ಪದ್ಯ ೫೧: ಮೊದಲನೇ ಹಲಗೆಯನು ಯಾರು ಗೆದ್ದರು?

ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ (ಸಭಾ ಪರ್ವ, ೧೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಧರ್ಮಜನು ಸೋತನು, ಶಕುನಿಯು ಬೇಡಿದ್ದ ಗರವು ಅವನ ಕೃತ್ರಿಮದ ಕಟ್ಟಿಗೆ ಸಿಲುಕಿ ದಾಳಗಳು ಕೊಡುತ್ತಿದ್ದವು. ಈ ಹಲಗೆಯನ್ನು ಕೌರವ ಗೆದ್ದನು, ಇನ್ನೇನು ಪಣವನ್ನು ಕಟ್ಟಿತ್ತೀಯ ಎಂದು ಶಕುನಿಯು ಯುಧಿಷ್ಠಿರನನ್ನು ನೋಡುತ್ತಾ ಕೇಳಿದನು.

ಅರ್ಥ:
ರಾಯ: ದೊರೆ, ಒಡೆಯ; ಸೋಲು: ಪರಾಭವ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ತಹ: ಒಪ್ಪಂದ; ಹಮ್ಮು: ಯೋಜಿಸು; ಒದಗು: ಲಭ್ಯ, ದೊರೆತುದು; ಆಯ: ಗುಟ್ಟು, ಉದ್ದೇಶ; ಕೃತ್ರಿಮ: ಕಪಟ, ಮೋಸ; ಸಂಕೇತ: ಚಿಹ್ನೆ; ಆಯಿತು: ಮುಗಿಯಿತು; ಹಲಗೆ: ಪಲಗೆ, ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು, ಪಗಡೆದಲ್ಲಿ ಒಂದು ಪಂದ್ಯ; ಗೆಲುವು: ಜಯ; ಮತ್ತೆ: ಪುನಃ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ನಂದನ: ಮಗ; ಈಕ್ಷಿಸು: ನೋಡು;

ಪದವಿಂಗಡಣೆ:
ರಾಯ+ ಸೋತನು +ಶಕುನಿ +ಬೇಡಿದ
ದಾಯ+ ತಹ +ಹಮ್ಮಿಗೆಯಲ್+ಒದಗಿದವ್
ಆಯತದ +ಕೃತ್ರಿಮವಲೇ +ಕೌರವರ +ಸಂಕೇತ
ಆಯಿತೀ +ಹಲಗೆಯನು +ಕೌರವ
ರಾಯ +ಗೆಲಿದನು +ಮತ್ತೆ +ಪಣವೇ
ನಾಯಿತೆಂದನು +ಶಕುನಿ +ಯಮನಂದನನನ್+ಈಕ್ಷಿಸುತ

ಅಚ್ಚರಿ:
(೧) ರಾಯ, ದಾಯ, ಆಯ – ಪ್ರಾಸ ಪದಗಳು
(೨) ಕೌರವರ ಸಂಕೇತ – ಆಯತದ ಕೃತ್ರಿಮವಲೇ ಕೌರವರ ಸಂಕೇತ