ಪದ್ಯ ೧೩: ಭೀಮನು ಯಾರ ಮಕುಟವನ್ನು ಒದೆದನು?

ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯಲಿ ಮಕುಟವನು
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ (ಗದಾ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ನಮ್ಮನ್ನು ಹಲವು ರೀತಿಯಿಂದ ದುಃಖಪಡಿಸಿದ ಫಲವನ್ನು ತಲೆಯಲ್ಲಿಯೇ ಧರಿಸು ಎನ್ನುತ್ತಾ ಎಡಗಾಲಿನಿಂದ ಮಕುಟವನ್ನು ಕೆಳಕ್ಕೊದೆದು, ನಮ್ಮನ್ನು ನೋಡಿ ಗೌರ್ಗೌ ಎಂದು ಕೂಗಿದೆಯಲ್ಲಾ ಎನ್ನುತ್ತಾ ಮಕುಟವನ್ನು ಒದೆಯಲು ಅದರಲ್ಲಿ ಜೋಡಿಸಿದ್ದ ಮಣಿಗಳು ಸುತ್ತಲೂ ಹಾರಿದವು.

ಅರ್ಥ:
ಹಳುವ: ಕಾಡು; ನಾನಾ: ಹಲವಾರು; ಪ್ರಕಾರ: ರೀತಿ; ಅಳಲು: ದುಃಖಿಸು; ಫಲ: ಪರಿಣಾಮ; ಭೋಗ: ಸುಖವನ್ನು ಅನುಭವಿಸುವುದು; ತಲೆ: ಶಿರ; ಧರಿಸು: ಹಿಡಿ, ತೆಗೆದುಕೊಳ್ಳು; ವಾಮ: ಎಡಭಾಗ; ಅಂಘ್ರಿ: ಪಾದ; ಮಕುಟ: ಕಿರೀಟ; ಇಳುಹು: ಕೆಳಗೆ ಜಾರು; ಗೌರ್ಗೌ: ಶಬ್ದವನ್ನು ವರ್ಣಿಸುವ ಪರಿ; ಬಿಡು: ತೊರೆ; ಉಲಿ: ಕೂಗು; ಒದೆ:ತುಳಿ, ಮೆಟ್ಟು; ಕಳಚು: ಬೇರ್ಪಡಿಸು, ಬೇರೆಮಾಡು; ಕೀಲು: ಅಗುಳಿ, ಬೆಣೆ; ಮಣಿ: ಬೆಲೆಬಾಳುವ ಹರಳು; ಕೆದರು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಹಳುವದಲಿ +ನಾನಾ +ಪ್ರಕಾರದಲ್
ಅಳಲಿಸಿದ +ಫಲಭೋಗವನು +ನೀ
ತಲೆಯಲೇ +ಧರಿಸೆನುತ +ವಾಮಾಂಘ್ರಿಯಲಿ +ಮಕುಟವನು
ಇಳುಹಿದನು +ಗೌರ್ಗೌವೆನುತ +ಬಿಡದ್
ಉಲಿದೆಲಾ +ಎನುತೊದೆದು+ ಮಕುಟವ
ಕಳಚಿದನು +ಕೀಲಣದ +ಮಣಿಗಳು +ಕೆದರೆ+ ದೆಸೆದೆಸೆಗೆ

ಅಚ್ಚರಿ:
(೧) ಶಬ್ದವನ್ನು ವರ್ಣಿಸುವ ಪರಿ – ಗೌರ್ಗೌ

ಪದ್ಯ ೨೫: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೨?

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎಳೊ ಕೌರವ, ಹಿಂದೆ ಯುಧಿಷ್ಠಿರನ ಪಟ್ಟದ ರಾಣಿಯಾದ ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸುಲಿಸಿದ ಛಲವು ಎಲ್ಲಿಗೆ ಹೋಯಿತು? ವೈರಿಗಳನ್ನು ಕಾಡಿಗಟ್ಟಿದೆನಂಬ ಸಂತೋಷ ಎಲ್ಲಿಗೆ ಹೋಯಿತು? ಎಲವೋ ದುಷ್ಟಶಿರೋಮಣಿ, ಗಂಧರ್ವನು ನಿನ್ನ ಕೂದಲುಗಳಿಂದ ನಿನ್ನ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದಾಗ ಬಿಡಿಸಿದವರು ಯಾರು?

