ಪದ್ಯ ೨೮: ಧೃಷ್ಟದ್ಯುಮ್ನನು ಸಾತ್ಯಕಿಯನ್ನು ಹೇಗೆ ಹಳಿದನು?

ತನ್ನೊಳಿದ್ದವಗುಣವ ನೋಡದೆ
ಚುನ್ನವಾಡುವನಿದಿರನೆಲವೋ
ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ
ನಿನ್ನೆ ಶಸ್ತ್ರವ ಬಿಸುಟ ಯೋಗವಿ
ಪನ್ನನನು ನೀನೇನ ಮಾಡಿದೆ
ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ (ದ್ರೋಣ ಪರ್ವ, ೧೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ತನ್ನ ಅವಗುಣವನ್ನು ನೋಡಿಕೊಳ್ಳದೇ ಪರರನ್ನು ಹೀಗಳೆದು ಮಾತಾಡುತ್ತೀಯಾ? ಎಲೋ ಬಾಹಿರ ನಿನ್ನಮ್ಥ ಭಂಡರು ಭೂಮಿಯ ಮೇಲೆ ಯಾರಿದ್ದಾರೆ? ಶಸ್ತ್ರವನ್ನು ಬಿಟ್ಟು ಯೋಗದಲ್ಲಿದ್ದ ಭೂರಿಶ್ರವನನ್ನು ನೀನು ನಿನ್ನೆಯ ದಿನ ಏನು ಮಾದಿದೆ? ನಿನ್ನನ್ನು ಪರೀಕ್ಷಿಸಿಕೊಳ್ಳದೆ ಪರರನ್ನು ಏಕೆ ಹಳೆಯುತ್ತಿರುವೆ ಎಂದನು.

ಅರ್ಥ:
ಅವಗುಣ: ದುರ್ಗುಣ, ದೋಷ; ನೋಡು: ವೀಕ್ಷಿಸು; ಚುನ್ನ: ನಿಂದೆ, ಬಯ್ಗಳು; ಇದಿರು: ಎದುರು; ಹೋಲು: ಸದೃಶವಾಗು; ಬಾಹಿರ: ಹೊರಗಿನವ; ಭಂಡ: ನಾಚಿಕೆ, ಲಜ್ಜೆ; ಅವನಿ: ಭೂಮಿ; ಶಸ್ತ್ರ: ಆಯುಧ; ಬಿಸುಟು: ಹೊರಹಾಕು; ಯೋಗ: ಏಕಾಗ್ರತೆ, ಧ್ಯಾನ, ಉಪಾಸನಾ ಭಾಗ; ವಿಪನ್ನ: ದುರ್ಗತಿಯಲ್ಲಿರುವವನು; ಶೋಧಿಸು: ಚೊಕ್ಕಟಗೊಳಿಸು, ಶುದ್ಧಿಮಾಡು; ಬಳಿಕ: ನಂತರ; ಪರ: ದೂರವಾದುದು; ಹಳಿ: ನಿಂದೆ;

ಪದವಿಂಗಡಣೆ:
ತನ್ನೊಳಿದ್ದ್+ಅವಗುಣವ +ನೋಡದೆ
ಚುನ್ನವಾಡುವನ್+ಇದಿರನ್+ಎಲವೋ
ನಿನ್ನ+ ಹೋಲುವರಾರು +ಬಾಹಿರ +ಭಂಡರ್+ಅವನಿಯಲಿ
ನಿನ್ನೆ +ಶಸ್ತ್ರವ +ಬಿಸುಟ +ಯೋಗ+ವಿ
ಪನ್ನನನು +ನೀನ್+ಏನ +ಮಾಡಿದೆ
ನಿನ್ನ +ಶೋಧಿಸಿ +ಬಳಿಕ +ಪರರನು+ ಹಳಿವುದೇನೆಂದ

ಅಚ್ಚರಿ:
(೧) ಶುಭಾಷಿತ ನುಡಿ – ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ

ಪದ್ಯ ೩೮: ಅರ್ಜುನನು ಹೇಗೆ ದುಃಖಿಸಿದನು?

