ಪದ್ಯ ೪: ಪಾಂಡವರಿಗೆ ಎಷ್ಟು ವರ್ಷಗಳಾದವು?

ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ (ಆದಿ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಜನಿಗೆ ಹದಿನಾರು ವರ್ಷಗಳು ತುಂಬಿದವು. ಭೀಮನಿಗೆ ಹದಿನೈದು ವರ್ಷ, ಅರ್ಜುನನಿಗೆ ಹದಿನಾಲ್ಕು, ನಕುಲ ಸಹದೇವರಿಗೆ ಹದಿಮೂರು ವರ್ಷಗಳು ತುಂಬಿದವು. ಅವರೆಲ್ಲರಿಗೂ ಋಷಿಗಳಿಂದ ವಿದ್ಯಾಭ್ಯಾಸವು ನಡೆಯುತ್ತಿತ್ತು. ಹೀಗೆ ಪಾಂಡವರು ವಿದ್ಯಾಭ್ಯಾಸದಲ್ಲಿ ಮಗ್ನರಾಗಿರಲು ವಸಂತ ಋತುವು ಬಂದಿತು.

ಅರ್ಥ:
ವರುಷ: ಸಂವತ್ಸರ; ಧರಣೀಶ್ವರ: ರಾಜ; ಹಿರಿಯ: ದೊಡ್ಡ, ಜೇಷ್ಠ; ಮಗ: ಪುತ್ರ; ಕಿರಿಯ: ಚಿಕ್ಕವ; ಮುನಿ: ಋಷಿ; ವರ: ಶ್ರೇಷ್ಠ; ಅಧ್ಯಯನ: ಓದುವುದು; ವಿದ್ಯ: ಜ್ಞಾನ; ನಿರತ: ಆಸಕ್ತನಾದ; ಬಂದು: ಆಗಮಿಸು; ವಸಂತ: ಆರು ಋತುಗಳಲ್ಲಿ ಒಂದು; ಸಮಯ: ಕಾಲ;

ಪದವಿಂಗಡಣೆ:
ವರುಷ +ಹದಿನಾರಾಯ್ತು+ ಧರಣೀ
ಶ್ವರನ +ಹಿರಿಯ +ಮಗಂಗೆ +ಭೀಮಗೆ
ವರುಷ +ಹದಿನೈದ್+ಅರ್ಜುನಗೆ +ಹದಿನಾಲ್ಕು +ಹದಿಮೂರು
ಕಿರಿಯರಿಬ್ಬರಿಗ್+ಅನಿಬರಾ +ಮುನಿ
ವರರಿನ್+ಅಧ್ಯಯನಾದಿ +ವಿದ್ಯಾ
ನಿರತರಾದರು +ಬಂದುದೊಂದು +ವಸಂತಮಯ +ಸಮಯ

ಅಚ್ಚರಿ:
(೧) ಹಿರಿಯ, ಕಿರಿಯ – ವಿರುದ್ಧ ಪದಗಳು
(೨) ವರುಷ – ೧, ೩ ಸಾಲಿನ ಮೊದಲ ಪದ

ಪದ್ಯ ೧: ಸಂಜಯನು ಯುದ್ಧದ ಬಗ್ಗೆ ಏನು ಹೇಳಿದನು?

ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿ ಕಂಡಿರೆ ಜಯದ ಜಾರುಗಳ
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ (ಶಲ್ಯ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಭೀಷ್ಮನೇ ಮೊದಲಾದ ಹಿರಿಯರು ಮುಂದೇನಾಗುವುದೆಂಬ ಲೆಕ್ಕಾಚಾರವನ್ನು ಹೇಳಿರಲಿಲ್ಲವೇ? ಕರ್ಣನ ಯುದ್ಧವನ್ನು ಕೇಳುತ್ತಾ ಹಿಗ್ಗಿ ಜಯವು ಜಾರಿಹೋದುದನ್ನು ಕಾಣಲಿಲ್ಲವೇ? ಮುಂದೆ ಯುದ್ಧದಲ್ಲಿ ಶಲ್ಯನು ಬೀಳ್ಕೊಂಡನು. ನಂತರ ದುರ್ಯೋಧನನಿಗೆ ಏನಾಯಿತೆಂಬುದನ್ನು ನಾನರಿಯೆ ಎಂದು ಸಂಜಯನು ತಿಳಿಸಿದನು.

