ಪದ್ಯ ೩೩: ಪಾಂಡವರೆಲ್ಲರು ಎಲ್ಲಿ ಭೇಟಿಯಾದರು?

ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿ ಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾಕ್ಷಣಕೆ
ಫಲುಗುಣನು ಪೊಡಮಟ್ಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿದಪ್ಪಿದರು ಸೋದರರೆಲ್ಲ ಹರುಷದೊಳು (ವಿರಾಟ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮೊದಲೇ ಗೊತ್ತು ಪಡಿಸಿದಂತೆ ಭೀಮ, ನಕುಲ, ಸಹದೇವ, ದ್ರೌಪದಿಯರು ಧರ್ಮರಾಯನ ಮನೆಗೆ ಬಂದರು. ಅರ್ಜುನನು ಅಣ್ಣಂದಿರಿಬ್ಬರಿಗೂ ವಂದಿಸಿದನು, ಉಳಿದವರು ಮೂವರಿಗೆ ವಂದಿಸಿದರು. ಸಹೋದರರು ಸಂತೋಷದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು.

ಅರ್ಥ:
ಬಳಿಕ: ನಂತರ; ಸಂಕೇತ: ಗುರುತು; ಭೂಪ: ರಾಜ; ನಿಳಯ: ಮನೆ; ಕಲಿ: ಶೂರ; ಹೊಕ್ಕು: ಸೇರು; ನಳಿನಮುಖಿ: ಕಮಲದಂತ ಮುಖವುಳ್ಳವಳು; ಕ್ಷಣ: ಸಮಯ; ಪೊಡವಡು: ನಮಸ್ಕರಿಸು; ಉಳಿದ: ಮಿಕ್ಕ; ವಂದಿಸು: ನಮಸ್ಕರಿಸು; ಒಲಿದು: ಪ್ರೀತಿಯಿಮ್ದ; ಅಪ್ಪು: ತಬ್ಬಿಕೊ; ಸೋದರ: ಅಣ್ಣ ತಮ್ಮಂದಿರು; ಹರುಷ: ಸಂತೋಷ;

ಪದವಿಂಗಡಣೆ:
ಬಳಿಕ +ಸಂಕೇತದಲಿ +ಭೂಪನ
ನಿಳಯವನು +ಕಲಿ +ಭೀಮ +ಹೊಕ್ಕನು
ನಳಿನಮುಖಿ +ಸಹದೇವ +ನಕುಲರು +ಬಂದರ್+ಆ+ಕ್ಷಣಕೆ
ಫಲುಗುಣನು +ಪೊಡಮಟ್ಟನ್+ಇಬ್ಬರಿಗ್
ಉಳಿದವರು +ಪಾರ್ಥಂಗೆ +ವಂದಿಸಲ್
ಒಲಿದು +ಬಿಗಿದಪ್ಪಿದರು +ಸೋದರರೆಲ್ಲ+ ಹರುಷದೊಳು

ಅಚ್ಚರಿ:
(೧) ಅಣ್ಣತಮ್ಮಂದಿರಲ್ಲಿ ಭಕ್ತಿ ಪ್ರೇಮ – ಫಲುಗುಣನು ಪೊಡಮಟ್ಟನಿಬ್ಬರಿಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿದಪ್ಪಿದರು

ಪದ್ಯ ೯೫: ಕೀಚಕನ ತಮ್ಮಂದಿರು ಹೇಗೆ ಬಂದರು?

ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ದಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ಬಿಡುತ (ವಿರಾಟ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕಾವಲಿನವರು ತಮ್ಮ ಕೈಯಲ್ಲಿ ದೀವಟಿಗೆ ಗಳನ್ನು ಹಿಡಿದು ಕೀಚಕನ ಶವವನ್ನು ನೋಡಿ,ಅವನ ತಮ್ಮಂದಿರಿಗೆ ಈ ಸುದ್ದಿಯನ್ನು ಬೇಗನೆ ತಿಳಿಸಿದರು. ಅವನ ತಮ್ಮಂದಿರು ಈ ವಿಷಯವನ್ನು ತಿಳಿದ ಕೂಡಲೆ ಬಾಯಿಬಡಿದುಕೊಂಡು, ಎದೆಯಲ್ಲಿ ಜ್ವಾಲೆಯು ಹೆಚ್ಚಾಗಿ, ತಲೆಗೆದರಿಕೊಂಡು ಬಾಯಿ ಬಿಡುತ್ತಾ ಬಂದರು.