ಅರ್ಥ:
ರಾಯ: ರಾಜ; ಪಟ್ಟದರಸಿ: ಮಹಾರಾಣಿ; ಪಟ್ಟ: ಸ್ಥಾನ; ಸುಲಿಸು: ಕಿತ್ತುಕೊಳ್ಳು; ಛಲ: ದೃಢ ನಿಶ್ಚಯ; ಹಗೆ: ವೈರ; ಹಳುವು: ಕಾಡು; ಹೊಗಿಸು: ಸೇರಿಸು; ಸುಮ್ಮಾನ: ಸಂತೋಷ; ಖಳ: ದುಷ್ತ; ಶಿರೋಮಣಿ: ಅಗ್ರಗಣ್ಯ, ಶ್ರೇಷ್ಠ; ಕೂದಲು: ರೋಮ; ಕೈ: ಹಸ್ತ; ಕಟ್ಟು: ಬಂಧಿಸು; ಖೇಚರ: ಗಗನದಲ್ಲಿ ಸಂಚರಿಸುವವ, ಗಂಧರ್ವ, ದೇವತೆ; ಎಳೆ: ನೂಲಿನ ಎಳೆ, ಸೂತ್ರ; ಬಿಡಿಸು: ಸಡಲಿಸು;

ಪದವಿಂಗಡಣೆ:
ಎಲವೊ +ರಾಯನ +ಪಟ್ಟದರಸಿಯ
ಸುಲಿಸಿದ+ಆ +ಛಲವೆಲ್ಲಿ +ಹಗೆಗಳ
ಹಳುವದಲಿ +ಹೊಗಿಸಿದೆನ್+ಎನಿಪ+ ಸುಮ್ಮಾನ +ತಾನೆಲ್ಲಿ
ಖಳ +ಶಿರೋಮಣಿ +ನಿನ್ನ +ತಲೆಗೂ
ದಲಲಿ +ಕೈಗಳ+ ಕಟ್ಟಿ +ಖೇಚರನ್
ಎಳೆಯೆ +ಬಿಡಿಸಿದರ್+ಆರು +ಕೌರವ +ಎಂದನಾ +ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಹ ಕಾರದ ತ್ರಿವಳಿ ಪದ – ಹಗೆಗಳ ಹಳುವದಲಿ ಹೊಗಿಸಿದೆನೆನಿಪ

ಪದ್ಯ ೨೫: ಕಷ್ಟದ ಸಮಯದಲ್ಲಿ ಯಾವುದು ನಮ್ಮನ್ನು ರಕ್ಷಿಸುತ್ತದೆ?

ಜಲಧಿಯಲಿ ಪಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡುಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ (ಗದಾ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ, ಸರ್ಪದ ಬಾಯಲ್ಲಿ, ಶತ್ರು ಸೈನ್ಯದಿದಿರಿನಲ್ಲಿ, ಸಿಡಿಲು ಬಡಿತದಲ್ಲಿ, ಪರ್ವತ ಶಿಖರಾಲ್ಲಿ, ಕಾಡುಗಿಚ್ಚಿನಲ್ಲಿ ಸಿಕ್ಕಾಗ ನಾವು ಹಿಂದೆ ಮಾಡಿದ ಪುಣ್ಯದ ಫಲವು ಫಲಿಸಿ ನಮ್ಮನ್ನು ರಕ್ಷಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿತು.

