ಪದ್ಯ ೫೬: ಯಾರ ಜೊತೆ ಸೆಣಸಿದರೆ ಪ್ರಯೋಜನವಾಗದು?

ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಾಯಣ (ದ್ರೋಣ ಪರ್ವ, ೧೯ ಸಂಧಿ, ೫೬ ಪದ್ಯ)

ತಾತ್ಪರ್ಯ:
ನಿನ್ನ ಅರಮನೆಯ ವೀರರಿಗೆ ಯಾವ ಅಸ್ತ್ರವಿಲ್ಲ? ಬಲದಲ್ಲಿ ಅವರಿಗೆ ನ್ಯೂನ್ಯತೆಗಳಿವೆಯೇ? ಅವರಿಗೆ ಸರಿಸಮನಾದವರು ಲೋಕದಲ್ಲಿ ಯಾರಿದ್ದಾರೆ? ಯಾರು ಇದ್ದರೇನು, ಜಗತ್ತಿನ ಅಧಿದೈವದ ವಿರುದ್ಧ ಸಮ್ರಕ್ಕಿಳಿದಿರಿ, ಅದೂ ಶ್ರೀಕೃಷ್ಣನು ಪಾಂಡವ ಜೀವಿ ಎಂದರಿತೂ ನೀವು ಪಾಂಡವರಲ್ಲಿ ಯುದ್ಧಮಾಡಿದಿರಿ ಎಂದು ಸಂಜಯನು ಹೇಳಿದನು.

ಅರ್ಥ:
ಶರ: ಬಾಣ; ಕೊರತೆ: ನ್ಯೂನ್ಯತೆ; ಬಲ: ಸೈನ್ಯ; ಕುಂದು: ತೊಂದರೆ; ಭುವನ: ಜಗತ್ತು, ಪ್ರಪಂಚ; ಸಮಜೋಳಿ: ಸರಿಸಮನಾದ; ಅರಮನೆ: ರಾಜರ ಆಲಯ; ಸುಭಟ: ಪರಾಕ್ರಮಿ; ಜಗ: ಪ್ರಪಂಚ; ಅಧಿದೈವ: ಭಗವಂತ; ಸೆಣಸು: ಹೋರಾದು; ಅರಿ: ತಿಳಿ;

ಪದವಿಂಗಡಣೆ:
ಆವ +ಶರದಲಿ +ಕೊರತೆ +ನಿನ್ನವರ್
ಆವ +ಬಲದಲಿ+ ಕುಂದು +ಭುವನದೊಳ್
ಆವನೈ +ಸಮಜೋಳಿ +ನಿನ್ನ್+ಅರಮನೆಯ +ಸುಭಟರಿಗೆ
ಆವನಿದ್ದೇನಹುದು +ಜಗದ್+ಅಧಿ
ದೈವದಲಿ +ಸೆಣಸಿದಿರಿ +ಪಾಂಡವ
ಜೀವಿ+ಎಂದ್+ಅರಿದರಿದು+ ಗದುಗಿನ +ವೀರನಾರಾಯಣ

ಅಚ್ಚರಿ:
(೧) ಆವ – ೧-೪ ಸಾಲಿನ ಮೊದಲ ಪದ
(೨) ಕೊರತೆ, ಕುಂದು – ಸಮಾನಾರ್ಥಕ ಪದ

ಪದ್ಯ ೭: ಚತುರಂಗ ಸೇನೆಯು ಯಾರನ್ನು ಉರುಳಿಸಿದರು?

ಉರಿಯ ಚೂಣಿಯಲುಸುರು ಮೂಗಿನ
ಲುರವಣಿಸುತಿದೆ ಧರಣಿಪತಿ ಸು
ಸ್ಥಿರನು ಹೊಯ್ ಹೊಯ್ ಹೊಳಲ ಬೆದರಿಸಿ ಸುಲಿವ ಬಣಗುಗಳ
ಹರಿಯೆನಲು ಹೊರವಂಟು ಹೊಯ್ದರು
ತುರಗ ಗಜಘಟೆ ಬೀದಿವರಿದವು
ನೆರವಿದೊಳಸಿನ ಮನ್ನೆಯರ ಸೆಣಸಿದರು ಶೂಲದಲಿ (ದ್ರೋಣ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಬಿಸಿಯುಸಿರು ಮೂಗಿನಲ್ಲಿ ಉರಿಯಂತೆ ಹೊರಬರುತ್ತಿದೆ. ದೊರೆ ಸ್ಥಿರವಾಗಿದ್ಧಾನೆ, ಬೀಡನ್ನು ಬೆದರಿಸಿ ದೋಚುತ್ತಿರುವವರನ್ನು ಬಡಿದು ಹಾಕಿ ಎಂದು ಮಂತ್ರಿಗಲು ಆಜ್ಞೆ ಮಾಡಲು ಚತುರಂಗ ಸೇನೆಯು ಹೊರಟು ಗೊಂದಲ ಮಾಡುತ್ತಿದ್ದವರನ್ನು ಶೂಲದಿಂದ ತಿವಿದು ಉರುಳಿಸಿದರು.

