ಪದ್ಯ ೨೬: ರಣದಲ್ಲಿನ ಉತ್ಸಾಹ ಹೇಗಿತ್ತು?

ಜಡಿವ ಮದದಾನೆಗಳ ಗಗನವ
ನಡರ್ವ ಕಡುಗುದುರೆಗಳ ಸೂಠಿಯೊ
ಳೆಡಬಲಕೆ ಬಿರುವರಿವ ತೇರಿನ ಸೂತರೋಜೆಗಳ
ಖಡುಗ ಕೊಂತವ ನಭಕೆ ಹಾಯಿಕಿ
ಹಿಡಿವ ಸುಭಟರ ಭುಜದ ಹೊಯ್ಲಿನ
ಕಡುಮನದ ರಣದವಕಿಗರ ಸೌರಂಭ ರಂಜಿಸಿತು (ದ್ರೋಣ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮದದಾನೆಗಳು ನೆಲವನ್ನೌಕಿ ಮುನ್ನುಗ್ಗಲು ಕಾದಿದ್ದವು. ಕುದುರೆಗಳು ಆಕಾಶವನ್ನು ಅಡರಲು ಉತ್ಸುಕವಾಗಿದ್ದವು. ರಥಗಳ ಸಾರಥಿಗಳು ಬಿರುಸಾಗಿ ಮುನ್ನುಗ್ಗಲು ಸಿದ್ಧರಾಗಿದ್ದರು. ಖಡ್ಗ ಕುಂತ ಮೊದಲಾದ ಆಯುಧಗಳನ್ನು ಕಾಲಾಳುಗಳು ಮೇಲೆಸೆದು ಹಿಡಿಯುತ್ತಿದ್ದವು. ಅನೇಕರು ಭುಜ ತಟ್ಟಿ ರಣವನ್ನಾರಂಭಿಸುವ ತವಕವನ್ನು ತೋರಿಸುತ್ತಿದ್ದರು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಮದ: ಮತ್ತು, ಅಮಲು; ಆನೆ: ಗಜ; ಗಗನ: ಆಗಸ; ಅಡರು: ಮೇಲಕ್ಕೆ ಹತ್ತು; ಕುದುರೆ: ಅಶ್ವ; ಸೂಠಿ: ವೇಗ; ಎಡಬಲ: ಅಕ್ಕಪಕ್ಕ; ಬಿರು: ಗಟ್ಟಿಯಾದುದು; ತೇರು: ಬಂಡಿ; ಸೂತ: ರಥವನ್ನು ನಡೆಸುವವ; ಓಜೆ: ಶ್ರೇಣಿ, ಸಾಲು; ಖಡುಗ: ಕತ್ತಿ; ನಭ: ಆಗಸ; ಹಾಯಿಕು: ಹಾಕು; ಹಿಡಿ: ಗ್ರಹಿಸು; ಸುಭಟ: ಸೈನಿಕ; ಭುಜ: ಬಾಹು; ಹೊಯ್ಲು: ಏಟು, ಹೊಡೆತ; ಮನ: ಮನಸ್ಸು; ರಣ: ಯುದ್ಧ; ತವಕ: ಬಯಕೆ; ಸೌರಂಭ: ಸಂಭ್ರಮ, ಸಡಗರ; ರಂಜಿಸು: ಹೊಳೆ;

ಪದವಿಂಗಡಣೆ:
ಜಡಿವ +ಮದದಾನೆಗಳ +ಗಗನವನ್
ಅಡರ್ವ +ಕಡು+ಕುದುರೆಗಳ +ಸೂಠಿಯೊಳ್
ಎಡಬಲಕೆ +ಬಿರುವರಿವ+ ತೇರಿನ+ ಸೂತರ್+ಓಜೆಗಳ
ಖಡುಗ +ಕೊಂತವ +ನಭಕೆ +ಹಾಯಿಕಿ
ಹಿಡಿವ +ಸುಭಟರ +ಭುಜದ +ಹೊಯ್ಲಿನ
ಕಡುಮನದ +ರಣ+ತವಕಿಗರ +ಸೌರಂಭ+ ರಂಜಿಸಿತು

ಅಚ್ಚರಿ:
(೧) ಜಡಿವ, ಹಿಡಿವ – ಪ್ರಾಸ ಪದ

ಪದ್ಯ ೧೦: ಧರ್ಮಜನು ಹೇಗೆ ದುಃಖಿಸಿದನು?

