ಪದ್ಯ ೧೪: ಸೈನಿಕರ ನಡುವೆ ಯುದ್ಧವು ಹೇಗೆ ಮುಂದುವರೆಯಿತು?

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು (ಶಲ್ಯ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಟರೆಲ್ಲರೂ ಸಂಕೋಚವನ್ನು ಬಿಟ್ಟು ಶಕ್ತಿಮೀರಿ ಹಾಣಾಹಾಣಿ ಯುದ್ಧದಲ್ಲಿ ತೊಡಗಿದರು. ಆಯುಧಗಳು ತಾಕಿ ಖಣಿಖಟಿಲು ಸದ್ದು ಕೇಳಿ ಕಿಡಿಗಳುರುಳಿದವು. ಉಬ್ಬಣಗಳು ತಾಕಲಾಡಿದವು. ಭಲ್ಯ ಈಟಿಗಳಿಂದ ವೈರಿಗಳನ್ನು ಹಣಿದರು. ಬಿಲ್ಲಾಳುಗಳು, ಸೂತರು, ರಥಿಕರು ಸಮರೋದ್ಯೋಗದಲ್ಲಿ ನಿರತರಾದರು.

ಅರ್ಥ:
ಕೇಣ: ಹೊಟ್ಟೆಕಿಚ್ಚು; ಭಟ: ಸೈನಿಕ; ಹಾಣಾಹಾಣಿ: ಹಣೆ ಹಣೆಯ ಯುದ್ಧ; ಮಸಗು: ಹರಡು; ಕೆರಳು; ಖಣಿಖಟಿಲು: ಬಾಣದ ಶಬ್ದವನ್ನು ವಿವರಿಸುವ ಪದ; ಹೋಯ್ದ್: ಹೊಡೆ; ಬಿರು: ಬಿರುಸಾದುದು, ಗಟ್ಟಿಯಾದ;
ಕಿಡಿ: ಬೆಂಕಿ; ಹಿರಿ: ಹೆಚ್ಚು; ಉಬ್ಬಣ: ಚೂಪಾದ ಆಯುಧ; ಹೊಯ್ಲು: ಏಟು, ಹೊಡೆತ; ಹೂಣಿಕೆ: ಶಪಥ, ಪ್ರತಿಜ್ಞೆ; ಸಬಳ: ಈಟಿ, ಭರ್ಜಿ; ಸೂತ: ಸಾರಥಿ; ರಥಿಕ: ರಥದ ಮೇಲೆ ಕುಳಿತು ಯುದ್ಧ ಮಾಡುವವ; ಜಾಣತಿ: ಜಾನತನ; ಬಿಲ್ಲವರ: ಬಿಲ್ಲುಗಾರ; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲುಹು: ಬಲ, ಶಕ್ತಿ;

ಪದವಿಂಗಡಣೆ:
ಕೇಣವಿಲ್ಲದೆ +ಭಟರ +ಹಾಣಾ
ಹಾಣಿ +ಮಸಗಿತು +ಖಣಿಖಟಿಲ+ ಹೊ
ಯ್ದಾಣೆಗಳ+ ಬಿರು+ಕಿಡಿಯ +ಹಿರಿ+ಉಬ್ಬಣದ+ ಹೊಯ್ಲುಗಳ
ಹೂಣಿಕೆಯ +ಸಬಳಿಗರೊಳ್+ಇಮ್ಮೈ
ಗಾಣಿಕೆಯ +ಬಲು+ಸೂತ+ರಥಿಕರ
ಜಾಣತಿಯ +ಬಿಲ್ಲವರ+ ಧಾಳಾಧೂಳಿ +ಬಲುಹಾಯ್ತು

ಅಚ್ಚರಿ:
(೧) ಹಾಣಾಹಾಣಿ, ಖಣಿಖಟಿಲ, ಧಾಳಾಧೂಳಿ – ಪದಗಳ ಬಳಕೆ

ಪದ್ಯ ೨೬: ಕುರುಸೇನೆಯಲ್ಲಿ ಯಾವ ಆಶೆ ಕಡಿಮೆಯಾಗಿತ್ತು?

ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡುದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ (ಶಲ್ಯ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯ ಸುಭಟರೆಲ್ಲರೂ ಶಲ್ಯ್ನ ದರ್ಶನವನ್ನು ಪಡೆದುಕೊಂಡು ಕಾಣಿಕೆಯನ್ನು ಕೊಟ್ಟರು. ಹಾಣಾಹಾಣಿ ಯುದ್ಧವನ್ನು ಮಾಡಿ ಪರಸೇನೆಯ ವೀರರನ್ನು ಕಡಿದುಹಾಕುವ ವೀರಾಲಾಪವನ್ನು ಮಾಡಿದರು. ಶತ್ರುಸೈನ್ಯದಲ್ಲಿ ನುಗ್ಗಿ ವಿರೋಧಿ ಯೋಧರನ್ನು ಆಪೋಶನ ತೆಗೆದುಕೊಳ್ಳುವ ಆತುರವನ್ನು ತೋರಿದರು. ಆದರೆ ವಿಜಯದ ಆಶೆ ಅವರಲ್ಲಿ ಕಡಿಮೆಯಾಗಿತ್ತು.

ಅರ್ಥ:
ಕಾಣಿಕೆ: ಉಡುಗೊರೆ; ಇತ್ತು: ನೀಡು; ಅಖಿಳ: ಎಲ್ಲಾ; ಸುಭಟ: ಪರಾಕ್ರಮಿ; ಶ್ರೇಣಿ: ಗುಂಪು; ಕಂಡು: ನೋಡು; ನುಡಿ: ಮಾತು; ಹಾಣಾಹಾಣಿ: ಬೆರೆಸು, ಹಣೆ ಹಣೆಯ ಯುದ್ಧ; ಭಾಷೆ: ನುಡಿ; ಹಕ್ಕು: ಜವಾಬ್ದಾರಿ; ಉಕ್ಕು: ಹಿಗ್ಗುವಿಕೆ; ಪ್ರಾಣ: ಜೀವ; ಉದಕ: ನೀರು; ಚೇಷ್ಟೆ: ಅಂಗಾಂಗಗಳ ಚಲನೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ವಿಜಯ: ಗೆಲುವು; ಕ್ಷೀಣ: ನಾಶ, ಕೇಡು; ಮಾನಸ: ಮನಸ್ಸು; ಒಪ್ಪು: ಒಪ್ಪಿಗೆ, ಸಮ್ಮತಿ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಕಾಣಿಕೆಯನಿತ್ತ್+ಅಖಿಳ +ಸುಭಟ
ಶ್ರೇಣಿ +ಕಂಡುದು +ನುಡಿಯ +ಹಾಣಾ
ಹಾಣಿಗಳ+ ಭಾಷೆಗಳ +ಹಕ್ಕಲು +ವೀರರುಕ್ಕುಗಳ
ಪ್ರಾಣಚುಳಕ+ಉದಕದ +ಚೇಷ್ಟೆಯ
ಹೂಣಿಗರು+ ವಿಜಯಾಂಗನೋಪ
ಕ್ಷೀಣಮಾನಸರ್+ಒಪ್ಪಿದರು +ಕುರುಪತಿಯ +ಪರಿವಾರ

ಅಚ್ಚರಿ:
(೧) ಗೆಲುವಿನ ಆಸೆ ಕ್ಷೀಣಿಸಿತು ಎಂದು ಹೇಳಲು – ವಿಜಯಾಂಗನೋಪ ಕ್ಷೀಣಮಾನಸರೊಪ್ಪಿದರು
(೨) ವೀರರನ್ನು ವಿವರಿಸುವ ಪರಿ – ಪ್ರಾಣಚುಳಕೋದಕದ ಚೇಷ್ಟೆಯ ಹೂಣಿಗರು

ಪದ್ಯ ೨೫: ಯಾವ ರೀತಿಯ ಯುದ್ಧವು ನಡೆಯಿತು?

