ಪದ್ಯ ೫೪: ಗಾಂಧಾರಿಯು ತನ್ನನ್ನು ಯಾರಿಗೆ ಹೋಲಿಸಿದಳು?

ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ (ಗದಾ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಾತನಾಡುತ್ತಾ, ಮಕ್ಕಳೇ, ಸಾಕು, ಮೇಲೇಳಿ. ನಾವು ಅನಾಥರು, ನೀವಾದರೋ ರಾಜರು. ನಮಗೇಕೆ ಹೆದರುತ್ತೀರಿ? ನಾನು ಕುರುಡಿ, ಹೆಣ್ಣು, ನಿಮ್ಮ ಆಳ್ವಿಕೆಯಲ್ಲಿ ನಿಮ್ಮ ಪಂಕ್ತಿಯಲ್ಲಿ ಕುಳಿತುಕೊಂಡು ಊಟಮಾಡಿ, ಈ ಬೆಂದ ಹೊಟ್ಟೆಯನ್ನು ಹೊರೆಯುತ್ತೇವೆ ಎಂದಳು.

ಅರ್ಥ:
ಏಳು: ಮೇಲೆ ಬಾ; ಸಾಕು: ನಿಲ್ಲು, ತಡೆ; ಮಕ್ಕಳು: ಪುತ್ರರು; ದೇಸಿಗ: ಅನಾಥ; ಭೂಪಾಲಕ: ರಾಜ; ಭೀತಿ: ಭಯ; ಬಾಲೆ: ಹೆಣ್ಣು; ಅಂಧಕ: ಕುರುಡು; ಆಳಿಕೆ: ಆಳ್ವಿಕೆ, ರಾಜ್ಯಭಾರ; ಹಂತಿ: ಪಂಕ್ತಿ, ಸಾಲು; ಕೂಳು: ಊಟ; ಬೆಂದ: ಸುಟ್ಟ; ಒಡಲು: ದೇಹ; ಹೊರು: ಧರಿಸು; ಇಂದುಮುಖಿ: ಚಂದ್ರನಂತೆ ಮುಖವುಳ್ಳವಳು, ಹೆಣ್ಣು; ಈಸು: ಇಷ್ಣು;

ಪದವಿಂಗಡಣೆ:
ಏಳಿರೈ +ಸಾಕ್+ಏಳಿ +ಮಕ್ಕಳಿರ್
ಏಳಿರೈ +ದೇಸಿಗರು+ ನಾವ್ +ಭೂ
ಪಾಲಕರು +ನೀವ್+ಈಸು +ನಮ್ಮಲಿ+ ಭೀತಿ +ನಿಮಗೇಕೆ
ಬಾಲೆಯರು + ನಾವ್+ಅಂಧಕರು +ನಿ
ಮ್ಮಾಳಿಕೆಯೊಳೇ+ ನಿಮ್ಮ+ ಹಂತಿಯ
ಕೂಳಿನಲಿ +ಬೆಂದೊಡಲ +ಹೊರೆವವರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಏಳಿ – ೩ ಬಾರಿ ಪ್ರಯೋಗ
(೨) ಗಾಂಧಾರಿಯು ತನ್ನ ದುಃಖವನ್ನು ಹೇಳಿದ ಪರಿ – ದೇಸಿಗರು ನಾವ್ ಭೂಪಾಲಕರು ನೀವ್; ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ

ಪದ್ಯ ೧೭: ಯಾವ ಆಲಯಗಳಿಂದ ಗಾಡಿಗಳನ್ನು ತುಂಬಿದರು?

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.

ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;

ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ

ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ

ಪದ್ಯ ೧೮: ದುರ್ಯೋಧನನ ತಮ್ಮಂದಿರು ಹೇಗೆ ತೋರಿದರು?

