೆ, ತಲೆಯಿಲ್ಲದ ಶರೀರಗಳ ಪಕ್ಕದಲ್ಲಿ ರಕ್ತ ಪೂರಿತವಾದ ಜಾಗದಲ್ಲಿ ಏರುತ್ತಾ, ಬೀಳುತ್ತಾ ನಿಲ್ಲುತ್ತಾ ಬಳಲುತ್ತಾ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಕೌರವನನ್ನು ಕಂಡು ಅವನೊಡನೆ ದ್ವೈಪಾಯನ ಸರೋವರದ ದಡದವರೆಗೆ ಹೋದೆನು.

ಅರ್ಥ:
ಬೀಳುಕೊಂಡು: ತೆರಳು; ಮುನಿ: ಋಷಿ; ಅವನೀಪಾಲಕ: ರಾಜ; ಅರಸು: ಹುಡುಕು; ಕಳ: ಯುದ್ಧಭೂಮಿ; ಸಾಲ: ಗುಂಪು; ಹೆಣ: ಜೀವವಿಲ್ಲದ ಶರೀರ; ಕಬಂಧ: ತಲೆಯಿಲ್ಲದ ದೇಹ, ಮುಂಡ; ರುಧಿರ: ರಕ್ತ; ಪೂರ: ಪೂರ್ಣ; ಬೀಳುತೇಳು: ಹತ್ತು, ಇಳಿ; ನಿಲು: ನಿಲ್ಲು, ತಡೆ; ಬಳಲು: ಆಯಾಸಗೊಳ್ಳು; ಕಾಲುನಡೆ: ಪಾದದಿಂದ ಚಲಿಸುತ್ತಾ; ಸುಳಿ: ಕಾಣಿಸಿಕೊಳ್ಳು; ಭೂಪಾಲಕ: ರಾಜ; ಕಂಡು: ನೋಡು; ಬಂದೆ: ಆಗಮಿಸು; ಕೊಳ: ಸರೋವರ; ತಡಿ: ದಡ;

ಪದವಿಂಗಡಣೆ:
ಬೀಳುಕೊಂಡನು +ಮುನಿಯನ್+ಅವನೀ
ಪಾಲಕನನ್+ಅರಸಿದೆನು +ಕಳನೊಳು
ಸಾಲ +ಹೆಣನೊಟ್ಟಿಲ+ ಕಬಂಧದ +ರುಧಿರ+ಪೂರದಲಿ
ಬೀಳುತೇಳುತ +ನಿಲುತ +ಬಳಲಿದು
ಕಾಲುನಡೆಯಲಿ +ಸುಳಿವ +ಕುರು+ ಭೂ
ಪಾಲಕನ +ಕಂಡೊಡನೆ +ಬಂದೆನು +ಕೊಳನ +ತಡಿಗಾಗಿ

ಅಚ್ಚರಿ:
(೧) ಅವನೀಪಾಲಕ, ಭೂಪಾಲಕ – ಸಮಾನಾರ್ಥಕ ಪದ
(೨) ರಣರಂಗದ ಸ್ಥಿತಿ – ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ

ಪದ್ಯ ೩೯: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ (ಗದಾ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಡದಲ್ಲಿ ಬಲದಲ್ಲಿ ಕಾಲಲ್ಲಿ ಮೆಟ್ಟಿ ಗದೆಯಿಂದ ಅಪ್ಪಳಿಸಿ ಆನೆಗಳೆಲ್ಲವನ್ನೂ ಕೆಳಕ್ಕೆ ಕೆಡವಿದನು. ಕೌರವನ ನೂರು ಆನೆಗಳ ಹೆಣಗಳು ನಿಮಿಷ ಮಾತ್ರದಲ್ಲಿ ಸಾಲುಸಾಲಾಗಿ ಬಿದ್ದವು.

ಅರ್ಥ:
ಮೆಟ್ಟು: ತುಳಿ; ಬಲವಂಕ: ಬಲಭಾಗ; ಹೊರಗಟ್ಟು: ಬಿಸಾಡು, ನೂಕು; ವಾಮ: ಎಡಭಾಗ; ಗಜ: ಆನೆ; ಅಪ್ಪಳಿಸು: ತಟ್ಟು, ತಾಗು; ಪರಿಘ: ಗದೆ; ಘಟ್ಟಿಸು: ಹೊಡೆ, ಅಪ್ಪಳಿಸು; ಒಗ್ಗು: ಗುಂಪು, ಸಮೂಹ; ಥಟ್ಟು: ಗುಂಪು; ಕೆಡಹು: ನಾಹ್ಸ; ಅಮಮ: ಅಬ್ಬಬ್ಬಾ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ನೃಪ: ರಾಜ; ನಿಮಿಷ: ಕ್ಷಣ;

