ಪದ್ಯ ೪೪: ಸಂಜಯನು ಯಾರನ್ನು ನೆನೆಯುತ್ತಾ ಹಿಂದಿರುಗಿದನು?

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ (ಗದಾ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಕೌರವನನ್ನು ಬೀಳ್ಕೊಂಡು, ಹಿಂದೆ ಯುದ್ಧಭೂಮಿಯಲ್ಲಿ ತನಗೊದಗಿದ್ದ ಅಪಾಯವನ್ನು ನೆನೆದು ಹೆಜ್ಜೆಹೆಜ್ಜೆಗೂ ನಡುಗುತ್ತಾ ಯುದ್ಧರಂಗದಲ್ಲಿ ಭೂತಗಳನ್ನು ನೋಡುತ್ತಾ ಏಕಾಂಗಿಯಾಗಿ ಗುರುಸ್ಮರಣೆ ಮಾಡುತ್ತಾ ಬಂದನು.

ಅರ್ಥ:
ಬೀಳ್ಕೊಂಡು: ತೆರಳು; ಮರಳು: ಹಿಂದಿರುಗು; ಹಿಂದಣ: ಹಿಂದೆ, ಭೂತ; ಪರಿಭವ: ಅನಾದರ, ತಿರಸ್ಕಾರ, ಸೋಲು; ನೆನೆದು: ಜ್ಞಾಪಿಸು; ಅಡಿಗಡಿ: ಹೆಜ್ಜೆ ಹೆಜ್ಜೆ; ಕಂಪಿಸು: ನಡುಗು; ಮನ: ಮನಸ್ಸು; ಧುರ: ಯುದ್ಧ, ಕಾಳಗ; ಮಧ್ಯ: ನಡುವೆ; ನಡೆ: ಚಲಿಸು; ಭೂತಾವಳಿ: ಭೂತ, ಪಿಶಾಚಿ; ಈಕ್ಷಿಸು: ನೋಡು; ಗುರು: ಆಚಾರ್ಯ; ನೆನೆ: ಜ್ಞಾಪಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಕುರುಪತಿಯ +ಬೀಳ್ಕೊಂಡು +ಸಂಜಯ
ಮರಳಿದನು +ತನಗಾದ +ಹಿಂದಣ
ಪರಿಭವವ +ನೆನೆದ್+ಅಡಿಗಡಿಗೆ +ಕಂಪಿಸುತ +ಮನದೊಳಗೆ
ಧುರದ +ಮಧ್ಯದೊಳ್+ಒಬ್ಬನೇ +ನಡೆ
ತರುತ+ ಭೂತಾವಳಿಯನ್+ಈಕ್ಷಿಸಿ
ಗುರುವ +ನೆನೆದನು +ಕೇಳು+ ಜನಮೇಜಯ +ಮಹೀಪಾಲ

ಅಚ್ಚರಿ:
(೧) ಪರಿಭವವ ನೆನೆದಡಿಗಡಿಗೆ, ಗುರುವ ನೆನೆದನು – ನೆನೆದ ಪದದ ಬಳಕೆ

ಪದ್ಯ ೩೨: ಶಲ್ಯನ ಬಾಣಗಳು ಧರ್ಮಜನನ್ನು ಹೇಗೆ ತಾಕಿದವು?

ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ (ಶಲ್ಯ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಲ್ಯನು ಮೊದಲು ಬಿಟ್ಟಬಾಣದ ತುದಿಯನ್ನು ಹಿಂದಿನ ಬಾಣಗಳು ಒದೆದು ಮುಂದಾದವು. ಮುಂದಾದ ಬಾಣಗಳನ್ನು ಹಿಂದಿನ ಬಾಣಗಳು ಚುಚ್ಚಿದವು. ಹಿಂದೆ ಬಿಟ್ಟ ಬಾಣಗಳನ್ನು ಅದರ ಹಿಂದಿನ ಬಾಣಗಳು ಮುಂಚಿದವು. ಹೀಗೆ ಶಲ್ಯನ ಬಾಣಗಳು ಧರ್ಮಜನನ್ನು ತಾಕಿದವು.

