ಪದ್ಯ ೧೪: ದ್ರೌಪದಿಯು ಪಾಳೆಯದಿಂದ ಹೇಗೆ ಬಂದಳು?

ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ (ಗದಾ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಮಲಗಿದ್ದ ಮಕ್ಕಳನ್ನು, ಪಾಂಚಾಲರನ್ನು ನೋಡೋಣವೆಂದು ಧರ್ಮಜನು ಬರುತ್ತಿರಲು, ಮತ್ತೆ ಮತ್ತೆ ಅಳುತ್ತಾ, ತಮ್ಮ ಕೈಗಳಿಂದ ತೆಳುವಾಗಿದ್ದ ಹೊಟ್ಟೆಗಲನ್ನು ಹೊಡೆದುಕೊಳ್ಳುತ್ತಾ ಹಾಹಾಕಾರ ಮಾಡುತ್ತಿದ್ದ ಸ್ತ್ರೀಯರೊಡನೆ ದ್ರೌಪದಿಯು ಎದುರು ಬಂದಳು.

ಅರ್ಥ:
ಪಾಳೆಯ: ಬಿಡಾರ; ಕುಮಾರ: ಮಕ್ಕಳು; ನೋಡು: ವೀಕ್ಷಿಸು; ಭೂಪಾಲ: ರಾಜ; ನಡೆ: ಚಲಿಸು; ಇದಿರು: ಎದುರು; ವಂದುದು: ಬಂದನು; ಯುವತಿ: ಹೆಣ್ಣು; ನಿಕುರುಂಬ: ಸಮೂಹ; ಸೂಳು: ಆರ್ಭಟ, ಬೊಬ್ಬೆ; ಸೂಳುವೊಯಿಲು: ಸರದಿಯಾಗಿ ಕೊಡುವ ಹೊಡೆತ; ತೆಳುವು: ಸೂಕ್ಷ್ಮ; ಕರತಾಳ: ಅಂಗೈ; ಹಾಹಾವಿರಾವ: ಹಾಹಾಕಾರ; ಮೇಳ: ಗುಂಪು; ಗೀತ: ಹಾಡು; ಬಂದು: ಆಗಮಿಸು;

ಪದವಿಂಗಡಣೆ:
ಪಾಳೆಯದಲಿ +ಕುಮಾರರನು +ಪಾಂ
ಚಾಲರನು +ನೋಡುವೆವೆನುತ +ಭೂ
ಪಾಲ +ನಡೆತರಲ್+ಇದಿರು+ಬಂದುದು +ಯುವತಿ+ನಿಕುರುಂಬ
ಸೂಳುವೊಯ್ಲಿನ +ತೆಳುವಸುರ +ಕರ
ತಾಳದಲಿ +ಹಾಹಾವಿರಾವದ
ಮೇಳವದ +ಗೀತದಲಿ +ಬಂದಳು +ದ್ರೌಪದೀದೇವಿ

ಅಚ್ಚರಿ:
(೧) ಅಳಲನ್ನು ವಿವರಿಸುವ ಪರಿ – ಸೂಳುವೊಯ್ಲಿನ ತೆಳುವಸುರ ಕರತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ

ಪದ್ಯ ೬: ಆನೆ ಕುದುರೆಗಳು ಯುದ್ಧದಲ್ಲಿ ಹೇಗೆ ಮುಂದುವರೆದವು?

ಸೂಳು ಮಿಗಲಳ್ಳರಿದವುರು ನಿ
ಸ್ಸಾಳತತಿ ದಿಗುವಳೆಯದಲಿ ಕೈ
ಮೇಳವಿಸಿದವು ತಂಬಟಧ್ವನಿ ಜಡಿವ ಕಹಳೆಗಳು
ಕೀಳ ಬಗೆಯದೆ ಕೆರಳಿ ಹೊಯ್ದವು
ಕಾಲಲಿಳೆಯನು ಕುದುರೆ ಮೋರೆಯ
ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು (ದ್ರೋಣ ಪರ್ವ, ೧೨ ಸಂಧಿ, ೬ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ನಿಸ್ಸಾಳಗಳನ್ನು ಬಡಿದರು, ಕಹಳೆಗಳನ್ನೂದಿದರು, ತಮಟೆಗಲನ್ನು ಬಾರಿಸಿದರು, ನಿಲ್ಲುವ ಬದಲು ಕುದುರೆಗಳು ಮತ್ತೆ ಮತ್ತೆ ಗೊರಸುಗಳಿಂದ ನೆಲವನ್ನು ಅಪ್ಪಳಿಸಿದವು. ಆನೆಗಳು ಸೊಂಡಿಲಿನ ತುದಿಯಿಂದ ನೆಲವನ್ನು ಅಪ್ಪಳಿಸಿದವು.

