ಪದ್ಯ ೧೨: ಸಂಜಯನು ಯಾರ ನಡಿಗೆಯನ್ನು ನೋಡಿದನು – ೫?

ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹೆಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಂಜಿಸಿ ಸೆರೆನರದ ಕಾ
ವಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆಗ ತಾನೇ ಸತ್ತು ಕುಣೀಯುವ ಆನೆಗಳನ್ನು ತಿವಿದು ಹೆಜ್ಜೆಯನ್ನಿಡುತ್ತಾ, ಹೆಣವನ್ನು ತಿನ್ನಲು ಆತುರದಿಂದ ನುಗ್ಗುವ ಬೇತಾಳಗಳನ್ನು ಹೆದರಿಸಿ, ಕತ್ತಿನ ನರಗಳ ಹನೀಗೆಯಲ್ಲಿ ಕೈಯೂರಿ, ಹಳೆಯದಾದ ಹೆಣಗಳ ಹೊಲಸಿಗೆ ಅಸಹ್ಯಪಟ್ಟುಕೊಂಡು ಜೋರಾಗಿ ಹೋಗುತ್ತಾ ಹೆಜ್ಜೆಹೆಜ್ಜೆಗೂ ಅವನು ನಿಟ್ಟುಸಿರು ಬಿಡುತ್ತಿದ್ದನು.

ಅರ್ಥ:
ಕುಣಿ: ನರ್ತಿಸು; ಕರಿ: ಆನೆ; ತಲೆ: ಶಿರ; ಮಡುಹು:ಹಳ್ಳ, ಕೊಳ್ಳ; ಅಣೆ:ತಿವಿ, ಹೊಡೆ; ಹೆಜ್ಜೆ: ಪಾದ; ಭೂತ: ಬೇತಾಳ; ಹೆಣ: ಜೀವವಿಲ್ಲದ ಶರೀರ; ತೀನಿ: ಆಹಾರ, ತಿನಿಸು; ತವಕಿಸು: ಆತುರಿಸು; ವೇತಾಳ: ಭೂತ; ಸಂತತಿ: ವಂಶ; ರಣ: ಯುದ್ಧ; ಅಂಜಿಸು: ಹೆದರಿಸು; ಸೆರೆ: ಬಂಧನ; ಕಾವಣ: ಹಂದರ, ಚಪ್ಪರ; ಕೈಯೂರು: ಕೈಯಿಟ್ಟು; ಮಿಗೆ: ಅಧಿಕ; ಹಳವೆಣ: ಹಳೆಯದಾದ ಹೆಣ; ಹೊಲಸು: ಕೊಳಕು, ಅಶುದ್ಧ; ಹೇಸು: ಅಸಹ್ಯಪಡು; ಹರಿ: ಚಲಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್ವ: ನಿಟ್ಟುಸಿರು;

ಪದವಿಂಗಡಣೆ:
ಕುಣಿವ +ಕರಿಗಳ+ ತಲೆಯ +ಮಡುಹಿನಲ್
ಅಣೆದು +ಹೆಜ್ಜೆಯನಿಡುತ +ಭೂತದ
ಹೆಣನ +ತೀನಿಗೆ +ತವಕಿಸುವ +ವೇತಾಳ +ಸಂತತಿಯ
ರಣದೊಳ್+ಅಂಜಿಸಿ +ಸೆರೆನರದ+ ಕಾ
ವಣದೊಳಗೆ +ಕೈಯೂರಿ +ಮಿಗೆ+ ಹಳ
ವೆಣನ+ ಹೊಲಸಿಗೆ +ಹೇಸಿ +ಹರಿದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಹ ಕಾರದ ಸಾಲು ಪದ – ಹಳವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ

ಪದ್ಯ ೭: ತ್ರಿಗರ್ತರ ಶಪಥವೇನು?

ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹೆಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಮ್ದು ಸಾರಿದರು (ದ್ರೋಣ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ತ್ರಿಗರ್ತರು ಅಗ್ನಿಸಾಕ್ಷಿಯಾಗಿ ಹೀಗೆಂದು ಶಪಥಮಾಡಿದರು, ಅರ್ಜುನನನ್ನು ಬೇರೆಡೆಗೆ ಬಿಡಬಾರದು, ಮಹಾಸಂಗ್ರಾಮದಲ್ಲಿ ನಾವು ಒಬ್ಬರನ್ನೊಬ್ಬರು ಬಿಟ್ಟು ಅಥವಾ ಶತ್ರುವಿಗೆ ಕೊಟ್ಟು ಹೋಗಬಾರದು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು. ಹೆಣಗಳನ್ನು ತುಳಿದು ಮುನ್ನುಗ್ಗಬೇಕು, ಇದಕ್ಕೆ ತಪ್ಪಿದರೆ ನಮಗೆ ಇಂಥಿಂಥಾ ಪಾಪಿಗಳ ಗತಿ ಬರಲಿ ಎಂದು ಹೇಳಿದರು.

ಅರ್ಥ:
ನರ: ಅರ್ಜುನ; ಬಿಡು: ತೊರೆ; ಮಹಾ: ದೊಡ್ಡ; ಸಂಗರ: ಯುದ್ಧ; ಒಪ್ಪು: ಒಪ್ಪಿಗೆ, ಸಮ್ಮತಿ; ತೆರಳು: ಹೋಗು, ನಡೆ; ಮುರಿ: ಸೀಳು; ಹೆಜ್ಜೆ: ಪಾದ; ಹೊರಳು: ತಿರುವು, ಬಾಗು; ಮೆಟ್ಟು: ತುಳಿತ; ಮುಂದಣಿ: ಮುಂಚೂಣಿ; ಉರವಣಿಸು: ಆತುರಿಸು; ನರಕ: ಅಧೋಲೋಕ; ಪಾತಕ: ಬೀಳುವಂತೆ ಮಾಡುವುದು; ಗತಿ: ವೇಗ; ಸಾರು: ಹರಡು;

ಪದವಿಂಗಡಣೆ:
ನರನ +ಬಿಡಲಾಗದು +ಮಹಾ +ಸಂ
ಗರದೊಳ್+ಒಬ್ಬರನ್+ಒಬ್ಬರ್+ಒಪ್ಪಿಸಿ
ತೆರಳಲಾಗದು +ಮುರಿಯಲಾಗದು+ ಕೊಂಡ +ಹೆಜ್ಜೆಗಳ
ಹೊರಳಿವೆಣನನು+ ಮೆಟ್ಟಿ+ ಮುಂದಣಿಗ್
ಉರವಣಿಸುವುದು +ತಪ್ಪಿದವರಿಗೆ
ನರಕವೀ +ಪಾತಕರ+ ಗತಿ+ ನಮಗೆಂದು+ ಸಾರಿದರು

ಅಚ್ಚರಿ:
(೧) ಬಿಡಲಾಗದು, ತೆರಳಲಾಗದು, ಮುರಿಯಲಾಗದು – ಪದಗಳ ಬಳಕೆ

ಪದ್ಯ ೨೨: ಉತ್ತರನಿಗೆ ಯಾವ ಆಸೆಯನ್ನು ತೋರಿಸಿದನು?

ಕೊಳುಗುಳದೊಳೋಡಿದಡೆ ಹೆಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹೆಜ್ಜೆಯನಿಡಲು ಹೆಜ್ಜೆಯೊಳಶ್ವಮೇಧ ಫಲ
ಅಳಿದನಾದಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲನನುಗ್ಗಡಿಸುವನು ವೀರ ಸ್ವರ್ಗವಹುದೆಂದ (ವಿರಾಟ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೈ ಉತ್ತರನೇ, ರಣರಂಗದಿಂದ ಓಡಿ ಹೋದರೆ ಒಂದೊಂದು ಹೆಜ್ಜೆಗೂ ಮಹಾ ಪಾಪ ಬರುತ್ತದೆ. ಮುಂದಕ್ಕೆ ಒಂದು ಹೆಜ್ಜೆಯನ್ನಿಟ್ಟರೆ, ಅಶ್ವಮೇಧಯಾಗ ಮಾಡಿದ ಫಲ ಬರುತ್ತದೆ. ಯುದ್ಧದಲ್ಲಿ ಸತ್ತರೆ ವೀರ ಸ್ವರ್ಗ, ಅಪ್ಸರೆಯರು ದಾಸಿಯರು, ದೇವೇಂದ್ರನು ತನ್ನ ಪದವಿಯನ್ನು ನಿನಗೆ ಕೊಡುತ್ತಾನೆ ಎಂದು ಉತ್ತರನನ್ನು ಹುರಿದುಂಬಿಸಲು ಪ್ರಯತ್ನಿಸಿದನು.

ಅರ್ಥ:
ಕೊಳುಗುಳ: ಯುದ್ಧ; ಓಡು: ಧಾವಿಸು; ಹೆಜ್ಜೆ: ಪಾದ; ಫಲ: ಪರಿಣಾಮ; ಪಾತಕ: ಪಾಪ; ಮುಂದಣಿ: ಮುಂದೆ; ಒಲಿದು: ಪ್ರೀತಿ; ಅಳಿ: ನಾಶ, ಸಾವು; ದೇವಲೋಕ: ನಾಕ; ಲಲನೆ: ಹೆನ್ಣು; ತೊತ್ತು: ದಾಸಿ; ಸುರೇಂದ್ರ: ಇಂದ್ರ; ನೆಲ: ; ಉಗ್ಗಡಿಸು: ಸಾರು, ಘೋಷಿಸು, ಹೊಗಳು; ವೀರ: ಶೂರ; ಸ್ವರ್ಗ: ನಾಕ;

ಪದವಿಂಗಡಣೆ:
ಕೊಳುಗುಳದೊಳ್+ಓಡಿದಡೆ +ಹೆಜ್ಜೆಗೆ
ಫಲ +ಮಹಾ+ಪಾತಕವು+ ಮುಂದಣಿಗ್
ಒಲಿದು +ಹೆಜ್ಜೆಯನಿಡಲು +ಹೆಜ್ಜೆಯೊಳ್+ಅಶ್ವಮೇಧ+ ಫಲ
ಅಳಿದನ್+ಆದಡೆ +ದೇವಲೋಕದ
ಲಲನೆಯರು +ತೊತ್ತಿರು+ ಸುರೇಂದ್ರನು
ನೆಲನನ್+ಉಗ್ಗಡಿಸುವನು +ವೀರ +ಸ್ವರ್ಗವಹುದೆಂದ

ಅಚ್ಚರಿ:
(೧) ವೀರಸ್ವರ್ಗದ ಹೊಂದಿದರೆ ದೊರಕುವ ಫಲ – ಅಳಿದನಾದಡೆ ದೇವಲೋಕದಲಲನೆಯರು ತೊತ್ತಿರು ಸುರೇಂದ್ರನುನೆಲನನುಗ್ಗಡಿಸುವನು ವೀರ ಸ್ವರ್ಗವಹುದೆಂದ

ಪದ್ಯ ೨೩: ಧರ್ಮಜನು ತಮ್ಮಂದಿರ ಸ್ಥಿತಿಯನ್ನರಿಯಲು ಯಾರನ್ನು ಕಳಿಸಿದನು?