ಅರ್ಥ:
ಉರಿ: ಬೆಂಕಿ; ಚೂಣಿ: ಮುಂದಿನ ಸಾಲು, ಮುಂಭಾಗ; ಉಸುರು: ಪ್ರಾಣ, ಹೇಳು; ಮೂಗು: ನಾಸಿಕ; ಉರವಣಿಸು: ಆತುರಿಸು; ಧರಣಿಪತಿ: ರಾಜ; ಸ್ಥಿರ: ಶಾಶ್ವತವಾದ; ಹೊಯ್: ಹೊಡೆ; ಹೊಳಲು: ಪ್ರಕಾಶ, ನಗರ; ಬೆದರಿಸು: ಹೆದರಿಸು; ಸುಲಿ: ಬಿಡಿಸು, ತೆಗೆ; ಬಣಗು: ಕೀಳು, ಅಲ್ಪ; ಹರಿ: ಸೀಳು; ಹೊರವಂಟು: ತೆರಳು; ಹೊಯ್ದು: ಹೊಡೆ; ತುರಗ: ಅಶ್ವ; ಗಜಘಟೆ: ಆನೆಗಳ ಗುಂಪು; ಬೀದಿ: ಮಾರ್ಗ; ನೆರವಿ: ಗುಂಪು; ಅಸಿ: ಕತ್ತಿ, ಖಡ್ಗ; ಮನ್ನೆಯ: ಮೆಚ್ಚಿನ; ಸೆಣಸು: ಹೋರಾಡು; ಶೂಲ: ಈಟಿ, ಶಿವನ ತ್ರಿಶೂಲ;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರು +ಮೂಗಿನಲ್
ಉರವಣಿಸುತಿದೆ +ಧರಣಿಪತಿ +ಸು
ಸ್ಥಿರನು +ಹೊಯ್ +ಹೊಯ್ +ಹೊಳಲ +ಬೆದರಿಸಿ +ಸುಲಿವ +ಬಣಗುಗಳ
ಹರಿಯೆನಲು +ಹೊರವಂಟು +ಹೊಯ್ದರು
ತುರಗ+ ಗಜಘಟೆ +ಬೀದಿವರಿದವು
ನೆರವಿದೊಳ್+ಅಸಿನ +ಮನ್ನೆಯರ +ಸೆಣಸಿದರು +ಶೂಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿಯೆನಲು ಹೊರವಂಟು ಹೊಯ್ದರು

ಪದ್ಯ ೧೫: ಅಭಿಮನ್ಯು ಯಾವುದರಿಂದ ಮಾತನಾಡಲು ಹೇಳಿದನು?

ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈ ಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಈ ವಿನಯದ ಮಾತೇಕೆ? ನಿಮ್ಮ ಭುಜಬಲದ ಸಾಮರ್ಥ್ಯವು ನನಗೆ ಗೊತ್ತು. ನನ್ನೊಡನೆ ಕಾದಿ ಗೆದ್ದರೆ ನಿಮ್ಮ ಸತ್ವವು ಕಂಡೀತು, ನೀವು ನನ್ನನ್ನು ಗೆದ್ದರೆ ನಾನು ಮತ್ತೆ ಬಿಲ್ಲನ್ನೇ ಹಿಡಿಯುವುದಿಲ್ಲ. ಕೆಲಸಕ್ಕೆ ಬಾರದ ಮಾತು ಸಾಕು, ಗೊತ್ತಿದ್ದರೆ ಬಾಣಗಳಿಂದಲೇ ಮಾತಾಡಿರಿ ಎನ್ನುತ್ತಾ ಅಭಿಮನ್ಯು ಬಾಣಗಳನ್ನು ಬಿಟ್ಟನು.

