ಪದ್ಯ ೩೪: ಕುರುಪತಿಯು ಯಾರ ಮೇಲೆ ಮತ್ತೆ ಯುದ್ಧಮಾಡಲು ಮುಂದಾದನು?

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ (ಗದಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಕುನಿಯ ದಳದಲ್ಲಿ ಓಡಿಹೋಗಿ ಬದುಕಿದವರು, ಧೈರ್ಯವನ್ನು ಮಾಡಿ ಒಂದುಗೂಡಿ ನೂರು ಆನೆಗಳೊಡನೆ ಕೌರವನನ್ನು ಕೂಡಿಕೊಂಡಿತು. ಕೌರವನು ಏಕೆ ಓಡಿಹೋಗಲಿ, ಇನ್ನೊಂದು ಹಲಗೆ ಆಟವಾಡೋಣ ಎನ್ನುವಂತೆ ಸಹದೇವನ ಮೇಲೆ ಆಕ್ರಮಣ ಮಾಡಿದನು.

ಅರ್ಥ:
ಓಡು: ಧಾವಿಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಹರಿಹಂಚು: ಚದುರಿದ; ಸುಭಟ: ಸೈನಿಕ; ಕೂಡು: ಜೊತೆಯಾಗು, ಸೇರು; ನೂರು: ಶತ; ಮದದಾನೆ: ಮತ್ತಿನಿಂದ ಕೂಡಿದ ಗಜ; ಹಲಗೆ: ಪಲಗೆ, ಮರ, ಜೂಜಿನ ಒಂದು ಆಟ; ನೋಡು: ವೀಕ್ಷಿಸು; ಕೈಮಾಡು: ಹೋರಾಡು; ಇದಿರು: ಎದುರು;

ಪದವಿಂಗಡಣೆ:
ಓಡಿದವರ್+ಅಲ್ಲಲ್ಲಿ +ಧೈರ್ಯವ
ಮಾಡಿ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೂರು +ಮದದಾನೆಯಲಿ +ಕುರುಪತಿಯ
ಓಡಲೇಕಿನ್ನೊಂದು +ಹಲಗೆಯನ್
ಆಡಿ +ನೋಡುವೆನೆಂಬವೊಲು +ಕೈ
ಮಾಡಿದನು +ಕುರುರಾಯನ್+ಆ+ ಸಹದೇವನ್+ ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಲೇಕಿನ್ನೊಂದು ಹಲಗೆಯನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯ
(೨) ಕುರುಪತಿ, ಕುರುರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೬೬: ಕುರುಸೇನೆಯು ಏಕೆ ಮುತ್ತಿಗೆ ಹಾಕಿತು?

ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದು ಮತ್ತೆ ಕುರುಸೇನೆ (ಗದಾ ಪರ್ವ, ೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ಇಲ್ಲಿ ಅಲ್ಲಿ ಉಳಿದ ಕೌರವ ಸೇನೆಯ ಸುಭಟರು ಒಟ್ಟಾಗಿ ಕೂಡಿದರು. ಕೌರವನು ಓಡಿಹೋದ ಮೇಲೆ ಉಳಿದ ಸೈನ್ಯ ನೋಡಿಯೇ ಬಿಡಬೇಕು, ತನಗಾಗಿ ಯುದ್ಧವನ್ನು ಮಾಡಿಸಿದ ಭೂಮಿದೇವಿಗೆ ಬೆಲೆಯನ್ನು ತೆತ್ತೇ ಬಿಡೋಣ ಎಂದು ಕುರುಸೇನೆಯು ಮತ್ತೆ ಮುತ್ತಿತು.

ಅರ್ಥ:
ಕೂಡೆ: ಜೊತೆ; ಹರಿಹಂಚಾದ: ಚೆಲ್ಲಾಪಿಲ್ಲಿಯಾದ; ಸುಭಟ: ಪರಾಕ್ರಮಿ; ನೊಂದು: ಬೇಸರಪಡು; ನಸ: ಹಾಳಾಗು; ಓಡು: ಧಾವಿಸು; ಒಗ್ಗು: ಗುಂಪು, ಸಮೂಹ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ನೋಡು: ವೀಕ್ಷಿಸು; ಆಹವ: ಯುದ್ಧ; ವಸುಧ: ಭೂಮಿ; ಅಂಗನೆ: ಹೆಣ್ಣು; ಬೆಲೆ: ಮೌಲ್ಯ; ಮತ: ವಿಚಾರ; ಕವಿ: ಆವರಿಸು;