ತಡೆದರತ್ತಲು ಮೂವರನುಜರು
ಮಡಿದರೇನೋ ಚಿತ್ರವಾಯಿತು
ನಡೆ ಸಮೀರ ಕುಮಾರ ನೀ ಹೋಗತ್ತ ತಳುವದಿರು
ತಡೆಯದೈತಹುದೆನೆ ಹಸಾದದ
ನುಡಿಯಲವನೈದಿದನು ಹೆಜ್ಜೆಯ
ಹಿಡಿದು ಬಳಿಸಲಿಸಿದನು ಬರೆ ಬರೆ ಕಂಡನದ್ಭುತವ (ಅರಣ್ಯ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮೂವರು ತಮ್ಮಂದಿರೂ ಬರಲಿಲ್ಲ ಅಲ್ಲಿಯೇ ಉಳಿದರು, ಇದು ವಿಚಿತ್ರ, ಭೀಮ ನೀನು ಆ ಕಡೆಗೆ ಹೋಗು, ಅಲ್ಲೇ ನಿಲ್ಲದೆ ಬೇಗ ಬಂದು ಬಿಡು ಎಂದು ಧರ್ಮಜನು ಹೇಳಲು, ಭೀಮನು ಮಹಾ ಪ್ರಸಾದವೆಂದು ಹೇಳಿ ತಮ್ಮಂದಿರ ಹೆಜ್ಜೆಗಳನ್ನೇ ಹಿಂಬಾಲಿಸುತ್ತಾ ಬರಲು ಮಹಾದ್ಭುತವನ್ನು ಕಂಡನು.

ಅರ್ಥ:
ತಡೆ: ನಿಲ್ಲಿಸು; ಅನುಜ: ತಮ್ಮ; ಮಡಿ: ಸಾವು; ಚಿತ್ರ: ಚಮತ್ಕಾರ; ನಡೆ: ತೆರಳು; ಸಮೀರ: ವಾಯು; ಕುಮಾರ: ಮಗ; ಹೋಗು: ತೆರಳು; ತಳುವು: ನಿಧಾನಿಸು; ಐತಹುದು: ಬಂದು ಸೇರು; ಹಸಾದ: ಪ್ರಸಾದ, ಅನುಗ್ರಹ, ದಯೆ; ನುಡಿ: ಮಾತು; ಐದು: ಬಂದು ಸೇರು; ಹೆಜ್ಜೆ: ಪಾದ; ಹಿಡಿ: ಗ್ರಹಿಸು; ಬಳಸು: ಹರಡು; ಬರೆ: ಬರುತ್ತಿರಲು; ಅದ್ಭುತ: ಅತ್ಯಾಶ್ಚರ್ಯ;

ಪದವಿಂಗಡಣೆ:
ತಡೆದರ್+ಅತ್ತಲು +ಮೂವರ್+ಅನುಜರು
ಮಡಿದರ್+ಏನೋ +ಚಿತ್ರವಾಯಿತು
ನಡೆ +ಸಮೀರ +ಕುಮಾರ +ನೀ +ಹೋಗ್+ಅತ್ತ +ತಳುವದಿರು
ತಡೆಯದ್+ಐತಹುದ್+ಎನೆ +ಹಸಾದದ
ನುಡಿಯಲ್+ಅವನ್+ಐದಿದನು +ಹೆಜ್ಜೆಯ
ಹಿಡಿದು+ ಬಳಿ+ಸಲಿಸಿದನು +ಬರೆ+ ಬರೆ +ಕಂಡನ್+ಅದ್ಭುತವ

ಅಚ್ಚರಿ:
(೧) ಐತಹುದ್, ಐದು – ಸಾಮ್ಯಾರ್ಥ ಪದ
(೨) ಭೀಮನನ್ನು ಸಮೀರ ಕುಮಾರ ಎಂದು ಕರೆದಿರುವುದು
(೩) ಬರೆ ಪದದ ಬಳಕೆ, ಬೇಗೆ ತೆರಳಿದನೆಂದು ಹೇಳಲು – ಹೆಜ್ಜೆಯ ಹಿಡಿದು ಬಳಿಸಲಿಸಿದನು ಬರೆ ಬರೆ