ಅರ್ಥ:
ಜಲಧಿ: ಸಾಗರ; ಫಣಿ: ಹಾವು; ವದನ: ಮುಖ; ರಿಪು: ವೈರಿ; ಬಲ: ಶಕ್ತಿ; ಮುಖ: ಆನನ; ಸಿಡಿಲು: ಅಶನಿ; ಹೊಯ್: ಹೊಡೆ; ಹಳುವ: ಕಾಡು; ಗಿರಿ: ಬೆಟ್ಟ; ಶಿಖರ: ತುದಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ಬಿಡುಸು: ಕಳಚು, ಸಡಿಲಿಸು; ಪ್ರತಿ: ಸಾಟಿ, ಸಮಾನ; ಫಲಿತ: ಫಲ, ಪ್ರಯೋಜನ; ಪೂರ್ವಾದತ್ತ: ಹಿಂದೆ ಪಡೆದ; ಪುಣ್ಯ: ಸನ್ನಡತೆ; ಆವಳಿ: ಸಾಲು, ಗುಂಪು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಲಧಿಯಲಿ +ಪಣಿ+ವದನದಲಿ +ರಿಪು
ಬಲದ +ಮುಖದಲಿ+ ಸಿಡಿಲ+ ಹೊಯ್ಲಲಿ
ಹಳುವದಲಿ +ಗಿರಿಶಿಖರದಲಿ+ ದಾವಾಗ್ನಿ +ಮಧ್ಯದಲಿ
ಸಿಲುಕಿದಡೆ+ ಬಿಡುಸುವವಲೇ+ ಪ್ರತಿ
ಫಲಿತ+ ಪೂರ್ವಾದತ್ತ+ ಪುಣ್ಯಾ
ವಳಿಗಳೆಂಬುದು+ ತನ್ನೊಳಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಕಷ್ಟದಿಂದ ನಮ್ಮನ್ನು ರಕ್ಷಿಸುವುದು – ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್
(೨) ಸಂಸ್ಕೃತದ ಸುಭಾಷಿತವನ್ನು ಈ ಕವನ ಹೋಲುತ್ತದೆ
वने रणे शत्रुजलाग्निमध्ये महार्णवे पर्वतमस्तके वा |
सुप्तं प्रमत्ते विषमस्थितं वा रक्षन्ति पुण्यानि पुराकृतानि ||

ಪದ್ಯ ೨೭: ಕೃಷ್ಣನು ಅರ್ಜುನನನ್ನು ಹೇಗೆ ಉತ್ತೇಜಿಸಿದನು -೨?

ಎಲೆ ಧನಂಜಯ ಹಗೆಯ ಹೆಚ್ಚಿದ
ಹಳುವವಿದೆಲಾ ವಜ್ರಿಸುತ ನಿ
ನ್ನಳವಿಯಲಿ ತರುಬಿದೆ ಸುಯೋಧನಸೈನ್ಯ ಗಿರಿನಿಕರ
ಎಲೆ ಸಮೀರಜನನುಜ ರಿಪುಬಲ
ವಿಲಯ ಮೇಘ ನಿಕಾಯವಿದೆ ಭುಜ
ಬಲವ ತೋರೈ ತಂದೆ ನೋಡುವೆನೆಂದನಸುರಾರಿ (ಭೀಷ್ಮ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೆ ಧನಂಜಯ, ಶತ್ರುಸೈನ್ಯವು ಹೆಗ್ಗಾಡಿನಂತಿದೆ, ಸೈನ್ಯ ಪರ್ವತವೆದುರಿಗಿದೆ, ನೀನು ಇಂದ್ರಪುತ್ರ, ವಜ್ರಾಯುಧದಿಂದ ಪರ್ವತಗಳನ್ನು ಖಂಡಿಸುವ ಶಕ್ತಿಯಿದೆ, ಎಲೆ ವಾಯುಪುತ್ರನ ತಮ್ಮನೇ, ನಿನ್ನೆದುರಿನಲ್ಲಿ ವೈರಸೈನ್ಯವೆಂಬ ಪ್ರಳಯ ಮೇಘವಿದೆ, ನಿನ್ನ ಭುಜಬಲವನ್ನು ತೋರಿಸು, ಎಂದು ಶ್ರೀಕೃಷ್ಣನು ಅರ್ಜುನನನ್ನು ಉತ್ತೇಜಿಸಿದನು.

