ಪದ್ಯ ೨: ಭೀಷ್ಮನ ನೆತ್ತಿಗೆ ಯಾರು ಬಾಣವನ್ನು ಹೂಡಿದರು?

ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ಕೋದವಂಬುಗಳರಿಯ ನೆತ್ತಿಯಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ (ಭೀಷ್ಮ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನು ಗರ್ಜಿಸಿ ಹೆದೆಯನ್ನು ಒದರಿಸಿ ಬಾಣಗಳನ್ನು ಬಿಡಲು, ಅವು ಬಿಲ್ಲನ್ನೊದೆದು ಹೋಗಿ ಭೀಷ್ಮನ ನೆತ್ತಿಯಲ್ಲಿ ನೆಟ್ಟಿದವು. ಶಿಖಂಡಿಯು ಭೀಷ್ಮನೆದುರಿನಲ್ಲೇ ನಿಂತು, ಕೂಗಿ, ಬಾಣಗಳನ್ನು ಭೀಷ್ಮನ ಮೈಯಲ್ಲಿ ಹೊಗಿಸಿದನು. ಭೀಷ್ಮನ ಮನಸ್ಸಿನಲ್ಲಿ ವೈರಾಗ್ಯವುದಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಾಣ: ಸರಳು; ಕೆದರು: ಹರಡು; ಥಟ್ಟು: ಪಕ್ಕ, ಕಡೆ, ಗುಂಪು; ಚಾಪ: ಬಿಲ್ಲು; ಒದೆ: ತುಳಿ, ಮೆಟ್ಟು; ಹಾಯ್ದು: ಹೊಡೆ; ಕೋದು: ಸೇರಿಸು; ಅಂಬು: ಬಾಣ; ಅರಿ: ವೈರಿ; ನೆತ್ತಿ: ತಲೆಯ ಮಧ್ಯಭಾಗ, ನಡುದಲೆ; ಉಲಿ: ಧ್ವನಿ; ಶಿಖಂಡಿ: ನಪುಂಸಕ; ಶರ: ಬಾಣ; ಸಂಘ: ಜೊತೆ; ಹೂಳು: ಹೂತು ಹಾಕು, ಮುಚ್ಚು; ಹೃದಯ: ಎದೆ; ವೈರಾಗ್ಯ: ಪಂಚದ ವಿಷಯಗಳಲ್ಲಿ ಅನಾಸಕ್ತಿ, ವಿರಕ್ತಿ; ಮನೆ: ಆಲಯ; ಕಟ್ಟು: ನಿರ್ಮಿಸು; ನಿಮಿಷ: ಕ್ಷಣಮಾತ್ರ, ಕಾಲದ ಪ್ರಮಾಣ;

ಪದವಿಂಗಡಣೆ:
ಒದರಿ +ಜೇವಡೆಗ್+ಐದು +ಬಾಣವ
ಕೆದರಿದನು +ಥಟ್ಟೈಸಿ +ಚಾಪವನ್
ಒದೆದು +ಹಾಯ್ದವು +ಕೋದವ್+ಅಂಬುಗಳ್+ಅರಿಯ+ ನೆತ್ತಿಯಲಿ
ಇದಿರೊಳ್+ಉಲಿದು +ಶಿಖಂಡಿ+ ಶರ+ ಸಂ
ಘದಲಿ +ಹೂಳಿದನಾಗ+ ಭೀಷ್ಮನ
ಹೃದಯದಲಿ +ವೈರಾಗ್ಯ +ಮನೆಗಟ್ಟಿತ್ತು +ನಿಮಿಷದಲಿ

ಅಚ್ಚರಿ:
(೧) ಬಾಣ, ಶರ – ಸಮಾನಾರ್ಥಕ ಪದ

ಪದ್ಯ ೩೯: ಅರ್ಜುನನ ಬಾಣಗಳು ಭೀಷ್ಮನನ್ನು ಹೇಗೆ ಆವರಿಸಿದವು?

ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಖಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ (ಭೀಷ್ಮ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹಾವುಗಳು ಹುತ್ತವನ್ನು ಹೊಗುವಂತೆ ಅರ್ಜುನನ ಬಾಣಗಳು ಭೀಷ್ಮನನ್ನು ಮುಸುಕಿದವು. ಮೈಯೊಳಗೆ ನೆಟ್ಟು ಹೊರಬಂದವು. ಪಕ್ಕೆಯೆಲುಬುಗಳನ್ನು ಮುರಿದವು. ಮೈಕೈಗಳಿಗೆ ಮೆತ್ತಿಕೊಂಡವು. ವಜ್ರಾಂಗಿಯಾದ ಭೀಷ್ಮನ ಅತ್ತಲೂ ಇತ್ತಲೂ ಎಲ್ಲಾ ಕಡೆಗೂ ಬಾಣಗಳು ನಾಟಿದವು.

ಅರ್ಥ:
ಮುತ್ತು: ಆವರಿಸು; ನರ: ಅರ್ಜುನ; ಅಂಬು: ಬಾಣ; ಫಣಿ: ಹಾವು; ಹುತ್ತ: ಹಾವುಗಳಿರುವ ಸ್ಥಳ; ಹೊಗು: ಸೇರು; ಖಂಡ: ತುಂಡು, ಚೂರು; ಕುತ್ತು: ತೊಂದರೆ, ಆಪತ್ತು; ಹಾಯಿ: ಮೇಲೆಬೀಳು; ಕೆತ್ತು: ಅದಿರು, ನಡುಗು; ಹರಿ: ಚಲಿಸು; ಕಿಬ್ಬರಿ:ಪಕ್ಕೆಯ ಕೆಳ ಭಾಗ; ಎಲುವು: ಮೂಳೆ; ಮೆತ್ತು: ಬಳಿ, ಲೇಪಿಸು; ಕೈ: ಹಸ್ತ; ಮೈ: ತನು; ತಲೆ: ಶಿರ; ಒತ್ತು: ಮುತ್ತು; ವಜ್ರಾಂಗಿ: ಗಟ್ಟಿಯಾದ ಕವಚ; ಭಟ: ಸೈನಿಕ; ಅತ್ತಲಿತ್ತ: ಅಲ್ಲಿಂದಿಲ್ಲಿಗೆ; ಬಳಸು: ಹರಡು; ನದೀಸುತ: ಭೀಷ್ಮ;

ಪದವಿಂಗಡಣೆ:
ಮುತ್ತಿದವು +ನರನ್+ಅಂಬು +ಫಣಿಗಳು
ಹುತ್ತ +ಹೊಗುವಂದದಲಿ +ಖಂಡವ
ಕುತ್ತಿ +ಹಾಯ್ದವು +ಕೆತ್ತಿ +ಹರಿದವು +ಕಿಬ್ಬರಿಗಳ್+ಎಲುವ
ಮೆತ್ತಿದವು +ಕೈ+ಮೈಗಳಲಿ +ತಲೆ
ಒತ್ತಿದವು+ ವಜ್ರಾಂಗಿಯಲಿ +ಭಟನ್
ಅತ್ತಲಿತ್ತಲ್+ ಎನಲ್ಕೆ +ಬಳಸಿದವಾ +ನದೀಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುತ್ತಿದವು ನರನಂಬು ಫಣಿಗಳು ಹುತ್ತ ಹೊಗುವಂದದಲಿ

ಪದ್ಯ ೨೫: ಬೇಟೆ ನಾಯಿಗಳು ಸಿಂಹದ ಮೇಲೆ ಹೇಗೆ ಹೋರಾಡಿದವು?