ಆವ ಸುವ್ರತ ಭಂಗವೋ ಮೇ
ಣಾವ ದೈವದ್ರೋಹವೋ ತಾ
ನಾವ ಶಿವಭಕ್ತಾಪರಾಧವೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ತಾ
ನಾವ ಧರ್ಮವನಳಿದೆನೋ ತನ
ಗೀವಿಧಿಯ ಪರಿಭವ ಮಹೀರುಹ ಫಲಿತವಾಯ್ತೆಂದ (ಅರಣ್ಯ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಪೂರ್ವಜನ್ಮದಲ್ಲಿ ಯಾವ ವ್ರತವನ್ನು ಭಂಗಗೊಳಿಸಿದೆನೋ? ಯಾವ ದೈವ ದ್ರೋಹವನ್ನು ಮಾಡಿದೆನೋ? ಯಾವ ಶಿವ ಭಕ್ತರಿಗೆ ಅಪರಾಧವನ್ನೆಸಗಿದೆನೋ? ಯಾವ ಹಿರಿಯರನ್ನು ನಿಂದಿಸಿದೆನೋ? ಯಾವ ಕರ್ತವ್ಯವನ್ನು ಕೆಡಿಸಿದೆನೋ? ಈಗ ಈ ರೀತಿಯಲ್ಲಿ ಸೋಲಿನ ಮರ ಹಣ್ಣು ನೀಡಿದೆ ಎಂದು ಅರ್ಜುನನು ದುಃಖಿಸಿದನು.

ಅರ್ಥ:
ಸುವ್ರತ: ಶ್ರೇಷ್ಠವಾದ ವ್ರತ; ವ್ರತ: ನಿಯಮ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಮೇಣ್: ಅಥವ, ಮತ್ತು; ದೈವ: ಭಗವಂತ; ದ್ರೋಹ: ವಿಶ್ವಾಸಘಾತ, ವಂಚನೆ; ಭಕ್ತ: ಆರಾಧನೆ; ಅಪರಾಧ: ತಪ್ಪು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ಹಿರಿಯ: ದೊಡ್ಡವ; ಹಳಿ: ಅನ್ಯಾಯದ ಆರೋಪ, ನಿಂದೆ; ಧರ್ಮ: ಧಾರಣೆ ಮಾಡಿದುದು; ಅಳಿ: ನಾಶ; ವಿಧಿ: ಆಜ್ಞೆ, ಆದೇಶ; ಪರಿಭವ: ಸೋಲು; ಮಹೀರುಹ: ವೃಕ್ಷ, ಮರ; ಫಲಿತ: ಹಣ್ಣಾಗುವುದು;

ಪದವಿಂಗಡಣೆ:
ಆವ +ಸುವ್ರತ +ಭಂಗವೋ +ಮೇಣ್
ಆವ +ದೈವದ್ರೋಹವೋ+ ತಾನ್
ಆವ +ಶಿವಭಕ್ತ+ಅಪರಾಧವೊ +ಪೂರ್ವಜನ್ಮದಲಿ
ಆವ+ ಹಿರಿಯರ+ ಹಳಿದೆನೋ+ ತಾನ್
ಆವ +ಧರ್ಮವನ್+ಅಳಿದೆನೋ +ತನಗ್
ಈ+ವಿಧಿಯ +ಪರಿಭವ +ಮಹೀರುಹ+ ಫಲಿತವಾಯ್ತೆಂದ

ಅಚ್ಚರಿ:
(೧) ಸೋತೆನು ಎಂದು ಹೇಳುವ ಪರಿ – ಪರಿಭವ ಮಹೀರುಹ ಫಲಿತವಾಯ್ತೆಂದ
(೨) ಭಂಗ, ದ್ರೋಹ, ಅಪರಾಧ, ಹಳಿ, ಅಳಿ – ಪದಗಳ ಬಳಕೆ

ಪದ್ಯ ೨೪: ಕರ್ಣನು ಬೈಯ್ದರೆ ಪ್ರಯೋಜನವಿಲ್ಲವೆಂದು ಶಲ್ಯನು ಏಕೆ ಹೇಳಿದನು?