ಅರ್ಥ:
ಹಗೆ: ವೈರತ್ವ; ಹೆಚ್ಚು: ಅಧಿಕ; ಹಳುವ: ಕಾಡು; ವಜ್ರ: ಗಟ್ಟಿಯಾದ; ಸುತ: ಮಗ; ವಜ್ರಿ: ಇಂದ್ರ; ಅಳವಿ: ಶಕ್ತಿ, ಯುದ್ಧ; ತರುಬು: ತಡೆ, ನಿಲ್ಲಿಸು; ಸೈನ್ಯ: ಸೇನೆ; ಗಿರಿ: ಬೆಟ್ಟ; ನಿಕರ: ಗುಂಪು; ಸಮೀರ: ವಾಯು; ಅನುಜ: ತಮ್ಮ; ರಿಪು:ವೈರಿ ಬಲ: ಶಕ್ತಿ, ಸೈನ್ಯ; ವಿಲಯ: ನಾಶ, ಪ್ರಳಯ; ಮೇಘ: ಮೋಡ; ನಿಕಾಯ: ಗುಂಪು; ಭುಜಬಲ: ಬಾಹುಬಲ; ತೋರು: ವೀಕ್ಷಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಎಲೆ+ ಧನಂಜಯ +ಹಗೆಯ +ಹೆಚ್ಚಿದ
ಹಳುವವಿದೆಲಾ +ವಜ್ರಿ+ಸುತ +ನಿನ್ನ್
ಅಳವಿಯಲಿ +ತರುಬಿದೆ+ ಸುಯೋಧನ+ಸೈನ್ಯ +ಗಿರಿ+ನಿಕರ
ಎಲೆ+ ಸಮೀರಜನ್+ಅನುಜ +ರಿಪು+ಬಲ
ವಿಲಯ +ಮೇಘ +ನಿಕಾಯವಿದೆ+ ಭುಜ
ಬಲವ +ತೋರೈ +ತಂದೆ +ನೋಡುವೆನೆಂದನ್+ಅಸುರಾರಿ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವಜ್ರಿಸುತ, ಸಮೀರಜನನುಜ
(೨) ಉಪಮಾನಗಳು – ಹಗೆಯ ಹೆಚ್ಚಿದ ಹಳುವ, ಸುಯೋದನ ಸೈನ್ಯ ಗಿರಿನಿಕರ, ರಿಪುಬಲ ವಿಲಯ ಮೇಘ ನಿಕಾಯ;

ಪದ್ಯ ೨೪: ಭೀಮಾರ್ಜುನರ ತವಕವೇನು?

ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವನ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ
ಕೊಂದು ಕಳದಲಿ ಮತ್ತೆ ಗಜಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾವೇ ಬಲ್ಲರೆಂದನು ಧರ್ಮನಂದನನು (ವಿರಾಟ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ನನಗಾವ ಕ್ಲೇಶವೂ ಇಲ್ಲ, ಜೂಜಿನ ದೆಸೆಯಿಂದ ಭೀಮಾರ್ಜುನರು ಕಾಡನ್ನು ಹೊಕ್ಕು ಪಟ್ಟ ಕಷ್ಟದ ವ್ಯಥೆ ಅವರ ಮನಸ್ಸಿನಲ್ಲಿ ನೀಮ್ತಿದೆ, ದುರ್ಯೋಧನಾದಿ ಕೌರವರನ್ನು ಯುದ್ಧದಲ್ಲಿ ಸಂಹರಿಸಿ ಯಾವಾಗ ಹಸ್ತಿನಾಪುರವನ್ನು ಹೊಗುವೆವೋ ಎಂಬ ತವಕ ಅವರಿಗೆ, ಎಂದು ಧರ್ಮರಾಯನು ಹೇಳಿದನು.

ಅರ್ಥ:
ನೊಂದು: ನೋವುಂಡು; ಹಗೆ: ವೈರ; ಹಳುವ: ಕಾಡು; ಹೊಕ್ಕು: ಸೇರು; ಮನಸು: ಚಿತ್ತ; ಕಂದು: ಕಳಾಹೀನ; ಕಸರು: ನ್ಯೂನತೆ, ಕೊರತೆ; ಹೋಗು: ತೆರಳು; ಆದಿ: ಮುಂತಾದ; ಕೊಂದು: ಸಾಯಿಸು; ಕಳ: ರಣರಂಗ; ಗಜಪುರಿ: ಹಸ್ತಿನಾಪುರ; ಗಮಿಸು: ತೆರಳು; ತವಕ: ಬಯಕೆ, ಆತುರ; ಬಲ್ಲ: ತಿಳಿ; ನಂದನ: ಮಗ;

ಪದವಿಂಗಡಣೆ:
ನೊಂದವರು+ ಭೀಮಾರ್ಜುನರು +ಹಗೆ
ಯಿಂದ +ಹಳುವನ+ ಹೊಕ್ಕು +ಮನಸಿನ
ಕಂದು +ಕಸರಿಕೆ+ ಹೋಗದಾ +ದುರ್ಯೋಧನಾದಿಗಳ
ಕೊಂದು +ಕಳದಲಿ+ ಮತ್ತೆ +ಗಜಪುರಿಗ್
ಎಂದು +ಗಮಿಸುವೆವ್+ಎಂಬ +ತವಕಿಗರ್
ಇಂದು +ತಾವೇ +ಬಲ್ಲರೆಂದನು +ಧರ್ಮನಂದನನು