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು (ದ್ರೋಣ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಅತಿಶಯ ಪುತ್ರಸ್ನೇಹದಿಂದ ಅರ್ಜುನನು ಬಂದು ನನ್ನ ಪ್ರೀತಿಯ ಪುತ್ರನೆಲ್ಲಿ ಎಂದು ಕೇಳಿದರೆ ನಾನೇನು ಉತ್ತರ ಕೊಡಲಿ, ವೈರಿನಾಯಕರು ಕೊಂದರು ಎನ್ನಲೇ ಅಥವಾ ನಾನೇ ಅವನನ್ನು ಯುದ್ಧಕ್ಕೆ ಕಳಿಸಿ ಕೊಲ್ಲಿಸಿದೆ ಎನ್ನಲೇ ಶಿವ ಶಿವಾ ಎಂದು ಪುತ್ರ ಪ್ರೇಮದಿಂದ ದುಃಖಿಸಿದನು.

ಅರ್ಥ:
ಬಂದು: ಆಗಮಿಸು; ಮೊಹ: ಇಚ್ಛೆ; ಕಂದ: ಮಗ; ಆವೆಡೆ: ಯಾವ ಕಡೆ; ಉತ್ತರ: ಬಿನ್ನಹ; ಕೊಡು: ನೀಡು; ವೈರಿ: ಶತ್ರು; ನಾಯಕ: ಒಡೆಯ; ಕೊಂದು: ಸಾಯಿಸು; ಮೇಣ್: ಅಥವ; ಶಿವ: ಶಂಕರ; ಪುತ್ರ: ಮಗ; ಸ್ನೇಹ: ಮಿತ್ರ; ಸೌರಂಭ: ಸಂಭ್ರಮ; ಹಲುಬು: ದುಃಖಪಡು;

ಪದವಿಂಗಡಣೆ:
ಬಂದು +ಫಲುಗುಣನ್+ಎನ್ನ +ಮೋಹದ
ಕಂದನ್+ಆವೆಡೆ+ಎಂದಡ್+ಆನ್
ಏನೆಂದು +ಮಾರುತ್ತರವ+ ಕೊಡುವೆನು +ವೈರಿನಾಯಕರು
ಕೊಂದರೆಂಬೆನೊ +ಮೇಣು +ನಾನೇ
ಕೊಂದೆನೆಂಬೆನೊ +ಶಿವ +ಮಹಾದೇ
ವೆಂದು +ಪುತ್ರ+ಸ್ನೇಹ+ಸೌರಂಭದಲಿ +ಹಲುಬಿದನು

ಅಚ್ಚರಿ:
(೧) ಧರ್ಮಜನ ದುಃಖದ ಕಾರಣ – ಪುತ್ರಸ್ನೇಹಸೌರಂಭದಲಿ ಹಲುಬಿದನು

ಪದ್ಯ ೧೭: ಅಭಿಮನ್ಯುವನ್ನು ಕೌರವನು ಹೇಗೆ ಹೊಗಳಿದನು?

ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ (ದ್ರೋಣ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಿಜ, ತಂದೆ ಪಡೆದರೆ ಇಂತಹ ಮಗನನ್ನು ಪಡೆಯಬೇಕು. ನಿನ್ನ ತಾಯಿ ಸುಭದ್ರೆಯು ಸಹಸ್ರ ಕಲ್ಪಗಳ ಕಾಲ ಶಿವನನ್ನು ಆರಾಧಿಸಿ ಪಡೆದಿದ್ದಾಳೆ, ಇಲ್ಲದಿದ್ದರೆ ನೀನು ಇಂದು ತೋರಿಸುತ್ತಿರುವ ಶಕ್ತಿ, ಸಾಮರ್ಥ್ಯ ಯುದ್ಧವನ್ನು ಜಯಿಸುವ ಪರಿ, ಸಡಗರ ಬಾಣಪ್ರಯೋಗ ಇವೆಲ್ಲವು ಯಾರಿಗಿವೆ ಎಂದು ಕೌರವನು ಅಭಿಮನ್ಯುವಿನ ಸಾಹಸವನ್ನು ಮೆಚ್ಚಿದನು.

ಅರ್ಥ:
ತಂದೆ: ಪಿತ; ಹಡೆ: ಪಡೆ; ಮಗ: ಪುತ್ರ; ಕಂದ: ಪುತ್ರ; ಕಲ್ಪ: ಕಾಲದ ಪ್ರಮಾಣ, ಯುಗ; ಸಹಸ್ರ: ಸಾವಿರ; ನೋಂತ: ಆರಾಧನೆ, ನಿಯಮ; ಇಂದುಧರ: ಶಿವ; ಬಲ: ಶಕ್ತಿ; ಸಮರ: ಯುದ್ಧ; ಜಯ: ವಿಜಯ, ಗೆಲುವು; ಅಂದ: ಸೊಬಗು; ಸೌರಂಭ: ಸಂಭ್ರಮ, ಸಡಗರ; ಸರಳು: ಬಾಣ; ತೆರಳು: ಹೋಗು, ನಡೆ; ಅವನೀಶ: ರಾಜ;

