ಪದ್ಯ ೫೧: ಕೌರವನು ಹೇಗೆ ಗರ್ಜಿಸಿದನು?

ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ (ಶಲ್ಯ ಪರ್ವ, ೨ ಸಂಧಿ, ೫೧ ಪದ್ಯ)

ತಾತ್ಪರ್ಯ:
ಸೈನ್ಯವನ್ನು ಕರೆದು ಯುದ್ಧಕ್ಕೆ ಬಿಡಿರಿ. ಸೇನಾಧಿಪತಿಯು ಅರ್ಜುನನೊಡನೆ ಮಾಡುತ್ತಿರುವ ಕಾಳಗ ಅತಿಶಯವಾಯಿತು. ಅಶ್ವತ್ಥಾಮ ಸುಶರ್ಮರು ಕಾಳಗಕೊಡಲಿ, ಶತ್ರುಗಳತ್ತ ಜಾರುತ್ತಿರುವ ಜಯಲಕ್ಷ್ಮಿಯ ಮುಂದಲೆಯನ್ನು ಹಿಡಿದು ನಮ್ಮತ್ತ ಕರೆತನ್ನಿ ಎಂದು ಕೌರವನು ಗರ್ಜಿಸಿದನು.

ಅರ್ಥ:
ದಳ: ಸೈನ್ಯ; ಕರೆ: ಬರೆಮಾಡು; ದಳಪತಿ: ಸೇನಾಧಿಪತಿ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಕೂಡೆ: ಜೊತೆ; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಅಳವಿ: ಯುದ್ಧ; ನಿಲು: ತಡೆ; ಜೋಡಿ: ಜೊತೆ; ಪರಬಲ: ವೈರಿ ಸೈನ್ಯ; ಜಾರು: ಬೀಳು; ಜಯಸಿರಿ: ವಿಜಯ, ಗೆಲುವು; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು;

ಪದವಿಂಗಡಣೆ:
ದಳವ +ಕರೆ +ದಳಪತಿಗೆ+ ಕಾಳೆಗ
ಬಲುಹು +ಪಾರ್ಥನ +ಕೂಡೆ +ಗುರುಸುತನ್
ಅಳವಿಗೊಡಲಿ +ಸುಶರ್ಮ +ತಾಗಲಿ +ಭೋಜ +ಗೌತಮರು
ನಿಲಲಿ +ಸುಭಟರು +ಜೋಡಿಯಲಿ +ಪರ
ಬಲಕೆ +ಜಾರುವ +ಜಯಸಿರಿಯ+ ಮುಂ
ದಲೆಯ +ಹಿಡಿಹಿಡಿಯೆನುತ+ ಹೆಕ್ಕಳಿಸಿದನು +ಕುರುರಾಯ

ಅಚ್ಚರಿ:
(೧) ಕಾಳೆಗ, ಅಳವಿ – ಸಮಾನಾರ್ಥಕ ಪದ
(೨) ಗೆಲುವಿನತ್ತ ಸಾಗಿ ಎಂದು ಹೇಳುವ ಪರಿ – ಪರಬಲಕೆ ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು

ಪದ್ಯ ೨೯: ಸಾತ್ಯಕಿಯು ಭೀಮನಲ್ಲಿ ಏನು ಹೇಳಿದನು?

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ (ದ್ರೋಣ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತಪ್ಪಿಸಿಕೊಳ್ಳಲು ಯತ್ನಿಸಿದನು ಭೀಮನು ಅವನನ್ನು ಮತ್ತೆ ಅವಚಿದನು. ಸಾತ್ಯಕಿಯು, ಭೀಂಅ ದೊರೆಯಾಣೆ ನನ್ನನ್ನು ಬಿಡು, ಆ ನೀಚನ ರಕ್ತವನ್ನು ಕುಡಿಯುತ್ತೇನೆ ಎಂದನು. ಧೃಷ್ಟದ್ಯುಮ್ನನು ಭೀಮಾ ಬಿಟ್ಟುಬಿಡು, ಸಾತ್ಯಕಿ ಮಿಸುಕಾಡುತ್ತಿದ್ದಾನೆ ಅವನನ್ನು ಬಿಡು, ನನ್ನೊಡನೆ ಯುದ್ಧಮಾಡಿ ನೋಡಲಿ ಎಂದನು.