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ (ದ್ರೋಣ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರವು ಸಮುದ್ರವನ್ನು ಒದೆಯಿತೋ ಎಂಬಂತೆ ಚತುರಂಗ ಸೈನ್ಯವು ತಲೆಗೆ ತಲೆಯೊತ್ತಿ ಖಾಡಾಖಾಡಿಯಿಂದ ಯುದ್ಧಾರಂಭಮಾಡಿತು. ಶತ್ರುಸೈನ್ಯಗಳು ಚದುರಿ ಚಲ್ಲಾಪಿಲ್ಲಿಯಾಗಿ ಮತ್ತೆ ಜೊತೆಗೂಡಿ ಹಾಣಾಹಾಣಿಯಿಂದ ಕಾದಿದವು.

ಅರ್ಥ:
ಒದೆ: ತುಳಿ, ಮೆಟ್ಟು, ನೂಕು; ಅಬುಧಿ: ಸಾಗರ; ಹೊಕ್ಕು: ಸೇರು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಹೊಯ್ದು: ಹೋರಾಡು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ; ಖಾಡಾಖಾಡಿ: ದ್ವಂದ್ವಯುದ್ಧ, ಮಲ್ಲಯುದ್ಧ; ಭಟ: ಸೈನಿಕ; ಕೆದರು: ಹರಡು; ಅರಿಬಲ: ವೈರಿಸೈನ್ಯ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ವಿಘಾತ: ನಾಶ, ಧ್ವಂಸ; ಅಳಿ: ನಾಶ; ಹುರಿ: ಕಾಯಿಸು; ಒದಗು: ಲಭ್ಯ, ದೊರೆತುದು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಹೊಯ್ದಾಡು: ಹೋರಾಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಒದೆದುದ್+ಅಬುಧಿಯನ್+ಅಬುಧಿ+ಎನೆ +ಹೊ
ಕ್ಕುದು +ಚತುರ್ಬಲ +ಹೊಯ್ದು +ತಲೆ+
ಒತ್ತಿದುದು +ಕೇಶಾಕೇಶಿ +ಖಾಡಾಖಾಡಿಯಲಿ +ಭಟರು
ಕೆದರಿತ್+ಅರಿಬಲ+ ಮತ್ತೆ +ಹೊದರ್
ಎದ್ದುದು +ವಿಘಾತಿಯಲ್+ಅಳಿದು +ಹುರಿಗೊಂಡ್
ಒದಗಿ +ಹಾಣಾಹಾಣಿಯಲಿ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒದೆದುದಬುಧಿಯನಬುಧಿಯೆನೆ
(೨) ಯುದ್ಧದ ಪರಿ – ಕೇಶಾಕೇಶಿ – ಕೂದಲು ಹಿಡಿದೆಳೆದು ಮಾಡುವ ಕದನ; ಖಾಡಾಕಾಡಿ – ಖಡ್ಗಕ್ಕೆ ಖಡ್ಗವನ್ನೋಡ್ಡಿ ಮಾಡುವ ಕದನ, ಹಾಣಾಹಾಣಿ – ಹಣೆಗೆ ಹಣೆಯನ್ನು ಕೊಟ್ಟು ಮಾಡುವ ಯುದ್ಧ;

ಪದ್ಯ ೧೫: ಸೈನಿಕರಿಗೆ ಯಾವುದು ಅಡ್ಡಿಯೊಡ್ಡಿತು?

