ಪದ್ಯ ೯೦: ಯಾವ ಕಾರ್ಯಗಳು ಫಲವನ್ನು ಕೊಡುವುದಿಲ್ಲ?

ಕಾದುದಕದಾಸ್ನಾನವೆಂಬುದ
ವೈದಿಕಾಂಗದ ಮಂತ್ರಸಾಧನ
ವೇದಹೀನರಿಗಿತ್ತ ದಾನವು ಶ್ರಾದ್ಧಕಾಲದೊಳು
ಎಯ್ದದಿಹ ದಕ್ಷಿಣೆಗಳೆಂಬಿವು
ಬೂದಿಯೊಳು ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಯಿಸಿದ ನೀರಿನ ಸ್ನಾನ, ವೈದಿಕವಲ್ಲದ ಮಂತ್ರದ ಸಾಧನೆ, ವೇದಾಧ್ಯಯನವಿಲ್ಲದವರಿಗಿತ್ತ ದಾನ, ಶ್ರಾದ್ಧದಲ್ಲಿ ದಕ್ಷಿಣೆ ಕೊಡದಿರುವುದು, ಇವು ಬೂದಿಯಲ್ಲಿ ಹೋಮ ಮಾಡಿದ ಹಾಗೆ, ಯಾವ ಫಲವೂ ಸಿಗುವುದಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಕಾದು: ಬಿಸಿ, ಕುದಿ; ಉದಕ: ನೀರು; ಸ್ನಾನ: ಅಭ್ಯಂಜನ; ವೈದಿಕ: ವೇದಗಳನ್ನು ಬಲ್ಲವನು; ಅಂಗ: ಭಾಗ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಾಧನ: ಸಿದ್ಧಿಯನ್ನು ಪಡೆಯುವ ಯತ್ನ, ಸಾಧಿಸುವಿಕೆ; ವೇದ: ಶೃತಿ, ಜ್ಞಾನ; ಹೀನ: ತಿಳಿಯದ; ದಾನ: ಕೊಡುಗೆ; ಶ್ರಾದ್ಧ: ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ಕಾಲ: ಸಮಯ; ಐದೆ: ವಿಶೇಷವಾಗಿ; ದಕ್ಷಿಣೆ: ಸಂಭಾವನೆ; ಬೂದಿ: ಭಸ್ಮ, ವಿಭೂತಿ; ಬೇಳು: ಹೋಮವನ್ನು ಮಾಡು, ಹವಿಸ್ಸನ್ನು ಅರ್ಪಿಸು; ಹವಿಸ್ಸು: ಹವಿ, ಚರು; ಹಾದಿ: ದಾರಿ; ಫಲ: ಪ್ರಯೋಜನ, ಪರಿಣಾಮ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಾದ್+ಉದಕದಾ+ಸ್ನಾನ+ವೆಂಬುದ್+
ಅವೈದಿಕಾಂಗದ +ಮಂತ್ರಸಾಧನ
ವೇದಹೀನರಿಗಿತ್ತ+ ದಾನವು+ ಶ್ರಾದ್ಧ+ಕಾಲದೊಳು
ಎಯ್ದದಿಹ+ ದಕ್ಷಿಣೆಗಳೆಂಬ್+ಇವು
ಬೂದಿಯೊಳು +ಬೇಳಿದ+ ಹವಿಸ್ಸಿನ
ಹಾದಿಯಲ್ಲದೆ +ಫಲವನೀಯವು +ರಾಯ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೂದಿಯೊಳು ಬೇಳಿದ ಹವಿಸ್ಸಿನ ಹಾದಿ
(೨) ಸ್ನಾನ, ದಾನ – ಪ್ರಾಸ ಪದಗಳ ಪ್ರಯೋಗ

ಪದ್ಯ ೭೬: ರಾಜರ ಕರ್ತವ್ಯಗಳಾವುವು?