ಅರ್ಥ:
ಅರಸಿ: ಹುಡುಕಿ; ದೀವಿಗೆ: ಸೊಡರು, ದೀಪಿಕೆ; ಕೈದೀವಿಗೆ: ಕೈಯಲ್ಲಿ ಹಿಡಿಯುವ ದೀಪ; ಪರಿ: ರೀತಿ; ಕಂಡು: ನೋಡು; ಕಾಹಿನ: ರಕ್ಷಿಸುವವ; ಹರಿ: ನೆರೆದುದು; ಹೇಳು: ತಿಳಿಸು; ಅನುಜಾತ: ಒಡಹುಟ್ಟಿದವರು; ಬೇಗ: ಶೀಘ್ರ; ಕರ: ಹಸ್ತ; ಹೊಯ್ದು: ಹೊಡೆದು; ಹೃದಯ: ಎದೆ; ಉರಿ: ಜ್ವಾಲೆ; ಚಡಾಳ: ಹೆಚ್ಚಳ; ಬಿಟ್ಟ: ತೊರೆದ; ಮಡೆ: ತಲೆ; ಬಂದು: ಆಗಮಿಸು; ಸೋದರ: ತಮ್ಮ;

ಪದವಿಂಗಡಣೆ:
ಅರಸಿ +ಕೈದೀವಿಗೆಯಲ್+ಅವನ್+ಇಹ
ಪರಿಯ +ಕಂಡರು +ಕಾಹಿನವದಿರು
ಹರಿದು+ ಹೇಳಿದರ್+ಆತನ್+ಅನುಜಾತರಿಗೆ +ಬೇಗದಲಿ
ಕರದಿ +ಬಾಯ್ಗಳ +ಹೊಯ್ದು +ಹೃದಯದೊಳ್
ಉರಿ +ಚಡಾಳಿಸೆ +ಬಿಟ್ಟ +ಮಂಡೆಯೊಳ್
ಇರದೆ +ಬಂದರು +ಕೀಚಕನ+ ಸೋದರರು +ಬಾಯ್ಬಿಡುತ

ಅಚ್ಚರಿ:
(೧) ಅನುಜಾತ, ಸೋದರ – ಸಮನಾರ್ಥಕ ಪದ

ಪದ್ಯ ೩೫: ಧೃತರಾಷ್ಟ್ರನು ಏನು ಹೇಳಿದನು?

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ (ಅರಣ್ಯ ಪರ್ವ, ೨೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನೊಂದಿಗೆ ಮಾತನಾಡುತ್ತಾ, ನೀನು ಹೇಳಿದವರು ಹಾಗೆಯೇ ಇರಲಿ, ಪ್ರಾಯೋಪವೇಶದ ದುರಾಗ್ರಹವನ್ನು ಬಿಟ್ಟು ಬಿಡು. ನೀನು ಹೋದರೆ ಕುರುವಂಶವೇ ಹೋದಂತೆ, ಪಟ್ಟ ಯಾರಿಗೆ? ಬೀದಿ ಜಗಳದಲ್ಲಿ ಒಮ್ಮೆ ಸೋಲಾದರೆ ಅದೇನೂ ಕುಂದಲ್ಲ. ಗೆದ್ದರೂ ಹೆಚ್ಚಲ್ಲ. ಇಷ್ಟಕ್ಕೂ ನಿನ್ನನ್ನು ಉಳಿಸಿದವರು ನಿನ್ನ ಸೋದರರಲ್ಲವೇ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ದುರಾಗ್ರಹ: ಹಟಮಾರಿತನ; ಬೇಡ: ಸಲ್ಲದು, ಕೂಡದು; ಅಳಿವು: ಸಾವು; ಪಟ್ಟ: ಸ್ಥಾನ; ಬೀದಿಗಲಹ: ಬೀದಿ ಜಗಳ; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪರಿಹರ: ನಿವಾರಣೆ; ಸೋದರ: ಅಣ್ಣ ತಮ್ಮ; ಹೆಚ್ಚು: ಅಧಿಕ; ಕುಂದು: ತೊಂದರೆ; ಅಂಧ: ಕಣ್ಣಿಲ್ಲದವ; ನೃಪ: ರಾಜ;

