ಪದ್ಯ ೧೯: ರಾಣಿಯರ ಕೇಶಗಳಿಂದ ಮುತ್ತು ಹೇಗೆ ಬಿದ್ದವು?

ಉಡಿದು ಬಿದ್ದವು ಸೂಡಗವು ಬಿಗು
ಹಡಗಿ ಕಳೆದವು ತೋಳ ಬಂದಿಗ
ಳೊಡನೊಡನೆ ಚೆಲ್ಲಿದವು ಮುತ್ತಿನ ಹಾರಚಯ ಹರಿದು
ಬಿಡುಮುಡಿಯ ಕಡುತಿಮಿರ ಕಾರಿದು
ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ (ಗದಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆ ಸ್ತ್ರೀಯರು ಮುಡಿದ ಹೂಗಳು ಕೆಳಕ್ಕೆ ಬಿದ್ದವು. ತೋಳ ಬಂದಿಗಳು ಸಡಿಲಾಗಿ ಬಿದ್ದವು. ಮುತ್ತಿನ ಹಾರಗಳು ಹರಿದು, ಬೈತಲೆ ಬೊಟ್ಟು ಬಿದ್ದು, ಅದರ ಮಣಿಗಳು ರಾಣಿಯರ ಕೂದಲುಗಳ ಕತ್ತಲಿಂದ ನಕ್ಷತ್ರಗಳು ಸುರಿದಂತೆ ಕಾಣಿಸಿತು.

ಅರ್ಥ:
ಉಡಿ: ಸೊಂಟ; ಸೂಡು: ಮುಡಿ, ಧರಿಸು; ಬಿಗು: ಗಟ್ಟಿ, ಭದ್ರ; ಹಡಗಿ: ಸಡಲಿಸಿ; ಕಳೆದು: ಬೀಳು, ನಿವಾರಣೆಯಾಗು; ತೋಳು: ಭುಜ; ಬಂದಿ: ತೋಳಿಗೆ ಧರಿಸುವ ಒಂದು ಬಗೆಯ ಆಭರಣ, ವಂಕಿ; ಚೆಲ್ಲು: ಹರಡು; ಮುತ್ತು: ಬೆಲೆಬಾಳುವ ರತ್ನ; ಹಾರ: ಮಾಲೆ; ಚಯ: ಸಮೂಹ, ರಾಶಿ; ಹರಿ: ಕಡಿ, ಕತ್ತರಿಸು; ಬಿಡುಮುಡಿ: ಹರಡಿದ ಕೇಶ; ಕಡು: ತುಂಬ, ಬಹಳ; ತಿಮಿರ: ಕತ್ತಲೆ; ಕಾರು: ಚೆಲ್ಲು; ಉಡುಗಣ: ತಾರಾಗಣ, ನಕ್ಷತ್ರಗಳ ಸಮೂಹ; ಸುರಿ: ಹರಡು; ನೆಲ: ಭೂಮಿ; ನೃಪ: ರಾಜ; ವನಿತಾ: ಹೆಂಗಸು; ನೃಪವನಿತಾ: ರಾಣಿ; ಕದಂಬ: ಗುಂಪು;

ಪದವಿಂಗಡಣೆ:
ಉಡಿದು +ಬಿದ್ದವು +ಸೂಡಗವು +ಬಿಗು
ಹಡಗಿ +ಕಳೆದವು +ತೋಳ +ಬಂದಿಗಳ್
ಒಡನೊಡನೆ +ಚೆಲ್ಲಿದವು +ಮುತ್ತಿನ+ ಹಾರಚಯ +ಹರಿದು
ಬಿಡುಮುಡಿಯ +ಕಡು+ತಿಮಿರ +ಕಾರಿದುದ್
ಉಡುಗಣವವ್+ಎನೆ +ಸೂಸಕದ +ಮುತ್ತ್
ಅಡಿಸಿ +ಸುರಿದವು +ನೆಲಕೆ +ನೃಪವನಿತಾ+ಕದಂಬದಲಿ