ಅರ್ಥ:
ಮಿಡುಕು: ಅಲುಗಾಟ; ಒಡೆಯ: ನಾಯಕ; ಅವಚು: ಆವರಿಸು, ಅಪ್ಪಿಕೊಳ್ಳು; ಪವನಜ: ಭೀಮ; ಬಿಡು: ತೊರೆ; ನೃಪ: ರಾಜ; ಆಣೆ: ಪ್ರಮಾಣ; ಕುಡಿ: ಪಾನಮಾದು; ಖಳ: ದುಷ್ಟ; ಶೋಣಿತ: ರಕ್ತ; ಅಕಟ: ಅಯ್ಯೋ; ಹಿಡಿ: ಗ್ರಹಿಸು; ಹಮ್ಮೈಸು: ಎಚ್ಚರ ತಪ್ಪು, ಮೂರ್ಛೆ ಹೋಗು; ತೊಡಕು: ಸಿಕ್ಕು, ಗೋಜು; ಅಳ್ಳಿರಿ: ನಡುಗಿಸು, ಚುಚ್ಚು;

ಪದವಿಂಗಡಣೆ:
ಮಿಡುಕಿದನು +ಸಾತ್ಯಕಿ +ವೃಕೋದರ
ನೊಡೆ+ಅವಚಿದನು +ಮತ್ತೆ +ಪವನಜ
ಬಿಡು +ನಿನಗೆ +ನೃಪನಾಣೆ+ ಕುಡಿವೆನು+ ಖಳನ +ಶೋಣಿತವ
ಬಿಡು +ಬಿಡ್+ಅಕಟಾ +ಭೀಮ +ಸಾತ್ಯಕಿ
ಹಿಡಿಹಿಡಿಯ+ ಹಮ್ಮೈಸುವನು+ ಬಿಡು
ತೊಡಕಿ +ನೋಡಲಿ+ಎನುತ +ಧೃಷ್ಟದ್ಯುಮ್ನನ್+ಅಳ್ಳಿರಿದ

ಅಚ್ಚರಿ:
(೧) ವೃಕೋದರ, ಪವನಜ, ಭೀಮ – ಭೀಮನನ್ನು ಕರೆದ ಪರಿ
(೨) ಬಿಡು ಬಿಡಕಟಾ, ಹಿಡಿಹಿಡಿ – ಜೋಡಿ ಪದಗಳ ಬಳಕೆ

ಪದ್ಯ ೨೬: ಸಾತ್ಯಕಿಯನ್ನು ಯಾರು ತಡೆದರು?

ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಕಿದನು ಕೊಂಡನು ಕಯ್ಯ ಖಂಡೆಯವ (ದ್ರೋಣ ಪರ್ವ, ೧೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಈ ಕಲಹವನ್ನು ಕೇಳಿದ ಧರ್ಮಜನು, ಸಾತ್ಯಕಿಯನ್ನು ಈಚೆಗೆಳೆ, ನಮ್ಮ ಸೈನ್ಯದಲ್ಲಿ ಕೌರಾ ಸೈನ್ಯದಲ್ಲಿ ಆಗುವಂತೆ ಸ್ವೇಚ್ಛಾಚಾರ ಆರಂಭವಾಯಿತೇ? ನಿಲ್ಲಿಸು, ಎಂದು ಕೂಗಿದನು. ಭೀಮನು ಸಾತ್ಯಕಿಯ ಬಲಭುಜವನ್ನು ಅವುಚಿ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡನು.