ಪದವಿಂಗಡಣೆ:
ತಂದೆ +ಹಡೆಯನೆ +ಮಗನನ್+ಅಹುದೋ
ಕಂದ +ಕಲ್ಪ+ಸಹಸ್ರ+ ನೋಂತಳೊ
ಇಂದುಧರನನು+ ನಿನ್ನ+ ತಾಯಿ +ಸುಭದ್ರೆ+ಅಲ್ಲದಡೆ
ಇಂದಿನ್+ಈ+ ಬಲವ್+ಈ+ ಸಮರ+ ಜಯದ್
ಅಂದವ್+ಈ+ ಸೌರಂಭವ್+ಈ+ ಸರಳ್
ಅಂದವ್+ಈ+ ತೆರಳಿಕೆಯದ್+ಆವಂಗ್+ಎಂದನ್+ಅವನೀಶ

ಅಚ್ಚರಿ:
(೧) ಶಿವನನ್ನು ಇಂದುಧರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹೊಗಳುವ ಪರಿ – ಇಂದಿನೀ ಬಲವೀ ಸಮರ ಜಯದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆದನವನೀಶ
(೩) ಅಭಿಮನ್ಯುವಂತಹ ಮಗನನ್ನು ಪಡೆಯುವ ಕಷ್ಟ – ಕಲ್ಪಸಹಸ್ರ ನೋಂತಳೊ ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ

ಪದ್ಯ ೩೬: ಆಸ್ಥಾನದವರು ಕರ್ಣನನ್ನೇಕೆ ಹೊಗಳಿದರು?

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ (ದ್ರೋಣ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿ ಆಸ್ಥಾನದಲ್ಲಿದ್ದವರೆಲ್ಲರೂ, ಬೆರಳನ್ನೂ ಕಿರೀಟವನ್ನೂ ತೂಗಿ, ಭಲೇ ಕರ್ಣ ಪರರ ಗುಣವನ್ನು ಹೊಗಳುವ ನೀನು ಈ ದ್ವಾಪರಯುದದವನಲ್ಲ ಎಂದು ಹೊಗಳಿದರು. ಆಸ್ಥಾನವು ಅವರ ಕಿರೀಟದ ರತ್ನಗಳ ಬೆಳಕು, ಮಾತಿನ ಲಹರಿಗಳಿಂದ ಸಾಗರದಂತೆ ಕಾಣಿಸಿತು.

ಅರ್ಥ:
ಜಾಗು: ಭಲೇ; ಪರರ: ಅನ್ಯರ; ಗುಣಾಗಮ: ಗುಣವನ್ನು ಹೊಗಳುವವ; ಗುಣ: ನಡತೆ; ಪತಿಕರಿಸು: ಅನುಗ್ರಹಿಸು; ಈಗಳಿನ: ಇಂದಿನ; ಯುಗ: ಸಮಯದ ಬಹು ದೀರ್ಘವಾದ ಕಾಲ; ಮಝ: ಭಲೇ; ಪೂತು: ಕೋಂಡಾಟದ ಮಾಗು; ಭಾಪು: ಭಲೇ; ತೂಗು: ಅಲ್ಲಾಡಿಸು; ಬೆರಳು: ಅಂಗುಲಿ; ಮಕುಟ: ಕಿರೀಟ; ಅಹಿ: ಹಾವು; ಗರುವ: ಹಿರಿಯ; ಭಟ: ಸೈನಿಕ; ಉಲಿ: ಕೂಗು; ಲಹರಿ: ಅಲೆ; ಸಾಗರ: ಸಮುದ್ರ; ಸೌರಂಭ: ಸಡಗರ; ಮಸಗು: ಹರಡು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಜಾಗು +ಜಾಗುರೆ +ಕರ್ಣ +ಪರರ +ಗು
ಣಾಗಮನ +ಪತಿಕರಿಸಿ +ನುಡಿವವನ್
ಈ+ಗಳಿನ +ಯುಗದಾತನೇ +ಮಝ +ಪೂತು +ಭಾಪೆನುತ
ತೂಗು+ಬೆರಳಿನ +ಮಕುಟದೊಲಹಿನೊಳ್
ಆ +ಗರುವ +ಭಟರುಲಿಯೆ +ಲಹರಿಯ
ಸಾಗರದ +ಸೌರಂಭದಂತಿರೆ +ಮಸಗಿತ್+ಆಸ್ಥಾನ

ಅಚ್ಚರಿ:
(೧) ರೂಪಕದ ಪ್ರಯೋಗ – ತೂಗುವೆರಳಿನ ಮಕುಟದೊಲಹಿನೊಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ

ಪದ್ಯ ೩: ಯುದ್ಧವು ಹೇಗೆ ಆರಂಭವಾಯಿತು?