ಅರ್ಥ:
ಸೂಳು: ಆವೃತ್ತಿ, ಬಾರಿ; ಮಿಗಲು: ಹೆಚ್ಚಾಗಲು; ಅರಿ: ಚುಚ್ಚು; ಉರು: ಹೆಚ್ಚಾಗು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು; ದಿಗು: ದಿಕ್ಕು; ಮೇಳವಿಸು: ಸೇರು, ಜೊತೆಯಾಗು; ತಂಬಟ: ತಮಟೆ; ಧ್ವನಿ: ಶಬ್ದ; ಜಡಿ: ಕೂಗು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಬಗೆ: ಆಲೋಚನೆ, ಯೋಚನೆ; ಕೆರಳು: ರೇಗು, ಕನಲು; ಹೊಯ್ದು: ಹೊಡೆ; ಕಾಲು: ಪಾದ; ಕುದುರೆ: ಅಶ್ವ; ಮೋರೆ: ಮ್ಖ; ತೋಳು: ಬಾಹು; ಮೋದು: ಹೊಡೆ, ಅಪ್ಪಳಿಸು; ಮಹಿ: ಭೂಮಿ; ಸೊಕ್ಕು: ಅಮಲು, ಮದ; ಆನೆ: ಕರಿ, ಗಜ;

ಪದವಿಂಗಡಣೆ:
ಸೂಳು +ಮಿಗಲಳ್ಳ್+ಅರಿದವ್+ಉರು +ನಿ
ಸ್ಸಾಳ+ ತತಿ +ದಿಗುವಳೆಯದಲಿ +ಕೈ
ಮೇಳವಿಸಿದವು +ತಂಬಟ+ಧ್ವನಿ +ಜಡಿವ+ ಕಹಳೆಗಳು
ಕೀಳ +ಬಗೆಯದೆ + ಕೆರಳಿ +ಹೊಯ್ದವು
ಕಾಲಲ್+ಇಳೆಯನು +ಕುದುರೆ +ಮೋರೆಯ
ತೋಳಿನಲಿ +ಮೋದಿದವು+ ಮಹಿಯನು +ಸೊಕ್ಕಿದ್+ಆನೆಗಳು

ಅಚ್ಚರಿ:
(೧) ಆನೆಗಳು ಆಕ್ರಮಣ ಮಾಡಿದ ಪರಿ – ಮೋರೆಯ ತೋಳಿನಲಿ ಮೋದಿದವು ಮಹಿಯನು ಸೊಕ್ಕಿದಾನೆಗಳು

ಪದ್ಯ ೩೦: ಕೌರವ ಸೈನಿಕರು ಯಾರ ಮೇಲೆ ಮುತ್ತಿಗೆ ಹಾಕಿದರು?

ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ (ದ್ರೋಣ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಿಸ್ಸಾಳಗಳನ್ನು ಮೇಲಿಂದ ಮೇಲೆ ಹೊಡೆಯುತ್ತಾ, ಮತ್ತೆ ಮತ್ತೆ ಬೊಬ್ಬಿಡುತ್ತಾ, ಕೇಕೆ ಹೊಡೆಯುತ್ತಾ, ಮಸೆದ ಕತ್ತಿಗಲನ್ನು ಹಿಡಿದು ಮತ್ಸರದಿಂದ ಕುದಿಯುತ್ತಾ ಕೌರವ ಸೈನಿಕರು ಗುಂಪು ಗುಂಪಾಗಿ ಇದೇ ಹೊತ್ತು ಎಂದು ನುಗ್ಗಲು, ಶ್ರೀಕೃಷ್ಣನು ಅರ್ಜುನನ ಬಳಿಗೆ ರಥವನೊಯ್ದನು.