ಅರ್ಥ:
ಹಿಡಿ: ಬಂಧಿಸು; ತೋಟಿ: ಕಲಹ, ಜಗಳ; ಜಾಗು: ಬಾಗು, ಒಲೆದಾಡು, ಎಚ್ಚರ; ಬಲ: ಸೈನ್ಯ; ಬೂತಾಟ: ಸ್ವೇಚ್ಛಾಚಾರ; ಥಟ್ಟು: ಗುಂಪು; ನಿಲಿಸು: ನಿಲ್ಲು, ತಡೆ; ನೃಪ: ರಾಜ; ಒರಲು: ಕೂಗು; ಕವಿ: ಆವರಿಸು; ಗಲಿಸು: ಅವುಚು, ಗಟ್ಟಿಯಾಗಿ; ಹಿಡಿ: ಬಂಧಿಸು, ಗ್ರಹಿಸು; ಔಕು: ನೂಕು, ತಳ್ಳು; ಕೊಂಡು: ಪಡೆದು; ಕಯ್ಯ: ಹಸ್ತ; ಖಂಡೆ: ಕತ್ತಿ, ಖಡ್ಗ;

ಪದವಿಂಗಡಣೆ:
ಎಲೆಲೆ +ಹಿಡಿಹಿಡಿ +ಸಾತ್ಯಕಿಯನ್+ಒಳ
ಗೊಳಗೆ +ತೋಟಿಯೆ +ಜಾಗು +ಕೌರವ
ಬಲದವರ +ಬೂತಾಟವಾಯಿತೆ +ನಮ್ಮ +ಥಟ್ಟಿನಲಿ
ನಿಲಿಸ್+ಎನುತ +ನೃಪನ್+ಒರಲೆ +ಕವಿದೆಡೆ
ಗಲಿಸಿ +ಹಿಡಿದನು +ಭೀಮನ್+ಈತನ
ಬಲುಭುಜವನ್+ಔಕಿದನು +ಕೊಂಡನು +ಕಯ್ಯ +ಖಂಡೆಯವ

ಅಚ್ಚರಿ:
(೧) ಹೋಲಿಸುವ ಪರಿ – ಕೌರವ ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ

ಪದ್ಯ ೨೫: ಸುಪ್ರತೀಕಗಜದ ಆಕ್ರಮಣ ಹೇಗಿತ್ತು?

ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ (ದ್ರೋಣ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅದು ಹಿಡಿಯಲು ಬರುತ್ತಿದ್ದಮ್ತೆ ದ್ರುಪದನು ಓಡಿಹೋದನು. ಪಕ್ಕಕ್ಕೆ ಹಾರಿ ಭೀಮನು ಉಳಿದುಕೊಂಡನು, ಅದಕ್ಕೆ ಸಿಕ್ಕದವರ ದೇಹಕ್ಕೂ ಪ್ರಾಣಕ್ಕೂ ಸಂಬಂಧ ತಪ್ಪಿತು. ಸಾತ್ಯಕಿಯ ರಥವನ್ನು ಸುಪ್ರತೀಕವು ಒಡೆದುಹಾಕಿತು, ಘಟೋತ್ಕಚನನ್ನು ಕೊಡವಿ ಎಸೆಯಿತು. ಲೆಕ್ಕವಿಲ್ಲದಷ್ಟು ಆನೆ ಕುದುರೆಗಳನ್ನು ಕೊಂದಿತು.

ಅರ್ಥ:
ಹಿಡಿ: ಬಂಧಿಸು; ಓಡು: ಧಾವಿಸು; ಸಿಡಿ: ಚಿಮ್ಮು; ಕೆಲ: ಪಕ್ಕ, ಸ್ವಲ್ಪ; ಸಾರು: ಹರಡು; ಪವನಜ: ಭೀಮ; ಒಡಲು: ದೇಹ; ಸುರ: ದೇವತೆ; ಸಂಬಂಧ: ಸಂಪರ್ಕ, ಸಹವಾಸ; ಅಳಿ: ನಾಶ; ಸಿಲುಕು: ಬಂಧನಕ್ಕೊಳಗಾಗು; ಅನಿಬರು: ಅಷ್ಟುಜನ; ಒಡೆ: ಸೀಳು, ಬಿರಿ; ಮುರಿ: ಸೀಳು; ರಥ: ಬಂಡಿ; ತುಡುಕು: ಹೋರಾಡು, ಸೆಣಸು; ಹಾಯ್ಕು: ಇಡು, ಇರಿಸು; ತನಯ: ಮಗ; ಕೊಡಹಿ: ತಳ್ಳು; ಬಿಸುಟು: ಹೊರಹಾಕು; ಕೊಂದು: ಸಾಯಿಸು; ಅಗಣಿತ: ಅಸಂಖ್ಯಾತ; ಕರಿ: ಆನೆ; ತುರಂಗ: ಕುದುರೆ;