ವಿನುತ ಭೀಷ್ಮನು ಗಜರೆ ದುರಿಯೋ
ಧನನು ಬಿಲುಗೊಳಲಾತನನುಜರು
ಧನುವ ತುಡುಕೆ ಸುಶರ್ಮ ಶಲ್ಯರು ಸರಳ ಹೊದೆಗೆದರೆ
ಮೊನೆಗಣೆಯನಳವಡಿಸೆ ಗುರು ಗುರು
ತನುಜನಸ್ತ್ರವ ತಿರುಹೆ ಸೇನಾ
ವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ (ಭೀಷ್ಮ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಭೀಷ್ಮನು ಗರ್ಜಿಸಲು ದುರ್ಯೋಧನನೂ ಕೌರವರೂ ಬಿಲ್ಲು ಹಿಡಿದರು. ಸುಶರ್ಮ ಶಲ್ಯರು ಬಾಣಗಳನ್ನು ಕೆದರಿದರು. ದ್ರೋಣ ಅಶ್ವತ್ಥಾಮ ಅಸ್ತ್ರಗಳನ್ನು ತೂಗಿದರು. ಸೈನ್ಯ ಸಮುದ್ರವು ಗರ್ಜಿಸಲು ಸಂಕುಲ ಸಮರವು ಆರಂಭವಾಯಿತು.

ಅರ್ಥ:
ವಿನುತ: ಹೊಗಳಲ್ಪಟ್ಟ; ಗಜರು: ಗರ್ಜನೆ, ಆರ್ಭಟ; ಬಿಲು: ಬಿಲ್ಲು, ಚಾಪ; ಅನುಜ: ತಮ್ಮ; ಧನು: ಬಿಲ್ಲು; ತುಡುಕು: ಬೇಗನೆ ಹಿಡಿಯುವುದು; ಸರಳು: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಮೊನೆ: ಚೂಪು; ಕಣೆ: ಬಾಣ; ಅಳವಡಿಸು: ಜೋಡಿಸು; ಗುರು: ಆಚಾರ್ಯ; ತನುಜ: ಮಗ; ಅಸ್ತ್ರ: ಆಯುಧ; ತಿರುಹು: ತಿರುಗಿಸು; ವನ: ಕಾಡು; ಗರ್ಜಿಸು: ಆರ್ಭಟಿಸು; ಸಂಕುಲ: ಗುಂಪು; ಸಮರ: ಯುದ್ಧ; ಸೌರಂಭ: ಸಡಗರ;

ಪದವಿಂಗಡಣೆ:
ವಿನುತ+ ಭೀಷ್ಮನು +ಗಜರೆ +ದುರಿಯೋ
ಧನನು +ಬಿಲುಗೊಳಲ್+ಆತನ್+ಅನುಜರು
ಧನುವ +ತುಡುಕೆ +ಸುಶರ್ಮ+ ಶಲ್ಯರು +ಸರಳ +ಹೊದೆ+ಕೆದರೆ
ಮೊನೆಗಣೆಯನ್+ಅಳವಡಿಸೆ +ಗುರು +ಗುರು
ತನುಜನ್+ಅಸ್ತ್ರವ +ತಿರುಹೆ +ಸೇನಾ
ವನಧಿ +ಗರ್ಜಿಸಲಾಯ್ತು +ಸಂಕುಲ+ಸಮರ +ಸೌರಂಭ

ಅಚ್ಚರಿ:
(೧) ಸೇನೆಯನ್ನು ಕಾಡಿಗೆ ಹೋಲಿಸುವ ಪರಿ – ಸೇನಾವನಧಿ ಗರ್ಜಿಸಲಾಯ್ತು ಸಂಕುಲಸಮರ ಸೌರಂಭ

(೨) ಅನುಜ, ತನುಜ – ಪದಗಳ ಬಳಕೆ
(೩) ಸರಳ, ಕಣೆ; ಬಿಲು, ಧನು – ಸಮನಾರ್ಥಕ ಪದ

ಪದ್ಯ ೨೩: ಧರ್ಮಜನು ಏನೆಂದು ಚಿಂತಿಸಿದನು?

