ಪದ್ಯ ೨೬: ಊರ್ವಶಿಯು ಅರ್ಜುನನಿಗೆ ಏನು ಹೇಳಿದಳು?

ಪ್ರಣವದರ್ಥವಿಚಾರವೆತ್ತಲು
ಗಣಿಕೆಯರ ಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತವರ್ಷದವದಿರ
ಭಣಿತ ನಮ್ಮೀ ದೇವಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು, ಅರ್ಜುನ, ವೇಶ್ಯೆಯರ ಮನೆಯ ಸಂಗೀತದ ತಾಳದ ಗಣಿತವೆಲ್ಲಿ, ಓಂಕಾರದ ಅರ್ಥದ ವಿಚಾರವೆಲ್ಲಿ, ಸಂದರ್ಭದಲ್ಲಿ ಜೊಳ್ಳುಗಳಾದ ಭಾರತ ವರ್ಷದವರ ಮಾತು, ನಮ್ಮ ಚೈತ್ರರಥ ಉದ್ಯಾನಕ್ಕೂ, ಸಣಬಿನ ಹೊಲಕ್ಕು ಹೋಲಿಕೆಯಿದ್ದ ಹಾಗೆ ಎಂದು ಊರ್ವಶಿ ಉತ್ತರಿಸಿದಳು.

ಅರ್ಥ:
ಪ್ರಣವ: ಓಂಕಾರ; ಅರ್ಥ: ಶಬ್ದದ ಅಭಿಪ್ರಾಯ; ವಿಚಾರ: ವಿಮರ್ಶೆ; ಗಣಿಕೆ: ವೇಶ್ಯೆ; ಮನೆ: ಆಲಯ; ಸ್ವರಾಕ್ಷರ: ಸಂಗೀತ; ಗಣಿತ: ಲೆಕ್ಕಾಚಾರ; ಲಕ್ಷಣ: ಗುರುತು, ಚಿಹ್ನೆ; ರತಿಕೇಳಿ: ಸುರತಕ್ರೀಡೆ, ಸಂಭೋಗ; ಕೇಳು: ಆಲಿಸು; ವಿಧಾನ: ರೀತಿ; ಬಣಗು: ಅಲ್ಪವ್ಯಕ್ತಿ; ಭಣಿತೆ: ಸಂಭಾಷಣೆ, ಮಾತುಕತೆ; ದೇವಲೋಕ: ಸ್ವರ್ಗ; ಸಣಬು: ಒಂದು ಬಗೆಯ ಸಸ್ಯ; ಚೈತ್ರ:ವಸಂತಮಾಸ; ರಥ: ಬಂಡಿ; ಚೈತ್ರರಥ: ಅರಳಿರುವ ಗಿಡಮರಗಳ ಉದ್ಯಾನ; ಇಂದುಮುಖಿ: ಚಂದ್ರನನಂತ ಮುಖವುಳ್ಳವಳು;

ಪದವಿಂಗಡಣೆ:
ಪ್ರಣವದ್+ಅರ್ಥ+ವಿಚಾರವ್+ಎತ್ತಲು
ಗಣಿಕೆಯರ +ಮನೆಯ +ಸ್ವರಾಕ್ಷರ
ಗಣಿತ +ಲಕ್ಷಣವೆತ್ತ+ ರತಿಕೇಳೀ+ ವಿಧಾನದಲಿ
ಬಣಗು +ಭಾರತವರ್ಷದ್+ಅವದಿರ
ಭಣಿತ +ನಮ್ಮೀ +ದೇವಲೋಕಕೆ
ಸಣಬಿನಾರವೆ+ ಚೈತ್ರರಥದೊಳಗ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಣಬಿನಾರವೆ ಚೈತ್ರರಥದೊಳಗೆ
(೨) ಹೋಲಿಸುವ ಪರಿ – ಪ್ರಣವದರ್ಥವಿಚಾರವೆತ್ತಲುಗಣಿಕೆಯರ ಮನೆಯ ಸ್ವರಾಕ್ಷರ ಗಣಿತ ಲಕ್ಷಣವೆತ್ತ