ಅಚ್ಚರಿ:
(೧) ರಾಣಿಯನ್ನು ನೃಪವನಿತ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಬಿಡುಮುಡಿಯ ಕಡುತಿಮಿರ ಕಾರಿದು ದುಡುಗಣವನೆನೆ ಸೂಸಕದ ಮು
ತ್ತಡಿಸಿ ಸುರಿದವು ನೆಲಕೆ ನೃಪವನಿತಾಕದಂಬದಲಿ

ಪದ್ಯ ೪೭: ಉಪಪ್ಲಾವ್ಯ ನಗರವು ಹೇಗೆ ಅಲಂಕೃತಗೊಂಡಿತ್ತು?

ದೇವ ನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾವಿಳಾಸದೊಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿಕೇರಿಗಳು (ವಿರಾಟ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುದುರೆ ಆನೆಯ ಲಾಯಗಳ ಸಿದ್ಧತೆಯಿಂದ ಸೈನ್ಯವು ಮುಂದುವರಿದು ಬಂದುದನ್ನು ಖಚಿತಪಡಿಸಿಕೊಂಡು ದೂತರು, ಶ್ರೀಕೃಷ್ಣನು ಇಗೋ ಬಂದನು ಎಂದು ಹೇಳಿದರು. ಉಪಪ್ಲಾವ್ಯ ನಗರಿಯನ್ನು ಉತ್ತಮವಾಗಿ ಅಲಂಕರಿಸಿದ್ದರು, ಬೀದಿಗಳಲ್ಲಿ ಪುಷ್ಪಾಲಂಕಾರ, ನವರತ್ನಗಲ ಕುಚ್ಚುಗಳು, ಅಲಂಕೃತವಾದ ಛಾವಣಿಯ ಮುಂಭಾಗಗಳು, ಉಪಪ್ಲಾವ್ಯದ ಬೀದಿ ಬೀದಿಗಳಲ್ಲೂ ಕಂಡು ಬಂದವು.

ಅರ್ಥ:
ದೇವ: ಭಗವಂತ; ಬಹನೆಂದು: ಬರುವೆಯೆಂದು; ಬಂದು: ಆಗಮಿಸು; ದಾವಣಿ: ಗುಂಪು, ಸಮೂಹ; ಹವಣ: ಸಿದ್ಧತೆ, ಪ್ರಯತ್ನ; ಅರಿ: ತಿಳಿದು; ಬಳಿಕ: ನಂತರ; ವಿಲಾಸ: ಅಂದ, ಸೊಬಗು; ನಗರ: ಪಟ್ಟಣ; ಹೂವಲಿ: ರಂಗವಲ್ಲಿಯಂತೆ ರಚಿಸಿದ ಹೂವುಗಳ ಅಲಂಕಾರ; ವೀಧಿ: ಬೀದಿ, ರಸ್ತೆ; ನವ: ಹೊಸ; ರತ್ನಾವಳಿ: ವಜ್ರ, ಮಾಣಿಕ್ಯಗಳ ಗುಂಪು; ಸೂಸಕ: ಒಂದು ಬಗೆಯ ಆಭರಣ, ಬೈತಲೆ ಬೊಟ್ಟು; ಭದ್ರ: ಮಂಗಳಕರವಾದ, ಶುಭಕರವಾದ; ಲೋವೆ: ಛಾವಣಿಯ ಚೌಕಟ್ಟು; ಲಂಬಳ: ತೂಗಾಡುವ; ಎಸೆ: ತೋರು; ಕೇರಿ: ಬೀದಿ;