ಕಳಚಿ ಹಾಸವನಬ್ಬರಿಸಿ ಕು
ಪ್ಪಳಿಸಿ ಕಂಠೀರವನ ಮೋರೆಗೆ
ನಿಲುಕಿ ಕವಿದವು ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ
ಬಳಸಿದವು ಮೇಲ್ವಾಯ್ದುನಿಂದು
ಚ್ಚಳಿಸಿದವು ಕುಸುಬಿದವು ಕುನ್ನಿಗಳಖಿಳ ಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಹಗ್ಗವನ್ನು ಕೈಬಿಡಲು, ಜೋರಾಗಿ ಬೊಗಳುತ್ತಾ ಬೇಟೆನಾಯಿಗಳು ಸಿಂಹಗಳ ಮುಖವನ್ನು ಆಕ್ರಮಿಸಿದವು. ಕೆಳಬಿದ್ದು ಮತ್ತೆ ಮೇಲಕ್ಕೆ ಹಾಯ್ದು, ಹೆಣಗಿ ಹಿಡಿದವು. ಮೃಗಗಳನ್ನು ಸೆಳೆದು ನಡುವನ್ನು ಹಿಡಿದು ಎಡಬಲಕ್ಕೆ ಎಳೆದಾಡಿದವು. ಮೇಲೆ ನೆಗೆದು ಮೃಗಗಳನ್ನು ಸೀಳಿದವು ಕುಕ್ಕಿದವು.

ಅರ್ಥ:
ಕಳಚು: ಬೇರ್ಪಡಿಸು; ಹಾಸ: ಹಗ್ಗ, ಪಾಶ; ಅಬ್ಬರಿಸು: ಗರ್ಜಿಸು; ಕುಪ್ಪಳಿಸು: ನೆಗೆ; ಕಂಠೀರವ: ಸಿಂಹ; ಮೋರೆ: ಮುಖ; ನಿಲುಕು: ಹತ್ತಿರ ಹೋಗು, ಚಾಚುವಿಕೆ; ಕವಿ: ಆವರಿಸು; ಬಿದ್ದು: ಬೀಳು; ಉಡಿ: ಸೊಂಟ; ಹಾಯ್ದು: ಹೊಡೆ; ಹಣುಗು: ಹೋರಾಡು; ತುಡುಕು: ಹೋರಾಡು, ಸೆಣಸು; ಸೆಳೆ: ಜಗ್ಗು, ಎಳೆ; ಉಕ್ಕುಳಿಸು: ತಪ್ಪಿಸಿಕೋ, ಕೈಮೀರು; ಎಡಬಲ: ಎರಡೂ ಕಡೆ; ಬಳಸು: ಆವರಿಸು; ಮೇಲ್ವಾಯ್ದು: ಮೇಲೆ ಬೀಳು; ನಿಂದು: ನಿಲ್ಲು; ಉಚ್ಚಳಿಸು: ಮೇಲೆ ಹಾರು;

ಪದವಿಂಗಡಣೆ:
ಕಳಚಿ +ಹಾಸವನ್+ಅಬ್ಬರಿಸಿ+ ಕು
ಪ್ಪಳಿಸಿ +ಕಂಠೀರವನ+ ಮೋರೆಗೆ
ನಿಲುಕಿ +ಕವಿದವು +ಬಿದ್ದು +ಹಾಯ್ದವು +ಹಣುಗಿ +ತುಡುಕಿದವು
ಸೆಳೆದವ್+ಉಡಿದ್+ಉಕ್ಕುಳಿಸಿ +ಎಡಬಲ
ಬಳಸಿದವು +ಮೇಲ್ವಾಯ್ದು+ನಿಂದ್
ಉಚ್ಚಳಿಸಿದವು +ಕುಸುಬಿದವು +ಕುನ್ನಿಗಳ್+ಅಖಿಳ +ಮೃಗಕುಲವ

ಅಚ್ಚರಿ:
(೧) ಹೋರಾಟದ ಚಿತ್ರಣ – ಬಿದ್ದು ಹಾಯ್ದವು ಹಣುಗಿ ತುಡುಕಿದವು
ಸೆಳೆದವುಡಿದುಕ್ಕುಳಿಸಿ ಎಡಬಲ ಬಳಸಿದವು ಮೇಲ್ವಾಯ್ದುನಿಂದುಚ್ಚಳಿಸಿದವು ಕುಸುಬಿದವು

ಪದ್ಯ ೩೬: ಭೀಮನ ಹೊಡೆತಕ್ಕೆ ಯಾರು ಯಾರ ಹಿಂದೆ ಅವಿತುಕೊಂಡರು?