ಅರ್ಥ:
ವಿನಯ: ಒಳ್ಳೆಯತನ, ಸೌಜನ್ಯ; ಭುಜಬಲ: ಪರಾಕ್ರಮ; ಅನುವು: ಸೊಗಸು; ಬಲ್ಲೆ: ತಿಳಿದಿರುವೆ; ಹವಣ: ಮಿತಿ, ಅಳತೆ; ಕಾಬೆ: ನೋಡು, ತಿಳಿ; ಸೆಣಸು: ಹೋರಾಡು; ಜಯಿಸು: ಗೆಲ್ಲು; ಧನು: ಬಿಲ್ಲು; ಹಿಡಿ: ಗ್ರಹಿಸು; ಸಾಕು: ತಡೆ, ನಿಲ್ಲು; ಡೊಂಬಿ: ಮೋಸ, ವಂಚನೆ, ಕಾಳಗ; ಬಿನುಗು: ಅಲ್ಪವಾದ; ನುಡಿ: ಮಾತು; ಬಲ್ಲೆ: ತಿಳಿ; ಮೊನೆ: ತುದಿ, ಕೊನೆ; ಕಣೆ: ಬಾಣ; ಮಾತು: ವಾಣಿ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ವಿನಯವೇಕಿದು +ನಿಮ್ಮ +ಭುಜಬಲದ್
ಅನುವ +ಬಲ್ಲೆನು +ನಿಮ್ಮ +ಕೈ +ಮೈ
ತನದ +ಹವಣನು +ಕಾಬೆನ್+ಎನ್ನೊಳು +ಸೆಣಸಿ +ಜಯಿಸಿದರೆ
ಧನುವ +ಹಿಡಿಯೆನು +ಸಾಕು +ಡೊಂಬಿನ
ಬಿನುಗು +ನುಡಿಯಂತಿರಲಿ +ಬಲ್ಲಡೆ
ಮೊನೆ+ಕಣೆಯಲೇ +ಮಾತನಾಡೆಂದ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವಿನ ಪ್ರಮಾಣ – ಎನ್ನೊಳು ಸೆಣಸಿ ಜಯಿಸಿದರೆ ಧನುವ ಹಿಡಿಯೆನು ಸಾಕು ಡೊಂಬಿನ
ಬಿನುಗು ನುಡಿಯಂತಿರಲಿ

ಪದ್ಯ ೫೪: ಅರ್ಜುನನು ಯಾರೊಡನೆ ಯುದ್ಧಮಾಡಿದೆನೆಂದು ನೊಂದನು?

ಆವನನು ಜಪಯಜ್ಞಕರ್ಮದೊ
ಳಾವನನು ನಿಯಮಾದಿಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೪ ಪದ್ಯ)

ತಾತ್ಪರ್ಯ:
ಯಾರನ್ನು ಜಪ, ತಪ, ಯಜ್ಞ, ಕರ್ಮ, ಯೋಗ, ವಿವಿಧ ಅರ್ಚನಾ ಸಹಿತವಾದ ಭಕ್ತಿಗಳಿಂದ ಭಜಿಸುವವರೋ, ಯಾರನ್ನು ಜೀವ, ಆತ್ಮರಿಬ್ಬರಲ್ಲೂ ಏಕರೂಪವಾದ ಚೈತನ್ಯವೆಂದು ಅನುಸಂಧಾನ ಮಾಡುವರೋ ಅಂತಹ ಶಂಕರನೊಡನೆ ನಾನು ಯುದ್ಧ ಮಾಡಿದೆನಲ್ಲಾ ಶಿವ ಶಿವಾ ಎಂದು ಕೊರಗಿದನು.

ಅರ್ಥ:
ಜಪ: ತಪ; ಯಜ್ಞ: ಕ್ರತು; ಕರ್ಮ: ಕಾರ್ಯ; ನಿಯಮ: ವ್ರತ, ನೇಮ; ಆದಿ: ಮುಂತಾದ; ಯೋಗ: ಧ್ಯಾನ; ವಿವಿಧ: ಹಲವಾರು; ಅರ್ಚನೆ: ಆರಾಧನೆ; ಅಂಕಿತ: ಗುರುತು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮಾರ್ಗ: ದಾರಿ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ಚೈತನ್ಯ: ಜೀವಂತಿಕೆ; ಅವಲಂಬನೆ: ಆಸರೆ; ಭಜಿಸು: ಆರಾಧಿಸು; ರಣ: ಯುದ್ಧ; ಸೆಣಸು: ಹೋರಾಡು;

ಪದವಿಂಗಡಣೆ:
ಆವನನು +ಜಪ+ಯಜ್ಞ+ಕರ್ಮದೊಳ್
ಆವನನು +ನಿಯಮ+ಆದಿ+ಯೋಗದೊಳ್
ಆವನನು +ವಿವಿಧ+ಅರ್ಚನ+ಅಂಕಿತ +ಭಕ್ತಿಮಾರ್ಗದಲಿ
ಆವನನು +ಜೀವಾತ್ಮ +ಚೈತನ್ಯ
ಅವಲಂಬನನೆಂದು+ ಭಜಿಸುವರ್
ಆವು +ರಣದಲಿ+ ಸೆಣಸಿದೆವಲಾ+ ಶಿವ+ ಶಿವಾಯೆಂದ

ಅಚ್ಚರಿ:
(೧) ಆವನನು – ನಾಲ್ಕು ಸಾಲಿನ ಮೊದಲ ಪದ