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ (ಭೀಷ್ಮ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎರಡು ಸೈನ್ಯಗಳೂ ಯುದ್ಧಸನ್ನದ್ಧವಾಗಿ ಸನ್ನೆಗಾಗಿ ಕಾಯುತ್ತಿರಲು, ಧರ್ಮಜನು ಶತ್ರು ಸೈನ್ಯವನ್ನು ನೋಡಿ ತಲೆದೂಗಿದನು. ಇನ್ನು ಮಹಾಯುದ್ಧವು ಆರಂಭವಾಗುತ್ತದೆ, ಅದಕ್ಕೆ ಮೊದಲು ಭೀಷ್ಮನೇ ಮೊದಲಾದವರ ಮನಸ್ಸುಗಳನ್ನು ನಾವು ಭೇದೋಪಾಯದಿಂದ ಒಲಿಸಿಕೊಳ್ಳಬೇಕು ಎಂದು ಚಿಂತಿಸಿದನು.

ಅರ್ಥ:
ತಾಗು: ಮುಟ್ಟು; ಅನುವು: ಆಸ್ಪದ; ಕೈದು: ಆಯುಧ; ಬಲ: ಸೈನ್ಯ; ಕೈಲಾಗ: ಸನ್ನೆ; ಈಕ್ಷಿಸು: ನೋಡು; ರಿಪು: ವೈರಿ; ಸಾಗರ: ಸಮುದ್ರ; ಸೌರಂಭ: ಸಂಭ್ರಮ, ಸಡಗರ; ಮಿಗೆ: ಮತ್ತು, ಅಧಿಕವಾಗಿ; ಶಿರ: ತಲೆ; ಮಹಾಹವ: ದೊಡ್ಡ ಯುದ್ಧ; ಮುನ್ನ: ಮುಂಚೆ; ಭೇದ: ಮುರಿ, ಬಿರುಕು; ಮನ: ಮನಸ್ಸು; ಒಲಿಸು: ಸಮ್ಮತಿಸು, ಬಯಸು;

ಪದವಿಂಗಡಣೆ:
ತಾಗಲ್+ಅನು+ಕೈದುಭಯ+ಬಲ +ಕೈ
ಲಾಗನ್+ಈಕ್ಷಿಸುತಿರಲು +ರಿಪುಬಲ
ಸಾಗರದ+ ಸೌರಂಭವನು+ ಮಿಗೆ+ ನೋಡಿ +ಧರ್ಮಜನು
ತೂಗಿದನು+ ಶಿರವನು+ ಮಹಾಹವ
ವೀಗಲಾಗದ+ ಮುನ್ನ +ಭೇದದ
ಲಾಗಿನಲಿ +ಭೀಷ್ಮಾದಿಗಳ +ಮನವೊಲಿಸ+ಬೇಕೆಂದ

ಅಚ್ಚರಿ:
(೧) ಕೈದುಭಯಬಲ, ರಿಪುಬಲ – ಬಲ ಪದದ ಬಳಕೆ
(೨) ಸೈನ್ಯವನ್ನು ವಿವರಿಸುವ ಪರಿ – ರಿಪುಬಲ ಸಾಗರದ ಸೌರಂಭವನು

ಪದ್ಯ ೫೬: ಸಂಜಯನಿಗೆ ಯಾವ ದೃಶ್ಯಗಳು ಕಾಣಲಾರಂಭಿಸಿತು?

ಪರಮ ವೇದವ್ಯಾಸ ಮುನಿಪನ
ಕರುಣವಾಗಲು ಕಂಗಳಿಗೆ ಗೋ
ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ
ಧುರದ ವೃತ್ತಾಮ್ತವನು ಚಿತ್ತೈ
ಸರಸ ತಿಳುಹುವೆನೆಂದು ಸಲೆ ವಿ
ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರ ಭೂಪತಿಗೆ (ಭೀಷ್ಮ ಪರ್ವ, ೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ವೇದವ್ಯಾಸ ಮುನೀಶ್ವರನ ಕರುಣೆಯಿಂದ ಮಹಾಭಾರತ ಯುದ್ಧವೆಲ್ಲವೂ ಸಂಜಯನಿಗೆ ಕಾಣಿಸಲಾರಂಭಿಸಿತು. ಅವನು ಧೃತರಾಷ್ಟ್ರನಿಗೆ ಅರಸ ಯುದ್ಧದ ವೃತ್ತಾಂತವನ್ನು ತಿಳಿಸುತ್ತೇನೆ ಕೇಳು ಎಂದು ಹೇಳಲಾರಂಭಿಸಿದನು.

