ಪದ್ಯ ೧೯: ಸೈನಿಕರು ಯಾರ ಆಶ್ರಯಕ್ಕೆ ಬಂದರು?

ಏನ ಹೇಳುವೆನಮಮ ಬಹಳಾಂ
ಭೋನಿಧಿಯ ವಿಷದುರಿಯ ಧಾಳಿಗೆ
ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
ದಾನವಾಚಳ ಮಥಿತ ಸೇನಾಂ
ಭೋನಿಧಿಯ ಪರಿಭವದ ವಿಷದುರಿ
ಗಾ ನರೇಂದ್ರನಿಕಾಯ ಹೊಕ್ಕುದು ರವಿಸುತನ ಮರೆಯ (ದ್ರೋಣ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಬ್ಬಬ್ಬಾ, ಹಾಲಾಹಲ ವಿಷದ ಉರಿಯನ್ನು ತಡೆದುಕೊಳ್ಳಲಾಗದೇ, ದೇವತೆಗಳೂ ರಾಕ್ಷಸರೂ ಶಿವನ ಮರೆಹೊಕ್ಕಂತೆ, ಘಟೋತ್ಕಚ ಪರ್ವತದಿಂದ ಕಡೆಯಲ್ಪಟ್ಟ ಸೈನ್ಯ ಸಮುದ್ರದ ಸೋಲಿನ ವಿಷದುರಿಯನ್ನು ತಾಳಲಾರದೆ ರಾಜರು ಕರ್ಣನ ಆಶ್ರಯಕ್ಕೆ ಬಂದರು.

ಅರ್ಥ:
ಹೇಳು: ತಿಳಿಸು; ಬಹಳ: ತುಂಬ; ಅಂಭೋನಿಧಿ: ಸಾಗರ; ವಿಷ: ಗರಳ ಉರಿ: ಬೆಂಕಿ; ಧಾಳಿ: ಆಕ್ರಮಣ; ದಾನವ: ರಾಕ್ಷಸ; ಅಮರ: ದೇವತೆ; ಇಂದುಮೌಳಿ: ಶಂಕರ; ಮರೆ: ಆಶ್ರಯ; ಹೊಗು: ತೆರಳು; ದಾನವ: ರಾಕ್ಷಸ; ಅಚಳ: ಬೆಟ್ಟ; ಮಥಿತ: ಕಡಿಯಲ್ಪಟ್ಟ; ಸೇನ: ಸೈನ್ಯ; ಪರಿಭವ: ಸೋಲು; ನರೇಂದ್ರ: ರಾಜ; ನಿಕಾಯ: ಗುಂಪು; ಹೊಕ್ಕು: ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಮರೆ: ಶರಣಾಗತಿ;

ಪದವಿಂಗಡಣೆ:
ಏನ +ಹೇಳುವೆನಮಮ+ ಬಹಳ+
ಅಂಭೋನಿಧಿಯ +ವಿಷದುರಿಯ +ಧಾಳಿಗೆ
ದಾನವ+ಅಮರರ್+ಇಂದುಮೌಳಿಯ +ಮರೆಯ +ಹೊಗುವಂತೆ
ದಾನವ+ಅಚಳ +ಮಥಿತ +ಸೇನಾಂ
ಭೋನಿಧಿಯ +ಪರಿಭವದ +ವಿಷದುರಿಗ್
ಆ +ನರೇಂದ್ರ+ನಿಕಾಯ +ಹೊಕ್ಕುದು +ರವಿಸುತನ+ ಮರೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ
(೨) ಅಂಭೋನಿಧಿ, ಸೇನಾಂಭೋನಿಧಿ – ೨, ೫ ಸಾಲಿನ ಮೊದಲ ಪದ
(೩) ದಾನವ – ೩,೪ ಸಾಲಿನ ಮೊದಲ ಪದ