ಅರ್ಥ:
ಹೇಳು: ತಿಳಿಸು; ಆದಿ: ಮುಂತಾದ; ಹಿರಿಯ: ದೊಡ್ಡವ; ಮೇಲುದಾಯ: ಮುಂದಾಗುವ; ಬಲ್ಲವ: ತಿಳಿದವ; ಹೆಚ್ಚು: ಅಧಿಕ; ಆಳುತನ: ಪರಾಕ್ರಮ; ಹಿಗ್ಗು: ಸಂತೋಷ, ಆನಂದ; ಕಂಡು: ನೋಡು; ಜಯ: ಗೆಲುವು; ಜಾರು: ನುಣುಚಿಕೊಳ್ಳು, ಕಳಚಿಕೊಳ್ಳು; ಆಹವ: ಯುದ್ಧ; ದೇಹ: ಶರೀರ; ಬೀಳುಕೊಂಡು: ತೆರಳು; ದೊರೆ: ರಾಜ; ಅರಿ: ತಿಳಿ;

ಪದವಿಂಗಡಣೆ:
ಹೇಳರೇ+ ಭೀಷ್ಮಾದಿ +ಹಿರಿಯರು
ಮೇಲುದಾಯವ +ಬಲ್ಲವರು +ಹೆಚ್ಚ್
ಆಳುತನದಲಿ +ಹಿಗ್ಗಿ +ಕಂಡಿರೆ +ಜಯದ +ಜಾರುಗಳ
ಮೇಲಣ್+ಆಹವದೊಳಗೆ +ದೇಹವ
ಬೀಳುಕೊಂಡನು +ಶಲ್ಯನಲ್ಲಿಂ
ಮೇಲೆ+ ದೊರೆಗ್+ಏನಾದುದೆಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧) ಮೇಲುದಾಯ, ಮೇಲೆ, ಮೇಳಣಾಹವ – ಮೇಲು ಪದದ ಬಳಕೆ

ಪದ್ಯ ೨೭: ಭೀಷ್ಮರು ತಮ್ಮನ್ನು ಪುರುಷಾಧಮನೆಂದು ಏಕೆ ಕರೆದರು?

ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರಒಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ (ಭೀಷ್ಮ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ಎಷ್ಟೆ ದೊಡ್ಡವನಾಗಲಿ, ಸಜ್ಜನನಾಗಲಿ, ಶ್ರೇಷ್ಠನಾಗಲಿ, ಇಂದಿನ ಜಗತ್ತಿನಲ್ಲಿ ಅವರೆಲ್ಲರೂ ಹಣವಮ್ತರ ಪಾದಸೇವಕರಾಗಿದ್ದಾರೆ, ಪರರ ಸೇವೆಯಲ್ಲಿ ನಿರತನಾದವನು ಎಂತಹ ಗುಣವಂತನಾದರೇನು? ಅವನದು ಒಂದು ಬಾಳೇ? ಅವನಿಗೆಂತಹ ಹಿರಿಮೆ? ಅಪ್ಪ ಧರ್ಮಜ ಪರಸೇವಕನಾದ ನಾನು ಪುರುಷರಲ್ಲಿ ಅಧಮನು ಎಂದು ಹೇಳಿದರು.

ಅರ್ಥ:
ಹಿರಿ: ದೊಡ್ಡವ; ಸುಜನ: ಒಳ್ಳೆಯ, ಸಜ್ಜನ; ಗರುವ: ಅಹಂಕಾರ; ಅರ್ಥ: ಹಣ, ವಿತ್ತ; ಚರಣ: ಪಾದ; ಸೇವೆ: ಚಾಕರಿ; ಜಗ: ಪ್ರಪಂಚ; ವರ್ತಮಾನ: ಈಗಿನ, ಸದ್ಯದ ಪರಿಸ್ಥಿತಿ; ಪರರು: ಬೇರೆಯವರು; ಭಜಕ: ಭಕ್ತ; ಗುಣ: ನಡತೆ; ಅಗ್ಗಳಿಕೆ: ಶ್ರೇಷ್ಠ; ಗರುವ: ಹಿರಿಯ, ಶ್ರೇಷ್ಠ; ಅಧಮ: ನೀಚ;

