ಪದ್ಯ ೧: ರಣರಂಗವು ಹೇಗೆ ಕಂಡಿತು?

ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು (ಭೀಷ್ಮ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಮುಂಚೂಣೀಗಳು ನಾಶವಾದವು. ರಕ್ತ ಕಡಲಾಗಿ ನಿಂತಿತು. ರಕ್ತ ಮಾಂಸಖಂಡದ ತುಂಡುಗಳು, ಕೆಸರಿನಂತಹ ಮಿದುಳುಗಳು, ಹೆಣದ ರಾಶಿಗಳು, ಇವನ್ನು ನೋಡಿ ಸಾಮಂತ ರಾಜರು ಯುದ್ಧಕ್ಕೆ ಬೆದರಿದರು. ರಾಜರ ಸೇನಾನಾಯಕರ ಬೀಡುಗಳಲ್ಲಿ ಕಹಳೆಗಳು ಮೊಳಗಿದವು.

ಅರ್ಥ:
ಅಳಿ: ನಾಶ; ಚೂಣಿ: ಮುಂದಿನ ಸಾಲು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಕಡಲು: ಸಾಗರ; ಅರುಣ: ಕೆಂಪು ಬಣ್ಣ; ಜಲ: ನೀರು; ಉಬ್ಬು: ಹಿಗ್ಗು; ಖಂಡ: ತುಂಡು; ದೊಂಡೆ: ಗಂಟಲು, ಕಂಠ; ಕೆಸರು: ಬಗ್ಗಡ, ನೀರು ಬೆರೆತ ಮಣ್ಣು; ಮಿದುಳು: ಮೆದುಳು, ಮಸ್ತಿಷ್ಕ; ಕಳ:ಮಧುರವಾದ, ಇಂಪಾದ; ಹೆಣ: ಜೀವವಿಲ್ಲದ ಶರೀರ; ಮೊಗಸು: ಬಯಕೆ, ಅಪೇಕ್ಷೆ; ಅಳುಕು: ಹೆದರು; ಮನ್ನೆಯ: ಮೆಚ್ಚಿನ; ಬಳಿಕ: ನಂತರ; ನೆಲೆ: ಭೂಮಿ; ಸೂಳೈಸು: ಧ್ವನಿ ಮಾಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ;

ಪದವಿಂಗಡಣೆ:
ಅಳಿದುದ್+ಎರಡರ +ಚೂಣಿ +ಮುಂಗುಡಿ
ಯೊಳಗೆ+ ಕಡಲಾಯ್ತ್+ಅರುಣ +ಜಲದ
ಉಬ್ಬುಳಿಯ +ಖಂಡದ +ದೊಂಡೆಗಳು+ ಕೆಸರಿಡುವ +ಮಿದುಳುಗಳ
ಕಳದ +ಹೆಣನ್+ಒಟ್ಟಿಲಲಿ+ ಮೊಗಸುವೊಡ್
ಅಳುಕಿದರು +ಮನ್ನೆಯರು +ಬಳಿಕರ
ನೆಲೆಗಳಲಿ+ ಸೂಳೈಸಿದವು+ ನಿಸ್ಸಾಳ +ಕೋಟಿಗಳು

ಅಚ್ಚರಿ:
(೧) ರಕ್ತದ ಕಡಲು ಎಂದು ಹೇಳಲು – ಕಡಲಾಯ್ತರುಣ ಜಲ

ಪದ್ಯ ೩: ಯಾರು ಕರ್ಣಾರ್ಜುನರನ್ನು ಹೊಗಳಿದರು?

ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗರ್ಭರಹಿತೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ (ಕರ್ಣ ಪರ್ವ, ೨೩ ಸಂಧಿ, ೩ ಪದ್ಯ)

ತಾತ್ಪರ್ಯ:
ರಣವಾದ್ಯಗಳು ರಣರಂಗದಲ್ಲಿ ಮೊಳಗಳು ಅದರ ನಾದವು ಆಗಸವನ್ನೆಲ್ಲಾ ತುಂಬಿತು. ಎಲ್ಲಾ ದಿಕ್ಕುಗಳಲ್ಲು ವಾದ್ಯದ ದೀರ್ಘವಾದ ಸದ್ದು ಮತ್ತೆ ಮತ್ತೆ ಹಬ್ಬಿತು. ಕರ್ಣಾರ್ಜುನರೇ ನಿಮ್ಮಲ್ಲಿ ಪರಾಕ್ರಮ ಅಡಗಿದೆ, ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ, ಭಲೇ, ಭೇಷ್ ಎಂದು ದೇವತೆಗಳು ಇಬ್ಬರನ್ನು ಹೊಗಳಿದರು.

ಅರ್ಥ:
ಗಬ್ಬರಿಸು: ಆವರಿಸು, ತಗ್ಗಾಗು; ಗಗನ: ಆಗಸ; ಬಲು: ಬಹಳ; ಬೊಬ್ಬೆ: ಜೋರಾದ ಶಬ್ದ; ಬಹು: ಬಹಳ; ವಿಧ: ರೀತಿ ವಾದ್ಯ: ಸಂಗೀತದ ಸಾಧನ; ರಭಸ: ವೇಗ; ನಿಬ್ಬರ: ಅತಿಶಯ, ಹೆಚ್ಚಳ; ನಿಡು: ಉದ್ದವಾದ, ದೀರ್ಘ; ಸೂಳು: ಆರ್ಭಟ, ಬೊಬ್ಬೆ; ಸೂಳೈಸು: ಧ್ವನಿಮಾಡು, ಹೊಡೆ; ದಿಗುತಟ: ದಿಕ್ಕು; ಉಬ್ಬು: ಹಿಗ್ಗು, ಗರ್ವಿಸು; ಕೆಡಡಿರಿ: ಕಳೆದುಕೊಳ್ಳಬೇಡಿ; ಸಗರ್ಭ: ಒಳಗೆ, ಅಡಗಿದ; ಪೂತು: ಭಲೇ; ಮಝ: ಕೊಂಡಾಟದ ಮಾತು; ಅಬ್ಬರಣೆ: ಆರ್ಭಟ; ಸುರ: ದೇವತೆಗಳು; ರೂಢಿ: ವಾಡಿಕೆ, ಬಳಕೆ; ಝೊಂಪಿಸು: ಭಯಗೊಳ್ಳು, ಬೆಚ್ಚಿಬೀಳು; ಮೂಜಗ: ಮೂರು ಪ್ರಪಂಚ;

ಪದವಿಂಗಡಣೆ:
ಗಬ್ಬರಿಸಿದುದು +ಗಗನವನು +ಬಲು
ಬೊಬ್ಬೆ +ಬಹುವಿಧ+ವಾದ್ಯ+ರಭಸದ
ನಿಬ್ಬರದ +ನಿಡುಸೂಳು +ಸೂಳೈಸಿದುದು +ದಿಗುತಟವ
ಉಬ್ಬು+ಕೆಡದಿರಿ +ಕರ್ಣಪಾರ್ಥ +ಸ
ಗರ್ಭರಹಿತೋ +ಪೂತು +ಮಝ +ಎಂಬ್
ಅಬ್ಬರಣೆ +ಸುರರೂಢಿಯಲಿ +ಝೊಂಪಿಸಿತು+ ಮೂಜಗವ

ಅಚ್ಚರಿ:
(೧) ಒಂದೇ ಅಕ್ಷರದ ಜೋಡಿ ಪದಗಳು – ಗಬ್ಬರಿಸುದುದು ಗಗನ, ನಿಬ್ಬರದ ನಿಡುಸೂಳು
(೨) ಬೊಬ್ಬೆ, ಅಬ್ಬರಣೆ, ಸೂಳು, ಸೂಳೈಸು – ಸಾಮ್ಯಾರ್ಥ ಪದಗಳು

ಪದ್ಯ ೬: ಕೌರವನೇಕೆ ಉತ್ಸಾಹಿಯಾಗಿದ್ದನು?

ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೨೧ ಸಂಧಿ, ೬ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನ ರಕ್ತವನ್ನು ಕುಡಿದು ಪ್ರಾಣವು ಹೋಗಿತ್ತು, ಕರ್ಣನ ಮಗ ವೃಷಸೇನನು ಇಂದ್ರನ ಓಲಗಕ್ಕೆ ಹೋಗಿದ್ದನು, ಇಂತಹ ನೋವುಗಳನ್ನು ನೋಡಿದ ಮೇಲೆ ನೋವಿನ ಆಯಾಸವು ಮರೆತುಹೋದವು, ಕೌರವನು ಉತ್ಸಾಹಿಯಾಗಿ, ರಣಭೇರಿಗಳು ಮತ್ತೆ ಮತ್ತೆ ಮೊರೆದವು.

ಅರ್ಥ:
ರಾಯ: ರಾಜ; ಅನುಜ; ತಮ್ಮ; ರುಧಿರ: ರಕ್ತ; ಜೀವ: ಉಸಿರು; ಬೀಯ: ವ್ಯಯ, ಹಾಳು, ನಷ್ಟ; ಆತ್ಮಜ: ಮಗ; ಕುಲಿಶ: ವಜ್ರಾಯುಧ; ಸಾಲೋಕ್ಯ: ಒಂದೇ ಲೋಕದಲ್ಲಿರುವಿಕೆ; ಕಣ್ದೆರೆ: ನಯನಗಳನ್ನು ಅರಳಿಸು, ನೋಡು; ವೇದನೆ: ನೋವು; ಆಯಸ: ಬಳಲಿಕೆ; ನೆರೆ: ತುಂಬು ಪ್ರವಾಹ; ಮರೆ: ಜ್ಞಾಪಕದಿಂದ ದೂರ ಹೋಗು; ಭುಲ್ಲವಿಸು: ಉತ್ಸಾಹಗೊಳ್ಳು; ಲಹರಿ: ಅಲೆ, ತೆರೆ, ರಭಸ; ಘಾಯ: ಪೆಟ್ಟು; ಸೂಳೈಸು: ಮೊರೆ, ಶಬ್ದಮಾಡು; ನಿಸ್ಸಾಳ: ರಣಭೇರಿ;

ಪದವಿಂಗಡಣೆ:
ರಾಯನ್+ಅನುಜನ +ರುಧಿರ +ಜೀವದ
ಬೀಯದಲಿ+ ಕರ್ಣಾತ್ಮಜನ+ ಕುಲಿ
ಶಾಯುಧನ+ ಸಾಲೋಕ್ಯದಲಿ +ಕಣ್ದೆರೆದ+ ವೇದನೆಯ
ಆಯಸವ+ ನೆರೆ+ ಮರೆದು+ ಕೌರವ
ರಾಯ +ಭುಲ್ಲವಿಸಿದನು +ಲಹರಿಯ
ಘಾಯದಲಿ+ ಸೂಳೈಸಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕರ್ಣಾತ್ಮಜನ ಕುಲಿಶಾಯುಧನ ಸಾಲೋಕ್ಯದಲಿ ಕಣ್ದೆರೆದ

ಪದ್ಯ ೪೦: ಕರ್ಣ ಮತ್ತು ಶಲ್ಯರು ಮತ್ತೆ ಯುದ್ಧಕ್ಕೆ ಸನ್ನದ್ಧರಾದರೇ?