ಏಸು ಪರಿಯಲಿ ನುಡಿದು ನಮ್ಮಯ
ದೇಶವನು ನೀ ಹಳಿದಡೆಯು ನೀ
ನೇಸು ಪರಿಯಲಿ ಬಯ್ದು ಭಂಗಿಸಿ ನಮ್ಮ ದೂರಿದಡೆ
ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ
ಮೀಸಲರಿಯಾ ಕರ್ಣ ನಿನ್ನೊಡಲೆಂದನಾ ಶಲ್ಯ (ಕರ್ಣ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕರ್ಣ ನೀನು ನಮ್ಮ ದೇಶವನ್ನು ಎಷ್ಟೇ ಹಳಿದರೂ, ನಮ್ಮನ್ನು ಬೈದು, ಭಂಗಿಸಿ, ನಿಂದಿಸಿದರೂ, ಅರ್ಜುನನ ಗಾಂಡೀವ ಬಿಲ್ಲಿನಿಂದ ವೇಗವಾಗಿ ಹೊರಟು ಆಕಾಶದಲ್ಲಿ ಸದ್ದು ಮಾಡುತ್ತಾ ಬರುವ ಬಾಣಗಳಿಗೆ ನಿನ್ನ ದೇಹವು ಮೀಸಲಾಗಿರುವುದು ಸುಳ್ಳಲ್ಲ ಎಂದು ಶಲ್ಯನು ನುಡಿದನು.

ಅರ್ಥ:
ಏಸು: ಎಷ್ಟು; ಪರಿ: ರೀತಿ; ನುಡಿ: ಮಾತಾಡು; ದೇಶ: ರಾಷ್ಟ್ರ; ಹಳಿ: ಬಯ್ಯು, ಜರಿ; ಭಂಗಿಸು:ಅಪಮಾನ ಮಾಡು; ದೂರು: ಮೊರೆ, ಅಹವಾಲು; ಸಿತ: ಬಿಳಿ; ಅಶ್ವ: ಕುದುರೆ; ಬಿಲ್ಲು: ಚಾಪ; ಒದೆ: ಹೊಡಿ; ಆಕಾಶ: ಗಗನ; ಅವ್ವಳಿಸು: ಅಪ್ಪಳಿಸು; ಶರ: ಬಾಣ; ಔಘ: ಗುಂಪು, ಸಮೂಹ; ಮೀಸಲು:ಮುಡಿಪು; ಒಡಲು: ದೇಹ;

ಪದವಿಂಗಡಣೆ:
ಏಸು +ಪರಿಯಲಿ +ನುಡಿದು +ನಮ್ಮಯ
ದೇಶವನು +ನೀ +ಹಳಿದಡೆಯು +ನೀನ್
ಏಸು +ಪರಿಯಲಿ +ಬಯ್ದು +ಭಂಗಿಸಿ +ನಮ್ಮ +ದೂರಿದಡೆ
ಆ +ಸಿತಾಶ್ವನ +ಬಿಲ್ಲನೊದೆದ್
ಆಕಾಶಕ್+ಅವ್ವಳಿಸುವ +ಶರೌಘಕೆ
ಮೀಸಲರಿಯಾ +ಕರ್ಣ +ನಿನ್ನೊಡಲೆಂದನಾ +ಶಲ್ಯ

ಅಚ್ಚರಿ:
(೧) ಅರ್ಜುನನಿಂದ ಬರುವ ಬಾಣದ ಪರಿ – ಆ ಸಿತಾಶ್ವನ ಬಿಲ್ಲನೊದೆದಾ
ಕಾಶಕವ್ವಳಿಸುವ ಶರೌಘಕೆ ಮೀಸಲರಿಯಾ ಕರ್ಣ ನಿನ್ನೊಡಲ್
(೨) ಅರ್ಜುನನನ್ನು ಸಿತಾಶ್ವ ಎಂದು ಕರೆದಿರುವುದು
(೩) ಹಳಿ, ಬಯುದ್, ಭಂಗಿಸು, ದೂರು – ಪದಗಳ ಬಳಕೆ

ಪದ್ಯ ೨೮: ರಾಕ್ಷಸರು ದೇವತೆಗಳನ್ನು ಹೇಗೆ ಓಡಿಸಿದರು?