ಪದವಿಂಗಡಣೆ:
ಹಿಡಿಹಿಡಿಯಲ್+ಓಡಿದನು +ದ್ರುಪದನು
ಸಿಡಿದು +ಕೆಲ+ಸಾರಿದನು +ಪವನಜನ್
ಒಡಲ್+ಉಸುರ+ ಸಂಬಂಧವ್+ಅಳಿದುದು +ಸಿಲುಕಿದ್+ಅನಿಬರಿಗೆ
ಒಡೆಮುರಿದು+ ಸಾತ್ಯಕಿಯ+ ರಥವನು
ತುಡುಕಿ +ಹಾಯ್ಕಿತು +ಭೀಮ+ತನಯನ
ಕೊಡಹಿ+ ಬಿಸುಟುದು +ಕೊಂದುದ್+ಅಗಣಿತ +ಕರಿ +ತುರಂಗಮವ

ಅಚ್ಚರಿ:
(೧) ಸಾಯಿಸಿತು ಎಂದು ಹೇಳಲು – ಒಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ

ಪದ್ಯ ೪೦: ದುರ್ಯೋಧನನು ಬೇಡಿದುದಕ್ಕೆ ದ್ರೋಣನೇನೆಂದನು?

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ (ದ್ರೋಣ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ, ಮರಣ ಮಂತ್ರವನ್ನು ಅನುಗ್ರಹಿಸಿ ಎಂದು ಕೇಳಬಹುದೇ? ಮಗೂ< ಅರ್ಜುನನ ಪರಾಕ್ರಮವು ನಿನಗೆ ಗೊತ್ತಿಲ್ಲವೇ? ಧರ್ಮಜನನ್ನು ಹಿಡಿಯಲು ಅವನು ಬಿಡುವನೇ? ಅಸಾಧ್ಯವಾದುದನ್ನು ಬೇಡಿದೆ, ಆಗಲಿ ಎಂದು ಒಪ್ಪಿ ಅದನ್ನು ಮಾಡದಿರುವ ಬಾಹಿರರು ನಾವಲ್ಲ, ದ್ರೋಣನು ಹೀಗೆ ಹೇಳಲು ಕೌರವನು ಉತ್ತರಿಸಿದನು.

ಅರ್ಥ:
ಮರಣ: ಸಾವು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅನುಗ್ರಹ: ಕೃಪೆ, ದಯೆ; ಧರಿಸು: ಹೊರು; ಮಗ: ಸುತ; ಪರಿ: ರೀತಿ; ಅರಿ: ತಿಳಿ; ಹಿಡಿ: ಬಂಧಿಸು; ಬೇಡು: ಕೇಳು; ನೂಕು: ತಳ್ಳು; ವಚನ: ಮಾತು; ಬಾಹಿರ: ಹೊರಗಿನವ; ರಾಯ: ರಾಜ;

ಪದವಿಂಗಡಣೆ:
ಮರಣ +ಮಂತ್ರ+ಅನುಗ್ರಹವನ್+ಅವ
ಧರಿಸಬಹುದೇ +ಮಗನೆ +ಪಾರ್ಥನ
ಪರಿಯನ್+ಅರಿಯಾ +ಹಿಡಿಯಲೀವನೆ+ ಧರ್ಮನಂದನನ
ಅರಿದ+ ಬೇಡಿದೆ +ತನಗೆ +ನೂಕದ
ವರವ+ ವಚನಿಸಿ +ಮಾಡದಿಹ +ಬಾ
ಹಿರರು +ನಾವಲ್ಲ್+ಎನಲು +ಕೌರವರಾಯನ್+ಇಂತೆಂದ

ಅಚ್ಚರಿ:
(೧) ದುರ್ಯೋಧನನು ಬೇಡಿದ ವರವು ಹೇಗಿತ್ತು – ಮರಣ ಮಂತ್ರಾನುಗ್ರಹವನವಧರಿಸಬಹುದೇ ಮಗನೆ

ಪದ್ಯ ೩೭: ಅರ್ಜುನನ ಸಮಾಧಿಸ್ಥಿತಿಯನ್ನು ಕುಮಾರವ್ಯಾಸ ಹೇಗೆ ವರ್ಣಿಸಿದ್ದಾನೆ?