ದಾನವಿಷ್ಟಾಪೂರ್ತ ವಿನಯಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಸದಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥ ಬಂಧುವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು (ಉದ್ಯೋಗ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ರಾಜನಾದವನ ಕರ್ತವ್ಯಗಳನ್ನು ವಿದುರರು ಇಲ್ಲಿ ತಿಳಿಸಿದ್ದಾರೆ. ರಾಜನಾದವನು ದಾನ, ಅಗ್ನಿಹೋತ್ರ, ಒಳ್ಳೆಯ ನಡತೆ, ಮುನ್ನಡೆಸುವಿಕೆಯ ಜಾಣ್ಮೆ, ದೇವತಾ ಪೂಜೆ, ಬ್ರಾಹ್ಮಣ ಮತ್ತು ಗೋವುಗಳನ್ನು ತೃಪ್ತಿ ಪಡಿಸಿ, ಅತಿಥಿಗಳನ್ನು ಸತ್ಕರಿಸಿ, ಗುರುಹಿರಿಯರಲ್ಲಿ ಭಕ್ತಿಭಾವ ಹೊಂದು, ಧ್ಯಾನವನ್ನು ಆಚರಿಸುತ್ತಾ, ದೀನರು, ಅನಾಥರು, ಬಂಧುಗಳು, ಶರಣಾಗತರನ್ನು ರಕ್ಷಿಸಿ, ಪವಿತ್ರ ಜಲಗಳಲ್ಲಿ ಅಭ್ಯಂಜನ ಮಾಡುವುದು ರಾಜನ ಕರ್ತವ್ಯಗಳು.

ಅರ್ಥ:
ದಾನ: ನೀಡುವಿಕೆ; ಇಷ್ಟ: ಅಪೇಕ್ಷೆ; ಪೂರ್ತ: ಪೂರೈಸುವ; ವಿನಯ: ನಮ್ರತೆ; ಸಮಾನ:ಎಣೆ, ಸಾಟಿ, ಯೋಗ್ಯ; ದೇವ: ಸುರರು, ಭಗವಂತ; ಅರ್ಚನೆ: ಪೂಜೆ, ಆರಾಧನೆ; ಮಹೀ: ಭೂಮಿ; ಮಹೀಸುರ: ಬ್ರಾಹ್ಮಣ; ಧೇನು: ಹಸು; ಸಂತರ್ಪಣ: ತೃಪ್ತಿ ಪಡಿಸುವಿಕೆ; ಸದಾ: ಯಾವಾಗಲು; ತಿಥಿ: ದಿನ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಪ್ರಾರ್ಥನೆ, ಆರಾಧನೆ; ಗುರು: ಆಚಾರ್ಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಧ್ಯಾನ: ಚಿಂತನೆ, ಮನನ; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಬಂಧು: ಬಂಧುಗಳು; ವಿತಾನ: ಆಧಿಕ್ಯ, ಹೆಚ್ಚಳ; ಶರಣಾಗತ: ಆಶ್ರಯವನ್ನು ಬೇಡುವವನು; ಸುರಕ್ಷಾ: ಕಾಪಾಡುವಿಕೆ; ಸ್ನಾನ: ಅಭ್ಯಂಜನ; ತೀರ್ಥ: ಪವಿತ್ರ ಜಲ; ಬೇಹುದು: ಬೇಕು; ಅವನಿಪ: ರಾಜ; ಅವನಿ: ಭೂಮಿ;

ಪದವಿಂಗಡಣೆ:
ದಾನವ್ + ಇಷ್ಟಾಪೂರ್ತ+ ವಿನಯ+ಸ
ಮಾನ +ದೇವಾರ್ಚನೆ +ಮಹೀಸುರ
ಧೇನು +ಸಂತರ್ಪಣ+ ಸದ್+ಅತಿಥಿ+ ಪೂಜೆ +ಗುರುಭಕ್ತಿ
ಧ್ಯಾನ+ ದೀನ+ಅನಾಥ +ಬಂಧು+ವಿ
ತಾನ +ಶರಣಾಗತ+ ಸುರಕ್ಷಾ
ಸ್ನಾನ+ ತೀರ್ಥಂಗಳನು +ಮಾಡಲು +ಬೇಹುದ್+ಅವನಿಪರು

ಅಚ್ಚರಿ:
(೧) ದಾನ, ವಿನಯ, ದೇವಾರ್ಚನೆ, ಸಂತರ್ಪಣ, ಗುರುಭಕ್ತಿ ಹೀಗೆ ೧೩ ಬಗೆಯ ಕರ್ತವ್ಯಗಳನ್ನು ಹೇಳಿರುವುದು
(೨) ಧ್ಯಾನ, ದಾನ, ಮಾನ, ಸ್ನಾನ – ಪ್ರಾಸ ಪದಗಳು

ಪದ್ಯ ೧೪: ಕಾಂಚೀನಗರದಿಂದ ಅರ್ಜುನನು ಎಲ್ಲಿಗೆ ಬಂದನು?