ಪದವಿಂಗಡಣೆ:
ಹಿರಿಯನಾಗಲಿ+ ಸುಜನನಾಗಲಿ
ಗರುವನಾಗಲಿ+ ಅರ್ಥವುಳ್ಳನ
ಚರಣ+ಸೇವಾಪರರು +ಜಗದಲಿ +ವರ್ತಮಾನವಿದು
ಪರರ+ ಭಜಕರೊಳ್+ಆವಗುಣವ್+ಆವ್
ಇರವದ್+ಆವ್+ಅಗ್ಗಳಿಕೆ+ ಯಾವುದು
ಗರುವತನವೈ+ ತಂದೆ+ ಪುರುಷ+ಅಧಮನು +ತಾನೆಂದ

ಅಚ್ಚರಿ:
(೧) ಲೋಕನೀತಿ – ಅರ್ಥವುಳ್ಳನ ಚರಣಸೇವಾಪರರು ಜಗದಲಿ ವರ್ತಮಾನವಿದು

ಪದ್ಯ ೮೨: ದ್ರೌಪದಿಯು ಸಭೆಯಲ್ಲಿ ನೆರೆದಿದ್ದ ಹಿರಿಯರಿಗೆ ಏನು ಕೇಳಿದಳು?

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥ ಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ (ಸಭಾ ಪರ್ವ, ೧೫ ಸಂಧಿ, ೮೨ ಪದ್ಯ)

ತಾತ್ಪರ್ಯ:
ಹಿರಿಯರಿಲ್ಲದ ಸಭೆಯು ಕೇವಲ ಜನರ ಗುಂಪು ಅದು ಸಭೆಯಾಗಲಾರದು. ಓಲಗದಲ್ಲಿರುವ ಅವಿವೇಕಿಗಳು ಹಿರಿಯರಲ್ಲ, ಇದ್ದುದನ್ನು ಯಥಾರ್ಥವಾಗಿ ಹೇಳಲು ಹೆದರುವವರು ಹಿರಿಯರಾಗಲಾರರು, ಈ ಓಲಗದಲ್ಲಿ ಸಾಮಾಜಿಕರೂ, ಹಿರಿಯರೂ, ಸಚ್ಚರಿತರೂ ಇದ್ದಾರೆ. ನನ್ನ ಪ್ರಶ್ನೆಯನ್ನು ಧರ್ಮಶಾಸ್ತ್ರವೇನು ಹೇಳುತ್ತದೆ ಎಂದು ಉತ್ತರಿಸಬಾರದೆ ಎಂದು ದ್ರೌಪದಿ ಸಭೆಯನ್ನು ಕೇಳಿದಳು.

ಅರ್ಥ:
ಹಿರಿಯ: ಶ್ರೇಷ್ಠ; ಸಭೆ: ಓಲಗ; ಮನುಷ್ಯ: ಜನ, ನರ; ನೆರವಿ: ಗುಂಪು, ಸಮೂಹ; ಮೂರ್ಖ: ಮೂಢ; ಭಾಷಣ: ಮಾತನಾಡುವುದು; ಭೀತ:ಹೆದರು; ಚೇತನ: ಮನಸ್ಸು, ಬುದ್ಧಿ; ಸಾಮಾಜಿಕ: ಸಮಾಜಕ್ಕೆ ಸಂಬಂಧಿಸಿದುದು; ಸಚ್ಚರಿತ: ಒಳ್ಳೆಯ ನಡತೆ; ಸ್ತ್ರಿಮತ: ಹೆಣ್ಣಿನ ವಿಚಾರ; ಉತ್ತರ: ಸಮಾಧಾನ; ಶಾಸ್ತ್ರ: ಧಾರ್ಮಿಕ ವಿಷಯ; ಧರ್ಮ: ಧಾರಣೆ ಮಾಡಿದುದು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಹಿರಿಯರಿಲ್ಲದ +ಸಭೆ +ಮನುಷ್ಯರ
ನೆರವಿಯದು +ಸಭೆಯಲ್ಲ +ಮೂರ್ಖರು
ಹಿರಿಯರಲ್ಲ+ ಯಥಾರ್ಥ +ಭಾಷಣ+ ಭೀತ +ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ

ಅಚ್ಚರಿ:
(೧) ಹಿರಿಯರ ಮಹತ್ವವನ್ನು ತಿಳಿಸುವ ಪರಿ – ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು
(೨) ಹಿರಿಯರ ಅವಲಕ್ಷಣವನ್ನು ಹೇಳುವ ಪರಿ – ಮೂರ್ಖರು ಹಿರಿಯರಲ್ಲ ಯಥಾರ್ಥ ಭಾಷಣ ಭೀತ ಚೇತನರು

ಪದ್ಯ ೮೩: ಯಾರೊಂದಿಗೆ ಅಂಜಿಕೆಯಿಂದ ನಡೆಯಬೇಕು?

ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗುರು, ತಂದೆ, ತಾಯಿ, ಹಿರಿಯರು, ಭಗವಂತ, ಪಾಪದ ತೊಡಕುಗಳಲಿ, ಗೋವು, ತೀರ್ಥಕ್ಷೇತ್ರಗಳಲಿ, ಸಲಹುವ ಒಡೆಯ, ಮಂತ್ರದಿಂದ ಮಾಡುವ ದೇವತಾಸೇವೆ, ಬ್ರಾಹ್ಮಣರು ಇವರಲ್ಲೆಲ್ಲಾ ಭಯಭಕ್ತಿಯಿಂದ ನಡೆಯಬೇಕೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಗುರು: ಆಚಾರ್ಯ; ತಂದೆ: ಪಿತ; ತಾಯಿ: ಮಾತೆ; ಹಿರಿಯರು: ದೊಡ್ಡವರು, ಶ್ರೇಷ್ಠರು; ದೈವ: ಭಗವಂತ; ಪಾಪ: ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ಇರುಬು: ತೊಡಕು, ಇಕ್ಕಟ್ಟು; ಗೋವು: ಹಸು; ತೀರ್ಥ: ಪವಿತ್ರವಾದ ಜಲ, ಪುಣ್ಯಕ್ಷೇತ್ರ; ಹೊರೆ: ರಕ್ಷಣೆ, ಆಶ್ರಯ; ದಾತಾರ: ಕೊಡುವವನು, ದಾನಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಪರಮ: ಶ್ರೇಷ್ಠ; ಸೇವೆ: ಊಳಿಗ, ಚಾಕರಿ; ಧರಣಿ: ಭೂಮಿ; ಧರಣೀಸುರ: ಬ್ರಾಹ್ಮಣ; ಅಂಜಿಕೆ: ಭಯ; ಹಿರಿದು: ಅತಿಶಯವಾದುದು, ಹೆಚ್ಚಾದುದು;

ಪದವಿಂಗಡಣೆ:
ಗುರುವಿನಲಿ +ತಂದೆಯಲಿ +ತಾಯಲಿ
ಹಿರಿಯರಲಿ +ದೈವದಲಿ +ಪಾಪದ
ಇರುಬಿನಲಿ+ ಗೋವಿನಲಿ+ ತೀರ್ಥದಲಿ +ತನ್ನುವನು
ಹೊರೆವ +ದಾತಾರನಲಿ +ಮಂತ್ರದ
ಪರಮ+ ಸೇವೆಗಳಲ್ಲಿ+ ಧರಣೀ
ಸುರರೊಳ್+ಅಂಜಿಕೆ +ಹಿರಿದಿರಲು +ಬೇಕೆಂದನಾ +ಮುನಿಪ

ಅಚ್ಚರಿ:
(೧) ೧೧ ರೀತಿಯ ಜನರಬಳಿ ಭಯಭಕ್ತಿಯಿಂದ ನಡೆಯಬೇಕೆಂದು ತಿಳಿಸುವ ಪದ್ಯ

ಪದ್ಯ ೨೬: ಜೀವಾತ್ಮ ಹೋದಮೇಲೆ ಏನೆಂದು ಸಂಭೋದಿಸುತ್ತಾರೆ?