ಮಿಡುಕುವುದು ಬಾಯ್ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರ ಸಮಾಧಿಯ
ತೊಡವು ಹೊರಗೊಳಗಿಂದುಮುಖಿ ನರನಾಥ ಕೇಳೆಂದ (ಆದಿ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅತ್ಯಂತ ಸುಂದರವಾಗಿ ಅರ್ಜುನನು ಪ್ರೇಮಪಾಶದಲ್ಲಿ ಬಂಧಿತನಾಗಿರುವುದನ್ನು ಈ ಪದ್ಯದಲ್ಲಿ ಕಾಣಬಹುದು. ಅರ್ಜುನನ ಬಾಯಿ ಮತ್ತು ತುಟಿಗಳು ಅಲುಗಾಡುತ್ತಿತ್ತು (ಪಿಸುಗುಡುತ್ತಿತ್ತು, ಬಾಯಿ ತನ್ನಪಾಡಿಗೆ ಮಂತ್ರಪಠನೆ ಮಾಡುತ್ತಿತ್ತು), ಮನಸ್ಸು ಮಾತ್ರ ಸುಭದ್ರೆಯಲ್ಲಿ ನೆಲೆಸಿತ್ತು, ಬೆರಳಿನಲ್ಲಿದ್ದ ಜಪಮಾಲೆ ತನ್ನಷ್ಟಿಗೆ ತಾನೆ ವೇಗವಾಗಿ ಓಡುತ್ತಿದ್ದವು, ಕಣ್ಣುಗಳು ಮಾತ್ರ ಸುಭದ್ರೆಯನ್ನೇ ನೋಡುತ್ತಿದ್ದವು, ಕೈಯು ಶಿವನ ಪೂಜೆಯನ್ನು ಮಾಡುತ್ತಿದ್ದರೂ, ಮ ನಸನ್ನು ಸುಭದ್ರೆ ಹಿಡಿದ್ದಿದ್ದಳು, ಹೊರನೋಟಕ್ಕೆ ಸಮಾಧಿಯಲ್ಲಿದ್ದರು, ಒಳನೋಟವು ಸುಭದ್ರೆಯಲ್ಲಿತ್ತು.

ಅರ್ಥ:
ಮಿಡುಕು:ಅಲುಗಾಟ, ಚಲನೆ; ಬಾಯಿ: ತಿನ್ನಲು ಬಳಸುವ ಅಂಗ; ಚಿತ್ತ: ಮನಸ್ಸು; ತೊಡಕು: ಗೊಂದಲ; ಜಪಮಾಲೆ: ಹಾರ; ಬೆರಳು: ಅಂಗುಲಿ; ನಡೆವು: ನಡೆಯುವಿಕೆ; ಅಕ್ಷಿ: ಕಣ್ಣು; ಮುಕ್ಕುಳಿಸು: ಎಡವು; ಮಾನಿನಿ: ಹೆಣ್ಣು; ಮೃಡ:ಶಿವ; ಪೂಜೆ: ಆರಾಧನೆ; ಹಿಡಿ: ಬಂಧನ; ತೊಡವು:ತೊಡಿಗೆ, ಉಡುಗೆ; ನರನಾಥ: ರಾಜ;

ಪದವಿಂಗಡಣೆ:
ಮಿಡುಕುವುದು +ಬಾಯ್+ಚಿತ್ತವ್+ಅವಳಲಿ
ತೊಡಕಿಹುದು +ಜಪಮಾಲೆ +ಬೆರಳಲಿ
ನಡೆವುತಿಹುದ್+ಅಕ್ಷಿಗಳು +ಮುಕ್ಕುಳಿಸಿಹವು+ ಮಾನಿನಿಯ
ಮೃಡನ+ ಪೂಜೆಗೆ+ ಕೈ +ಸುಭದ್ರೆಯ
ಹಿಡಿಹಿನಲಿ+ ಮನ +ವರ+ ಸಮಾಧಿಯ
ತೊಡವು +ಹೊರಗ್+ಒಳಗ್+ಇಂದುಮುಖಿ+ ನರನಾಥ +ಕೇಳೆಂದ

