ಪದ್ಯ ೫೦: ನಾರಾಯಣಾಸ್ತ್ರವು ಯಾರ ಪಾದವನ್ನು ಸೇರಿತು?

ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆ ಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು (ದ್ರೋಣ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕರಿದಾದ ಹೊಗೆಯ ಹೊರಳಿಗಳು ಇಲ್ಲವಾದವು. ಸಿಡಿಯುವ ಕಿಡಿಗಳು ಕಾಣಲಿಲ್ಲ. ಬಂಗಾರದ ಗರಿಯ ನಾರಾಯಣಾಸ್ತ್ರವು ಹೊಳೆಯುತ್ತಾ ಬಂದು ಶ್ರೀಕೃಷ್ಣನ ಪಾದಾರವಿಂದಗಳಲ್ಲಡಗಿತು. ಭಯ ಹೋಗಿತು. ಪಾಂಡವ ಸೈನ್ಯದಲ್ಲಿ ಅಸಂಖ್ಯಾತ ನಿಸ್ಸಾಳಗಳು ಮೊರೆದವು.

ಅರ್ಥ:
ಮುರಿ: ಸೀಳು; ಕಬ್ಬೊಗೆ: ದಟ್ಟವಾದ ಹೊಗೆ; ಹೊದರು: ತೊಡಕು, ತೊಂದರೆ; ಹೊರಳು: ತಿರುವು, ಬಾಗು; ಹರೆ: ವ್ಯಾಪಿಸು; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿ; ನೆರವಿ: ಗುಂಪು, ಸಮೂಹ; ನಸಿ: ಹಾಳಾಗು, ನಾಶವಾಗು; ಹೊಂಗರಿ: ಚಿನ್ನದ ಬಣ್ಣವನ್ನು ಹೋಲುವ ಬಾಣದ ಹಿಂಭಾಗ; ಹೊಳೆ: ಪ್ರಕಾಶ; ಮುರಹರ: ಕೃಷ್ಣ; ಪಾದಾರವಿಂದ: ಚರಣ ಕಮಲ; ಹೊರೆ: ರಕ್ಷಣೆ, ಆಶ್ರಯ; ಅಡಗು: ಅವಿತುಕೊಳ್ಳು; ಹೋಯ್ತು: ತೆರಳು; ಭಯ: ಅಂಜಿಕೆ; ಉಬ್ಬರ: ಅತಿಶಯ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಮುರಿಮುರಿದು+ ಕಬ್ಬೊಗೆಯ +ಹೊದರಿನ
ಹೊರಳಿ +ಹರೆದುದು+ ಸೂಸು+ಕಿಡಿಗಳ
ನೆರವಿ+ ನಸಿದುದು +ನಿಮಿರ್ದ +ಹೊಂಗರಿ+ಅಂಬು +ಹೊಳೆ +ಹೊಳೆದು
ಮುರಹರನ +ಪಾದಾರವಿಂದದ
ಹೊರೆಯೊಳ್+ಅಡಗಿತು+ ಹೋಯ್ತು +ಭಯವ್
ಉಬ್ಬರದೊಳಗೆ +ಬೊಬ್ಬಿರಿದವ್+ಉರು + ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಮುರಿಮುರಿ, ಹೊಳೆ ಹೊಳೆ – ಜೋಡಿ ಪದಗಳು
(೨) ಹ ಕಾರದ ತ್ರಿವಳಿ ಪದ – ಹೊದರಿನ ಹೊರಳಿ ಹರೆದುದು; ಹೊಂಗರಿಯಂಬು ಹೊಳೆ ಹೊಳೆದು
(೩) ನ ಕಾರದ ತ್ರಿವಳಿ ಪದ – ನೆರವಿ ನಸಿದುದು ನಿಮಿರ್ದ

ಪದ್ಯ ೨೨: ಮಹಾರಥರು ಹೇಗೆ ಸೋಲನ್ನುಂಡಿದರು?

ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯವು ಘಾಸಿಯಾಯಿತು. ಧೂ, ಈ ದುರ್ಗತಿಯನ್ನು ಸುಡಲಿ ಎಂದು ಸುಭಟರು ದ್ರೋಣನನ್ನೆದುರಿಸಿ ಕಾದಿದರು. ಅಷ್ಟೇ ಅವರ ಸತ್ವ ತ್ರಾಣಗಳು ಅಲ್ಲಿ ಏನೂ ಮಾಡಲಿಲ್ಲ. ಮುನ್ನುಗ್ಗುವ ಬಾಣಗಳ ಸೊಗಡು ಹೊಯ್ದು ಅವರು ನಗೆಗೀಡಾದರು. ಮಹಾರಥರು ಇಂತಹ ಸೋಲು ಅಪಮಾನಗಳನ್ನು ಎಂದೂ ಕಂಡಿರಲಿಲ್ಲ.

ಅರ್ಥ:
ಘಾಸಿ: ಆಯಾಸ, ದಣಿವು; ಸೇನೆ: ಸೈನ್ಯ; ಸುಡು: ದಹಿಸು; ಸುಭಟ: ಪರಾಕ್ರಮ; ಇದಿರು: ಎದುರು; ಕಾದು: ಹೋರಾಟ, ಯುದ್ಧ; ಐಸೆ: ಅಷ್ಟು; ಬಳಿಕ: ನಮ್ತರ; ಸತ್ವ: ಶಕ್ತಿ, ಬಲ; ತ್ರಾಣ: ಕಾಪು, ರಕ್ಷಣೆ; ಸೂಸು: ಎರಚು, ಚಲ್ಲು; ಕಣೆ: ಬಾಣ; ಸೊಗಡು: ಕಂಪು, ವಾಸನೆ; ಹೊಯ್ದು: ಹೊಡೆ; ಹಾಸ: ಸಂತೋಷ; ಮಹಾರಥ: ಪರಾಕ್ರಮಿ; ಭಂಗ: ಮುರಿಯುವಿಕೆ; ನೃಪಾಲ: ರಾಜ; ಕೇಳು: ಹೇಳು;

ಪದವಿಂಗಡಣೆ:
ಘಾಸಿಯಾದುದು+ ಸೇನೆ +ಸುಡಲೆನು
ತಾ +ಸುಭಟರ್+ಇದಿರಾಗಿ +ಕಾದಿದರ್
ಐಸೆ +ಬಳಿಕೇನ್+ಅವರ +ಸತ್ವತ್ರಾಣವೇನಲ್ಲಿ
ಸೂಸು+ಕಣೆಗಳ +ಸೊಗಡು +ಹೊಯ್ದ್+ಉಪ
ಹಾಸಕೊಳಗಾದರು+ ಮಹಾರಥರ್
ಈಸು +ಭಂಗಕೆ +ಬಂದುದಿಲ್ಲ +ನೃಪಾಲ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೇನೆ ಸುಡಲೆನುತಾ ಸುಭಟರಿದಿರಾಗಿ

ಪದ್ಯ ೩೧: ವಿಶ್ವರೂಪವನ್ನು ಯಾರು ಕಂಡರು?