ಅರ್ಥ:
ಮುಂದಣ: ಮುಂಚೆ; ಮೊನೆ: ತುದಿ, ಕೊನೆ, ಹರಿತವಾದ; ಒದೆ: ನೂಕು; ಹಿಂದಣ: ಹಿಂದೆ; ಅಂಬು: ಬಾಣ; ಹಿಳುಕು: ಬಾಣದ ಗರಿ; ಹೊಕ್ಕು: ಸೇರು; ಮುಂಚೆ: ಮುಂದೆ; ಹಿಂದಣ: ಹಿಂಭಾಗ; ಮಿಗೆ: ಮತ್ತು, ಅಧಿಕವಾಗಿ; ಎಂಜಲಿಸು: ಮುಟ್ಟು; ಬಳಿ: ಹತ್ತಿಅ; ಸಂದು: ಸಹವಾಸ; ಉಳಿದ: ಮಿಕ್ಕ; ಕವಿ: ಆವರಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅವನಿಪ: ರಾಜ;

ಪದವಿಂಗಡಣೆ:
ಮುಂದಣ್+ಅಂಬಿನ +ಮೊನೆಯನ್+ಒದೆದವು
ಹಿಂದಣ್+ಅಂಬುಗಳ್+ಅವರ+ ಮೊನೆಗಳ
ಹಿಂದಣ್+ಅಂಬಿನ +ಹಿಳುಕು +ಹೊಕ್ಕವು +ಮುಂಚಿದ್+ಅಂಬುಗಳ
ಹಿಂದಣವು +ಹಿಂದಿಕ್ಕಿದವು +ಮಿಗೆ
ಹಿಂದಣ್+ಅಂಬುಗಳ್+ಎಂಜಲಿಸಿ +ಬಳಿ
ಸಂದ+ಉಳಿದ+ಅಂಬುಗಳ್+ಎನಲು +ಕವಿದೆಚ್ಚನ್+ಅವನಿಪನ

ಅಚ್ಚರಿ:
(೧) ಮುಂದಣ, ಹಿಂದಣ – ವಿರುದ್ಧ ಪದಗಳ ಬಳಕೆ
(೨) ಹಿಂದಣ – ೨-೫ ಸಾಲಿನ ಮೊದಲ ಪದ

ಪದ್ಯ ೬೧: ಕರ್ಣನು ಭೀಮನನ್ನು ಹೇಗೆ ಮೂದಲಿಸಿದನು?

ಬಿಲ್ಲ ಕೊಪ್ಪಿನಲಿರಿದು ಭೀಮನ
ಘಲ್ಲಿಸಿದನೆಲವೆಲವೊ ಮಾರುತಿ
ಯುಳ್ಳಿಗಡ್ಡದ ಹರಿದಲೆಯ ರಣಾಮೂಢ ಸಿಲುಕಿದೆಲಾ
ಎಲ್ಲಿ ನಿನ್ನಾಟೋಪ ಹಿಂದಣ
ಹೊಳ್ಳುನುಡಿ ಹಾರಿದವೆ ಕೌರವ
ರೆಲ್ಲರನು ಸವರಿದೆಯೆಲಾ ಸಂದೇಹವೇನೆಂದ (ದ್ರೋಣ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕರ್ಣನು ಭೀಮನನ್ನು ಬಿಲ್ಲಿನ ಕೊಪ್ಪಿನಿಂದಿರಿದು ಅಲುಗಾಡಿಸಿ, ಎಲವೊ ಎಲವೋ ಭೀಮ, ಗಂಟುಗಡ್ಡದ ಕೆದರಿದ ತಲೆಯ ರಣಮೂಢ ನನಗೆ ಸಿಕ್ಕಿದ್ದೀಯಲ್ಲವೇ? ನಿನ್ನ ಆಟೋಪ ಎಲ್ಲಿಗೆ ಹೋಯಿತು. ಹಿಂದಾಡಿದ ಜೊಳ್ಳು ಮಾತುಗಳು ಹಾರಿಹೋದವೇನೇ? ಕೌರವರೆಲ್ಲರನ್ನು ಕೊಂದೆಯಲ್ಲವೇ? ಅನುಮಾನವೇನು ಎಂದು ಮೂದಲಿಸಿದನು.

ಅರ್ಥ:
ಬಿಲ್ಲ: ಬಿಲ್ಲು, ಚಾಪ; ಕೊಪ್ಪು: ಬಿಲ್ಲಿನ ತುದಿ; ಇರಿ: ಚುಚ್ಚು; ಘಲ್ಲಿಸು: ಪೀಡಿಸು; ಮಾರುತಿ: ಭೀಮ; ಉಳ್ಳಗಡ್ಡ: ನೀರುಳ್ಳಿಯ ಬೇರಿನಂತಿಹ ಗಡ್ಡ; ಹರಿ: ಕೆದರಿದ; ತಲೆ: ಶಿರ; ರಣ: ಯುದ್ಧ; ಮೂಢ: ತಿಳಿವಳಿಕೆಯಿಲ್ಲದ; ಸಿಲುಕು: ಬಂಧನಕ್ಕೊಳಗಾಗು; ಆಟೋಪ: ಆಡಂಬರ; ಹಿಂದಣ: ಹಿಂದೆ; ಹೊಳ್ಳು: ಹುರುಳಿಲ್ಲದುದು; ನುಡಿ: ಮಾತು; ಹಾರು: ಲಂಘಿಸು; ಸವರು: ನಾಶ; ಸಂದೇಹ: ಸಂಶಯ;