ಅಚ್ಚರಿ:
(೧) ಮಿಡುಕು, ತೊಡಕು, ನಡೆವು, ಮುಕ್ಕುಳಿಸು, ಹಿಡಿ, ತೊಡವು – ಅರ್ಜುನನ ಸ್ಥಿತಿಯನ್ನು ವರ್ಣಿಸುವ ಪದಗಳು
(೨) ಚಿತ್ತ ಅವಳಲಿ, ಅಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ, ಸುಭದ್ರೆಯ ಹಿಡಿಹಿನಲಿ ಮನ, ಒಳಗ್ ಇಂದುಮುಖಿ – ಸುಭದ್ರೆ ಹೇಗೆ ಅರ್ಜುನನನ್ನು ಆವರಿಸಿದ್ದಳು ಎಂದು ವರ್ಣಿಸಿರುವುದು

ಪದ್ಯ ೩೭: ಭೀಮ ಬಕಾಸುರರ ಕಾಳಗದ ತೀವ್ರತೆ ಹೇಗಿತ್ತು?

ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳ ಬಲುಹಿನಲಿ
ಕೊಡಹಿದನು ಕಲಿಭೀಮನವನು
ಗ್ಗಡದ ಸತ್ವದೊಳುಂಡ ಕೂಳಿನ
ಕಡುಹ ತೋರೆಂದೊರಲಿ ತುಡುಕಿದನನಿಲನಂದನನ (ಆದಿ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಇಬ್ಬರ ಕಾಳಗದ ತೀವ್ರತೆ ಏರುತಿತ್ತು, ಇಬ್ಬರು ಒಬ್ಬರನೊಬ್ಬರು ಹಿಡಿದು ಎದೆಗೆ ಗುದ್ದಿ ಹಿಂದಕೆ ಸರೆದರು, ಹೆಮ್ಮರಗಳನ್ನು ಕಿತ್ತು ಅವು ಮುರಿಯುವವರೆಗು ತೋಳಶಕ್ತಿಯಿಂದ ಹೋಯ್ದಾಡಿದರು, ಭೀಮನು ರಕ್ಕಸನನ್ನು ಹಿಡಿದುಕೊಡವಿದನು, ಅವನು ತಪ್ಪಿಸಿಕೊಂಡು, ಉಂಡ ಕೂಳಿನ ಶಕ್ತಿಯನ್ನು ತೋರಿಸು, ಎನ್ನುತ್ತಾ ಭೀಮನ ಮೇಲೆ ನುಗ್ಗಿದನು.

ಅರ್ಥ:
ಹಿಡಿ: ಗ್ರಹಿಸು, ಕೈಕೊಳ್ಳು; ಉರ: ಎದೆ, ವಕ್ಷಸ್ಥಳ; ಹೊಡೆ: ಏಟು, ಪೆಟ್ಟು; ಹಿಂಗು:ಹಿಂದೆ ಸರಿ; ಉಲಿ:ಕೂಗು, ಧ್ವನಿ; ಮರ: ವೃಕ್ಷ; ಹೆಮ್ಮರ: ದೊಡ್ಡ ಮರ; ಉಡಿ:ಮುರಿ, ತುಂಡಾಗು; ಹೊಯ್ದಾಡು: ಗುದ್ದಾಡು; ತಿವಿ: ಚುಚ್ಚು; ತೋಳು: ಭುಜ; ಬಲು: ಶಕ್ತಿ; ಕೊಡಹು: ಒದರು, ಜಾಡಿಸು; ಕಲಿ: ಶೂರ; ಉಗ್ಗಡ: ಅತಿಶಯ, ಉತ್ಕಟತೆ; ಸತ್ವ: ಶಕ್ತಿ, ಬಲ; ಉಂಡ: ತಿಂದ; ಕೂಳು: ಊಟ; ಕಡುಹು: ಪರಾಕ್ರಮ ತೋರು, ಸಾಹಸಮಾಡು; ತೋರು: ಪ್ರದರ್ಶಿಸು; ಒರಲು:ಅರಚು, ಕೂಗಾಟ; ತುಡುಕು: ಹೋರಾಡು, ಸೆಣಸು; ಅನಿಲ: ವಾಯು; ನಂದನ: ಮಗ;