ಪದವಿಂಗಡಣೆ:
ಮೆಟ್ಟಿದನು+ ಬಲವಂಕವನು+ ಹೊರ
ಗಟ್ಟಿದನು +ವಾಮದ +ಗಜಂಗಳನ್
ಇಟ್ಟನ್+ಒಂದರೊಳ್+ಒಂದನ್+ಅಪ್ಪಳಿಸಿದನು +ಪರಿಘದಲಿ
ಘಟ್ಟಿಸಿದನ್+ಒಗ್ಗಿನ +ಗಜಂಗಳ
ಥಟ್ಟು+ಕೆಡಹಿದನ್+ಅಮಮ +ಹೆಣ+ಸಾ
ಲಿಟ್ಟವೈ +ಕುರುನೃಪನ+ ನೂರಾನೆಗಳು +ನಿಮಿಷದಲಿ

ಅಚ್ಚರಿ:
(೧) ಮೆಟ್ಟಿದನು, ಅಟ್ಟಿದನು – ಪದಗಳ ಬಳಕೆ
(೨) ಆಶ್ಚರ್ಯವನ್ನು ಸೂಚಿಸುವ ಪರಿ – ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ

ಪದ್ಯ ೩೨: ಯುದ್ಧದ ಘೋರ ದೃಶ್ಯಗಳು ಹೇಗಿದ್ದವು?

ನಿಲುಕಲಿಟ್ಟೆಡೆಯಾದ ಹೆಣನನು
ತುಳಿದು ರಣದಲಿ ಕುಣಿವ ಮುಂಡವ
ನೆಳೆದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು
ತಲೆಮಿದುಳ ಜೊಂಡಿನಲಿ ಜಾರುವ
ಕಲಹಕಾತರ ರಿಪುಭಟರನ
ಪ್ಪಳಿಸಿ ಘಾಯಂಬಡೆದು ಮಗ್ಗಿದರುಭಯಸೇನೆಯಲಿ (ಭೀಷ್ಮ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಎದುರಾಳಿಯನ್ನು ನಿಲುಕಲು ಅಡ್ಡವಾಗಿ ಬಂದ ಹೆಣಗಳನ್ನು ತುಳಿದು, ರುಂಡ ಹಾರಿಹೋದರೂ ಕುಣಿಯುವ ಮುಂಡಗಳನ್ನು ರಕ್ತದಲ್ಲಿ ಎಳೆದು ಬೀಳಿಸಿ ಮೆಟ್ಟಿ ಮುಂದೆ ನಡೆದು, ಮಿದುಳಿನ ಜೊಂಡಿನಲಿ ಜಾರಿ ಬೀಳುತ್ತಾ ವಿರೋಧಿ ಯೋಧರನ್ನು ಆಯುಧಗಳಿಂದಪ್ಪಳಿಸಿ, ತಾವೂ ಪೆಟ್ಟು ತಿಂದು ಬೀಳುವ ಸೈನಿಕರು ಎರಡು ಸೈನ್ಯಗಳಲ್ಲೂ ಕಾಣಿಸಿದರು.

ಅರ್ಥ:
ನಿಲುಕು: ಎಟುಕು, ದೊರಕು, ಮುಟ್ಟು; ಇಟ್ಟೆಡೆ: ಇಕ್ಕಟ್ಟು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ರಣ: ಯುದ್ಧಭೂಮಿ; ಕುಣಿ: ನರ್ತಿಸು; ಮುಂಡ: ತಲೆಯಿಲ್ಲದ ದೇಹ, ಅಟ್ಟೆ; ಎಳೆ: ಹೊರತರು; ರುಧಿರ: ರಕ್ತ; ಔಕು: ನೂಕು; ಮೆಟ್ಟು: ತುಳಿ; ಮುಂದೆ: ಎದುರು; ನಡೆ: ಚಲಿಸು; ತಲೆ: ಶಿರ; ಮಿದುಳ: ತಲೆಯ ಭಾಗ; ಜೊಂಡು: ನೀರಿನಲ್ಲಿ ಬೆಳೆಯುವ ಹುಲ್ಲು; ಜಾರು: ಬೀಳು; ಕಲಹ: ಜಗಳ ರಿಪು: ವೈರಿ; ಭಟ: ಸೈನಿಕ; ಅಪ್ಪಳಿಸು: ಗುದ್ದು; ಘಾಯ: ಪೆಟ್ಟು; ಮಗ್ಗು: ಕುಂದು, ಕುಗ್ಗು; ಉಭಯ: ಎರಡು; ಸೇನೆ: ಸೈನ್ಯ;