ಪದವಿಂಗಡಣೆ:
ಬಿಲ್ಲ +ಕೊಪ್ಪಿನಲ್+ಇರಿದು +ಭೀಮನ
ಘಲ್ಲಿಸಿದನ್+ಎಲವ್+ಎಲವೊ +ಮಾರುತಿ
ಯುಳ್ಳಿಗಡ್ಡದ +ಹರಿ+ತಲೆಯ +ರಣಮೂಢ+ ಸಿಲುಕಿದೆಲಾ
ಎಲ್ಲಿ +ನಿನ್ನಾಟೋಪ +ಹಿಂದಣ
ಹೊಳ್ಳುನುಡಿ +ಹಾರಿದವೆ +ಕೌರವ
ರೆಲ್ಲರನು +ಸವರಿದೆಯೆಲಾ +ಸಂದೇಹವೇನೆಂದ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಎಲವೊ ಮಾರುತಿ ಯುಳ್ಳಿಗಡ್ಡದ ಹರಿದಲೆಯ ರಣಾಮೂಢ ಸಿಲುಕಿದೆಲಾ

ಪದ್ಯ ೩೮: ದುರ್ಯೋಧನನು ದುರ್ಜಯನಿಗೆ ಏನು ಹೇಳಿದ?

ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ (ದ್ರೋಣ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇದನ್ನು ನೋಡಿದ ದುರ್ಯೋಧನನ ತಮ್ಮನಾದ ದುರ್ಜಯನನ್ನು ಕರೆದು, ಬೇಗ ತೇರನ್ನು ತಂದು ಕರ್ಣನಿಗೆ ಕೊಡ ಹೇಳು. ಕುಶಲನೂ, ಕೈಚಳಕವಿರುವವನೂ ಆದ ಸಾರಥಿಯನ್ನು ಬರಹೇಳು. ಕರ್ಣ ಸೋಲುವವನಲ್ಲ, ಹಿಮ್ದಿದ್ದ ಸಾರಥಿಯೆಂದ ಅವನಿಗೆ ಈ ಗತಿಯಾಯಿತು. ವೀರನಾದ ಕರ್ಣನಲ್ಲಿ ಶೌರ್ಯ ಸಮುದ್ರನಾದ ಕರ್ಣನೆಲ್ಲಿ ಎಂದು ಆಜ್ಞೆ ಮಾಡಿದನು.

ಅರ್ಥ:
ತೇರು: ಬಂಡಿ; ಚಾಚು: ಹರಡು; ಸಾರಥಿ: ಸೂತ; ಬರಹೇಳು: ಆಗಮಿಸು; ಹಿಂದಣ: ಹಿಂಬದಿ; ದೆಸೆ: ದಿಕ್ಕು; ಬಂದು: ಆಗಮಿಸು; ಸೋಲು: ಪರಾಭವ; ವೀರ: ಶೂರ; ಶೌರ್ಯ: ಪರಾಕ್ರಮ; ಪಾರಾವಾರ: ಸಮುದ್ರ, ಕಡಲು; ಧಾರುಣೀಪತಿ: ರಾಜ; ಬೆಸಸು: ಕಾರ್ಯ; ಅನುಜ: ತಮ್ಮ;

ಪದವಿಂಗಡಣೆ:
ತೇರ +ಚಾಚಲಿ +ಬೇಗ +ಬಲುಗೈ
ಸಾರಥಿಯ +ಬರಹೇಳು +ಹಿಂದಣ
ಸಾರಥಿಯ +ದೆಸೆಯಿಂದ +ಬಂದುದು +ಕರ್ಣ +ಸೋಲುವನೆ
ವೀರನಾವೆಡೆ+ ಶೌರ್ಯ +ಪಾರಾ
ವಾರನ್+ಆವೆಡೆ+ಎನುತ +ಕೌರವ
ಧಾರುಣೀಪತಿ +ಬೆಸಸಿದನು +ತನ್ನನುಜ +ದುರ್ಜಯಗೆ

ಅಚ್ಚರಿ:
(೧) ಕರ್ಣನ ಶೌರ್ಯವನ್ನು ವರ್ಣಿಸುವ ಪರಿ – ವೀರನಾವೆಡೆ ಶೌರ್ಯ ಪಾರಾವಾರನಾವೆಡೆಯೆನುತ

ಪದ್ಯ ೪೬: ಯಾರನ್ನು ನೋಡಿ ಹಿಂದನದೆಲ್ಲ ಮರೆತುಬಿಡು ಎಂದು ಅಶ್ವತ್ಥಾಮ ಹೇಳಿದನು?