ಅರಳಮಳೆ ಸೂಸಿದವು ದುಂದುಭಿ
ಮೊರೆದುದಾಕಾಶದೊಳು ಮುದದಿಂ
ಧರಣಿ ಬಿರಿದುದು ತನುವನೂಕಿತು ಜಲಧಿ ದೆಸೆದೆಸೆಗೆ
ಕರಿಕಮಠರುಬ್ಬಾಳುತನ ಮಿ
ಕ್ಕಿರೆ ಮಹಾದ್ಭುತವಾಯ್ತು ಕಂಡರು
ಹರಿಯ ರೂಪವನೊಬ್ಬ ಕೌರವನಲ್ಲದುಳಿದವರು (ಉದ್ಯೋಗ ಪರ್ವ್,೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಆಕಾಶದಿಂದ ಹೂವಿನ ಮಳೆ ಸುರಿಯಿತು. ದುಂದುಭಿಯ ಸದ್ದು ಆಕಾಶದಲ್ಲೆಲ್ಲಾ ಕೇಳಿಸಿತು. ಭೂಮಿಯು ಉಬ್ಬಿ ಬಿರಿಯಿತು. ಸಾಗರಗಳು ಉಕ್ಕಿ ದಿಕ್ಕು ದಿಕ್ಕಿಗೆ ಹಬ್ಬಿದವು. ದಿಗ್ಗಜಗಳು ಕೂರ್ಮರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇಂತಹ ಶ್ರೀಕೃಷ್ಣನ ವಿಶ್ವರೂಪವನ್ನು ದುರ್ಯೋಧನನೊಬ್ಬನು ಬಿಟ್ಟು (ಅಹಂಕಾರ, ಕಾಮ ಕ್ರೋದಾಧಿಗಳಿಂದ ಪೀಡಿತರಾದವರು) ಉಳಿದವರೆಲ್ಲರೂ ನೋಡಿದರು.

ಅರ್ಥ:
ಅರಳು: ಹೂವು, ಪುಷ್ಪ; ಸೂಸು: ಎರಚುವಿಕೆ, ಚೆಲ್ಲು, ಹರಡು; ದುಂದುಭಿ:ನಗಾರಿ; ಮೊರೆ: ಧ್ವನಿ ಮಾಡು, ಝೇಂಕರಿಸು; ಮುದ: ಸಂತೋಷ; ಧರಣಿ: ಭೂಮಿ; ಬಿರಿ: ಬಿರುಕು, ಸೀಳು; ತನು: ದೇಹ; ನೂಕು: ತಳ್ಳು; ಜಲಧಿ: ಸಾಗರ; ದೆಸೆ: ದಿಕ್ಕು; ಕರಿ: ಆನೆ; ಕಮಠ: ಆಮೆ; ಉಬ್ಬಾಳು: ಉತ್ಸಾಹಿಯಾದ ಶೂರ; ಮಿಕ್ಕ: ಉಳಿದ; ಮಹಾ: ದೊಡ್ಡ; ಅದ್ಭುತ: ಅತ್ಯಾಶ್ಚರ್ಯಕರವಾದ ವಸ್ತು; ಕಂಡರು: ನೋಡಿದರು; ಹರಿ: ವಿಷ್ಣು; ರೂಪ: ಆಕಾರ; ಉಳಿದ: ಮಿಕ್ಕ;

ಪದವಿಂಗಡಣೆ:
ಅರಳ+ಮಳೆ +ಸೂಸಿದವು +ದುಂದುಭಿ
ಮೊರೆದುದ್+ಆಕಾಶದೊಳು +ಮುದದಿಂ
ಧರಣಿ +ಬಿರಿದುದು +ತನುವ+ನೂಕಿತು +ಜಲಧಿ +ದೆಸೆದೆಸೆಗೆ
ಕರಿ+ಕಮಠರ್+ಉಬ್ಬಾಳುತನ +ಮಿ
ಕ್ಕಿರೆ +ಮಹಾದ್ಭುತವಾಯ್ತು +ಕಂಡರು
ಹರಿಯ+ ರೂಪವನ್+ಒಬ್ಬ+ ಕೌರವನಲ್ಲದ್+ಉಳಿದವರು

ಅಚ್ಚರಿ:
(೧) ಕರಿಕಮಠ – ಪದದ ಬಳಕೆ, ಭೂಮಿ ಮತ್ತು ಜಲಾಚರಗಳನ್ನು ಸೂಚಿಸಲು ಬಳಸಿದ ಪದ
(೨) ಕೌರನಲ್ಲದುಳಿದವರು – ಅಹಂಕಾರ, ದರ್ಪವನ್ನು ಸೂಚಿಸುವ ಪದ