ಕಾದ ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು (ಕರ್ಣ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ದಾನವರ ಮುಖಗಳು ಕಾದ ಕಬ್ಬಿಣದ (ಲೋಹ) ಸರಳಿನಂತೆ ಕೆಂಪಾದವು. ಕೆಂಡದ ಮೇಲೆ ಬರುವ ತಿದಿಯ ಗಾಳಿಯಂತೆ ರಾಕ್ಷಸರು ಉರಿಯುತ್ತಾ ಬೆರಳಿನಿಂದ ಬಾಣಗಳನ್ನೆಳೆದು ದೇವತೆಗಳ ಮೇಲೆ ಬಿಟ್ಟು ಒಲೆಗೆ ಹೊಟ್ಟನ್ನು ತೂರುವಂತೆ ದೇವತೆಗಳನ್ನೋಡಿಸಿದರು.

ಅರ್ಥ:
ಕಾದ: ಬಿಸಿಯಾದ; ಲೋಹ: ಖನಿಜ ಧಾತು; ಹಳಿ: ಲೋಹದ ಪಟ್ಟಿ; ಕೆಂಪು: ರಕ್ತವರ್ಣ; ಅಸುರ: ದಾನವ; ಮೋರೆ: ಮುಖ; ತಿದಿ: ಕಮ್ಮಾರ ಕಬ್ಬಿಣಕಾಯಿಸಲು ಒಲೆಯಬೆಂಕಿಯನ್ನು ಉರಿಸಲು ಗಾಳಿ ಊದುವ ಚರ್ಮದ ಪದರಗಳ ಚೀಲ; ಊದು: ಬೀಸು, ತೀಡು; ಕಿಚ್ಚು: ಬೆಂಕಿ, ಅಗ್ನಿ; ಹೊದರು: ಗುಂಪು, ಸಮೂಹ; ಬಿಡು: ತೊರೆ, ತ್ಯಜಿಸು; ಭುಗಿಲಿಡು: ಭುಗಿಲ್ ಎಂದು ಶಬ್ದ ಮಾಡು; ಸೇದು:ಮುದುಡು, ಸಂಕೋಚಗೊಳ್ಳು; ಬೆರಳು: ಅಂಗುಲಿ; ತಿರುವು: ತಿರುಗಿಸು; ಅಂಬು: ಬಾಣ; ಎಸಗು: ಮಾಡು; ಬಿರು: ಬಿರುಸಾದುದು; ಅಗ್ಗ:ಹಗುರ; ಕೈದುಕಾರ: ಕತ್ತಿಯನ್ನು ಹಿಡಿದ ಸೈನಿಕ; ಕೆಣಕು: ಪ್ರಚೋದಿಸು; ಅಮರ: ದೇವತೆ; ಹೊಟ್ಟು: ವ್ಯರ್ಥವಾದ; ತೂರು: ನೂಕು, ಹೋರಹಾಕು;

ಪದವಿಂಗಡಣೆ:
ಕಾದ +ಲೋಹದ +ಹಳಿಯವೊಲು +ಕೆಂ
ಪಾದವ್+ಅಸುರರ +ಮೋರೆಗಳು +ತಿದಿ
ಯೂದು+ ಕಿಚ್ಚಿನ +ಹೊದರಿನಂತಿರೆ+ ಬಿಡದೆ +ಭುಗಿಲಿಡುತ
ಸೇದು +ಬೆರಳಿನ +ತಿರುವಿನ್+ಅಂಬಿನ
ವಾದಿನ್+ಎಸುಗೆಯ +ಬಿರುದರ್+ಅಗ್ಗದ
ಕೈದುಕಾರರು +ಕೆಣಕಿದ್+ಅಮರರ +ಹೊಟ್ಟ +ತೂರಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾದ ಲೋಹದ ಹಳಿಯವೊಲು ಕೆಂಪಾದವಸುರರ ಮೋರೆಗಳು

ಪದ್ಯ ೪: ಧರ್ಮರಾಯನು ಕೃಷ್ಣನಲ್ಲಿ ಏನು ಬೇಡಿದನು?