ಪದವಿಂಗಡನೆ:
ಹಿಡಿದರ್+ಒಬ್ಬರನ್+ಒಬ್ಬರ್+ಉರದಲಿ
ಹೊಡೆದು+ ಹಿಂಗಿದರ್+ಉಲಿದು+ ಹೆಮ್ಮರನ್
ಉಡಿಯೆ +ಹೊಯ್ದಾಡಿದರು+ ತಿವಿದರು+ ತೋಳ +ಬಲುಹಿನಲಿ
ಕೊಡಹಿದನು +ಕಲಿ+ಭೀಮನವನ್
ಉಗ್ಗಡದ+ ಸತ್ವದೊಳ್+ಉಂಡ+ ಕೂಳಿನ
ಕಡುಹ +ತೋರ್+ಎಂದ್+ಒರಲಿ+ ತುಡುಕಿದನ್+ಅನಿಲ+ನಂದನನ

ಅಚ್ಚರಿ:
(೧) ಹಿಡಿ, ಹೊಡೆ, ಕೊಡಹು, ಹಿಂಗು, ಕಡುಹ, ತುಡುಕು, ಉಗ್ಗಡ – ಕಾಳಗವನ್ನು ವಿವರಿಸುವ ಪದಗಳು
(೨) ಹಿಡಿ, ನುಡಿ – ಪ್ರಾಸ ಪದಗಳು, ೧,೩ ಸಾಲು

ಪದ್ಯ ೨೭: ಭೀಮನು ರಾಕ್ಷಸನ ಬಳಿ ಹೊರಡಲು ಹೇಗೆ ಸಿದ್ಧನಾದನು?

ಬೆರಳ ದರ್ಭೆಯ ಹರಿದು ಧೌತಾಂ
ಬರವನುಟ್ಟನು ಬಿಗಿದು ಕುಂತಿಯ
ಚರಣ ರಜವನು ಕೊಂಡು ಧರ್ಮಜನಂಘ್ರಿಗಭಿನಮಿಸಿ
ಹರುಷಮಿಗೆ ಹರಿತಂದು ಬಂಡಿಯ
ಶಿರದ ಹಲಗೆಯನಡರಿದನು ಬಲು
ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ (ಆದಿ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಬ್ರಾಹ್ಮಣ ವೇಷದಲ್ಲಿದ್ದ ಭೀಮನು ಈಗ ರಾಕ್ಷಸನ ಬಳಿ ಹೊರಡಲು ಸಿದ್ದನಾದನು. ತನ್ನ ಬೆರಳಲ್ಲಿದ್ದ ದರ್ಭೆಯನ್ನು ಕಿತ್ತೆಸೆದು, ಶುಭ್ರವಾದ ಬಟ್ಟೆಯನ್ನು ಬಿಗಿಯಾಗಿ ಉಟ್ಟನು, ಕುಂತಿ ಮತ್ತು ಧರ್ಮಜನಿಗೆ ನಮಸ್ಕರಿಸಿ, ಬೇಗನೆ ನಡೆದು ಬಂಡಿಯ ಹಲಗೆಯನ್ನು ಹತ್ತಿ, ಹುರಿಹಗ್ಗಗಳನ್ನೆಳೆದು ಎತ್ತುಗಳನ್ನು ಕಟ್ಟಿದ ಬಂಡಿಯನ್ನು ಮುನ್ನಡೆಸಿದನು.