ಅರ್ಥ:
ಪರಮ: ಶ್ರೇಷ್ಠ; ಮುನಿ: ಋಷಿ; ಕರುಣ: ದಯೆ; ಕಂಗಳು: ಕಣ್ಣು; ಗೋಚರಿಸು: ತೋರು; ಸಂಗ್ರಾಮ: ಯುದ್ಧ; ಸೌರಂಭ: ಸಂಭ್ರಮ, ಸಡಗರ; ಧುರ: ಯುದ್ಧ, ಕಾಳಗ; ವೃತ್ತಾಂತ: ಘಟನೆ, ಸಂಗತಿ; ಚಿತ್ತೈಸು: ಲಕ್ಷಿಸು, ಗಮನಿಸು; ಸಲೆ: ಒಂದೇ ಸಮನೆ; ವಿಸ್ತರ: ಹಬ್ಬುಗೆ, ವಿಸ್ತಾರ; ಬಗೆ: ಅಭಿಪ್ರಾಯ; ಭೂಪತಿ: ರಾಜ;

ಪದವಿಂಗಡಣೆ:
ಪರಮ +ವೇದವ್ಯಾಸ +ಮುನಿಪನ
ಕರುಣವಾಗಲು +ಕಂಗಳಿಗೆ+ ಗೋ
ಚರಿಸಿತ್+ಈ+ ಭಾರತ +ಮಹಾಸಂಗ್ರಾಮ +ಸೌರಂಭ
ಧುರದ +ವೃತ್ತಾಂತವನು +ಚಿತ್ತೈಸ್
ಅರಸ +ತಿಳುಹುವೆನ್+ಎಂದು +ಸಲೆ+ ವಿ
ಸ್ತರಿಸ +ಬಗೆದನು +ಸಂಜಯನು +ಧೃತರಾಷ್ಟ್ರ +ಭೂಪತಿಗೆ

ಅಚ್ಚರಿ:
(೧) ಅರಸ, ಭೂಪತಿ; ಧುರ, ಸಂಗ್ರಾಮ – ಸಮನಾರ್ಥಕ ಪದ

ಪದ್ಯ ೮೭: ಯುದ್ಧದಲ್ಲಿ ಮದುವೆಯ ಸಂಭ್ರಮ ಹೇಗೆ ಕಂಡಿತು?

ಕೊಳುಗುಳದ ಜಯಲಕ್ಷ್ಮಿಗಾಯಿತು
ಚಲನಸುತನಲಿ ಮದುವೆಯೆನೆ ಮಂ
ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಿಲೆನೆ
ತಲೆ ಕಪಾಲದ ಸಾಲಶೋಣಿತ
ಜಲದಲಂದೊಪ್ಪಿದವು ರಣದೊಳು
ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು (ಕರ್ಣ ಪರ್ವ, ೧೯ ಸಂಧಿ, ೮೭ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಭೀಮನಿಗೆ ಜಯಲಕ್ಷಿಯೊಡನೆ ವಿವಾಹವಾಯಿತು, ದುಶ್ಯಾಸನ ವಧೆಯ ಮಂಗಳ ಮುಹೂರ್ತದಲ್ಲಿ ರಣರಂಗದಲ್ಲಿ ರಕ್ತದಿಂದ ತೋಯ್ದ ತಲೆಬುರುಡೆಗಳು ಅದ್ಭುತ ರಚನೆಯಾಗಿಕಂಡು ಸಂಭ್ರಮದ ಕಳೆಯನ್ನು ಬೀರಿತು.

ಅರ್ಥ:
ಕೊಳುಗುಳ: ಯುದ್ಧ, ರಣರಂಗ; ಜಯಲಕ್ಷ್ಮಿ: ವಿಜಯಶ್ರೀ, ವಿಜಯಲಕ್ಷ್ಮಿ; ಚಲನಸುತ: ವಾಯುಸುತ (ಭೀಮ); ಮದುವೆ: ವಿವಾಹ; ಮಂಗಳ: ಶುಭ; ಮುಹೂರ್ತ: ಸಮಯ; ಮುಳುಗು: ತೋಯು; ಘಳಿಗೆ: ಸಮಯ, ಅವಧಿ; ತಲೆ: ಶಿರ; ಕಪಾಲ: ತಲೆಯೋಡು, ತಲೆಬುರುಡೆ; ಸಾಲ: ಸಾಲು, ಆವಳಿ; ಶೋಣಿತ: ರಕ್ತ; ಜಲ: ನೀರು; ಒಪ್ಪು: ಶೋಭಿಸು, ಅನುಮತಿಸು; ರಣ: ಯುದ್ಧ; ಕಳ: ರಣರಂಗ; ಅದ್ಭುತ: ಆಶ್ಚರ್ಯ; ರಚನೆ: ನಿರ್ಮಾಣ, ಸೃಷ್ಟಿ; ಮಿಗೆ: ಮತ್ತು, ಅಧಿಕ; ಸೌರಂಭ: ಸಂಭ್ರಮ, ಸಡಗರ; ರಂಜಿಸು: ಹೊಳೆ, ಪ್ರಕಾಶಿಸು;
ಗಳಿಗೆಬಟ್ಟಲು: ಕಾಲಗಣನೆಯ ಒಂದು ಸಾಧನ;