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ಯಾಡಿದರು ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ (ಭೀಷ್ಮ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂದಿದ್ದ ಸೈನ್ಯದ ತುಕಡಿಗಳು ತಲೆಗೆ ತಲೆಯೊಡ್ಡಿ ಯಾವ ಮಿತಿಯೂ ಇಲ್ಲದ ರಭಸದಿಂದ ತಮ್ಮ ಕತ್ತುಗಳನ್ನು ಮಾರಿ ಒಡೆಯನ ಋಣವನ್ನು ಕಳೆದುಕೊಂಡರು. ಶಪಥ ಮಾಡಿ ಯುದ್ಧಕ್ಕಿಳಿದರು, ಹುರಿಯ ಮೂರು ಭಾಗಗಳು ಹೊಂದಿದಂತೆ ಯುದ್ಧದಲ್ಲಿ ಶತ್ರುಗಳೊಡನೆ ಹಾಣಾಹಾಣಿ ಕಾಳಗವನ್ನು ಮಾಡಿದರು. ಆ ಸಮರದಲ್ಲಿ ಹರಿದ ರಕ್ತ ಪ್ರವಾಹವು ಯುದ್ಧಕ್ಕೆ ಬರುವವರಿಗೆ ಅಡ್ಡಿಯಾಯಿತು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತಲೆ: ಶಿರ; ಒತ್ತು: ಆಕ್ರಮಿಸು, ಮುತ್ತು, ಒತ್ತಡ; ಹರಣ: ಜೀವ, ಪ್ರಾಣ, ಅಪಹರಿಸು; ವಾಣಿ: ಮಾತು; ಕೇಣಿ: ಗುತ್ತಿಗೆ, ಗೇಣಿ; ಕುಹಕ: ಮೋಸ, ವಂಚನೆ; ಗೋಣು: ಕಂಠ, ಕುತ್ತಿಗೆ; ಮಾರಿ:ಅಳಿವು, ನಾಶ, ಮೃತ್ಯು; ಓಲಗ: ಅಗ್ರಪೂಜೆಗಾಗಿ ಕೂಡಿದ, ಸೇವೆ; ಉಣು: ತಿನ್ನು; ನೀಗು:ನಿವಾರಿಸಿಕೊಳ್ಳು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹುರಿ: ಕಾಯಿಸು, ತಪ್ತಗೊಳಿಸು; ಬಲಿ: ಗಟ್ಟಿ, ದೃಢ; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಘನ:ಶ್ರೇಷ್ಠ; ಶೋಣ:ಕೆಂಪು ಬಣ್ಣ; ಸಲಿಲ: ನೀರು; ಶೋಣ ಸಲಿಲ: ರಕ್ತ; ಹೊನಲು: ತೊರೆ, ಹೊಳೆ; ಹೊಯ್ದು: ಹೊಡೆದು; ಹೊಗು: ಪ್ರವೇಶಿಸು; ಬವರಿ: ತಿರುಗುವುದು;

ಪದವಿಂಗಡಣೆ:
ಚೂಣಿ +ತಲೆ+ಒತ್ತಿದುದು +ಹರಣದ
ವಾಣಿ +ಕೇಣಿಯ +ಕುಹಕವಿಲ್ಲದೆ
ಗೋಣು+ಮಾರಿಗಳ್+ಓಲಗದ +ಹಣರ್+ಉಣವ +ನೀಗಿದರು
ಹೂಣಿಗರು+ ಹುರಿಬಲಿದು +ಹಾಣಾ
ಹಾಣಿಯಲಿ +ಹೊಯ್ಯಾಡಿದರು +ಘನ
ಶೋಣ +ಸಲಿಲದ +ಹೊನಲು +ಹೊಯ್ದುದು +ಹೊಗುವ +ಬವರಿಗರ

ಅಚ್ಚರಿ:
(೧) ಯುದ್ಧದ ಘೋರತೆಯ ದೃಶ್ಯ, ರಕ್ತವು ನದಿಯಾಗಿ ಹರಿಯಿತು ಎಂದ್ ಹೇಳುವ ಪರಿ – ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ
(೨) ಹ ಕಾರದ ಸಾಲು ಪದಗಳು – ಹೂಣಿಗರು ಹುರಿಬಲಿದು ಹಾಣಾಹಾಣಿಯಲಿ ಹೊಯ್ಯಾಡಿದರು; ಹೊನಲು ಹೊಯ್ದುದು ಹೊಗುವ ಬವರಿಗರ

ಪದ್ಯ ೨೭: ಖಡ್ಗದ ಯೋಧರು ಹೇಗೆ ಹೋರಾಡಿದರು?