ಪದವಿಂಗಡಣೆ:
ದೇವ+ ನೀ +ಬಹನೆಂದು+ ಬಂದರು
ದಾವಣಿಯ+ ಹವಣರಿದು+ ಬಳಿಕ+ ಮ
ಹಾ+ವಿಳಾಸದೊಳ್+ ಒಪ್ಪವಿಟ್ಟರು +ತಮ್ಮ +ನಗರಿಗಳ
ಹೂವಲಿಯ +ವೀಧಿಗಳ+ ನವ +ರ
ತ್ನಾವಳಿಯ +ಸೂಸಕದ +ಭದ್ರದ
ಲೋವೆಗಳ +ಲಂಬಳದಲ್+ಎಸೆದವು+ ಕೇರಿ+ಕೇರಿಗಳು

ಅಚ್ಚರಿ:
(೧) ನಗರವನ್ನು ಸಿಂಗರಿಸಿದ ಪರಿ – ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು

ಪದ್ಯ ೨೦: ಧೃತರಾಷ್ಟ್ರನ ಒಳ ಮನಸ್ಸು ಏನನ್ನು ಬಯಸುತ್ತದೆ?

ಮರುಳು ಮಗನೇ ಶಿವ ಶಿವಾ ಮನ
ಬರಡನೇ ತಾನಕಟ ನಿಮ್ಮೈ
ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ
ದುರುಳರವದಿರು ದೈವಮುಖದೆ
ಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ (ಸಭಾ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಗ ದುರ್ಯೋಧನನೇ, ನಿನಗೆಲ್ಲೋ ಹುಚ್ಚು ಶಿವ ಶಿವಾ, ನಾನು ಬರಡು ಮನಸ್ಸಿನವನಲ್ಲ. ನನಗೆ ನಿಮ್ಮ ಐಶ್ವರ್ಯದ ಮೇಲೆ ದ್ವೇಷ ದಾಯಾದಿಗಳ ಅಭ್ಯುಯದಲ್ಲಿ ಸಂತೋಷವಿದೆಯೆಂದು ತಿಳಿದಿರುವೆಯಾ? ಅವರು ದುಷ್ಟರು, ದೈವ ಸದಾಜಾಗ್ರತವಾಗಿರುತ್ತದೆ, ಅವರು ಕೆಡುವುದಿಲ್ಲ ಎಂದು ಬಾಯಿತುದಿಯ ಮಾತಾಡುತ್ತಾ, ಸ್ನೇಹದ ಲೇಪವನ್ನು ನಾನು ನಟಿಸುತ್ತಿದ್ದೇನೆ ಎಂದನು.

ಅರ್ಥ:
ಮರುಳು: ಹುಚ್ಚು, ತಿಳಿಗೇಡಿ; ಮಗ: ಸುತ; ಮನ: ಮನಸ್ಸು; ಬರಡು: ಒಣಗಿದ್ದು, ನಿರುಪಯುಕ್ತ; ಅಕಟ: ಅಯ್ಯೋ; ಐಶ್ವರ್ಯ: ಸಿರಿ, ಸಂಪತ್ತು; ಹಗೆ: ವೈರ; ದಾಯಾದಿ: ಅಣ್ಣ ತಮ್ಮಂದಿರ ಮಕ್ಕಳು; ಅಭ್ಯುದಯ: ಏಳಿಗೆ; ಸೊಗಸು: ಚೆಲುವು; ದುರುಳ: ದುಷ್ತ; ಅವದಿರು: ಅವರು; ದೈವ: ಭಗವಂತ; ಮುಖ: ಆನನ; ಎಚ್ಚರ: ಜಾಗರೂಕತೆ; ಘನ: ಹಿರಿಯ, ದೊಡ್ಡ; ಕೆಡರು: ಹಾಳು; ಮೇಗರೆ: ವ್ಯರ್ಥವಾಗಿ; ಹೊರ: ಆಚೆ; ಮನ: ಮನಸ್ಸು; ಸೂಸು: ಎರಚು, ಚಲ್ಲು; ನೇಹ: ಗೆಳೆತನ, ಸ್ನೇಹ; ಅರಸು: ಹುಡುಕು;