ಅಚ್ಚರಿ:
(೧) ಕ ಕಾರದ ಜೋಡಿ ಪದಗಳು – ಕಂದು ಕಸರಿಕೆ, ಕೊಂದು ಕಳದಲಿ

ಪದ್ಯ ೧೦: ಭೀಮನು ಕಾಡಿನ ಮಧ್ಯಭಾಗಕ್ಕೆ ಹೇಗೆ ಬಂದನು?

ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ (ಅರಣ್ಯ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಜೋರಾದ ಕೂಗಿಗೆ ಒಂದು ಯೋಜನ ವಲಯದಲ್ಲಿದ್ದ ಹುಲಿ, ಕರಡಿ, ಕಾಡಾನೆ, ಸಿಂಹ ಮುಂತಾದ ಕಾಡು ಪ್ರಾಣಿಗಳು ಹಿಂದಿರುಗಿ ನೋಡುತ್ತಾ ಓಡಿ ಹೋದವು. ಭೀಮನ ತುಳಿತಕ್ಕೆ ಕಾಡು ಕಡಿದ ಬಾಳೆಯ ತೋಟದಂತೆ ಬಯಲಾಗಿ ಕಾಣುತ್ತಿತ್ತು. ಹೀಗೆ ಮಹಾಪರಾಕ್ರಮಿಯಾದ ಭೀಮನು ಕಾಡಿನ ಮಧ್ಯಕ್ಕೆ ಬಂದನು.

ಅರ್ಥ:
ಹುಲಿ: ವ್ಯಾಘ್ರ; ಆನೆ: ಕರಿ, ಗಜ; ಕಾಡು: ಅರಣ್ಯ; ಸಿಂಹ: ಕೇಸರಿ; ಆವಳಿ: ಗುಂಪು; ದನಿ: ಧ್ವನಿ, ಶಬ್ದ; ಯೋಜನ: ಅಳತೆಯ ಪ್ರಮಾಣ; ಹಾಯು: ದಾಟು; ಓಡು: ಶೀಘ್ರವಾಗಿ ಚಲಿಸು; ನೋಡು: ವೀಕ್ಷಿಸು; ಮುರಿ: ಸೀಳು; ಹಳುವ: ಕಾಡು; ತಳಪಟ: ಅಂಗಾತವಾಗಿ ಬೀಳು, ಸೋಲು; ದಿಗ್ಗಜ: ಉದ್ದಾಮ ವ್ಯಕ್ತಿ, ಶ್ರೇಷ್ಠ; ತುಳಿ: ಮೆಟ್ಟು; ಬಾಳೆ: ಕದಳಿ; ವನ: ಕಾಡು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕಲಿ: ಶೂರ; ಬಂದನು: ಆಗಮಿಸು; ವನ: ಕಾಡು; ಮಧ್ಯ; ನಡುಭಾಗ;

ಪದವಿಂಗಡಣೆ:
ಹುಲಿ +ಕರಡಿ +ಕಾಡಾನೆ +ಸಿಂಹಾ
ವಳಿಗಳ್+ಈತನ +ದನಿಗೆ +ಯೋಜನ
ವಳೆಯದಲಿ+ ಹಾಯ್ದ್+ಓಡಿದವು +ನೋಡುತ್ತ +ಮುರಿಮುರಿದು
ಹಳುವ +ತಳಪಟವಾಯ್ತು +ದಿಗ್ಗಜ
ತುಳಿದ +ಬಾಳೆಯ +ವನದವೊಲು +ವೆ
ಗ್ಗಳೆಯನೈ+ ಕಲಿ+ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು
(೨) ಕಾಡು, ಹಳುವ, ವನ – ಸಮನಾರ್ಥಕ ಪದಗಳು

ಪದ್ಯ ೪೧: ಪಾಂಡವರೇಕೆ ರಾಜ್ಯವನ್ನು ಕೈಬಿಡರು?