ಅರಸನೊಡೆಯನು ದಂಡನಾಥನು
ಗುರುಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ಗುಣನಾಮದೊಳಹಂ
ಕರಿಸುವರು ಜೀವಾತ್ಮ ತೊಲಗಿದೊ
ಡಿರದೆ ಹೆಣನೆಂದೆಂಬರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾನು ರಾಜ, ಯಜಮಾನ, ಸೇನಾಧಿಪತಿ, ಆಚಾರ್ಯ, ದೊಡ್ಡವ, ಶ್ರೇಷ್ಠನು, ದೇವತ ಆರಾಧಕನು, ಸಾಹಿತಿಯು, ಸದಸ್ಯನು, ಒಳ್ಳೆಯ ಮನುಷ್ಯನು, ಹೀಗೆ ಹಲವಾರು ನಾಮಾವಳಿಯನ್ನು ಅಲಂಕರಿಸಿ ಅಹಂಕಾರದಿಂದ ಮೆರೆಯುತ್ತಿರುವ ದೇಹವು, ಅದರೊಳಗಿರುವ ಜೀವಾತ್ಮವು ಹೋದಮೇಲೆ ಹೆಣವೆಂಬ ಒಂದೇ ಪದದಿಂದ ಕರೆಯುತ್ತಾರೆ ಎಂದು ಸನತ್ಸುಜಾತರು ಜೀವಿತದ ಅರೆಕ್ಷಣದ ಬದುಕಿನ ಸತ್ಯವನ್ನು ಹೇಳಿದರು.

ಅರ್ಥ:
ಅರಸ: ರಾಜ; ಒಡೆಯ: ಯಜಮಾನ; ದಂಡನಾಥ: ಸೇನಾಧಿಪತಿ; ಗುರು: ಆಚಾರ್ಯ; ಹಿರಿಯ: ದೊಡ್ಡವ; ಉತ್ತಮ: ಶ್ರೇಷ್ಠ; ದೈವಾಪರ: ದೇವರಲ್ಲಿ ನಂಬಿಕೆಯಿರುವವ; ಸಾಹಿತಿ: ಸಾಹಿತ್ಯಕೃಷಿ ಮಾದುವವ; ಸದಸ್ಯ: ಸಂಘ, ಸಮಿತಿ ಘಟಕಗಳಲ್ಲಿ ಸಂಬಂಧವನ್ನು ಹೊಂದಿರುವವನು; ಸತ್ಪುರುಷ: ಒಳ್ಳೆಯ ಮನುಷ್ಯ; ಪರಿಪರಿ: ಹಲವಾರು; ಗುಣ: ನಡತೆ, ಸ್ವಭಾವ; ನಾಮ: ಹೆಸರು; ಅಹಂಕರಿಸು: ನಾನು ಎಂಬುದನ್ನು ಮೆರೆಸು, ಗರ್ವ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ತೊಲಗು: ಹೊರಹೋಗು, ತ್ಯಜಿಸು; ಹೆಣ: ಜೀವವಿಲ್ಲದ, ಚರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಒಡೆಯನು +ದಂಡನಾಥನು
ಗುರು+ಹಿರಿಯನ್+ಉತ್ತಮನು +ದೈವಾ
ಪರನು +ಸಾಹಿತ್ಯನು+ ಸದಸ್ಯನು+ ಸತ್ಪುರುಷನೆಂದು
ಪರಿಪರಿಯ +ಗುಣನಾಮದೊಳ್+ಅಹಂ
ಕರಿಸುವರು +ಜೀವಾತ್ಮ +ತೊಲಗಿದೊಡ್
ಇರದೆ +ಹೆಣನೆಂದ್+ಎಂಬರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ೧೦ ರೀತಿಯ ಗುಣವಾಚಕಗಳನ್ನು ದೇಹಕ್ಕೆ ಹೇಳುವ ಪರಿಯನ್ನು ತೋರಿಸುವ ಪದ್ಯ
(೨) ‘ಸ’ ಕಾರದ ತ್ರಿವಳಿ ಪದ – ಸಾಹಿತ್ಯನು ಸದಸ್ಯನು ಸತ್ಪುರುಷನೆಂದು;