ಅಳಲಿದುರಗನ ನೆರವಿ ಟೊಪ್ಪಿಗೆ
ಗಲೆದ ಸಾಳ್ವನ ಹಿಂಡು ಹಸಿದ
ವ್ವಳಿಪ ಸಿಂಹದ ಹಂತಿಕುಪಿತ ಕೃತಾಂತನೊಡ್ಡವಣೆ
ಕೊಲೆಗೆಲಸಕುಬ್ಬೆದ್ದ ರುದ್ರನ
ಬಲವಿದೆನೆ ಹರಹರ ಮಹಾರಥ
ರಳವಿಗೊಟ್ಟಿದೆ ನೋಡು ದುರ್ಯೋಧನ ಸಹೋದರರ (ಭೀಷ್ಮ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸಂಕಟವನ್ನುಂಟುಮಾಡಲು ಸಿದ್ಧವಾಗಿರುವ ಹಾವಿನ ಗುಂಪು, ಬಂಧನ ಬಿಟ ಗಿಡಗಗಳ ಗುಂಪು, ಹಸಿದು ಆಹಾರಕ್ಕಾಗಿ ಹಾತೊರೆಯುತ್ತಿರುವ ಸಿಂಹಗಳ ಸಾಲು, ಕೋಪಗೊಂಡ ಯಮನ ದೂತರು, ಸಂಹಾರ ಕಾರ್ಕಕ್ಕುಜ್ಜುಗಿಸುವ ರುದ್ರನ ಸೈನ್ಯ ಎನ್ನುವಂತೆ ನಿಂತಿರುವ ಶಿವ ಶಿವಾ ಆ ದುರ್ಯೋಧನನ ತಮ್ಮಂದಿರನ್ನು ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ಅಳಲಿಸಿ: ಸಂಕಟಪಡಿಸು; ಉರಗ: ಸರ್ಪ; ನೆರವಿ: ಗುಂಪು; ಟೊಪ್ಪಿಗೆ: ಶಿರಸ್ತ್ರಾಣ; ಸಾಳುವ: ಗಿಡಗ; ಹಿಂಡು: ಗುಂಪು; ಕಳೆ: ಬಿಡು; ಹಸಿವು: ಊಟವಿಲ್ಲದ ಸ್ಥಿತಿ; ಅವ್ವಳಿಸು: ಆರ್ಭಟಿಸು; ಸಿಂಹ: ಕೇಸರಿ; ಹಂತಿ: ಸಾಲು; ಕುಪಿತ: ಕೋಪಗೊಂಡ; ಕೃತಾಂತ: ಯಮ; ಒಡ್ಡವಣೆ: ಗುಂಪು; ಕೊಲೆ: ಸಂಹಾರ; ಕೆಲಸ: ಕಾರ್ಯ; ಉಬ್ಬೇಳು: ಉತ್ಸಾಹದಿಂದ ಏಳು; ರುದ್ರ: ಈಶ್ವರನ ಗಣ; ಬಲ: ಸೈನ್ಯ; ಹರಹರ: ಶಿವ ಶಿವಾ; ಮಹಾರಥ: ಪರಾಕ್ರಮಿ; ಅಳವಿ: ಶಕ್ತಿ; ನೋಡು: ವೀಕ್ಷಿಸು; ಸಹೋದರ: ತಮ್ಮಂದಿರು;

ಪದವಿಂಗಡಣೆ:
ಅಳಲಿದ್+ಉರಗನ +ನೆರವಿ +ಟೊಪ್ಪಿಗೆಗ್
ಅಲೆದ +ಸಾಳ್ವನ +ಹಿಂಡು +ಹಸಿದ್
ಅವ್ವಳಿಪ+ ಸಿಂಹದ +ಹಂತಿ+ಕುಪಿತ +ಕೃತಾಂತನ್+ಒಡ್ಡವಣೆ
ಕೊಲೆಗೆಲಸಲ್+ಉಬ್ಬೆದ್ದ +ರುದ್ರನ
ಬಲವಿದ್+ಎನೆ+ ಹರಹರ+ ಮಹಾರಥರ್
ಅಳವಿಗೊಟ್ಟಿದೆ+ ನೋಡು +ದುರ್ಯೋಧನ +ಸಹೋದರರ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಅಳಲಿದುರಗನ ನೆರವಿ; ಟೊಪ್ಪಿಗೆ ಗಲೆದ ಸಾಳ್ವನ ಹಿಂಡು; ಹಸಿದ
ವ್ವಳಿಪ ಸಿಂಹದ ಹಂತಿ; ಕುಪಿತ ಕೃತಾಂತನೊಡ್ಡವಣೆ; ಕೊಲೆಗೆಲಸಕುಬ್ಬೆದ್ದ ರುದ್ರನ ಬಲವ್