ತಾಗುವಪಕೀರಿತಿಗೆ ಹೇಸುವ
ರಾಗಿ ಸತ್ಯವ ಕಾದು ಹಳುವವ
ಭೋಗಿಸಿದೊಡದು ಕುಲಕೆ ಕುಂದೇ ಪಾಂಡುನಂದನರು
ನೀಗಿದರು ವನವಾಸವನು ಸರಿ
ಭಾಗದವನಿಯ ಕೊಳ್ವ ಚೆಲವನು
ಹೋಗ ಬಿಡುವನೆ ಭೀಮನೆಂದನು ಮತ್ತೆ ಮುರವೈರಿ (ಉದ್ಯೋಗ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅಪಕೀರ್ತಿಗೆ ಅಂಜಿ ಪಾಂಡವರು ಸತ್ಯ ರಕ್ಷಣೆಗಾಗಿ ವನವಾಸವನ್ನು ಮಾಡಿದರೆ ಅದು ಕುಲಕ್ಕೆ ಕುಂದು ತಂದ ಹಾಗುತ್ತದೆಯೆ? ವನವಾಸವನ್ನವರು ದಾಟಿದರು, ಅರ್ಧರಾಜ್ಯವನ್ನು ಪಡೆಯುವ ಛಲವನ್ನು ಭೀಮನು ಕೈಬಿಡುವವನೇೆ ಎಂದು ಕೃಷ್ಣನು ದುರ್ಯೋಧನನನ್ನು ಎಚ್ಚರಿಸಿದನು.

ಅರ್ಥ:
ತಾಗು: ಸೋಕು, ಅಂಟು; ಅಪಕೀರಿತಿ: ಅಪಯಶಸ್ಸು, ಅಪಮಾನ; ಹೇಸು:ಅಸಹ್ಯ, ಜುಗುಪ್ಸೆ; ಸತ್ಯ: ನಿಜ, ದಿಟ; ಕಾದು: ರಕ್ಷಣೆ; ಹಳುವ:ಕಾಡು; ಭೋಗಿಸು: ಆನಂದಿಸು; ಕುಲ: ವಂಶ; ಕುಂದು: ಕಳಂಕ, ನೂನ್ಯತೆ, ದೋಷ; ನೀಗು: ನಿವಾರಿಸಿಕೊಳ್ಳು; ವನವಾಸ: ಕಾಡಿನಲ್ಲಿ ಜೀವನ; ಸರಿ: ಸಮನಾದ; ಭಾಗ: ಅಂಶ, ಅಂಗ; ಅವನಿ: ಭೂಮಿ; ಕೋಳ್ವ: ಪಡೆ; ಚಲ: ದೃಢ ನಿಶ್ಚಯ; ಹೋಗ: ಹಾಗೆಯೆ, ಸುಮ್ಮನೆ; ಬಿಡು: ತ್ಯಜಿಸು; ಮುರವೈರಿ: ಕೃಷ್ಣ;

ಪದವಿಂಗಡಣೆ:
ತಾಗುವ್+ಅಪಕೀರಿತಿಗೆ+ ಹೇಸುವ
ರಾಗಿ +ಸತ್ಯವ +ಕಾದು +ಹಳುವವ
ಭೋಗಿಸಿದೊಡ್+ಅದು+ ಕುಲಕೆ +ಕುಂದೇ +ಪಾಂಡು+ನಂದನರು
ನೀಗಿದರು+ ವನವಾಸವನು +ಸರಿ
ಭಾಗದ್+ಅವನಿಯ +ಕೊಳ್ವ +ಚಲವನು
ಹೋಗ +ಬಿಡುವನೆ +ಭೀಮನೆಂದನು +ಮತ್ತೆ +ಮುರವೈರಿ

ಅಚ್ಚರಿ:
(೧) ಹೇಸುವ, ಹಳುವ, ಹೋಗ – ಹ ಕಾರದ ಪದಗಳ ಬಳಕೆ

ಪದ್ಯ ೩೨: ಪಾಂಡವರಿಗೆ ಯಾವ ಕೇಡನ್ನು ದುರ್ಯೋಧನನು ಬಗೆದನು?