ಆ ನಗರದಧಿದೈವನಿಕರಕೆ
ತಾ ನಮಿಸಿ ತತ್ಸಕಲ ತೀರ್ಥ
ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ
ವಾನರರ ಭುಜಬಲಸಮಾಖ್ಯಾ
ನೂನ ಶಾಸನವನು ಸುರಾರಿ ವಿ
ತಾನ ರವಿ ರಾಹುವನು ಕಂಡನು ಸೇತುಬಂಧನವ (ಆದಿ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕಾಂಚೀನಗರದ ಅಧಿದೇವತೆಗಳಿಗೆ ನಮಸ್ಕರಿಸಿ, ಅಲ್ಲಿದ್ದ ಸಮಸ್ತ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿ, ದಕ್ಷಿಣಕ್ಕೆ ತನ್ನ ಪ್ರಯಾಣವನ್ನು ಬೆಳಸಿ, ವಾನರ ಸೈನ್ಯವು ತನ್ನ ಭುಜಬಲದಿಂದ ಮಾಡಿದ ಶಾಸನವೋ, ರಾಕ್ಷಸನೆಂಬ ಸೂರ್ಯನನ್ನು ನುಂಗುವ ರಾಹುವೋ ಎಂಬಂತಿದ್ದ ಸೇತುಬಂಧನವನ್ನು ಕಂಡನು.

ಅರ್ಥ:
ನಗರ: ಪಟ್ಟಣ; ಅಧಿ: ನೆಲೆ; ದೈವ: ದೇವರು; ಅಧಿದೇವ: ಮುಖ್ಯದೇವರು; ಸಕಲ: ಸಮಗ್ರ; ನಿಕರ: ಗುಂಪು; ನಮಿಸಿ: ನಮಸ್ಕರಿಸಿ; ತೀರ್ಥ: ಪುಣ್ಯ; ಸ್ನಾನ: ಜಳಕ; ಕರ್ಮ:ಕಾರ್ಯ; ರಚಿಸಿ: ರೂಪಿಸಿ; ಜಲಧಿ: ಸಾಗರ; ತೀರ: ತಟ; ವಾನರ: ಕಪಿ, ಮಂಗ; ಭುಜಬಲ: ಶೌರ್ಯ; ಅನೂನ: ಕೊರತೆಯಿಲ್ಲದ, ಅಧಿಕವಾದ; ಶಾಸನ:ಅಪ್ಪಣೆ; ಸುರಾರಿ:ರಾಕ್ಷಸ; ವಿತಾನ: ಹಬ್ಬುವಿಕೆ, ವಿಸ್ತಾರ; ರವಿ: ಸೂರ್ಯ; ಸೇತು: ಸೇತುವೆ, ಸಂಕ; ಬಂಧನ: ಕಟ್ಟು, ಬಂಧ; ಆಖ್ಯಾತ: ಪ್ರಸಿದ್ಧನಾದ ವ್ಯಕ್ತಿ; ಸಮಾಖ್ಯ: ಕೀರ್ತಿ, ಯಶಸ್ಸು;

ಪದವಿಂಗಡಣೆ:
ಆ +ನಗರದ+ಅಧಿದೈವ+ನಿಕರಕೆ
ತಾ +ನಮಿಸಿ +ತತ್ಸಕಲ+ ತೀರ್ಥ
ಸ್ನಾನ +ಕರ್ಮವ +ರಚಿಸಿ +ಬಂದನು +ಜಲಧಿ+ ತೀರದಲಿ
ವಾನರರ+ ಭುಜಬಲ+ಸಮಾಖ್ಯಾ
ಅನೂನ +ಶಾಸನವನು+ ಸುರಾರಿ+ ವಿ
ತಾನ +ರವಿ +ರಾಹುವನು+ ಕಂಡನು +ಸೇತುಬಂಧನವ

ಅಚ್ಚರಿ:
(೧) ಸೇತುಬಂಧನದ ವಿವರಣೆ: ವಾನನರ ಭುಜಬಲದ ಶಾಸನವಾಗಿರುವ, ರಾಕ್ಷಸರೆಂಬ ಸೂರ್ಯನ ವಿಸ್ತಾರವನ್ನು ರಾಹುವು ನುಂಗುವ ಪರಿ – “ವಾನರರ ಭುಜಬಲಸಮಾಖ್ಯಾ ಅನೂನ ಶಾಸನವನು ಸುರಾರಿ ವಿತಾನ ರವಿ ರಾಹುವನು”
(೨) “ನ” ಕಾರದಿಂದ ಕೊನೆಗೊಳ್ಳುವ ಪದ: ಅನೂನ, ವಿತಾನ, ಸ್ನಾನ, ಶಾಸನ