ಪದ್ಯ ೧೭: ಅರ್ಜುನನು ಉತ್ತರನಿಗೆ ಹೇಗೆ ಬಯ್ದನು?

ಇಟ್ಟಣಿಸಿ ನರ ನೂರು ಹೆಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಬಾಹುಜ ಬೀಜವೋ ಮೇಣು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನಾನ್ವಯವ (ವಿರಾಟ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಉತ್ತರನು ನೂರು ಹೆಜ್ಜೆ ಹೋಗುವುದರೊಳಗಾಗಿ ಉತ್ತರನ ಸಮಕ್ಕೆ ರಥವನ್ನು ತಂದ ಅರ್ಜುನನು, ಎಲೈ ಉತ್ತರ ಇದೇನು ಮಾಡಿದೆ, ನೀನು ಜಾರನಿಗೆ ಹುಟ್ಟಿದವನೋ ಅಥವ ಕ್ಷತ್ರಿಯನೋ, ಹೆಂಗಸರೆದುರಿನಲ್ಲಿ ನಿನ್ನ ಪರಾಕ್ರಮವನ್ನು ಕೊಚ್ಚಿಕೊಂಡೆ, ಇಲ್ಲಿ ವೈರಿಗಳೆದುರಿನಲ್ಲಿ ಹೊಟ್ಟು ಹಾರುವಂತೆ ಓಡಿ ಹೋಗುತ್ತಿರುವೆ, ದುರಾತ್ಮ ನೀನು ಹುಟ್ಟಿ ವಿರಾಟವಂಶವನ್ನು ನಾಶಮಾಡಿದೆ ಎಂದು ಜರಿದನು.

ಅರ್ಥ:
ಇಟ್ಟಣ:ಆಘಾತ, ಮನೋಹರ; ನರ: ಅರ್ಜುನ; ನೂರು: ಶತ; ಹೆಜ್ಜೆ: ಪಾದ; ಹಿಡಿ: ಬಂಧಿಸು; ಹುಟ್ಟು: ಜನನ; ಹಾದರ: ವ್ಯಭಿಚಾರ; ಬಾಹುಜ: ಕ್ಷತ್ರಿಯ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಮೇಣು: ಅಥವ; ದಿಟ್ಟ: ಧೈರ್ಯ; ಮಿಗೆ: ಮತ್ತು, ಅಧಿಕ; ಹೆಂಗಳು: ಸ್ತ್ರೀ; ಇದಿರು: ಎದುರು; ಹೊಟ್ಟುಗುಟ್ಟು: ಹೊಗಳು; ಹಗೆ: ವೈರಿ; ಬಿಟ್ಟು: ತೊರೆ; ದುರಾತ್ಮ: ದುಷ್ಟ; ಮುರಿ: ಸೀಳು; ಅನ್ವಯ: ವಂಶ;

ಪದವಿಂಗಡಣೆ:
ಇಟ್ಟಣಿಸಿ +ನರ +ನೂರು +ಹೆಜ್ಜೆಯೊಳ್
ಅಟ್ಟಿ +ಹಿಡಿದನ್+ಇದೇನ+ ಮಾಡಿದೆ
ಹುಟ್ಟಿದೆಯೊ +ಹಾದರಕೆ+ ಬಾಹುಜ +ಬೀಜವೋ +ಮೇಣು
ದಿಟ್ಟತನ +ಮಿಗೆ +ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ +ಹಗೆಗಳಿದಿರಲಿ
ಬಿಟ್ಟುಕೊಂಡೆ+ ದುರಾತ್ಮ+ ಮುರಿದೆ+ ವಿರಾಟನ್+ಅನ್ವಯವ

ಅಚ್ಚರಿ:
(೧) ಹ, ಬ ಕಾರದ ಜೋಡಿ ಪದ – ಹುಟ್ಟಿದೆಯೊ ಹಾದರಕೆ ಬಾಹುಜ ಬೀಜವೋ

ಪದ್ಯ ೧೨: ಧರ್ಮಜನು ವ್ಯಾಸಮಹರ್ಷಿಗಳಿಂದ ಯಾವ ಆಶೀರ್ವಾದವನ್ನು ಬಯಸಿದನು?

ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲಳಿವಿವರಾಗು ಹೋಗಿನ
ಗೊಡವೆಯಿಲ್ಲೆನಗೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ (ಅರಣ್ಯ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ಮುನಿವರ್ಯರೇ, ನನ್ನ ದೇಹವು ಬಿದ್ದು ಹೋಗಲಿ, ನನ್ನ ತಮ್ಮಂದಿರು ನನ್ನನ್ನು ಕಾಡಿನಲ್ಲೇ ಬಿಟ್ಟು ಹೋಗಲಿ, ನನ್ನ ಹೆಂಡತಿಯು ನನ್ನ ಮೇಲೆ ಕೋಪಗೊಳ್ಳಲಿ, ನನಗೆ ಬರಬೇಕಾದ ಭೂಮಿಯು ಕೈಜಾರಿ ಕೌರವನಿಗೇ ಸೇರಲಿ, ಇವೆಲ್ಲವೂ ನಶ್ವರ ಜೀವನದಲ್ಲಿ ಬಂದು ಹೋಗುವಂತಹುದು, ನನಗೆ ಇವುಗಳ ಚಿಂತೆ ಇಲ್ಲ ಆದರೆ ನನ್ನ ಸತ್ಯವಾಕ್ಯಕ್ಕೆ ಅಪಮಾರ್ಗ ಬಾರದಂತೆ ನನ್ನನ್ನು ಆಶೀರ್ವದಿಸಿ ಎಂದು ಬೇಡಿದನು.

ಅರ್ಥ:
ಒಡಲು: ದೇಹ; ಬೀಳು: ಕುಸಿ, ಬಿದ್ದುಹೋಗು; ಮೇಣು: ಅಥವಾ; ಅಡವಿ: ಕಾದು; ಹಾಯಿಕ್ಕು: ಇಡು, ಇರಿಸು; ಹೋಗು: ತೆರಳು; ಮಡದಿ: ಹೆಣ್ಣು; ಮುನಿ: ಕೋಪಗೊಳ್ಳು; ಬಸಿದು: ಧಾರೆಯಾಗಿ ಬೀಳು, ಸುರಿ; ಬೀಳು: ಕೈತಪ್ಪು; ಧರಣಿ: ಭೂಮಿ; ಎಡೆ: ಹೆಚ್ಚಾಗಿ, ಸಂದರ್ಭ; ಅಳಿ: ನಾಶ; ಆಗುಹೋಗು: ಪರಿಣಾಮ; ಗೊಡವೆ: ಗೋಜು; ಸತ್ಯ: ನಿಜ; ನುಡಿ: ಮಾತು; ಹಾದರ: ಅಪಾಮಾರ್ಗ, ವ್ಯಭಿಚಾರ; ಕರುಣಿಸು: ಆಶೀರ್ವದಿಸು;

ಪದವಿಂಗಡಣೆ:
ಒಡಲು +ಬೀಳಲಿ +ಮೇಣು +ತಮ್ಮದಿರ್
ಅಡವಿಯಲಿ +ಹಾಯಿಕ್ಕಿ +ಹೋಗಲಿ
ಮಡದಿ +ಮುನಿಯಲಿ +ಬಸಿದು +ಬೀಳಲಿ +ಧರಣಿ +ಕುರುಪತಿಗೆ
ಎಡೆಯಲ್+ಅಳಿವ್+ಇವರ್+ಆಗು +ಹೋಗಿನ
ಗೊಡವೆಯಿಲ್+ಎನಗ್+ಎನ್ನ +ಸತ್ಯದ
ನುಡಿಗೆ+ ಹಾದರವಿಲ್ಲದಂತಿರೆ+ ಕರುಣಿಸುವುದೆಂದ