ಪದವಿಂಗಡಣೆ:
ಕೊಳುಗುಳದ +ಜಯಲಕ್ಷ್ಮಿಗ್+ಆಯಿತು
ಚಲನಸುತನಲಿ+ ಮದುವೆ+ಎನೆ+ ಮಂ
ಗಳ+ಮುಹೂರ್ತಕದೊಳಗೆ +ಮುಳುಗಿದ +ಘಳಿಗೆವಟ್ಟಿಲೆನೆ
ತಲೆ+ ಕಪಾಲದ +ಸಾಲ+ಶೋಣಿತ
ಜಲದಲಂತ್+ಒಪ್ಪಿದವು +ರಣದೊಳು
ಕಳದೊಳ್+ಅದ್ಭುತ+ರಚನೆ +ಮಿಗೆ+ ಸೌರಂಭ+ ರಂಜಿಸಿತು

ಅಚ್ಚರಿ:
(೧) ಭೀಮನನ್ನು ಚಲನಸುತ ಎಂದು ಕರೆದಿರುವುದು
(೨) ರಣರಂಗವನ್ನು ಮದುವೆಯ ಸಂಭ್ರಮಕ್ಕೆ ಹೋಲಿಸಿರುವ ಕವಿಯ ಕಲ್ಪನೆ

ಪದ್ಯ ೪೨: ಕುರುಕ್ಷೇತ್ರದಲ್ಲಿ ಸೈನ್ಯವು ಯಾವ ದಿಕ್ಕಿಗೆ ಬೀಡು ಬಿಟ್ಟಿತು?

ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ (ಉದ್ಯೋಗ ಪರ್ವ, ೧೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರೆ ಈ ಸೈನ್ಯದ ಸಂಭ್ರಮ, ಸಜ್ಜುಗಳು, ಉತ್ಸಾಹದ ನಡೆ, ಹೊಸದೆಂದು ಜಗತ್ತು ಆಶ್ಚರ್ಯ ಪಟ್ಟಿತು. ಪಾಂಡವ ಸೈನ್ಯವು ಕುರುಕ್ಷೇತ್ರಕ್ಕೆ ಬಂದರು. ಶತ್ರುಗಳನ್ನು ಗೆದ್ದವರು ಭೂಮಿಯನ್ನು ಗೆದ್ದರು. ಶ್ರೀಕೃಷ್ಣನ ಅಪ್ಪಣೆಯಂತೆ ಕುರುಕ್ಷೇತ್ರದ ಪಶ್ಚಿಮ ಭಾಗದಲ್ಲಿ ಸೈನ್ಯ ಸಾಗರವು ಬೀಡು ಬಿಟ್ಟಿತು.

ಅರ್ಥ:
ನಡೆ: ಚಲಿಸು; ಅರರೆ: ಆಶ್ಚರ್ಯವನ್ನು ಸೂಚಿಸುವ ಪದ; ರಾಯ: ರಾಜ; ಕಟಕ:ಸೈನ್ಯ, ಗುಂಪು; ತೆರಳು: ಹೋಗು, ನಡೆ; ಸೌರಂಭ:ಸಂಭ್ರಮ, ಸಡಗರ; ಇಳೆ: ಭೂಮಿ; ಅಚ್ಚರಿ: ಆಶ್ಚರ್ಯ; ಬೀರು: ತೋರು; ವರ: ಶ್ರೇಷ್ಠ; ಗಮಿಸು: ಹೊರಡು; ಅರಿ: ವೈರಿ; ವಿಜಯ: ಗೆಲುವು; ನೆಲ: ಭೂಮಿ; ಗೆಲಿದು: ಗೆದ್ದು; ಹರಿ: ಕೃಷ್ಣ; ನೇಮ: ಆಜ್ಞೆ; ಎಡೆ: ಪ್ರದೇಶ, ಜಾಗ; ಅರಿ: ತಿಳಿ; ಬಲ: ಸೈನ್ಯ; ಶರಧಿ: ಸಾಗರ; ಬಿಟ್ಟುದು: ನೆಲೆಸು; ಕಳ: ರಣರಂಗ; ಪಶ್ಚಿಮ: ವಾಮ; ದೆಸೆ: ದಿಕ್ಕು; ಪಸರು: ಹಬ್ಬು, ಹರಡು;