ಪದವಿಂಗಡಣೆ:
ನಿಲುಕಲ್+ಇಟ್ಟೆಡೆಯಾದ +ಹೆಣನನು
ತುಳಿದು+ ರಣದಲಿ +ಕುಣಿವ +ಮುಂಡವನ್
ಎಳೆದು +ರುಧಿರದೊಳ್+ಔಕಿ +ಮೆಟ್ಟುವ +ಮುಂದೆ +ನಡೆನಡೆದು
ತಲೆ+ಮಿದುಳ +ಜೊಂಡಿನಲಿ+ ಜಾರುವ
ಕಲಹಕಾತರ +ರಿಪು+ಭಟರನ್
ಅಪ್ಪಳಿಸಿ +ಘಾಯಂಬಡೆದು+ ಮಗ್ಗಿದರ್+ಉಭಯ+ಸೇನೆಯಲಿ

ಅಚ್ಚರಿ:
(೧) ಯುದ್ಧದ ಭೀಕರ ದೃಶ್ಯ – ನಿಲುಕಲಿಟ್ಟೆಡೆಯಾದ ಹೆಣನನು ತುಳಿದು ರಣದಲಿ ಕುಣಿವ ಮುಂಡವ
ನೆಳೆದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು

ಪದ್ಯ ೩೫: ಉತ್ತರನೇಕೆ ಬೆರಗಾದ?

ಹೊರಗೆ ತೊಗಲಲಿ ಬಿಗಿದು ಕೆಲಬಲ
ನರಿಯದಂದೈ ಪಾಂಡುನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು (ವಿರಾಟ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಉತ್ತರನ ಮಾತನ್ನು ಕೇಳಿದ ಅರ್ಜುನನು, ಎಲೈ ಉತ್ತರ ಅದು ಹೆಣವಲ್ಲ, ಪಾಂಡವರು ತಮ್ಮ ಆಯುಧಗಳನ್ನು ತೊಗಲಿನಲ್ಲಿ ಕಟ್ಟಿ ಇಲ್ಲಿಟ್ಟಿದ್ದಾರೆ, ಇದು ಬೇರೆಯವರಿಗೆ ತಿಳಿಯಬಾರದೆಂದು ಈ ಉಪಾಯ ಮಾಡಿದ್ದಾರೆ, ಅದನ್ನು ತೆಗೆ ಎಂದು ಹೇಳಿದನು. ಉತ್ತರನು ತನ್ನ ಉತ್ತರೀಯವನ್ನು ಕಟ್ಟಿಕೊಂಡು, ಮೇಲಕ್ಕೆ ಹತ್ತಿ ಹಗ್ಗಗಳನ್ನು ಬಿಚ್ಚಿ ಒಳಗಿದ್ದ ಆಯುಧಗಳನ್ನು ನೋಡಿ ಬೆರಗಾದನು.

ಅರ್ಥ:
ಹೊರಗೆ: ಆಚೆ; ತೊಗಲು: ಚರ್ಮ; ಬಿಗಿ: ಬಂಧಿಸು; ಕೆಲಬಲ: ಅಕ್ಕಪಕ್ಕ, ಎಡಬಲ; ಅರಿ: ತಿಳಿ; ನಂದನ: ಮಕ್ಕಳು; ಉರುವ: ಶ್ರೇಷ್ಠ; ಕೈದು: ಆಯುಧ; ಕಟ್ಟು: ಬಂಧಿಸು; ಹೆಣ: ಜೀವವಿಲ್ಲದ ದೇಹ; ತೆಗೆ: ಹೊರತರು; ಸೆರಗ: ಉತ್ತರೀಯ; ಅಳವಡಿಸು: ಸರಿಮಾಡಿಕೋ; ಭೀತಿ: ಭಯ; ತೊರೆ: ಹೊರಹಾಕು; ತುದಿ: ಅಗ್ರಭಾಗ; ಏರು: ಮೇಲೆ ಹತ್ತು; ನೇಣು: ಹಗ್ಗ; ಹರಿದು: ಬಿಚ್ಚು; ಕಂಡು: ನೋಡಿ; ಅಂಜು: ಹೆದರು; ಭಯ: ಅಂಜಿಕೆ;

ಪದವಿಂಗಡಣೆ:
ಹೊರಗೆ +ತೊಗಲಲಿ +ಬಿಗಿದು +ಕೆಲಬಲನ್
ಅರಿಯದಂದೈ+ ಪಾಂಡುನಂದನರ್
ಉರುವ +ಕೈದುವ +ಕಟ್ಟಿದರು +ಹೆಣನಲ್ಲ+ ತೆಗೆ+ಎನಲು
ಸೆರಗನ್+ಅಳವಡಿಸಿಕ್ಕಿ+ ಭೀತಿಯ
ತೊರೆದು +ತುದಿಗೇರಿದನು +ನೇಣ್ಗಳ
ಹರಿದು +ಕೈದುವ +ಬಿಟ್ಟು +ಕಂಡ್+ಅಂಜಿದನು +ಭಯ +ಹೊಡೆದು

ಅಚ್ಚರಿ:
(೧) ಆಯುಧಗಳನ್ನು ನೋಡಿ ಉತ್ತರನಿಗಾದ ಅನುಭವ – ನೇಣ್ಗಳ ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು