ಪದ್ಯ ೧೯: ನಾರಾಯಣಾಸ್ತ್ರದ ಪ್ರಭಾವ ಹೇಗಿತ್ತು?

ಮೇಲು ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದುದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ (ದ್ರೋಣ ಪರ್ವ, ೧೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಪ್ರಭಾವದಿಂದ ಮೇಲಿನ ಏಳುಲೋಕಗಳು ಧ್ರುವ ನಕ್ಷತ್ರಕ್ಕೆ ಹೋದವು. ಗ್ರಹಗಳ ನಕ್ಷತ್ರಗಳ ನೆಲೆಯುತಪ್ಪಿ ಜ್ಯೋತಿಷ್ಯರ ಲೆಕ್ಕಾಚಾರ ಸುಳ್ಳಾಯಿತು. ಝಳದ ದಾಳಿಗೆ ಕೆಳಲೋಕಗಳು ಪಾತಾಳಕ್ಕೆ ಕುಸಿದವು. ಬ್ರಹ್ಮಾಂಡದ ಮೇಲಿನ ಆವರಣದ ನೀರು ಕುದಿಯಿತು.

ಅರ್ಥ:
ಜಗ: ಪ್ರಪಂಚ; ಓಡು: ಧಾವಿಸು; ಆಲಯ: ಮನೆ; ನೆಲೆ: ಭೂಮಿ; ಅಪ್ಪು: ಆಲಂಗಿಸು; ತಾರ: ನಕ್ಷತ್ರ; ಜೋಯಿಸ: ಜೋತಿಷಿ; ಹುಸಿ: ಸುಳ್ಳು; ಧಾಳಿ: ಆಕ್ರಮಣ; ಸೆಗಳಿಕೆ: ಕಾವು; ತಳ: ನೆಲ, ಭೂಮಿ; ಪಾತಾಳ: ಅಧೋಲೋಕ; ಅದ್ದು: ತೋಯು; ಕಮಲಜಾಂಡ: ಬ್ರಹ್ಮಾಂಡ; ಆವರಣ: ಮುಸುಕು, ಹೊದಿಕೆ; ಅಂಬು: ನೀರು; ಕುದಿ: ಶಾಖದಿಂದ ಉಕ್ಕು;

ಪದವಿಂಗಡಣೆ:
ಮೇಲು +ಜಗವೇಳ್+ಓಡಿದವು +ಧ್ರುವನ
ಆಲಯಕೆ +ನೆಲೆ+ತಪ್ಪಿದುದು +ಗ್ರಹ
ಮಾಲೆ +ತಾರಾರಾಸಿ +ಜೋಯಿಸರ್+ಓದು +ಹುಸಿಯಾಯ್ತು
ಧಾಳಿಡುವ +ಸೆಗಳಿಯಲಿ +ತಳ +ಪಾ
ತಾಳಕ್+ಅದ್ದುದು +ಕಮಲಜಾಂಡದ
ಮೇಲಣ+ಆವರಣ+ಅಂಬು +ಕುದಿದುದು +ಹೇಳಲೇನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಗ್ರಹಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು

ಪದ್ಯ ೭೦: ದ್ರೋಣನು ಯಾವುದನ್ನು ಅರಿತನು?

ತನ್ನೊಳಿತರವನಿತರದೊಳು ನೆರೆ
ತನ್ನನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ತನ್ನಲ್ಲಿ ಉಳಿದೆಲ್ಲವನ್ನೂ, ಉಳಿದೆಲ್ಲಕ್ಕೂ ಆತ್ಮನಾದ ತನ್ನ ಜೀವಾತ್ಮವನ್ನು ನೋಡಿ ತಾನು, ತನ್ನಿಂದ ಬೇರಾದುದೊಂದಾದ ಪರಮಾತ್ಮ, ಇವರೆಡಕ್ಕೂ (ಜೀವಾತ್ಮ, ಪರಮಾತ್ಮ) ಐಕ್ಯವೆಂಬ ಉಪಚಾರದ ಭಾವವನ್ನು ಅಲ್ಲಗಳೆದನು. ನಿತ್ಯನೂ ತನ್ನನ್ನು ಬಿಟ್ಟು ಅನ್ಯವೆಂಬುದಿಲ್ಲ, ಜ್ಞಾನವೇ ತಾನು ಎಂದು ಅರಿತು ಅನುಭವಿಸಿ ತಾನೇ ಆಗಿದ್ದನು.

ಅರ್ಥ:
ಇತರ: ಬೇರೆಯವ; ನೆರೆ: ಪಕ್ಕ, ಪಾರ್ಶ್ವ, ಸೇರು; ಈಕ್ಷಿಸು: ನೋಡು; ಅನ್ಯ: ಬೇರೆಯವ; ಐಕ್ಯ: ಸೇರು; ಉಪಚರಿತ: ಉಪಚಾರ ಮಾಡಲ್ಪಟ್ಟ; ಭಾವ: ಭಾವನೆ; ಹುಸಿ: ಸುಳ್ಳು; ನಿತ್ಯ: ಯಾವಾಗಲು; ಅಮಳ: ನಿರ್ಮಲ; ಜ್ಞಾನ: ಅರಿವು; ರೂಪ: ಆಕಾರ; ನಿಜ: ದಿಟ; ಅರಿ: ತಿಳಿ;

ಪದವಿಂಗಡಣೆ:
ತನ್ನೊಳ್+ಇತರವನ್+ಇತರದೊಳು +ನೆರೆ
ತನ್ನನ್+ಈಕ್ಷಿಸಿ +ತಾನು +ತನ್ನಿಂದ್
ಅನ್ಯವ್+ಎರಡರೊಳ್+ಐಕ್ಯವೆಂಬ್+ಉಪಚರಿತ +ಭಾವವನು
ತನ್ನೊಳಗೆ +ಹುಸಿಯೆಂದು +ನಿತ್ಯನನ್
ಅನ್ಯನ್+ಅಮಳ+ಜ್ಞಾನ+ರೂಪವೆ
ತನ್ನ +ನಿಜವೆಂದ್+ಅರಿದು +ತಾನಾಗಿರ್ದನಾ +ದ್ರೋಣ

ಅಚ್ಚರಿ:
(೧) ತನ್ನ, ತನ್ನೊಳು, ತನ್ನಿಂದ, ತಾನು, ತಾನಾಗಿರ್ದ – ಪದಗಳ ಬಳಕೆ

ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೫೩: ಭೀಮನು ಕರ್ಣನನ್ನೇಕೆ ಕೊಲ್ಲಲಿಲ್ಲ?

ಉಂಟು ಶಿವ ಶಿವ ಹುಸಿಯನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ (ದ್ರೋಣ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಿನ್ನ ಮಾತು ನಿಜ, ಶಿವ ಶಿವಾ ಸುಳ್ಳುಮಾತು ನಿನ್ನಿಂದ ಬರುವುದಿಲ್ಲ. ನೀನು ಗೆಲ್ಲದೆ ಬಿಡುವುದಿಲ್ಲ. ನಿನ್ನ ಸತ್ಯ ನನಗೆ ಚೆನ್ನಾಗಿ ಗೊತ್ತು. ಈಗ ತಾನೇ ಹದಿನೆಂಟು ಬಾರಿ ನಾನು ನೋಡಿದ್ದೇನೆ, ಏನು ಮಾಡುತ್ತೀ, ಅರ್ಜುನನ ಪ್ರತಿಜ್ಞೆ ನನಗೆ ಅಡ್ಡ ಬರುತ್ತಿದೆ, ಇಲ್ಲದಿದ್ದರೆ ನಿನ್ನ ಹೃದಯದ ಮಾಂಸವನ್ನು ಆರಿಸಿ ಬಿಡುತ್ತಿದ್ದೆ. ನಿಣು ಎಂಟುಮಡಿ ಬೊಗಳಿದರೂ ತಪ್ಪೇನು ಎಂದು ಭೀಮನು ಗುಡುಗಿದನು.

ಅರ್ಥ:
ಉಂಟು: ಇದೆ; ಶಿವ: ಶಂಕರ; ಹುಸಿ: ಸುಳ್ಳು; ನುಡಿ: ಮಾತು; ಗೆಲ್ಲು: ಜಯಿಸು; ಮಾಣು: ನಿಲ್ಲಿಸು; ಶೌರ್ಯ: ಸಾಹಸ, ಪರಾಕ್ರಮ; ಗಂಟು: ಮೂಟೆ; ಬಲುಹ: ಶಕ್ತಿ; ಕಂಡು: ನೋಡು; ಬಲ್ಲೆ: ತಿಳಿ; ಹಲವು: ಬಹಳ; ಬಾರಿ: ಸಲ, ಸರದಿ; ಸುಂಟಿಗೆ: ಹೃದಯದ ಮಾಂಸ; ಆಯ್ವೆ: ಹುಡುಕು; ಕಂಟಕ: ಮುಳ್ಳು, ವಿಪತ್ತು; ನರ: ಮನುಷ್ಯ; ನುಡಿ: ಮಾತು; ಮಡಿ: ಪಟ್ಟು; ಗಳಹು: ಪ್ರಲಾಪಿಸು, ಹೇಳು; ತಪ್ಪು: ಸರಿಯಿಲ್ಲದ್ದು;

ಪದವಿಂಗಡಣೆ:
ಉಂಟು +ಶಿವ +ಶಿವ +ಹುಸಿಯನುಡಿ +ನಿನ
ಗುಂಟೆ +ಗೆಲ್ಲದೆ +ಮಾಣೆ +ಶೌರ್ಯದ
ಗಂಟು +ಬಲುಹದ +ಕಂಡು +ಬಲ್ಲೆನು +ಹಲವು+ಬಾರಿಯಲಿ
ಸುಂಟಿಗೆಯನ್+ಆಯ್ವೆನು +ಕಣಾ +ಬಲು
ಕಂಟಕವಲೇ +ನರನ+ ನುಡಿ +ನೀನ್
ಎಂಟುಮಡಿ +ಗಳಹಿದರೆ +ತಪ್ಪೇನ್+ಎಂದನಾ +ಭೀಮ

ಅಚ್ಚರಿ:
(೧) ಉಂಟು, ಗಂಟು, ಎಂಟು – ಪ್ರಾಸ ಪದಗಳು
(೨) ಕರ್ಣನನ್ನು ಹೊಗಳುವ ಪರಿ – ಶಿವ ಶಿವ ಹುಸಿಯನುಡಿ ನಿನಗುಂಟೆ

ಪದ್ಯ ೨೨: ಅಶ್ವತ್ಥಾಮನು ದುರ್ಯೋಧನನಿಗೆ ಏನು ಹೇಳಿ ಹಿಂದಿರುಗಿದನು?

ಒಂದು ಕಡೆಗಣ್ಣಿನಲಿ ಕೌರವ
ವೃಂದವನು ನೋಡುವಳು ಕಯ್ಯೊಡ
ನೊಂದು ಕಡೆಗಣ್ಣಿನಲಿ ಮಾತಾಡಿಸುವಳರಿಬಲವ
ಇಂದು ಜಯವಧು ದೃಢಪತಿವ್ರತೆ
ಯೆಂದು ಬಗೆದೈ ಭೂಪ ಹುಸಿ ಹೋ
ಗೆಂದು ಗುರುಸುತ ನಗುತ ಹೋದನು ತನ್ನ ಮೋಹರಕೆ (ಕರ್ಣ ಪರ್ವ, ೨೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ದುರ್ಯೋಧನನ ಮಾತು ಕೇಳಿ, ದುರ್ಯೋಧನ ಜಯವಧು ಒಂದು ಕಣ್ಣಿನಿಂದ ಕೌರವರತ್ತ ನೋಡುತ್ತಾಳೆ, ಕೈತಿರುವಿ ಶತ್ರುಗಳ ಸೇನೆಯನ್ನು ಇನ್ನೊಂದು ಕಣ್ಣಿನಿಂದ ಮಾತಾಡಿಸುತ್ತಾಳೆ. ಇಂತಹ ಜಯವಧುವು ಧೃಡಪತಿವ್ರತೆಯೆಂದು ನಂಬುವೆಯಲ್ಲಾ. ಇದು ಸುಳ್ಳು, ಎಂದು ಅಶ್ವತ್ಥಾಮನು ನಗುತ್ತಾ ತನ್ನ ಸೇನೆಯತ್ತ ಹಿಂದಿರುಗಿದನು.

ಅರ್ಥ:
ಕಡೆಗಣ್ಣು: ಕಣ್ಣಿನ ತುದಿ; ವೃಂದ: ಗುಂಪು, ಸಮೂಹ; ನೋಡು: ವೀಕ್ಷಿಸು; ಕೈ: ಹಸ್ತ, ಕರ; ಮಾತಾಡಿಸು: ನುಡಿಸು; ಅರಿ: ವೈರಿ; ಬಲ: ಸೈನ್ಯ; ಜಯ: ಗೆಲುವು; ವಧು: ಸ್ತ್ರೀ; ದೃಢ: ಗಟ್ಟಿ; ಪತಿವ್ರತೆ: ಸಾಧ್ವಿ, ಗರತಿ; ಬಗೆದು: ಆಲೋಚನೆ, ಯೋಚನೆ; ಭೂಪ: ರಾಜ; ಹುಸಿ: ಸುಳ್ಳು, ಅಸತ್ಯ; ಹೋಗು: ತೆರಳು; ಗುರು: ಆಚಾರ್ಯ: ಸುತ: ಮಗ; ನಗುತ: ಸಂತೋಷ; ಮೋಹರ: ಯುದ್ಧ, ಗುಂಪು;

ಪದವಿಂಗಡಣೆ:
ಒಂದು +ಕಡೆಗಣ್ಣಿನಲಿ +ಕೌರವ
ವೃಂದವನು +ನೋಡುವಳು +ಕಯ್ಯೊಡನ್
ಒಂದು +ಕಡೆಗಣ್ಣಿನಲಿ +ಮಾತಾಡಿಸುವಳ್+ಅರಿಬಲವ
ಇಂದು +ಜಯವಧು +ದೃಢಪತಿವ್ರತೆ
ಯೆಂದು +ಬಗೆದೈ+ ಭೂಪ +ಹುಸಿ+ ಹೋ
ಗೆಂದು +ಗುರುಸುತ +ನಗುತ +ಹೋದನು +ತನ್ನ +ಮೋಹರಕೆ

ಅಚ್ಚರಿ:
(೧) ಜಯವಧುವನ್ನು ಪತಿವ್ರತೆಯೆಂದು ನಂಬಬಾರದೆಂದು ಹೇಳುವ ಪರಿ – ಜಯವಧು ದೃಢಪತಿವ್ರತೆಯೆಂದು ಬಗೆದೈ ಭೂಪ ಹುಸಿ ಹೋಗೆಂದು

ಪದ್ಯ ೯: ತಾರಕನ ಮಕ್ಕಳು ಬ್ರಹ್ಮನಿಗೆ ಏನು ಹೇಳಿ ಹಿಂದಿರುಗಿದರು?

ಕರುಣವಿನಿತೇ ಸಾಕು ನಮಗೇ
ನುರದಲೊಗೆದವೆ ಮೊಲೆಗಳೆಮ್ಮಯ
ಪುರವನೊಂದಂಬಿನಲಿ ಗೆಲುವನ ತಾಯಿ ಹುಸಿಯೆನುತ
ದುರುಳರೀತನ ಬೀಳುಕೊಂಡು
ಉಬ್ಬರದ ಹರುಷದಿ ಹೆಚ್ಚಿ ಮಯನನು
ಕರಸಿ ಮಾಡಿಸಿದರು ಮಹಾ ವಿಭವದಲಿ ನಗರಗಳ (ಕರ್ಣ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ತಾಕರನ ಮಕ್ಕಳು ಬ್ರಹ್ಮನ ವರವನ್ನು ಕೇಳಿ, ನಿಮ್ಮ ಕರುಣೆಯಿರಲಿ ನಮಗದಷ್ಟೇ ಸಾಕು, ನಾವೇನೂ ಹೆಂಗಸರಲ್ಲ, ನಮ್ಮ ಪುರಗಳನ್ನು ಒಂದೇ ಬಾಣದಿಂದ ನಾಶಮಾಡುವವನ ತಾಯಿ ಇದ್ದಾಳೆ ಎಂಬುದೇ ಸುಳ್ಳು, ಹೀಗೆಂದು ಬ್ರಹ್ಮನಿಂದ ಬೀಳ್ಕೊಂಡು ಸಂತೋಷದಿಂದ ಶ್ರೇಷ್ಠನಾದ ಮಯನನ್ನು ಕರೆಸಿ ಮೂರು ಊರುಗಳನ್ನು ನಿರ್ಮಿಸಲು ಮುಂದಾದರು.

ಅರ್ಥ:
ಕರುಣ: ದಯೆ, ಪ್ರೀತಿ; ಸಾಕು: ನಿಲ್ಲಿಸು; ಉರ: ಎದೆ, ವಕ್ಷಸ್ಥಳ; ಒಗೆ: ಹುಟ್ಟು; ಮೊಲೆ: ಸ್ತನ, ಕುಚ; ಪುರ: ಊರು; ಅಂಬು: ಬಾಣ; ಗೆಲುವ: ಜಯಿಸುವ; ತಾಯಿ: ಮಾತೆ; ಹುಸಿ: ಸುಳ್ಳು; ದುರುಳ: ದುಷ್ಟ; ಬೀಳುಕೊಂಡು: ತೆರಳು; ಉಬ್ಬರ: ಅತಿಶಯ; ಹರುಷ: ಸಂತೋಷ; ಹೆಚ್ಚು:ಹಿರಿಮೆ; ಕರಸಿ: ಬರೆಮಾಡಿ; ಮಾಡು: ನಿರ್ಮಿಸು; ಮಹಾ: ಶ್ರೇಷ್ಠ; ವಿಭವ: ಸಿರಿ, ಸಂಪತ್ತು, ವೈಭವ; ನಗರ: ಊರು;

ಪದವಿಂಗಡಣೆ:
ಕರುಣವಿನಿತೇ+ ಸಾಕು+ ನಮಗೇನ್
ಉರದಲ್+ಒಗೆದವೆ +ಮೊಲೆಗಳ್+ಎಮ್ಮಯ
ಪುರವನ್+ಒಂದ್+ಅಂಬಿನಲಿ +ಗೆಲುವನ +ತಾಯಿ +ಹುಸಿಯೆನುತ
ದುರುಳರೀತನ+ ಬೀಳುಕೊಂಡ್
ಉಬ್ಬರದ+ ಹರುಷದಿ +ಹೆಚ್ಚಿ +ಮಯನನು
ಕರಸಿ +ಮಾಡಿಸಿದರು +ಮಹಾ +ವಿಭವದಲಿ+ ನಗರಗಳ

ಅಚ್ಚರಿ:
(೧) ಹೆಂಗಸರಲ್ಲ ಎಂದು ಹೇಳುವ ಪರಿ – ಉರದಲೊಗೆದವೆ ಮೊಲೆಗಳು

ಪದ್ಯ ೭೧: ಯಾವ ನಡತೆ ರಾಜನಿಗೆ ಯಶಸ್ಸು ತರುತ್ತದೆ?

ಹುಸಿ ಪರದ್ರೋಹವು ಪರಸ್ತ್ರೀ
ವ್ಯಸನ ನಿಂದೆಯಸೂಯೆ ಮಾನ್ಯ
ದ್ವಿಷತೆ ಪತಿತನ ಮೇಳ ಆತ್ಮಸ್ತುತಿಯೆನಿಪ್ಪಿವನು
ಬಿಸುಟು ತದ್ವಿಪರೀತದೊಳುವ
ರ್ತಿಸುವನವನೇ ರಾಯನಾತಗೆ
ವಸುಧೆಯೊಳಗೆಣೆಯಾವನೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಯಾವ ಗುಣಗಳು ರಾಜನನ್ನು ಮಾನ್ಯನನ್ನಾಗಿಸುತ್ತವೆ ಎಂದು ವಿದುರ ತಿಳಿಸುತ್ತಾರೆ. ಸುಳ್ಳುಹೇಳುವ, ಅನ್ಯರಿಗೆ ದ್ರೋಹವನ್ನು ಬಗೆವ, ಪರಸ್ತ್ರೀಯರ ಮೇಲೆ ವ್ಯಾಮೋಹ ಬೇಳೆಸುವ, ಇತರರನ್ನು ಬೈಯ್ಯುವ, ಹೊಟ್ಟೆ ಕಿಚ್ಚು ಪಡುವ, ಸಜ್ಜನರ ಮೇಲೆ ದ್ವೇಷಕಾರುವ, ಗೆಳೆಯರ ಜೊತೆ ತನ್ನನ್ನೇ ತಾನ್ ಹೊಗಳಿಕೊಳ್ಳುವ ಈ ಎಲ್ಲಾ ಗುಣಗಳಿಗೆ ತದ್ವಿರುದ್ಧವಾಗಿ ನಡೆದರೆ, ಆ ರಾಜನಿಗೆ ಈ ಭೂಮಿಯಲ್ಲಿ ಸಮರಾರು ಎಂದು ವಿದುರ ಕೇಳುತ್ತಾನೆ.

ಅರ್ಥ:
ಹುಸಿ: ಸುಳ್ಳು; ಪರ: ಬೇರೆ ದ್ರೋಹ: ವಿಶ್ವಾಸಘಾತ, ವಂಚನೆ; ಸ್ತ್ರೀ: ಹೆಣ್ಣು; ವ್ಯಸನ: ಗೀಳು, ಚಟ; ನಿಂದೆ: ಬೈಗುಳ; ಅಸೂಯೆ: ಹೊಟ್ಟೆಕಿಚ್ಚು; ಮಾನ್ಯ:ಗೌರವ, ಮನ್ನಣೆ; ದ್ವಿಷತೆ: ಹಗೆತನ, ಶತ್ರುತ್ವ; ಪತಿತ: ನೀಚ, ದುಷ್ಟ; ಮೇಳ: ಸೇರುವಿಕೆ, ಕೂಡುವಿಕೆ; ಆತ್ಮ: ಜೀವ; ಸ್ತುತಿ: ಹೊಗಳಿಕೆ, ಕೊಂಡಾಟ; ಬಿಸುಟು: ಹೊರಹಾಕಿ; ವಿಪರೀತ: ವೈರುತ್ಯ, ವಿರುದ್ಧ; ವರ್ತಿಸು: ನಡೆ; ರಾಯ: ರಾಜ; ವಸುಧೆ: ಭೂಮಿ ಎಣೆ: ಸಮ, ಸಾಟಿ; ಕೇಳು: ಆಲಿಸು;

ಪದವಿಂಗಡಣೆ:
ಹುಸಿ +ಪರದ್ರೋಹವು +ಪರಸ್ತ್ರೀ
ವ್ಯಸನ+ ನಿಂದೆ +ಅಸೂಯೆ +ಮಾನ್ಯ
ದ್ವಿಷತೆ+ ಪತಿತನ+ ಮೇಳ +ಆತ್ಮಸ್ತುತಿಯೆನಿಪ್ಪ್+ಇವನು
ಬಿಸುಟು +ತದ್ವಿಪರೀತದೊಳು+ವ
ರ್ತಿಸುವನ್+ಅವನೇ +ರಾಯನ್+ಆತಗೆ
ವಸುಧೆಯೊಳಗ್+ಎಣೆ+ಯಾವನೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ರಾಜನಾದವನು ತ್ಯಜಿಸಬೇಕಾದ ಗುಣಗಳು: ಹುಸಿ, ಪರದ್ರೋಹ, ಪರಸ್ತ್ರೀವ್ಯಾಮೋಹ, ನಿಂದೆ, ಅಸೂಯೆ, ಮಾನ್ಯದ್ವಿಷತೆ, ಆತ್ಮಸ್ತುತಿ