ಅಳಿವುವೊಡಲುಗಳವನಿ ಸಾಗರ
ವುಳಿಯಲುಳಿವುದು ಕೀರ್ತಿ ಸೋದರ
ರೊಳಗೊಳಗೆ ಹೊಯ್ದಾಡಿ ಕೆಟ್ಟರುಯೆಂಬ ದುರಿಯಶದ
ಹಳಿವು ಹೊರುವುದು ದೇವ ಸುಡಲಾ
ನೆಲನನಾ ಕೌರವನ ಕೈಯಲಿ
ಕೆಲವು ನಗರಿಯ ಕೊಡಿಸಿ ನಮ್ಮನು ಸಂತವಿಡಿಯೆಂದ (ಉದ್ಯೋಗ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಈ ದೇಹವು ನಶಿಸಿಹೋಗುತ್ತದೆ, ಭೂಮಿ ಸಾಗರಗಳಿರುವವರೆಗೂ ಕೀರ್ತಿಯುಳಿಯುತ್ತದೆ. ಸಹೋದರರು ಪರಸ್ಪರ ಯುದ್ಧ ಮಾದಿ ಕೆಟ್ಟಾರು ಎಂಬ ಕೆಟ್ಟ ಹೆಸರು ನಮ್ಮ ತಲೆಯ ಮೇಲೆ ನಿಲ್ಲುತ್ತದೆ. ದೇವ ಈ ಭೂಮಿಯಿಂದ ನಮಗೇನು? ಕೌರವನಿಂದ ಕೆಲವು ನಗರಗಳನ್ನು ಕೊಡಿಸಿ ನಾವು ನೆಮ್ಮದಿಯಿಂದಿರುವಂತೆ ಮಾಡಿ ಎಂದು ಕೃಷ್ಣನಲ್ಲಿ ಧರ್ಮರಾಯ ಬೇಡಿಕೊಂಡನು.

ಅರ್ಥ:
ಅಳಿ: ನಾಶ; ಒಡಲು: ಶರೀರ; ಅವನಿ: ಭೂಮಿ; ಸಾಗರ: ಸಮುದ್ರ; ಉಳಿಯಲು: ಬದುಕಿರು, ನಿಲ್ಲು; ಕೀರ್ತಿ: ಖ್ಯಾತಿ; ಸೋದರ: ಬಂಧು; ಹೊಯ್ದಾಡು: ಹೊಡೆದಾಡು; ಕೆಟ್ಟರು: ಹಾಳಾಗು; ದುರಿಯಶ: ಅಪಕೀರ್ತಿ; ಹಳಿ: ಅನ್ಯಾಯದ ಆರೋಪ, ನಿಂದೆ; ಹೊರು: ಹೇರು; ದೇವ: ಭಗವಂತ; ಸುಡಲು: ಸುಟ್ಟು ಹಾಕು, ದಹಿಸು; ನೆಲ: ಭೂಮಿ; ಕೆಲವು: ಸ್ವಲ್ಪ; ನಗರಿ: ಪಟ್ಟಣ; ಕೊಡಿಸು: ನೀಡು; ಸಂತವಿಡಿ: ಸಂತಸ, ನೆಮ್ಮದಿ;

ಪದವಿಂಗಡಣೆ:
ಅಳಿವುವ್+ಒಡಲುಗಳ್+ಅವನಿ +ಸಾಗರ
ವುಳಿಯಲ್+ಉಳಿವುದು +ಕೀರ್ತಿ +ಸೋದರರ್
ಒಳಗೊಳಗೆ +ಹೊಯ್ದಾಡಿ +ಕೆಟ್ಟರು+ಯೆಂಬ +ದುರಿಯಶದ
ಹಳಿವು+ ಹೊರುವುದು +ದೇವ +ಸುಡಲಾ
ನೆಲನನ್+ಆ+ ಕೌರವನ+ ಕೈಯಲಿ
ಕೆಲವು +ನಗರಿಯ +ಕೊಡಿಸಿ +ನಮ್ಮನು +ಸಂತವಿಡಿಯೆಂದ

ಅಚ್ಚರಿ:
(೧) ಅಳಿ, ಉಳಿ, ಹಳಿ – ಪ್ರಾಸ ಪದ
(೨) ‘ಕ’ ಕಾರದ ತ್ರಿವಳಿ ಪದ – ಕೌರವನ ಕೈಯಲಿ ಕೆಲವು
(೩) ಕೀರ್ತಿ, ದುರಿಯಶ – ವಿರುದ್ಧ ಪದ

ಪದ್ಯ ೫೩: ಅಧಮ ರಾಜರ ವಿನಾಶಕ್ಕೆ ಯಾವೆಂಟು ಕಾರಣಗಳು?

ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ (ಉದ್ಯೋಗ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಧಮ ರಾಜನ ವಿನಾಶಕ್ಕೆ ಈ ಎಂಟು ಗುಣಗಳನ್ನು ವಿದುರ ಇಲ್ಲಿ ಹೇಳುತ್ತಾರೆ. ಈ ಪದ್ಯದಲ್ಲಿ ವಿದ್ವಾಂಸರನ್ನು ರಾಜ್ಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ನಾವು ಅರ್ಥೈಸಬಹುದು. ಪಂಡಿತರನ್ನು ದ್ವೇಷಿಸುವುದು, ವಿದ್ವಾಂಸರನ್ನು ಕೊನೆಗೊಳಿಸುವುದು, ಬುಧರನ್ನು ಅಪಹಾಸ್ಯ ಮಾದುವುದು, ಜ್ಞಾನಿಗಳನ್ನು ಬೈದಾಗ ಸಂತೋಷಪಡುವುದು, ಅವರನ್ನು ಹೊಗಳುವವರನ್ನು ನಿಂದಿಸುವುದು, ಜ್ಞಾನಿಗಳನ್ನು ಅಧಮರೆಂದು ಪರಿಗಣಿಸುವುದು, ಅವರ ಮೇಲೆ ನಿಯಂತ್ರಣ ಸಾಧಿಸಲು ಆಜ್ಞೆಯನ್ನು ಮಾಡುವುದು, ತಿಳಿದವರೆಂದರೆ ಕೋಪಗೊಳ್ಳುವುದು, ಈ ಎಂಟು ಗುಣಗಳು ರಾಜನಲ್ಲಿ ವ್ಯಕ್ತವಾದರೆ ಆವನು ವಿನಾಶದ ಹಾದಿಯಲ್ಲಿದ್ದಾನೆ ಎಂದು ತಿಳಿಯಬಹುದು.

ಅರ್ಥ:
ಬುಧ: ಪಂಡಿತ, ವಿದ್ವಾಂಸ; ಹಗೆ: ದ್ವೇಷ, ವೈರತ್ವ; ನಿಧನ: ಕೊನೆಗೊಳ್ಳು, ಸಾವು; ಐದು: ಹೊಂದು; ಏಳು:ಜೀವವನ್ನು ಪಡೆ; ಜರಿ: ನಿಂದಿಸು; ನಲಿ: ಸಂತೋಷ ಪಡು; ಹೊಗಳು: ಗೌರವಿಸು; ಹಳಿ: ನಿಂದಿಸು, ದೂಷಿಸು; ಅಧಮ: ಕೀಳು; ಮಾಳ್ಪ: ಮಾಡು; ವಿಧಿ:ಆಜ್ಞೆ, ಆದೇಶ; ಎನಲು: ಹೇಳುತ್ತಲೆ; ಕನಲು:ಸಿಟ್ಟಿಗೇಳು; ಅಧಮ: ಕೀಳುದರ್ಜೆಯ; ಭೂಪ: ರಾಜ; ಗುಣ: ನಡತೆ, ಸ್ವಭಾವ; ವಿನಾಶ: ಅಂತ್ಯ;

ಪದವಿಂಗಡಣೆ:
ಬುಧರೊಳಗೆ+ ಹಗೆಗೊಳುವ +ಬುಧರನು
ನಿಧನವೈದಿಪ+ ಬುಧರನ್+ಏಳಿಪ
ಬುಧರ+ ಜರೆದೊಡೆ +ನಲಿವ +ಬುಧರನು+ ಹೊಗಳುವರ+ ಹಳಿವ
ಬುಧರನ್+ಅಧಮರ+ ಮಾಳ್ಪ +ಬುಧರಂ
ವಿಧಿಗೊಳಿಪ+ ಬುಧರೆನಲು +ಕನಲುವನ್
ಅಧಮ +ಭೂಪರಿಗೆಂಟು +ಗುಣವು +ವಿನಾಶಕರವೆಂದ

ಅಚ್ಚರಿ:
(೧) ಬುಧ – ೮ ಬಾರಿ ಪ್ರಯೋಗ
(೨) ೮ ಗುಣಗಳನ್ನು ವಿವರಿಸುವ ಪದ್ಯ, ಹಗೆ, ನಿಧನ, ಏಳು, ಜರೆ, ಹಳಿ, ಅಧಮ, ವಿಧಿ, ಕನಲು

ಪದ್ಯ ೨೨: ಮಹಾಭಾರತದ ಕಥೆಯ ಶ್ರೇಷ್ಠತೆಯೇನು?