ಬಲಸಮುದ್ರದ ಬುದ್ಬುದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಳಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ (ಭೀಷ್ಮ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಖಡ್ಗದಿಂದ ಕಾದುವ ಯೋಧರ ಕೈಗಲಲ್ಲಿದ್ದ ಗುರಾಣಿಗಳು ಸೈನ್ಯ ಸಮುದ್ರದ ನೀರುಗುಳ್ಳೆಗಳಂತೆ ಕಾಣಿಸಿದವು. ವೀರರು ಧರಿಸಿದ ಚೌರಿ, ಗಂಟೆ, ಬಿರುದಿನ ಮಾಲೆಗಳೊಡನೆ ಕಾಲುಗಳನ್ನೂ ಕಂಭದಂತೆ ದೃಢವಾಗಿ ನಿಲ್ಲಿಸಿ, ಆಕ್ರಮಣಕ್ಕೆ ಬೆದರದೆ ಇದಿರೊಡ್ಡಿ ನಿಂತು ಕಾದಿದರು.

ಅರ್ಥ:
ಬಲ: ಶಕ್ತಿ, ಪೂರ್ವ ; ಸಮುದ್ರ: ಸಾಗರ; ಬುದ್ಬುದ: ನೀರಿನ ಮೇಲಣ ಗುಳ್ಳೆ, ಬೊಬ್ಬುಳಿ; ತಿಳಿ: ಅರಿವು; ಅರಿ: ತಿಳಿ; ಹರಿ: ಓಡು, ಧಾವಿಸು; ಮುಸುಕು: ಹೊದಿಕೆ; ಬಿಳಿ: ಸಿತ; ಚೌರಿ: ಚಾಮರ; ಉಲಿವ: ಧ್ವನಿ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಬಿರು: ಗಟ್ಟಿಯಾದುದು; ಉಬ್ಬಟೆ: ಅತಿಶಯ; ತಳಪಟ: ಸೋಲು; ಔಕು: ಒತ್ತು, ಹಿಸುಕು; ತೊಡೆ: ಊರು; ಸಂಕಲೆ: ಬ್ಬಿಣದ ಸರಪಣಿ, ಬಂಧನ; ತೊಲಗು: ದೂರವಾಗು; ಕಂಭ: ಸ್ಥಂಭ; ಪ್ರತಿ:ವಿರುದ್ಧ, ಎದುರು; ಬಲರು: ಪರಾಕ್ರಮಿ; ಹಾಣಾಹಣಿ: ಹಣೆ ಹಣೆಯ ಯುದ್ಧ; ಹೊಯಿದಾಡು: ಹೋರಾಡು; ಕಡುಗು: ಉತ್ಸಾಹಗೊಳ್ಳು, ವೇಗವಾಗು;

ಪದವಿಂಗಡಣೆ:
ಬಲಸಮುದ್ರದ+ ಬುದ್ಬುದಂಗಳೊ
ತಿಳಿಯಲ್+ಅರಿದೆನೆ +ಹರಿಗೆ +ಮುಸುಕಿತು
ಬಳಿಯ +ಚೌರಿಗಳ್+ಉಲಿವ +ಘಂಟೆಯ +ಬಿರುದಿನ್+ಉಬ್ಬಟೆಯ
ತಳಪಟದೊಳ್+ಔಕಿದರು +ತೊಡೆ+ಸಂ
ಕಲೆಯ +ತೊಲಗದ+ ಕಂಭದ+ಪ್ರತಿ
ಬಲರು+ ಹಾಣಾಹಾಣಿಯಲಿ +ಹೊಯಿದಾಡಿದರು +ಕಡುಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲಸಮುದ್ರದ ಬುದ್ಬುದಂಗಳೊ ತಿಳಿಯಲರಿದೆನೆ

ಪದ್ಯ ೨೨: ಭೀಮನು ಏನೆಂದು ಚಿಂತಿಸಿದನು?

ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಲ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನೀತಗೆಂತುಟೊ ಶಿವ ಶಿವಾಯೆಂದ (ಅರಣ್ಯ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನುಮನ ಬಾಲವನ್ನು ಸ್ವಲ್ಪವೂ ಆಲ್ಲಾಡಿಸಲಾಗದೆ ಆಶ್ಚರ್ಯಗೊಂಡ ಭೀಮನು, ಇವನಾರಿರಬಹುದು? ಕಪಿರೂಪವನ್ನು ತಾಳಿದ ಇಂದ್ರನೋ, ಶಿವನೋ ಇರಬೇಕು, ಅಥವಾ ತ್ರೇತಾಯುಗದಲ್ಲಿ ರಾವಣನ ಜೊತೆ ಹಾಣಾಹಾಣಿಗಿಳಿದ ಹನುಮಂತನಿರಬಹುದೇ? ನಾವು ಮಹಾಸತ್ವಶಾಲಿಗಳೆಂದು ಮೆರೆಯುತ್ತೇವೆ, ಆದರೆ ಈತನು ನಮ್ಮನ್ನು ಬಾಲದಿಂದಲೇ ಗೆದ್ದನು. ಇವನಿಗೆ ಇನ್ನೆಷ್ಟು ಅತಿಶಯ ಸತ್ವವಿರಬೇಕು ಶಿವ ಶಿವಾ ಎಂದು ಭೀಮನು ಚಿಂತಿಸಿದನು.

ಅರ್ಥ:
ಕಪಿ: ಮಂಗ; ರೂಪ: ಆಕಾರ; ಸುರೇಂದ್ರ: ಇಂದ್ರ; ಭೂತನಾಥ: ಶಿವ; ಮೇಣು: ಅಥವ; ವಿಮಲ: ಶುದ್ಧ; ತ್ರೇತ: ಯುಗದ ಹೆಸರು; ದಶಮುಖ: ಹತ್ತು ಮುಖವುಳ್ಳ (ರಾವಣ); ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಉಬ್ಬಟೆ: ಅತಿಶಯ, ಹಿರಿಮೆ; ಗೆಲುವು: ಜಯ; ಬಾಲ: ಪುಚ್ಛ; ಸತ್ವ: ಶಕ್ತಿ, ಬಲ; ಅತಿಶಯ: ಹೆಚ್ಚು;

ಪದವಿಂಗಡಣೆ:
ಈತ +ಕಪಿ+ರೂಪದ+ ಸುರೇಂದ್ರನೊ
ಭೂತನಾಥನೊ +ಮೇಣು +ವಿಮಲ
ತ್ರೇತೆಯಲಿ +ದಶಮುಖನ+ ಹಾಣಾಹಾಣಿಗಳ+ ಕಪಿಯೊ
ಏತರವು +ನಮ್ಮ್+ಉಬ್ಬಟೆಗಳಿಂದ್
ಈತ +ಗೆಲಿದನು +ಬಾಲದಲಿ +ಸತ್ವ
ಅತಿಶಯವಿನ್+ಈತಗ್+ಎಂತುಟೊ +ಶಿವ+ ಶಿವಾಯೆಂದ

ಅಚ್ಚರಿ:
(೧) ಇಂದ್ರ, ಶಿವನಿಗೆ ಹೋಲಿಸುವ ಪರಿ – ಈತ ಕಪಿರೂಪದ ಸುರೇಂದ್ರನೊ ಭೂತನಾಥನೊ
(೨) ಹನುಮನನ್ನು ಹೋಲಿಸುವ ಪರಿ – ವಿಮಲ ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ

ಪದ್ಯ ೪೬: ಅರ್ಜುನನು ಶಬರನನ್ನು ಏನೆಂದು ಎಚ್ಚರಿಸಿದನು?

ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಸುಕಿದರೆ ಶಿವ
ನಾಣೆ ಬಾ ಸುಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ (ಅರಣ್ಯ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಶಬರಾ, ನಿನ್ನ ಪ್ರಾಣವು ಈಗ ನನಗೆ ಅಧೀನವಾಗಿದೆ, ಇದನ್ನು ನೀನು ತಿಳಿದಿರುವೆಯಾ? ನನಗೆ ಶಿವನ ಕೃಪೆಯ ಶಕ್ತಿಯು ಬಂದಿದೆ. ಇನ್ನು ನಿನ್ನ ಪ್ರಾಣವನ್ನು ಹಿಂಡುತ್ತೇನೆ. ಸ್ವಲ್ಪ ಮಿಸುಕಿದರೆ ನಿನ್ನ ಕತ್ತನ್ನೇ ಶಿವನಾಣೆ ಮುರಿದುಬಿಡುತ್ತೇನೆ ಹಾಣಾಹಣಿಗೆ ಇನ್ನು ನೀನು ಸಿದ್ಧನಿರು ಎಂದು ವೀರಾಲಾಪವನ್ನು ಮಾಡುತ್ತಾ ಅರ್ಜುನನು ಕಿರಾತನನ್ನು ಕಣ್ಣುರೆಪ್ಪೆ ಮುಚ್ಚದೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದನು.

ಅರ್ಥ:
ಕಾಣು: ತೋರು; ಶಬರ: ಬೇಡ; ಪ್ರಾಣ: ಜೀವ; ಅಧೀನ: ವಶ; ಅರಿ: ತಿಳಿ; ಸ್ಥಾಣು: ಶಿವ; ಬಲುಹು: ಶಕ್ತಿ; ಹಿಂಡು: ಹಿಸುಕು, ಅಮುಕು; ಅಸು: ಪ್ರಾಣ; ಗೋಣು: ಕುತ್ತಿಗೆ, ಗಳ; ಮುರಿ: ಸೀಳು; ಮಿಸುಕು: ಅಲ್ಲಾಟ; ಆಣೆ: ಪ್ರಮಾಣ; ಸಮ್ಮುಖ: ಎದುರು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಅನುವಾಗು: ಸಿದ್ಧವಾಗು; ಎವೆ: ಕಣ್ಣುರೆಪ್ಪೆ; ಇಕ್ಕು:ಮುಚ್ಚು, ಹರಡು; ಈಕ್ಷಿಸು: ನೋಡು;

ಪದವಿಂಗಡಣೆ:
ಕಾಣಬಹುದೋ +ಶಬರ +ನಿನ್ನೀ
ಪ್ರಾಣವ್+ಎನ್ನ+ಅಧೀನವ್+ಅರಿಯಾ
ಸ್ಥಾಣುವಿನ +ಬಲುಹುಂಟು +ಹಿಂಡುವೆನ್+ಇನ್ನು +ನಿನ್+ಅಸುವ
ಗೋಣ +ಮುರಿವೆನು +ಮಿಸುಕಿದರೆ +ಶಿವ
ನಾಣೆ +ಬಾ+ ಸುಮ್ಮುಖಕೆ+ ಹಾಣಾ
ಹಾಣಿಗಿನ್+ಅನುವಾಗ್+ಎನುತಲ್+ಎವೆಯಿಕ್ಕದ್+ಈಕ್ಷಿಸಿದ

ಅಚ್ಚರಿ:
(೧) ಅರ್ಜುನನು ಶಬರನನ್ನು ನೋಡುವ ಪರಿ – ಬಾ ಸುಮ್ಮುಖಕೆ ಹಾಣಾಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