ಪದವಿಂಗಡಣೆ:
ಮರುಳು +ಮಗನೇ +ಶಿವ+ ಶಿವಾ+ ಮನ
ಬರಡನೇ+ ತಾನ್+ಅಕಟ +ನಿಮ್
ಐಶ್ವರಿಯ +ಹಗೆ +ದಾಯಾದ್ಯರುಗಳ್+ಅಭ್ಯುದಯದಲಿ +ಸೊಗಸೆ
ದುರುಳರ್+ಅವದಿರು +ದೈವ+ಮುಖದೆ
ಚ್ಚರಿಕೆ+ ಘನ+ ಕೆಡರೆಂದು +ಮೇಗರೆ
ಹೊರಮನದ+ ಸೂಸಕದ+ ನೇಹವನ್+ಅರಸುತಿಹೆನೆಂದ

ಅಚ್ಚರಿ:
(೧) ಧೃತರಾಷ್ಟ್ರನ ಇಂಗಿತವನ್ನು ಹೇಳುವ ಪರಿ – ದೈವಮುಖದೆಚ್ಚರಿಕೆ ಘನ ಕೆಡರೆಂದು ಮೇಗರೆ
ಹೊರಮನದ ಸೂಸಕದ ನೇಹವನರಸುತಿಹೆನೆಂದ

ಪದ್ಯ ೨೫: ಯಾಗಶಾಲೆಯನ್ನು ಹೇಗೆ ನಿರ್ಮಿಸಿದರು?

ಬಿಗಿದ ಬಿಂಗಾರಿಗಳ ಮೇಲ್ಕ
ಟ್ಟುಗಳ ಮಣಿಮಯ ಸೂಸಕದ ಲೋ
ವೆಗಳ ಮುಖಮಂಟಪದ ಚೌರಿಯ ನವಫಲಾವಳಿಯ
ಹೊಗರ ನೀಲದ ಸರಿಯ ನೆಲಗ
ಟ್ಟುಗಳ ಚಪ್ಪರದೆಡೆಯೆಡೆಯ ಚೌ
ಕಿಗೆಯ ಚತುರಂಗದ ವಿಚಿತ್ರದ ರಚನೆ ಚೆಲುವಾಯ್ತು (ಸಭಾ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಸಗುಂಡುಗಳ ಮೇಲ್ಕಟ್ಟುಗಳನ್ನು ಕಟ್ಟಿ, ಮಣಿಖಚಿತವಾದ ಕುಚ್ಚುಗಳನ್ನು ತೂಗುಬಿಟ್ಟರು. ಚಾವಣಿಯ ಚೌಕಟ್ಟಿನ ಮಂಟಪದಲ್ಲಿ ಚೌರಿಗಳನ್ನೂ, ಹೊಸಹಣ್ಣುಗಳನ್ನೂ ತೂಗಿಬಿಟ್ಟರು. ನೀಲದ ಸರಿಯಿಂದ ನೆಲಗಟ್ಟುಗಳನ್ನು ಮಾಡಿದರು. ಚಪ್ಪರದ ಎಲ್ಲಾ ಜಾಗಗಳಲ್ಲಿಯೂ ವಿಚಿತ್ರದ ಚೌಕ ರಚನೆಗಳನ್ನು ಮಾಡಿದರು.

