ಪದ್ಯ ೧೧: ದುರ್ಯೋಧನನನ್ನು ಹೇಗೆ ಹುರಿದುಂಬಿಸಿದರು?

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟೆಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಮ್ದರು ಜರೆದು ಕುರುಪತಿಯ (ಶಲ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮರು, ಅರಸ, ಎಚ್ಚೆತ್ತುಕೋ, ದಾಯಾದಿಗಳಿಗೆ ನೆಲವನ್ನಾಕ್ರಮಿಸಲು ದಾರಿಯಾಯಿತು. ರಾಜ್ಯವು ಅವರಿಗೆ ಸೇರುವುದು ಖಂಡಿತ. ಭೀಮನು ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಏಳು ನಿನ್ನ ತಮ್ಮಂದಿರನ್ನು ಭೀಮನ ಹೊಟ್ಟೆಯಿಂದಲೂ, ಕರ್ಣನನ್ನು ಅರ್ಜುನನ ಬಾಯಿಂದಲೂ ಹೊರಕ್ಕೆ ತೆಗೆ ಎಂದು ಕೌರವನನ್ನು ಹುರಿದುಂಬಿಸಿದರು.

ಅರ್ಥ:
ರಾಯ: ರಾಜ; ಹದುಳಿಸು: ಸಮಾಧಾನ ಗೊಳ್ಳು; ಅಕಟಾ: ಅಯ್ಯೋ; ದಾಯಿಗರಿ: ದಾಯಾದಿ; ಎಡೆ: ಅವಕಾಶ; ನಿರ್ದಾಯದ: ಅಖಂಡ; ನೆಲ: ಭೂಮಿ; ಹೋಯ್ತು: ಕಳಚು; ಭಾಷೆ: ನುಡಿ; ಸಂದು: ಅವಕಾಶ; ವಾಯುಜ: ಭೀಮ; ಜಠರ: ಹೊಟ್ಟೆ; ತೆಗೆ: ಹೊರತರು; ಜೀಯ: ಒಡೆಯ; ಅನುಜ: ತಮ್ಮ; ಜರೆ: ತೆಗಳು; ಉಗಿ: ಹೊರಹಾಕು; ಸೂತ: ಸಾರಥಿ;

ಪದವಿಂಗಡಣೆ:
ರಾಯ +ಹದುಳಿಸು +ಹದುಳಿಸ್+ಅಕಟಾ
ದಾಯಿಗರಿಗ್+ಎಡೆಗೊಟ್ಟೆಲಾ +ನಿ
ರ್ದಾಯದಲಿ +ನೆಲ +ಹೋಯ್ತು +ಭೀಮನ +ಭಾಷೆ +ಸಂದುದಲಾ
ವಾಯುಜನ +ಜಠರದಲಿ+ ತೆಗೆಯಾ
ಜೀಯ +ನಿನ್ನನುಜರನು+ ಪಾರ್ಥನ
ಬಾಯಲ್+ಉಗಿ +ಸೂತಜನನ್+ಎಂದರು+ ಜರೆದು+ ಕುರುಪತಿಯ

ಅಚ್ಚರಿ:
(೧) ಭೀಮ, ವಾಯುಜ – ಭೀಮನನ್ನು ಕರೆದ ಪರಿ
(೨) ರಾಯ, ಕುರುಪತಿ – ಪದ್ಯದ ಮೊದಲ ಮತ್ತು ಕೊನೆ ಪದ, ದುರ್ಯೋಧನನನ್ನು ಕರೆಯುವ ಪರಿ
(೩) ವಾಯುಜ, ನಿನ್ನನುಜ, ಸೂತಜ – ಪದಗಳ ಬಳಕೆ