ನುಡಿದು ಕರ್ಣನ ತಿಳುಹಿ ಶಲ್ಯನ
ನೊಡಬಡಿಸಿ ರವಿಸುತನನಂಘ್ರಿಗೆ
ಕೆಡಹಿ ಮಾದ್ರೇಶನ ಮನಸ್ತಾಪವನು ನೆರೆ ಬಿಡಿಸೆ
ಕಡಹದಂಬುಧಿಯಂತೆ ವಾದ್ಯದ
ಗಡಣ ಮೊರೆದವು ಪ್ರಳಯಸಮಯದ
ಸಿಡಿಲವೊಲು ಸೂಳೈಸಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶಲ್ಯನನ್ನು ಮನವೊಲಿಸಿದ ಬಳಿಕ ಕರ್ಣನಿಗೆ ಸುಯೋಧನನು ಸಮಾಧಾನವನ್ನು ಹೇಳಿ, ಕರ್ಣನಿಂದ ಶಲ್ಯನಿಗೆ ನಮಸ್ಕಾರವನ್ನು ಮಾಡಿಸಿದನು. ಇದರಿಂದ ಶಲ್ಯನ ಮನಸ್ತಾಪ ಶಾಂತವಾಯಿತು. ಕೌರವ ಸೈನ್ಯದಲ್ಲಿ ಸಮುದ್ರ ಘೋಷದಂತೆ ವಾದ್ಯಗಳು ಮೊರೆದವು. ಪ್ರಳಯಕಾಲದ ಸಿಡಿಲುಗಳಂತೆ ಭೇರಿಗಳು ಮತ್ತೆ ಸದ್ದು ಮಾಡಿದವು.

ಅರ್ಥ:
ನುಡಿ: ಮಾತು; ತಿಳುಹಿ: ತಿಳುವಳಿಕೆ; ಒಡಬಡಿಸು: ಸಮಾಧಾನ ಮಾಡು, ಒಪ್ಪಿಸು; ರವಿಸುತ: ಸೂರ್ಯಪುತ್ರ (ಕರ್ಣ); ಅಂಘ್ರಿ: ಪಾದ; ಕೆಡಹು: ಬೀಳು; ಮನಸ್ತಾಪ: ಮನಸ್ಸಿನ ತಳಮಳ, ವ್ಯಥೆ; ನೆರೆ: ಹೆಚ್ಚು; ಬಿಡಿಸು: ದೂರಮಾಡು; ಕಡಹ: ತೊಳಲಾಟ; ಅಂಬುಧಿ: ಸಾಗರ; ವಾದ್ಯ: ಸಂಗೀತದ ಸಾಧನ; ಗಡಣ: ಗುಂಪು, ಸಮೂಹ; ಮೊರೆ: ಧ್ವನಿ ಮಾಡು, ಝೇಂಕರಿಸು; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ; ಸಮಯ: ಕಾಲ; ಸಿಡಿಲು:ಗರ್ಜಿಸು, ಆರ್ಭಟಿಸು; ಸೂಳೈಸು: ಧ್ವನಿಮಾಡು, ಹೊಡೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ;

ಪದವಿಂಗಡಣೆ:
ನುಡಿದು +ಕರ್ಣನ +ತಿಳುಹಿ +ಶಲ್ಯನನ್
ಒಡಬಡಿಸಿ +ರವಿಸುತನನ್+ಅಂಘ್ರಿಗೆ
ಕೆಡಹಿ +ಮಾದ್ರೇಶನ +ಮನಸ್ತಾಪವನು +ನೆರೆ +ಬಿಡಿಸೆ
ಕಡಹದ್+ಅಂಬುಧಿಯಂತೆ +ವಾದ್ಯದ
ಗಡಣ +ಮೊರೆದವು+ ಪ್ರಳಯ+ಸಮಯದ
ಸಿಡಿಲವೊಲು +ಸೂಳೈಸಿದವು+ ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ವಾದ್ಯದಗಡಣ ಮೊರೆದವು ಪ್ರಳಯಸಮಯದ ಸಿಡಿಲವೊಲು
(೨) ಕರ್ಣ, ರವಿಸುತ; ಶಲ್ಯ, ಮಾದ್ರೇಶ – ಹೆಸರುಗಳ ಬಳಕೆ