ಅರ್ಥ:
ಬಿಗಿ: ಗಟ್ಟಿಯಾಗಿ ಕಟ್ಟು; ಬಿಂಗಾರಿ: ರಸಗುಂಡು; ಮೇಲ್ಕಟ್ಟು:ಮಂಟಪ ಮೊದಲಾದವುಗಳ ಮೇಲೆ ಕಟ್ಟುವ ಬಟ್ಟೆ; ಮಣಿ: ರತ್ನ; ಮಯ: ವ್ಯಾಪಿಸಿರುವುದು; ಸೂಸಕ: ಬೈತಲೆ ಬಟ್ಟು, ಕುಚ್ಚು; ಲೋವೆ: ಛಾವಣಿಯ ಚೌಕಟ್ಟು; ಮುಖ: ಆನನ; ಮಂಟಪ: ಸಮತಲವಾದ ಚಾವಣಿ ಯುಳ್ಳ ಬಾಗಿಲಿಲ್ಲದ ಚಪ್ಪರದಾಕಾರದ ಕಲ್ಲಿನ ಕಟ್ಟಡ; ಚೌರಿ: ಚೌರಿಯ ಕೂದಲು, ಗಂಗಾವನ; ನವ: ಹೊಸ; ಫಲ: ಹಣ್ಣು; ಆವಳಿ: ಗುಂಪು; ಹೊಗರು: ಪ್ರಕಾಶಿಸು; ಸರಿಯ: ಯೋಗ್ಯವಾದುದು; ಚಪ್ಪರ: ಚಾವಣಿ, ಮೇಲ್ಕಟ್ಟು; ಎಡೆ: ಪ್ರದೇಶ, ಜಾಗ; ಚೌಕಿ:ನಾಲ್ಕು ಕಾಲುಗಳನ್ನುಳ್ಳ ಉಪಕರಣ, ಪೀಠ, ಮಣೆ; ಚತುರಂಗ: ನಾಲ್ಕನ್ನು ಸೂಚಿಸುವ ಪದ; ವಿಚಿತ್ರ: ಬೆರಗುಗೊಳಿಸುವಂತಹುದು; ರಚನೆ: ನಿರ್ಮಾಣ; ಚೆಲುವು: ಸೊಬಗು, ಅಂದ;

ಪದವಿಂಗಡಣೆ:
ಬಿಗಿದ +ಬಿಂಗಾರಿಗಳ +ಮೇಲ್ಕ
ಟ್ಟುಗಳ+ ಮಣಿಮಯ +ಸೂಸಕದ+ ಲೋ
ವೆಗಳ+ ಮುಖಮಂಟಪದ +ಚೌರಿಯ +ನವಫಲಾವಳಿಯ
ಹೊಗರ+ ನೀಲದ +ಸರಿಯ +ನೆಲಗ
ಟ್ಟುಗಳ+ ಚಪ್ಪರದ್+ಎಡೆಯೆಡೆಯ +ಚೌ
ಕಿಗೆಯ +ಚತುರಂಗದ +ವಿಚಿತ್ರದ +ರಚನೆ +ಚೆಲುವಾಯ್ತು

ಅಚ್ಚರಿ:
(೧) “ಚ” ಕಾರದ ಪದಪುಂಜ: ಚಪ್ಪರದೆಡೆಯೆಡೆಯ ಚೌಕಿಗೆಯ ಚತುರಂಗದ
(೨) ಚೌರಿ, ಚೌಕಿ – ಪದದ ಬಳಕೆ

ಪದ್ಯ ೧೩: ವಿವಾಹ ಮಂಟಪ ಹೇಗೆ ಅಲಂಕೃತವಾಗಿತ್ತು?

ಕೀಲಿಸಿದ ಪಟ್ಟೆಗಳ ದಿವ್ಯದು
ಕೂಲದಲಿ ಹೊರಬರಹದೆಲೆಗಳ
ಚೂಳಿಕೆಯ ಕನ್ನಡಿಯ ತೋರಣವೆರಡುಪಕ್ಕದಲಿ
ಮೇಲು ಮುತ್ತಿನ ಸೂಸಕದ ನೇ
ಪಾಳಚಮರಿಯ ದಾಳಿಗಳಸಂ
ಮೇಳದಲಿ ಸಮತಳಿಸಿದರು ವೈವಾಹ ಮಂಟಪವ (ಆದಿ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಉತ್ತಮವಸ್ತ್ರಗಳ ಪತ್ರಗಳಲ್ಲಿ ಬಂಗಾರ ಲೇಪಮಾಡಿದ ತುರಾಯಿಗಳನ್ನು ಜೋಡಿಸಿ ಕಟ್ಟಿ, ಎಅರ್ಡು ಮಗ್ಗುಲಲ್ಲೂ ತೋರಣವನ್ನು ಕನ್ನಡಿಯನ್ನು ಇಟ್ಟು, ಮೇಲೆ ಮುತ್ತಿನ ಕುಚ್ಚುಗಳನ್ನು ಕಟ್ಟಿ ನೇಪಾಳದ ಚಮರೀ ಮೃಗಗಳ ಚಾಮರಗಳು ಆಡುವಂತೆ ವಿವಾಹದ ಭದ್ರಮಂಟಪವನ್ನು ಅಂದಗೊಳಿಸಿದರು.