ಅರ್ಥ:
ಒದರು: ಕೊಡಹು, ಜಾಡಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನಿರಂತರ: ಯಾವಾಗಲು; ಸೂಳು: ಆರ್ಭಟ, ಬೊಬ್ಬೆ; ಹೊದರು: ಗುಂಪು, ಸಮೂಹ; ಹೊಸ: ನವೇನ; ಮಸೆ: ಹರಿತವಾದುದು; ಅಡಾಯ್ದು: ಅಡ್ಡ ಬಂದು; ಸಾಲ: ಸುತ್ತು, ಪ್ರಾಕಾರ; ಸಂದಣಿ: ಗುಂಪು; ಸದರ: ಸಲಿಗೆ, ಸಸಾರ; ಹೊತ್ತು: ಹೊರು; ಗೆಲವು: ಜಯ; ಕುದುಕುಳಿ: ವ್ಯಾಕುಲ ಮನಸ್ಸಿನವನು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಾಣು: ತೋರು; ಗದಗದಿಸು: ನಡುಗು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಒದರಿ +ಮೇಲಿಕ್ಕಿದರು +ನಿಸ್ಸಾ
ಳದ +ನಿರಂತರ+ ಸೂಳುವೊಯ್ಲಿನ
ಹೊದರುಗಳ +ಹೊಸ +ಮಸೆ+ಅಡಾಯ್ದದ +ಸಾಲ +ಸಂದಣಿಯ
ಸದರವ್+ಈ+ ಹೊತ್+ಎನುತ +ಗೆಲವಿನ
ಕುದುಕುಳಿಗಳ್+ಉರವಣಿಸೆ +ಕಾಣುತ
ಗದಗದಿಸಿ +ಮುರವೈರಿ +ಚಾಚಿದನ್+ಅರ್ಜುನಗೆ +ರಥವ

ಅಚ್ಚರಿ:
(೧) ಕುದುಕುಳಿ, ಗದಗದಿಸಿ – ಪದಗಳ ಬಳಕೆ

ಪದ್ಯ ೯: ಯಾವ ವಾದ್ಯಗಳು ಗರ್ಜಿಸುತ್ತಿದ್ದವು?

ಸೂಳು ಮಿಗಲಳ್ಳಿರಿವ ನಿಸ್ಸಾ
ಳೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ
ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ (ಭೀಷ್ಮ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ಸರದಿಯ ಪ್ರಕಾರ ಭೇರಿ, ತಮ್ಮಟೆಯ ಕಹಳೆ ಕೊಂಬುಗಳು ಸದ್ದು ಮಾಡಿ ಮಹಾಶಬ್ದವನ್ನು ಮಾಡುತ್ತಿದ್ದವು. ಮೇಲಿಂದ ಮೇಲೆ ಕೇಕೆ ಗರ್ಜನೆಗಳು ದಿಕ್ಕುಗಳನ್ನಾವರಿಸಿದವು. ಎರಡು ಸೈನ್ಯಗಳು ಸಿಡಿಲಂತೆ ಶತ್ರುಗಳ ಮೇಲೆರಗಿದವು.

ಅರ್ಥ:
ಸೂಳು: ಸರದಿ, ಆವೃತ್ತಿ, ಬಾರಿ; ಮಿಗಲು: ಹೆಚ್ಚಾಗಲು; ಇರಿ: ತಿವಿ, ಚುಚ್ಚು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತಂಬಟ: ತಮ್ಮಟೆ; ಕೊಂಬು: ಒಂದು ಬಗೆಯ ವಾದ್ಯ; ಗಾಳು: ಒರಟಾದುದು; ಗಜರು: ಗರ್ಜನೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಕಳಕಳ: ವ್ಯಥೆ; ಬೊಗ್ಗು: ಕಹಳೆ; ಮೇಳ: ಗುಂಪು; ಭುಗಿಲಿಡು: ಭುಗಿಲ್ ಎಂದು ಶಬ್ದ ಮಾಡು; ಬೊಬ್ಬೆ: ಆರ್ಭಟ; ಘೋಳ: ಕುದುರೆ; ಘೋಷ: ಕೂಗು; ರಭಸ: ವೇಗ; ದೆಸೆ: ದಿಕ್ಕು; ಸೀಳು: ಚೂರು, ತುಂಡು; ಸಿಡಿಲು: ಚೆದರು, ಹರಡು; ಬಲ: ಸೈನ್ಯ; ಹೊಯ್ದಾಡು: ಹೋರಾಡು; ಒಡಗಲಗು: ಒಟ್ಟಾಗಿ ಸೇರಿಸು; ಊಳಿಗ: ಕೆಲಸ;