ಪದವಿಂಗಡಣೆ:
ಆದರ್+ಅವರಂತಿರಲಿ+ ನಿನಗಿ
ನ್ನೀ +ದುರಾಗ್ರಹ +ಬೇಡ +ನಿನಗ್+ಅಳಿ
ವಾದೋಡ್+ಈ+ ಕುರುವಂಶವ್+ಅಳಿವುದು +ಪಟ್ಟವ್+ಆವನಲಿ
ಬೀದಿಗಲಹದೊಳ್+ಒಮ್ಮೆ +ಪೈಸರ
ವಾದಡ್+ಅದು +ಪರಿಹರಿಸಿದವರೇ
ಸೋದರರಲಾ+ ಹೆಚ್ಚು+ಕುಂದೇನ್+ಎಂದನ್+ಅಂಧನೃಪ

ಅಚ್ಚರಿ:
(೧) ದುರ್ಯೋಧನನ ಮೇಲಿನ ಪ್ರೀತಿ – ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ

ಪದ್ಯ ೨೭: ದುರ್ಯೋಧನನು ಕೃಷ್ಣನಿಗೆ ಏನು ಹೇಳಿದನು?

ಯಾದವರು ಕೌರವರೊಳುಂಟೇ
ಭೇದವಾವೈತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗಬೇಕೆಂದ (ಉದ್ಯೋಗ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಯಾದವರು ಕೌರವರು ಒಂದೇ ವಂಶಸ್ಥರು (ಯಯಾತಿ), ನಮ್ಮಿಬ್ಬರಲ್ಲಿ ಭೇದವಿಲ್ಲ. ನಿಮ್ಮಲ್ಲಿಗೆ ಬಂದರೆ ನಮಗಾವ ಅವಮಾನವೂ ಇಲ್ಲ. ಅಲ್ಲದೆ ನಿಮ್ಮಂತಹ ಸ್ನೇಹಿತರು ನಮಗೆ ಯಾರಿದ್ದಾರೆ, ನಾವೀಗ ಬಂದ ಉದ್ದೇಶ, ಸೋದರರು, ದಾಯಾದಿಗಳಾದ ನಮ್ಮಿಬ್ಬರ ಮನಸ್ಸು ಕೆಟ್ಟಿದೆ, ಭೂಮಿಗಾಗಿ ಯುದ್ಧ ಮಾಡಲಿದ್ದೇವೆ, ನೀವು ನಮ್ಮಿಬ್ಬರಿಗೂ ಸಹಾಯ ಮಾಡಬೇಕು ಎಂದು ಹೇಳಿದನು.

ಅರ್ಥ:
ಭೇದ: ಬಿರುಕು, ಛಿದ್ರ; ಲಾಘವ: ಕೀಳುತನ, ಸಣ್ಣತನ; ಸಖ: ಸ್ನೇಹಿತ; ಸೋದರ: ಅಣ್ಣ ತಮ್ಮ; ಮನ: ಮನಸ್ಸು; ಕದಡು: ಕಲಕು, ಕ್ಷೋಭೆಗೊಳ್ಳು; ದಾಯಾದ: ದೊಡ್ಡಪ್ಪ ಚಿಕ್ಕಪ್ಪ ಮಕ್ಕಳು; ವಿಷಯ: ವಿಚಾರ; ಧರಣಿ: ಭೂಮಿ; ಕಾದುವೆವು: ಕಾದಾಡು; ಬಲ: ಶಕ್ತಿ, ಸಾಮರ್ಥ್ಯ;

ಪದವಿಂಗಡಣೆ:
ಯಾದವರು +ಕೌರವರೊಳ್+ಉಂಟೇ
ಭೇದವಾವ್+ಐತಂದರ್+ಎಮ್ಮೊಳಗ್
ಆದ+ ಲಾಘವವೇನು+ ನಿಮ್ಮವೊಲ್+ಆರು +ಸಖರೆಮಗೆ
ಸೋದರರ+ ಮನ+ ಕದಡಿದವು+ ದಾ
ಯಾದ +ವಿಷಯದಲಿನ್ನು+ ಧರಣಿಗೆ
ಕಾದುವೆವು +ನಮ್ಮಿಬ್ಬರಿಗೆ+ ಬಲವಾಗ+ಬೇಕೆಂದ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಬಗೆ – ಯಾದವರು ಕೌರವರೊಳುಂಟೇ
ಭೇದ, ಎಮ್ಮೊಳಗಾದ ಲಾಘವೇನು, ನಿಮ್ಮವೊಲಾರು ಸಖರೆಮಗೆ