ಅರ್ಥ:
ಕೀಲಿ:ಅಗುಳಿ; ಪಟ್ಟೆ: ಉದ್ದವಾದ ಬಟ್ಟೆ; ದಿವ್ಯ: ಶ್ರೇಷ್ಠ; ದುಕೂಲ: ರೇಷ್ಮೆಬಟ್ಟೆ, ಉಡುಪು; ಹೊರ:ಹೊರಗೆ; ಬರಹ: ಚಿತ್ರಣ, ಬರೆದುದು; ಎಲೆ: ಪತ್ರ; ಚೂಳಿ: ಮುಂಭಾಗ, ತುದಿ; ಕನ್ನಡಿ: ದರ್ಪಣ; ತೋರಣ: ಬಾಗಿಲಿಗೆ ಹಾಕುವ ಅಲಂಕಾರ; ಪಕ್ಕ: ಸಮೀಪ; ಮುತ್ತು: ವಿಶೇಷವಾದ ರತ್ನ; ಸೂಸಕ: ಕುಚ್ಚು, ಬೈತಲೆ ಬೊಟ್ಟು; ಚಮರಿ: ಮೃಗದ ಹೆಸರು; ದಾಳಿ: ಮುತ್ತಿಗೆ; ಸಂಮೇಳ: ಜೊತೆ; ಸಮತಳಿಸು: ಸಮವಾಗಿಡು; ವೈವಾಹ: ಮದುವೆ; ಮಂಟಪ: ದರ್ಬಾರು ನಡೆಸಲು ನಿರ್ಮಿಸಿರುವ ಸಭಾಸ್ಥಾನ;

ಪದವಿಂಗಡನೆ:
ಕೀಲಿಸಿದ +ಪಟ್ಟೆಗಳ +ದಿವ್ಯ+ದು
ಕೂಲದಲಿ +ಹೊರ+ಬರಹದ್+ಎಲೆಗಳ
ಚೂಳಿಕೆಯ +ಕನ್ನಡಿಯ +ತೋರಣವ್+ಎರಡು+ಪಕ್ಕದಲಿ
ಮೇಲು +ಮುತ್ತಿನ +ಸೂಸಕದ +ನೇ
ಪಾಳ+ಚಮರಿಯ +ದಾಳಿಗಳ+ಸಂ
ಮೇಳದಲಿ +ಸಮತಳಿಸಿದರು +ವೈವಾಹ +ಮಂಟಪವ

ಆಚ್ಚರಿ:
(೧) ಉಪಮಾ ಪ್ರಯೋಗ: ಮುತ್ತಿನ ಸೂಸಕದ ನೇಪಾಳಚಮರಿಯ ದಾಳಿಗಳಸಂಮೇಳದಲಿ – ಮುತ್ತಿನ ಕುಚ್ಚು ಚಮರೀ ಮೃಗದ ಚಾಮರದಂತ್ತಿದ್ದವು
(೨) ದಿವ್ಯದುಕೂಲ, ಕನ್ನಡಿಯ ತೋರಣ, ಮುತ್ತಿನ ಸೂಸಕ – ಅಲಂಕಾರದ ವಸ್ತುಗಳ ವಿವರಣೆ