ಪದವಿಂಗಡಣೆ:
ಸೂಳು+ ಮಿಗಲಳ್+ಇರಿವ+ ನಿಸ್ಸಾಳ್
ಊಳಿಗಳ +ತಂಬಟದ+ ಕೊಂಬಿನ
ಗಾಳು+ಗಜರಿನ+ ಕಹಳೆಗಳ +ಕಳಕಳದ+ ಬೊಗ್ಗುಗಳ
ಮೇಳವಣೆ +ಭುಗಿಲಿಡಲು+ ಬೊಬ್ಬೆಯ
ಘೋಳ +ಘೋಷದ +ರಭಸ +ದೆಸೆಗಳ
ಸೀಳೆ +ಸಿಡಿಲೆದ್ದ್+ಎರಡು +ಬಲ+ ಹೊಯ್ದಾಡಿತ್+ಒಡಗಲಸಿ

ಅಚ್ಚರಿ:
(೧) ನಿಸ್ಸಾಳ, ತಂಬಟ, ಕೊಂಬು, ಕಹಳೆ, ಬೊಗ್ಗು – ವಾದ್ಯಗಳ ಹೆಸರು
(೨) ಘ ಕಾರದ ಜೋಡಿ ಪದ – ಘೋಳ ಘೋಷದ

ಪದ್ಯ ೫೩: ದ್ರೌಪದಿಯು ಯಾರ ಬಳಿ ಹೋಗಬೇಕೆಂದು ಭೀಮನು ಹೇಳಿದನು?

ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನಂ ಪ್ರಾರ್ಥಿಸುವುದರ್ಜುನ
ವರನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳುವುದೆನ್ನೊಡನೆ ಫಲಸಿದ್ಧಿಯಿಲ್ಲೆಂದ (ವಿರಾಟ ಪರ್ವ, ೩ ಸಂಧಿ ೫೩ ಪದ್ಯ)

ತಾತ್ಪರ್ಯ:
ಎಲೈ ದ್ರೌಪದಿ ನಾನು ನಿಜವಾಗಿ ಹೇಳುತ್ತಿದ್ದೇನೆ ಕೇಳು, ಇಂದಿನಿಂದ ನೀನು ನನ್ನನ್ನು ಬಿಟ್ಟು ಉಳಿದ ಪಾಂಡವರಿಗೆ ಪತ್ನಿ, ನಾನು ನಿನ್ನ ಸರದಿ ಪಾಳೆಯವನ್ನು ಬಿಟ್ಟು ಬಿಟ್ಟಿದ್ದೇನೆ. ಧರ್ಮಜನನ್ನು ಬೇಡಿಕೋ, ಅರ್ಜುನ, ನಕುಲ ಸಹದೇವರಿಗೆ ನಿನ್ನ ಕಷ್ಟವನ್ನು ಹೇಳಿಕೋ, ನನಗೆ ಹೇಳಿದರೆ ನಿನ್ನ ಇಷ್ಟಾರ್ಥ ಸಿದ್ಧಿಸುವುದಿಲ್ಲ ಎಂದು ಭೀಮನು ಹೇಳಿದನು.

ಅರ್ಥ:
ತರುಣಿ: ಹೆಣ್ಣು, ಸ್ತ್ರೀ; ದಿಟ: ನಿಜ; ಕೇಳು: ಆಲಿಸು; ಎಡೆ: ಹತ್ತಿರ; ಮೊದಲು: ಮುಂಚೆ; ಅರಸಿ: ರಾಣಿ; ಮುರಿ: ಸೀಳು; ಬಿಟ್ಟು: ತೊರೆ; ಸೂಳು: ಸರದಿ, ಸಮಯ; ಪಾಳೆಯ: ಬೀಡು, ಶಿಬಿರ; ಅರಸ: ರಾಜ; ಪ್ರಾರ್ಥಿಸು: ಆರಾಧಿಸು; ವರ: ಶ್ರೇಷ್ಠ; ವಿಸ್ತರ: ಹರಡು; ಹೇಳು: ತಿಳಿಸು ಫಲ: ಪ್ರಯೋಜನ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ;