ಪದವಿಂಗಡಣೆ:
ಕೂಡೆ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೊಂದು +ನಸಿದವರ್
ಓಡಿದವರ್+ಒಗ್ಗಾಯ್ತು +ಕುರುರಾಯನ +ಪರೋಕ್ಷದಲಿ
ನೋಡಲಹುದ್+ಆಹವದೊಳಗೆ +ಕೈ
ಮಾಡಿಸಿದ +ವಸುಧಾಂಗನೆಗೆ +ಬೆಲೆ
ಮಾಡುವುದು +ಮತವೆಂದು +ಕವಿದುದು +ಮತ್ತೆ +ಕುರುಸೇನೆ

ಅಚ್ಚರಿ:
(೧) ಕುರುಸೇನೆಯರ ವಿಚಾರ – ಕೈ ಮಾಡಿಸಿದ ವಸುಧಾಂಗನೆಗೆ ಬೆಲೆ ಮಾಡುವುದು ಮತವೆಂದು ಕವಿದುದು ಮತ್ತೆ

ಪದ್ಯ ೮: ಅಶ್ವತ್ಥಾಮನ ಕೋಪದ ತೀವ್ರತೆ ಹೇಗಿತ್ತು?

ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ (ದ್ರೋಣ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ತುಂಡು ತುಂಡಾದ ತನ್ನ ತಂದೆಯ ದೇಹವನ್ನು ನೋಡುವ ಮೊದಲೇ ಕಣ್ಣಾಲಿಯಲ್ಲಿ ನೀರುತುಂಬಿ ದೇಹವು ಕಾಣಿಸಲಿಲ್ಲ. ನೋಡಲು ಇಚ್ಛೆ ಬರಲಿಲ್ಲ. ಅದಕ್ಕೆ ಮೊದಲೇ ಅಶ್ವತ್ಥಾಮನ ಕಣ್ಣೂಗಳು ಕೆಂಪಾಗಿ ಕಿಡಿಯುಗುಳಿದವು. ರೋಷದಲ್ಲಿ ಪಾಂಡವರ ಸೈನ್ಯವೇ ಕಾಣಲಿಲ್ಲ.

ಅರ್ಥ:
ಕೂಡು: ಜೊತೆ; ಹರಿ: ಸೀಳು; ಹಂಚು: ಹರಡು; ತಂದೆ: ಪಿತ; ಗೂಡು: ದೇಹ; ನೋಡು: ವೀಕ್ಷಿಸು; ಮುನ್ನ: ಮೊದಲು; ಕಂಬನಿ: ಕಣ್ಣೀರು; ಮೂಡು: ಹೊಮ್ಮು; ಮುಳುಗು: ತೋಯು, ಮಿಂದು; ಆಲಿ: ಕಣ್ಣು; ಕಾಣು: ತೋರು; ಪಿತೃ: ತಂದೆ; ಕಳೇವರ: ಪಾರ್ಥಿವ ಶರೀರ; ಎಳಸು: ಬಯಸು, ಅಪೇಕ್ಷಿಸು; ಮುನ್ನ: ಮೊದಲು; ಕಿಡಿ: ಬೆಂಕಿ; ಝಾಡಿ: ಕಾಂತಿ; ಕಣ್ಣು: ನಯನ; ಮಿಗೆ: ಅಧಿಕವಾಗಿ; ಕಾಣು: ತೋರು; ಪರಬಲ: ವೈರಿ ಸೇನೆ;

ಪದವಿಂಗಡಣೆ:
ಕೂಡೆ +ಹರಿಹಂಚಾದ +ತಂದೆಯ
ಗೂಡ +ನೋಡದ +ಮುನ್ನ +ಕಂಬನಿ
ಮೂಡಿ +ಮುಳುಗಿದವ್+ಆಲಿ +ಕಾಣವು +ಪಿತೃ+ಕಳೇವರವ
ನೋಡಲ್+ಎಳಸದ +ಮುನ್ನ +ಕಿಡಿಗಳ
ಝಾಡಿಯನು +ಕಣ್ಣುಗುಳಿದವು +ಮಿಗೆ
ನೋಡಿದ್+ಅಶ್ವತ್ಥಾಮ +ಕಾಣನು +ಮುಂದೆ +ಪರಬಲವ

ಅಚ್ಚರಿ:
(೧) ದೇಹವೆಂದು ಹೇಳಲು – ಗೂಡು ಪದದ ಬಳಕೆ
(೨) ತಂದೆ, ಪಿತೃ – ಸಮಾನಾರ್ಥಕ ಪದ

ಪದ್ಯ ೨೪: ಕರ್ಣನನ್ನು ಹೇಗೆ ಗೆಲ್ಲುವೆ ಎಂದು ಧರ್ಮಜನು ಅರ್ಜುನನನ್ನು ಕೇಳಿದನು?

