ಪದ್ಯ ೪೨: ಅಭಿಮನ್ಯುವಿನ ಖಡ್ಗದ ಯುದ್ಧವು ಹೇಗೆ ತೋರಿತು?

ಕರುಳ ಹೂಗೊಂಚಲಿನ ಮೂಳೆಯ
ಬರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗಚೈತ್ರದಲಿ (ದ್ರೋಣ ಪರ್ವ, ೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಖಡ್ಗ ಚೈತ್ರಮಾಸಕ್ಕೆ ಕರುಳಿನ ಹೂಗೊಂಚಲು, ಮೂಳೆಯೇ ಬಿರಿದ ಮೊಗ್ಗು, ಹೊಸ ಮಾಂಸ ಖಂಡಗಳು ಕೈಗಳ ಚಿಗುರೆಲೆಗಳು, ಕಡಿದುಬಿದ್ದ ತೋಳುಗಳೇ ಕೊಂಬುಗಳು, ಬೆರಳುಗಳೇ ದೀಪ, ತಲೆಗಳೇ ಹಣ್ಣುಗಳು, ಗೂಬೆ ಕಾಗೆಗಳೇ ಮರಿ ದುಂಬಿಗಳು.

ಅರ್ಥ:
ಕರುಳು: ಪಚನಾಂಗ; ಹೂ: ಪುಷ್ಪ; ಗೊಂಚಲು: ಗುಂಪು; ಮೂಳೆ: ಎಲುಬು; ಬಿರಿ: ಬಿರುಕು, ಸೀಳು; ಮುಗುಳು: ಮೊಗ್ಗು, ಕುಟ್ಮಲ; ನವ: ಹೊಸ; ಖಂಡ: ತುಂಡು; ಖಂಡದಿಂಡೆ: ಮಾಂಸದ ತುಂಡು; ಕರತಳ: ಅಂಗೈ; ತಳಿರು: ಚಿಗುರು; ಎಲೆ: ಪರ್ಣ; ಕಡಿ: ಸೀಳು; ತೋಳು: ಬಾಹು; ಕೊಂಬು: ವಾದ್ಯ; ಬೆರಳು: ಅಂಗುಲಿ; ಕಳಿಕೆ: ದೀಪದ ಕುಡಿ; ತಲೆ: ಶಿರ; ಫಲ: ಹಣ್ಣು; ಬಂಧುರ: ಬಾಗಿರುವುದು; ಘೂಕ: ಗೂಬೆ; ಧ್ವಾಂಕ್ಷ: ಕಾಗೆ; ನವ: ಹೊಸ; ಮಧುಕರ: ದುಂಬಿ, ಭ್ರಮರ; ರಣ: ಯುದ್ಧಭೂಮಿ; ವನ: ಕಾಡು; ಎಸೆದು: ತೋರು; ಖಡ್ಗ: ಕತ್ತಿ; ಚೈತ್ರ: ವಸಂತಮಾಸ, ಆರಂಭದ ಸಂಕೇತ;

ಪದವಿಂಗಡಣೆ:
ಕರುಳ +ಹೂಗೊಂಚಲಿನ +ಮೂಳೆಯ
ಬರಿಮುಗುಳ+ ನವ+ ಖಂಡ+ದಿಂಡೆಯ
ಕರತಳದ +ತಳಿರ್+ಎಲೆಯ +ಕಡಿ+ತೋಳುಗಳ +ಕೊಂಬುಗಳ
ಬೆರಳ +ಕಳಿಕೆಯ +ತಲೆಯ +ಫಲ+ ಬಂ
ಧುರದ +ಘೂಕ+ಧ್ವಾಂಕ್ಷ +ನವ +ಮಧು
ಕರದ +ರಣವನವ್+ಎಸೆದುದ್+ಈತನ +ಖಡ್ಗ+ಚೈತ್ರದಲಿ

ಅಚ್ಚರಿ:
(೧) ಅತ್ಯಂತ ಸುಂದರವಾದ ಹೋಲಿಕೆ, ಖಡ್ಗದ ಹೋರಾಟವನ್ನು ಚೈತ್ರಮಾಸಕ್ಕೆ ಹೋಲಿಸುವ ಪರಿ