ಪದವಿಂಗಡಣೆ:
ತರುಣಿ+ ದಿಟ +ಕೇಳ್+ಇಂದು +ಮೊದಲಾಗ್
ಅರಸಿ +ನೀ+ ನಾಲ್ವರಿಗೆ+ ನಾವ್+ಎಡೆ
ಮುರಿದವರು +ಬಿಟ್ಟವರು+ ನಿನ್ನಯ +ಸೂಳು +ಪಾಳೆಯವ
ಅರಸನಂ +ಪ್ರಾರ್ಥಿಸುವುದ್+ಅರ್ಜುನ
ವರ+ನಕುಲ+ ಸಹದೇವರಿಗೆ+ ವಿ
ಸ್ತರಿಸಿ +ಹೇಳುವುದ್+ ಎನ್ನೊಡನೆ +ಫಲಸಿದ್ಧಿಯಿಲ್ಲೆಂದ

ಅಚ್ಚರಿ:
(೧) ಭೀಮನ ನೇರ ನುಡಿ – ಅರಸಿ ನೀನಾಲ್ವರಿಗೆ ನಾವೆಡೆ ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ

ಪದ್ಯ ೧: ಸಹದೇವನ ಮಾತು ರಾಜರಲ್ಲಿ ಯಾವ ಭಾವನೆಯನ್ನು ಮೂಡಿಸಿತು?

ಕೇಳು ಜನಮೇಜಯ ಧರಿತ್ರೀ
ಪಾಲ ಸಹದೇವನ ವಚೋಗ್ರ
ವ್ಯಾಳ ವಿಷವೆಡೆಯಲ್ಲಿ ಸಿಲುಕಿತು ಮನಮಹೀಶ್ವರರ
ಸೂಳು ನೆನಹಿನ ಸುಳಿಮನದ ಸಮ
ಪಾಳಿ ಕೋಪದಲಳಿದ ಮೌನದ
ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ (ಸಭಾ ಪರ್ವ, ೧೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಹದೇವನ ಉಗ್ರವಾದ ಮಾತುಗಳೆಂಬ ಹಾವಿನ ವಿಷದಲ್ಲಿ ರಾಜರೆಲ್ಲರ ಮನಸ್ಸು ತೊಡಕಿತು. ಮತ್ತೆ ಮತ್ತೆ ಮರುಕಳಿಸುವ ನೆನಪು, ಸುತ್ತುವ ಮನಸ್ಸು, ಈ ಮನಸ್ಸಿನ ಭ್ರಮಣೆಗೆ ಸರಿಸಾಟಿಯಾದ ಕೋಪ, ಮೌನ ಹಾರಿತು, ಬುದ್ಧಿ ಏನನ್ನೋ ಹೇಳಿತು, ಅವರ ಭಾವ ಬೇರೆಯೇ ಆಯಿತು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ವಚ; ಮಾತು, ನುಡಿ; ಉಗ್ರ:ಭಯಂಕರ, ಭೀಕರ; ವ್ಯಾಳ: ಸರ್ಪ; ವಿಷ: ನಂಜು; ಎಡೆ: ಸುಲಿ, ತೆಗೆ; ಸಿಲುಕು: ಸೆರೆಯಾದ ವಸ್ತು; ಮನ: ಮನಸ್ಸು; ಮಹೀಶ್ವರ: ರಾಜ; ಸೂಳು: ಆವೃತ್ತಿ, ಬಾರಿ; ನೆನಹು: ನೆನಪು; ಸುಳಿ: ಸುತ್ತು, ತಿರುಗು; ಮನ: ಮನಸ್ಸು; ಪಾಳಿ: ಸರದಿ, ಸಾಲು; ಕೋಪ: ಸಿಟ್ಟು, ಮುಳಿ; ಅಳಿ: ನಾಶ, ಮರೆಯಾಗು; ಮೌನ: ಮಾತನಾಡದಿರುವಿಕೆ; ಬುದ್ಧಿ: ತಿಳಿವು, ಅರಿವು; ಜೋಡಿ: ಜೊತೆ; ಬೇರೆ: ಅನ್ಯ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಹದೇವನ +ವಚ+ಉಗ್ರ
ವ್ಯಾಳ +ವಿಷವ್+ಎಡೆಯಲ್ಲಿ +ಸಿಲುಕಿತು+ ಮನ+ಮಹೀಶ್ವರರ
ಸೂಳು +ನೆನಹಿನ +ಸುಳಿಮನದ +ಸಮ
ಪಾಳಿ +ಕೋಪದಲ್+ಅಳಿದ +ಮೌನದ
ಮೇಲು +ಬುದ್ಧಿಯ +ಜೋಡಿ +ಬೇರೊಂದಾಯ್ತು +ಭಾವದಲಿ