ಅರ್ಥ:
ಬೆರಳು: ಅಂಗುಲಿ, ಬೆಟ್ಟು; ದರ್ಭೆ: ಹುಲ್ಲು; ಹರಿದು: ಕಿತ್ಥಾಕು; ಧೌತ: ಶುಭ್ರವಾಗಿರುವ; ಅಂಬರ: ಬಟ್ಟೆ; ಉಟ್ಟು: ತೊಡು; ಬಿಗಿದು: ಗಟ್ಟಿಯಾಗಿ ಕಟ್ಟು; ಚರಣ: ಪಾದ; ರಜ: ಧೂಳು; ಕೊಂಡು: ತೆಗೆದುಕೊ; ಅಂಘ್ರಿ: ಪಾದ; ಅಭಿನಮಿಸು: ನಮಸ್ಕರಿಸು; ಹರುಷ: ಸಂತೋಷ; ಹರಿ: ಓಡು, ಧಾವಿಸು; ತಂದು: ಕೊಂಡು; ಬಂಡಿ: ಗಾಡಿ; ಶಿರ: ತಲೆ; ಹಲಗೆ: ಮರದ ತುಂಡು; ಅಡರು: ಮೇಲಕ್ಕೆ ಎತ್ತು; ಬಲು: ದೊಡ್ಡ; ಹುರಿಯ: ಹೊಸೆದು ಮಾಡಿದ ಹಗ್ಗ/ನಾರು; ಹಗ್ಗ: ರಜ್ಜು; ಹಿಡಿ: ಗ್ರಹಿಸು, ಕೈಕೊಳ್ಳು; ಜಡಿ: ಗದರಿಸು, ಕೂಗು; ಹೂಡು: ಬಂಡಿಯನ್ನು ಎಳೆಯಲು ಎತ್ತು ಮೊದಲಾವುದನ್ನು ಹೊಂದಿಸಿ ಕಟ್ಟು; ಎತ್ತು: ಬಸವ, ವೃಷಭ;

ಪದವಿಂಗಡನೆ:
ಬೆರಳ +ದರ್ಭೆಯ +ಹರಿದು+ ಧೌತ+ಅಂ
ಬರವನ್+ಉಟ್ಟನು+ ಬಿಗಿದು+ ಕುಂತಿಯ
ಚರಣ+ ರಜವನು+ ಕೊಂಡು +ಧರ್ಮಜನ್+ಅಂಘ್ರಿಗ್+ಅಭಿನಮಿಸಿ
ಹರುಷಮಿಗೆ+ ಹರಿತಂದು+ ಬಂಡಿಯ
ಶಿರದ+ ಹಲಗೆಯನ್+ಅಡರಿದನು +ಬಲು
ಹುರಿಯ +ಹಗ್ಗವ+ ಹಿಡಿದು+ ಜಡಿದನು+ ಹೂಡಿದ್+ಎತ್ತುಗಳ

ಅಚ್ಚರಿ:
(೧) ಪಾದಗಳಿಗೆ ನಮಸ್ಕರಿಸಿದನು ಎಂದು ವರ್ಣಿಸಲು: ಕಾಲಿನ ಧೂಳನ್ನು ಕೊಂಡನು, ಕುಂತಿಯ ಚರಣ ರಜವನು ಕೊಂಡು;
(೨) ೧ ಸಾಲಿನ ಹರಿದು – ಕಿತ್ತು ಹಾಕು ಅರ್ಥ ಕೊಡುತ್ತದೆ, ೪ ಸಾಲಿನ ಹರಿತಂದು – ಬೇಗನೆ ಅರ್ಥ ಕೊಡುತ್ತದೆ
(೩) ಹ ಕಾರದ ಶಬ್ದಗಳ ಪ್ರಯೋಗ: ಹರಿದು, ಹರುಷ, ಹರಿತಂದು, ಹಲಗೆ, ಹುರಿಯ, ಹಗ್ಗ, ಹಿಡಿ, ಹೂಡಿ
(೪) ಹಿಡಿ, ಜಡಿ, ಹೂಡಿ – ಪ್ರಾಸ ಪದಗಳು – ೬ ಸಾಲು
(೫) ಚರಣ, ಅಂಘ್ರಿ – ಪಾದ ಅರ್ಥಕೊಡುವ ಸಮಾನಾರ್ಥಕ ಪದಗಳು