ಆಡಲೇಕಿದನಿನ್ನು ಹಿಂದಣ
ಕೇಡನೆಣಿಸಿದಡೇನು ಫಲ ತಾ
ಗೂಡಿ ಹಲಬರು ಜೀವಪುರುಷರು ಹೆಂಗಳಾದೆವಲೆ
ನೋಡದಿರು ಹಿಂದಾದ ಭಂಗವ
ನಾಡದಿರು ಬಹುಬಂಧುವರ್ಗದ
ಕೇಡದೆಲ್ಲವನೊಬ್ಬ ಕರ್ಣನ ನೋಡಿ ಮರೆಯೆಂದ (ಕರ್ಣ ಪರ್ವ, ೨೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ದುರ್ಯೋಧನನ ನೋವಿನ ಮಾತನ್ನು ಕೇಳಿದ ಅಶ್ವತ್ಥಾಮನು, ದುರ್ಯೋಧನ ಅದನ್ನೇಕೆ ಆಡಬೇಕು? ಹಿಂದಾದ ಕೇಡನ್ನು ಲೆಕ್ಕ ಹಾಕಿದರೆ ಏನು ಪ್ರಯೋಜನ? ನಾನೂ ಸೇರಿ ಹಲವು ಪರಾಕ್ರಮಿಗಳು ಹೆಂಗಳಾದೆವಲ್ಲಾ! ಹಿಂದಾದ ಭಂಗವನ್ನು ಮಾತನಾಡಬೇಡ, ಮರೆತುಬಿಡು. ಸತ್ತುಹೋದ ಸಮಸ್ತ ಬಂಧುವರ್ಗವನ್ನು ಒಬ್ಬ ಕರ್ಣನನ್ನು ನೋಡಿ ಮರೆತುಬಿಡು ಎಂದು ಅಶ್ವತ್ಥಾಮನು ಹೇಳಿದನು.

ಅರ್ಥ:
ಆಡಲೇಕೆ: ಮಾತಾಡಲೇಕೆ; ಹಿಂದಣ: ಹಿಂದೆ ನಡೆದ; ಕೇಡ: ಕೆಟ್ಟದ್ದು; ಎಣಿಸು: ಲೆಕ್ಕ ಹಾಕು; ಫಲ: ಪ್ರಯೋಜನ; ತಾ: ನನ್ನನ್ನು; ಕೂಡಿ:ಜೊತೆ; ಹಲಬರು: ಮಿಕ್ಕ, ಹಲವಾರು; ಜೀವಪುರುಷ: ಪರಾಕ್ರಮಿಗಳು; ಹೆಂಗಳು: ಹೆಂಗಸರು; ನೋಡು: ವೀಕ್ಷಿಸು; ಭಂಗ: ಕೇಡು; ಬಹು: ಬಹಳ; ಬಂಧುವರ್ಗ: ಸಂಬಂಧಿಕರ; ಮರೆ: ನೆನಪಿನಿಂದ ದೂರ ಮಾಡು;

ಪದವಿಂಗಡಣೆ:
ಆಡಲೇಕ್+ಇದನ್+ಇನ್ನು +ಹಿಂದಣ
ಕೇಡನ್+ಎಣಿಸಿದಡ್+ಏನು +ಫಲ+ ತಾ
ಗೂಡಿ+ ಹಲಬರು+ ಜೀವಪುರುಷರು+ ಹೆಂಗಳಾದೆವಲೆ
ನೋಡದಿರು+ ಹಿಂದಾದ+ ಭಂಗವನ್
ಆಡದಿರು +ಬಹು+ಬಂಧು+ವರ್ಗದ
ಕೇಡದೆಲ್ಲವನ್+ಒಬ್ಬ +ಕರ್ಣನ +ನೋಡಿ +ಮರೆಯೆಂದ

ಅಚ್ಚರಿ:
(೧) ನಮ್ಮ ಪರಾಕ್ರಮ ಪ್ರಯೋಜನವಾಗಲಿಲ್ಲ ಎಂದು ಹೇಳುವ ಬಗೆ – ತಾ ಗೂಡಿ ಹಲಬರು ಜೀವಪುರುಷರು ಹೆಂಗಳಾದೆವಲೆ