ಅಚ್ಚರಿ:
(೧) ಧರ್ಮಜನ ಸತ್ಯದ ಪರ ವ್ರತ – ಎನ್ನ ಸತ್ಯದ ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ

ಪದ್ಯ ೧೯: ಕೃಷ್ಣನ ಯಾವ ಪರಾಕ್ರಮವನ್ನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಭೀಷ್ಮ ನೀನು ಈ ಯಾದವನ ಸಮಸ್ತ ಪರಾಕ್ರಮದ ಮೋಸದ ಕೃತ್ಯಗಳನ್ನೆಲ್ಲಾ ವಿವರವಾಗಿ ವೈಭವಪೂರ್ಣವಾಗಿ ಹೇಳಿದ, ಆದರೆ ಗೋವಳರ ಹೆಂಡಿರ ಜೊತೆಗೆ ಇವನು ಮಾಡಿದ ಹಾದರವನ್ನು ಏಕೆ ವಿವರಿಸಲಿಲ್ಲ, ಅಯ್ಯೋ ನೀನಗೇಕೆ ನಾಚಿಕೆ ಎಂದು ಶಿಶುಪಾಲನು ಮೂದಲಿಸಿದನು.

ಅರ್ಥ:
ಆದರಿಸು: ಗೌರವಿಸು; ಬಣ್ಣಿಸು: ವರ್ಣಿಸು; ನಾಚು: ನಾಚಿಕೆಪಡು, ಸಿಗ್ಗಾಗು; ಕೌಳಿಕ:ಕಟುಕ, ಕಸಾಯಿಗಾರ, ಮೋಸ; ಪರಾಕ್ರಮ: ಶೌರ್ಯ; ವಾದಿ: ತರ್ಕಮಾಡುವವನು; ಸಮಸ್ತ: ಎಲ್ಲಾ; ಗುಣ: ನಡತೆ, ಸ್ವಭಾವ; ವಿಸ್ತಾರ: ವೈಶಾಲ್ಯ; ವೈಭವ: ಶಕ್ತಿ, ಸಾಮರ್ಥ್ಯ, ಆಡಂಬರ; ಗೋವಳ: ಗೋಪಾಲಕ; ಹೆಂಡಿರ: ಭಾರ್ಯ; ಹಾದರ: ವ್ಯಭಿಚಾರ, ಜಾರತನ; ಹೆಕ್ಕಳ: ಹೆಚ್ಚಳ, ಅತಿಶಯ; ಅಕಟ: ಅಯ್ಯೋ; ನಾಚಿಕೆ: ಲಜ್ಜೆ, ಸಿಗ್ಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಆದರಿಸಿ +ಬಣ್ಣಿಸಿದೆ +ನಾಚದೆ
ಯಾದವನ +ಕೌಳಿಕ +ಪರಾಕ್ರಮವ್
ಆದಿಯಾದ +ಸಮಸ್ತಗುಣ +ವಿಸ್ತಾರ +ವೈಭವವ
ಆದರ್+ಆ+ ಗೋವಳರ +ಹೆಂಡಿರ
ಹಾದರದ +ಹೆಕ್ಕಳವ +ಬಣ್ಣಿಸ
ದಾದೆ+ ನಿನಗೇಕ್+ಅಕಟ +ನಾಚಿಕೆ+ಎಂದನಾ +ಚೈದ್ಯ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಂಡಿರ ಹಾದರದ ಹೆಕ್ಕಳವ
(೨) ಬಣ್ಣಿಸಿದೆ, ಬಣ್ಣಿಸದಾದೆ – ಪದಗಳ ಬಳಕೆ
(೩) ಆದರಾ, ಹಾದರ – ಪದಗಳ ಬಳಕೆ