ಹಲವು ಹೊಲ್ಲೆಹಗಳನು ಪಾಂಡವ
ರೊಳಗೆ ನೆನೆದೆನು ಮುಚ್ಚು ಮರೆಯೇ
ನಿಳೆಯ ಲೋಭದೊಳವರ ಕೆಡಿಸುವ ಹದನ ನೆಗಳಿದೆನು
ನೆಲನ ಕೊಂಡೆನು ಜೂಜುಗಾರರ
ವಿಲಗದೊಳು ಪಾಂಡವರ್ಗೆ ಪುನರಪಿ
ಹಳುವವೇ ಶರಣಲ್ಲದುಂಟೇ ಕೃಷ್ಣ ಹೇಳೆಂದ (ಉದ್ಯೋಗ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಎಲ್ಲರ ಮಾತನ್ನು ಕೇಳಿದ ದುರ್ಯೋಧನನು ಕೃಷ್ಣನನ್ನು ಉದ್ದೇಶಿಸಿ, ಪಾಂಡವರಿಗೆ ನಾನು ಹಲವಾರು ರೀತಿ ತೊಂದರೆಗಳನ್ನು ಕೊಟ್ಟಿದ್ದೇನೆ, ಇದರಲ್ಲಿ ಮುಚ್ಚು ಮರೆಯಿಲ್ಲದೆ ಹೇಳುತ್ತೇನೆ ಕೇಳು, ಭೂಮಿಯ ಅತಿಯಾಸೆಯಿಂದ ಅವರನ್ನು ಹಾಳುಮಾಡಲು ಪ್ರಯತ್ನಿಸಿದೆ, ಮೋಸದ ಜೂಜಿನಿಂದ ಅವರ ನೆಲವನ್ನು ವಶಪಡಿಸಿಕೊಂಡೆ, ಪಾಂಡವರಿಗೆ ಮತ್ತೆ ಕಾಡೇ ಗತಿ ಎಂದು ದುರ್ಯೋಧನನು ಕೃಷ್ಣನಿಗೆ ತಿಳಿಸಿದನು.

ಅರ್ಥ:
ಹಲವು: ಬಹಳ; ಹೊಲ್ಲೆಹ: ದೋಷ; ನೆನೆ: ಜ್ಞಾಪಿಸಿಕೊ; ಮುಚ್ಚು: ಮರೆಮಾಡು; ಮರೆ: ಕಾಣಿಸದಂತೆ ಮಾಡು; ಇಳೆ: ಭೂಮಿ; ಲೋಭ: ಅತಿಯಾಸೆ; ಕೆಡಿಸು: ಹಾಳುಮಾಡು; ಹದ:ರೀತಿ; ನೆಗಳು: ಮಾಡು, ಆಚರಿಸು; ನೆಲ: ಭೂಮಿ; ಕೊಂಡೆ: ಪಡೆದೆ; ಜೂಜು: ಜುಗಾರಿ, ಸಟ್ಟ; ವಿಲಗ: ವೈರ, ದ್ವೇಷ; ಪುನರಪಿ: ಮತ್ತೆ; ಹಳುವ: ಕಾಡು; ಶರಣು: ಆಶ್ರಯ, ವಂದನೆ;
ಹೇಳು: ತಿಳಿಸು;

ಪದವಿಂಗಡಣೆ:
ಹಲವು +ಹೊಲ್ಲೆಹಗಳನು +ಪಾಂಡವ
ರೊಳಗೆ +ನೆನೆದೆನು +ಮುಚ್ಚು +ಮರೆಯೇನ್
ಇಳೆಯ +ಲೋಭದೊಳ್+ಅವರ +ಕೆಡಿಸುವ +ಹದನ +ನೆಗಳಿದೆನು
ನೆಲನ +ಕೊಂಡೆನು +ಜೂಜುಗಾರರ
ವಿಲಗದೊಳು +ಪಾಂಡವರ್ಗೆ +ಪುನರಪಿ
ಹಳುವವೇ +ಶರಣಲ್ಲದ್+ಉಂಟೇ +ಕೃಷ್ಣ +ಹೇಳೆಂದ

ಅಚ್ಚರಿ:
(೧) ಹಲವು, ಹೊಲ್ಲೆಹ, ಹಳುವ, ಹದ – ‘ಹ’ಕಾರದ ಪದಗಳ ಬಳಕೆ
(೨) ಮುಚ್ಚು ಮರೆ – ಆಡು ಪದಗಳ ಬಳಕೆ