ಮುರಿದು ಹರಿಹಂಚಾದ ನಿಜ ಮೋ
ಹರವ ನೆರೆ ಸಂತೈಸಿ ಜೋಡಿಸಿ
ಜರೆದು ಗರಿಗಟ್ಟಿದ ವಿರೋಧಿವ್ರಜದ ಥಟ್ಟಣೆಯ
ಮುರಿದು ಕುರಿದರಿ ಮಾಡಿ ದೊರೆಗಳ
ನರಸಿ ಕಾದಿ ವಿಭಾಡಿಸುವ ರಣ
ದುರಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ (ಕರ್ಣ ಪರ್ವ, ೧೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಧರ್ಮಜನು ಕರ್ಣನ ಪರಾಕ್ರಮವನ್ನು ವರ್ಣಿಸುತ್ತಾ, ಕರ್ಣನ ಸೈನ್ಯವು ಚೆಲ್ಲುವಂತೆ ಹೊಡೆದರೆ, ಅದನ್ನು ಸಂತೈಸಿ ಜೋಡಿಸಿಕೊಳ್ಳುವನು. ವೈರಿಗಳ ಸೈನ್ಯದ ಒಗ್ಗಟ್ಟನ್ನು ಮುರಿದು ಕುರಿಗಳಂತೆ ವಿರೋಧಿಗಳನ್ನು ಕೊಂದು ದೊರೆಗಳನ್ನು ಹುಡುಕಿ ಕಾದಿ ಬಡಿದು ಹಾಕುವ ಮಹಾಯೋಧನನ್ನು ನೀನು ಹೇಗೆ ತಡೆಯುವೆ ಹೇಗೆ ಗೆಲ್ಲುವೆ ಎಂದು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಹರಿಹಂಚಾದ: ಚೆಲ್ಲಾಪಿಲ್ಲಿಯಾದ; ನಿಜ: ದಿಟ; ಮೋಹರ: ಯುದ್ಧ, ಕಾಳಗ; ನೆರೆ: ಹೆಚ್ಚು; ಸಂತೈಸು: ಸಮಾಧಾನಿಸು; ಜೋಡಿಸು: ಕೂಡು; ಜರೆ: ಬಯ್ಯು; ಗರಿಗಟ್ಟು: ಶಕ್ತಿಶಾಲಿಯಾಗು; ವಿರೋಧ: ವೈರಿ, ಶತ್ರು; ವ್ರಜ: ಗುಂಪು; ಥಟ್ಟಣೆ: ಮಹಾಸಮೂಹ, ಮುತ್ತಿಗೆ; ಕುರಿದರಿ: ಸಣ್ಣದಾಗಿ ಕತ್ತರಿಸಿ; ದೊರೆ: ರಾಜ; ಅರಸು: ಹುಡುಕಿ; ಕಾದು: ಯುದ್ಧ; ವಿಭಾಡಿಸು: ನಾಶಮಾಡು; ರಣ:ಯುದ್ಧ; ಉರುಬೆ:ಅಬ್ಬರ; ಸೈರಿಸು: ತಾಳು, ಸಹಿಸು; ಗೆಲುವು: ಜಯ;

ಪದವಿಂಗಡಣೆ:
ಮುರಿದು +ಹರಿಹಂಚಾದ +ನಿಜ +ಮೋ
ಹರವ +ನೆರೆ +ಸಂತೈಸಿ +ಜೋಡಿಸಿ
ಜರೆದು +ಗರಿಗಟ್ಟಿದ +ವಿರೋಧಿ+ವ್ರಜದ+ ಥಟ್ಟಣೆಯ
ಮುರಿದು +ಕುರಿದರಿ+ ಮಾಡಿ +ದೊರೆಗಳನ್
ಅರಸಿ +ಕಾದಿ +ವಿಭಾಡಿಸುವ+ ರಣ
ದುರಬೆಕಾರನನ್+ಎಂತು +ಸೈರಿಸಿ+ ಗೆಲುವೆ +ನೀನೆಂದ

ಅಚ್ಚರಿ:
(೧) ಹರಿಹಂಚಾದ, ಗರಿಗಟ್ಟಿದ, ಕುರಿದರಿ, ರಣದುರುಬೆಕಾರ – ಪದಗಳ ಬಳಕೆ