ಪದವಿಂಗಡಣೆ:
ಅರರೆ +ನಡೆದುದು +ರಾಯ +ಕಟಕದ
ತೆರಳಿಕೆಯ +ಸೌರಂಭವ್+ಇಳೆಗ್
ಅಚ್ಚರಿಯ +ಬೀರಿತು +ವರ+ಕುರುಕ್ಷೇತ್ರಕ್ಕೆ +ಗಮಿಸಿದರು
ಅರಿವಿಜಯಿಗಳು +ನೆಲನ +ಗೆಲಿದರು
ಹರಿಯ +ನೇಮದಲ್+ಎಡೆಯರಿದು +ಬಲ
ಶರಧಿ +ಬಿಟ್ಟುದು +ಕಳನ +ಪಶ್ಚಿಮ +ದೆಸೆಯ +ಪಸರದಲಿ

ಅಚ್ಚರಿ:
(೧) ಇಳೆ, ನೆಲ, ಎಡೆ – ಸಾಮ್ಯ ಪದಗಳು;

ಪದ್ಯ ೧೮: ಕುಂತಿ ಕೃಷ್ಣನನ್ನು ಹೇಗೆ ಹೊಗಳಿದಳು?

ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಿತವಿಲ್ಲದ ಕರುಣೆಯ ಸಾಗರನಾದ ಶ್ರೀಕೃಷ್ಣನ ಪದಕಮಲಕ್ಕೆ ಬಂದು ನಮಸ್ಕರಿಸಿ ಅತ್ಯಂತ ರೋಮಾಂಚನ ಗೊಂಡು ಅಮಿತ ಸುಖದಸಾರವನ್ನು ಹೀರಿದನುಭವದಿಂದ ಕುಂತಿ ಸಂಭ್ರಮಿಸಿದಳು. ಶ್ರೇಷ್ಠವಾದ ವೇದಗಳಿಗೆ ನಿಮ್ಮನ್ನು ಅಳೆಯಲು ಸಾಧ್ಯವಿಲ್ಲ ಅಂತಹ ಮಹಿಮಾನ್ವಿತನಾದ ನೀವು ನಡೆದು ಇಲ್ಲಿಗೆ ಬಂದು ದರ್ಶನ ನೀಡುತ್ತಿದ್ದೀರಿ ಎಂದು ಕುಂತಿ ಕೃಷ್ಣನನ್ನು ಹೊಗಳಿದಳು.

ಅರ್ಥ:
ಅಮಿತ: ಬಹಳ; ಕರುಣ: ದಯೆ, ಕಾರುಣ್ಯ; ಸಿಂಧು: ಸಾಗರ; ಪದಕಮಲ: ಚರಣ ಪದ್ಮ; ಬಂದು: ಆಗಮಿಸಿ, ಎರಗು: ನಮಸ್ಕರಿಸಿ; ಪುಳಕ: ರೋಮಾಂಚನ; ತನಿ: ಸವಿಯಾದುದು; ಸುಖ: ಸಂತೋಷ, ನಲಿವು; ಪಾನ:ಪಾನೀಯ, ಪೇಯ; ರಸ: ಸಾರ; ಸೌರಂಭ: ಸಂಭ್ರಮ, ಸಡಗರ; ಮುಳುಗು: ಮೀಯು, ಮರೆಯಾಗು; ಗಮಿಸು: ಹೋಗು; ಅರಿ: ತಿಳಿ; ಗರುವ: ಹಿರಿಯ, ಶ್ರೇಷ್ಠ; ವೇದ: ಶೃತಿ; ಪ್ರಮಿತಿ: ಅಳತೆ, ಪ್ರಮಾಣ; ಗೋಚರ: ಕಾಣುವುದು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ಅಮಿತ +ಕರುಣಾ+ಸಿಂಧುವಿನ+ ಪದ
ಕಮಲದಲಿ +ಬಂದ್+ಎರಗಿ+ ಪುಳಕೋದ್
ಗಮದ +ತನಿ +ಸುಖಪಾನರಸ+ ಸೌರಂಭದಲಿ+ ಮುಳುಗಿ
ಗಮಿಸಲ್+ಅರಿಯವು +ಗರುವ +ವೇದ
ಪ್ರಮಿತಿಗಳು +ನೀವೆಂತು +ನಡೆತಂ
ದೆಮಗೆ+ ಗೋಚರವಾದಿರ್+ಎನುತವೆ+ ಹೊಗಳಿದಳು+ ಕುಂತಿ

ಅಚ್ಚರಿ:
(೧) ಅಮಿತ, ಪ್ರಮಿತ – ಪ್ರಾಸ ಪದಗಳು
(೨) ಸಂತೋಷಪಟ್ಟಳು ಎಂದು ಹೇಳಲು – ಪುಳಕೋದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