ಕರಿಘಟೆಯ ಮರೆವೊಕ್ಕು ನಿಂದರು
ನರರು ತೇಜಿಗಳೋಡಿ ತೇರಿನ
ಮರೆಯ ಸಾರ್ದವು ತೇರು ಹಾಯ್ದವು ದೊರೆಯ ಹಿನ್ನೆಲೆಗೆ
ಕರಿಮುರಿದು ಕಾಲಾಳು ಕಾಲಾ
ಳ್ತೆರಳಿ ದೊರೆಗಳ ಹಿಂದೆ ದೊರೆ ಪೈ
ಸರಿಸಿತಲ್ಲಿಯದಲ್ಲಿ ಭೀಮನ ಹೊಯ್ಲ ಹೋರಟೆಗೆ (ಕರ್ಣ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕಾಲಾಳುಗಳು ಭೀಮನ ಭರವನ್ನು ಸಹಿಸಲಾಗದೆ, ಆನೆಗಳ ಮೊರೆಗೆ ಹೋಗಿ ಅವಿತುಕೊಂಡರು, ಕುದುರೆಗಳು ತೇರಿನ ಮರೆಗೆ ಹೋಗಿ ನಿಂತವು, ರಥಗಳು ದೊರೆಗಳ ಹಿಂದಕ್ಕೆ ಹೋದವು, ಆನೆಗಳುರುಳಿದವು, ಕಾಲಾಳುಗಳು, ರಥಗಳು, ನಾಯಕರ ಹಿಂದಕ್ಕೆ ಹೋಗಲು, ದೊರೆಗಳು ಓಡಿ ಹೋಗಿ ಬದುಕಿಕೊಂಡರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ಮರೆ: ಹಿಂಭಾಗ, ಹಿಂಬದಿ, ಹೊದಿಕೆ; ನಿಂದರು: ನಿಲ್ಲು; ನರ: ಮನುಷ್ಯ; ತೇಜಿ: ಕುದುರೆ; ಓಡು: ವೇಗವಾಗಿ ಚಲಿಸು, ಪಲಾಯನಮಾಡು; ತೇರು: ರಥ; ಸಾರ್ದು: ಹತ್ತಿರಕ್ಕೆ ಬಂದು; ಹಾಯ್: ನೆಗೆ, ಹಾರು; ದೊರೆ: ರಾಜ; ಹಿನ್ನೆಲೆ: ಹಿಂಭಾಗ; ಕರಿ: ಆನೆ; ಮುರಿ: ಸೀಳು, ಕೆಳಕ್ಕೆ ಬೀಳು; ಕಾಲಾಳು: ಸೈನ್ಯ; ತೆರಳು: ಹೋಗು, ನಡೆ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಹೊಯ್ಲು: ಹೊಡೆತ; ಹೋರಟೆ: ಕಾಳಗ, ಯುದ್ಧ;

ಪದವಿಂಗಡಣೆ:
ಕರಿಘಟೆಯ+ ಮರೆವೊಕ್ಕು +ನಿಂದರು
ನರರು +ತೇಜಿಗಳ್+ಓಡಿ +ತೇರಿನ
ಮರೆಯ +ಸಾರ್ದವು +ತೇರು +ಹಾಯ್ದವು +ದೊರೆಯ +ಹಿನ್ನೆಲೆಗೆ
ಕರಿಮುರಿದು+ ಕಾಲಾಳು +ಕಾಲಾಳ್
ತೆರಳಿ +ದೊರೆಗಳ+ ಹಿಂದೆ +ದೊರೆ +ಪೈ
ಸರಿಸಿತ್+ಅಲ್ಲಿಯದಲ್ಲಿ +ಭೀಮನ +ಹೊಯ್ಲ +ಹೋರಟೆಗೆ

ಅಚ್ಚರಿ:
(೧) ಭೀಮನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಇನ್ನೊಬ್ಬರ ಆಶ್ರಯ ಪಡೆದ ರೀತಿ
(೨) ಕ ಕಾರದ ತ್ರಿವಳಿ ಪದ – ಕರಿಮುರಿದು ಕಾಲಾಳು ಕಾಲಾಳ್ತೆರಳಿ