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದಡೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರಕರ್ಮಿಗಳೆತ್ತ ಬಲ್ಲರು
ಘೋರರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ (ಆದಿ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕಳ್ಳನನ್ನು ನಿಂದಿಸುತ್ತಾ ಚಂದ್ರನನ್ನು ಬೈದರೆ, ಕ್ಷಯರೋಗಿಯು ಹಾಲನ್ನು ಹಳಿದರೆ ಪುಣ್ಯಕ್ಷೇತ್ರವಾದ ವಾರಣಾಸಿಯನ್ನು ಹೆಳವನು ನಿಂದಿಸಿ ನಕ್ಕರೆ ಏನು ತಾನೆ ಆಗುವುದು. ಭಾರತದ ಕಥೆಯ ಪ್ರಸಂಗವನ್ನು ಕ್ರೂರಕರ್ಮಿಗಳು ಹೇಗೆ ತಾನೆ ಬಲ್ಲರು, ಈ ಕಥೆಯನ್ನು ಕೇಳಿದ ಸಜ್ಜನರಿಗೆ ರೌರವಾದಿ ಘೋರನರಕದ ಗತಿಯನ್ನು ತಪ್ಪಿಸಬಲ್ಲದು.

ಅರ್ಥ:
ಚೋರ: ಕಳ್ಳ; ನಿಂದಿಸು: ಬೈಯ್ಯುವುದು, ಹಳಿ, ದೂಷಿಸು; ಶಶಿ: ಚಂದ್ರ; ಕ್ಷೀರ: ಹಾಲು; ರೋಗ: ಖಾಯಿಲೆ; ಹಳಿ: ಬೈಯು; ಹೆಳವ: ಕುಂಟ; ನಿಂದಿಸು: ತೆಗಳು; ನಕ್ಕು: ಸಂತೋಷಿಸು; ಪ್ರಸಂಗ: ಸಂದರ್ಭ; ಕ್ರೂರ: ದುಷ್ಟ; ಬಲ್ಲ: ತಿಳಿ; ಘೋರ: ಉಗ್ರ; ರೌರವ: ನರಕ; ಕೆಡಿಸು: ತಪ್ಪಿಸು; ಸಜ್ಜನ: ಒಳ್ಳೆಯ ಜನ;

ಪದವಿಂಗಡಣೆ:
ಚೋರ +ನಿಂದಿಸಿ+ ಶಶಿಯ +ಬೈದಡೆ
ಕ್ಷೀರವನು +ಕ್ಷಯರೋಗಿ +ಹಳಿದಡೆ
ವಾರಣಾಸಿಯ +ಹೆಳವ +ನಿಂದಿಸಿ +ನಕ್ಕರೇನಹುದು
ಭಾರತದ+ ಕಥನ+ ಪ್ರಸಂಗವ
ಕ್ರೂರಕರ್ಮಿಗಳೆತ್ತ+ ಬಲ್ಲರು
ಘೋರ+ರೌರವವನ್ನು +ಕೆಡಿಸುಗು +ಕೇಳ್ದ +ಸಜ್ಜನರ

ಅಚ್ಚರಿ:
(೧) ನಿಂದಿಸು, ಬೈಯು, ಹಳಿ – ಸಮನಾರ್ಥಕ ಪದ
(೨) ಚೋರ, ಕ್ಷಯರೋಗಿ, ಹೆಳವ, ಕ್ರೂರಕರ್ಮಿ – ದುಷ್ಟರನ್ನು ಹೇಳಲು ಪ್ರಯೋಗಿಸಿದ ಪದಗಳು