ಅಚ್ಚರಿ:
(೧) ಮಾತಿನ ತೀವ್ರತೆಯನ್ನು ತಿಳಿಸುವ ಬಗೆ – ವಚೋಗ್ರವ್ಯಾಳ ವಿಷವೆಡೆಯಲ್ಲಿ ಸಿಲುಕಿತು ಮನಮಹೀಶ್ವರರ

ಪದ್ಯ ೩: ಯಾರು ಕರ್ಣಾರ್ಜುನರನ್ನು ಹೊಗಳಿದರು?

ಗಬ್ಬರಿಸಿದುದು ಗಗನವನು ಬಲು
ಬೊಬ್ಬೆ ಬಹುವಿಧವಾದ್ಯರಭಸದ
ನಿಬ್ಬರದ ನಿಡುಸೂಳು ಸೂಳೈಸಿದುದು ದಿಗುತಟವ
ಉಬ್ಬುಗೆಡದಿರಿ ಕರ್ಣಪಾರ್ಥ ಸ
ಗರ್ಭರಹಿತೋ ಪೂತು ಮಝ ಎಂ
ಬಬ್ಬರಣೆ ಸುರರೂಢಿಯಲಿ ಝೊಂಪಿಸಿತು ಮೂಜಗವ (ಕರ್ಣ ಪರ್ವ, ೨೩ ಸಂಧಿ, ೩ ಪದ್ಯ)

ತಾತ್ಪರ್ಯ:
ರಣವಾದ್ಯಗಳು ರಣರಂಗದಲ್ಲಿ ಮೊಳಗಳು ಅದರ ನಾದವು ಆಗಸವನ್ನೆಲ್ಲಾ ತುಂಬಿತು. ಎಲ್ಲಾ ದಿಕ್ಕುಗಳಲ್ಲು ವಾದ್ಯದ ದೀರ್ಘವಾದ ಸದ್ದು ಮತ್ತೆ ಮತ್ತೆ ಹಬ್ಬಿತು. ಕರ್ಣಾರ್ಜುನರೇ ನಿಮ್ಮಲ್ಲಿ ಪರಾಕ್ರಮ ಅಡಗಿದೆ, ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ, ಭಲೇ, ಭೇಷ್ ಎಂದು ದೇವತೆಗಳು ಇಬ್ಬರನ್ನು ಹೊಗಳಿದರು.

ಅರ್ಥ:
ಗಬ್ಬರಿಸು: ಆವರಿಸು, ತಗ್ಗಾಗು; ಗಗನ: ಆಗಸ; ಬಲು: ಬಹಳ; ಬೊಬ್ಬೆ: ಜೋರಾದ ಶಬ್ದ; ಬಹು: ಬಹಳ; ವಿಧ: ರೀತಿ ವಾದ್ಯ: ಸಂಗೀತದ ಸಾಧನ; ರಭಸ: ವೇಗ; ನಿಬ್ಬರ: ಅತಿಶಯ, ಹೆಚ್ಚಳ; ನಿಡು: ಉದ್ದವಾದ, ದೀರ್ಘ; ಸೂಳು: ಆರ್ಭಟ, ಬೊಬ್ಬೆ; ಸೂಳೈಸು: ಧ್ವನಿಮಾಡು, ಹೊಡೆ; ದಿಗುತಟ: ದಿಕ್ಕು; ಉಬ್ಬು: ಹಿಗ್ಗು, ಗರ್ವಿಸು; ಕೆಡಡಿರಿ: ಕಳೆದುಕೊಳ್ಳಬೇಡಿ; ಸಗರ್ಭ: ಒಳಗೆ, ಅಡಗಿದ; ಪೂತು: ಭಲೇ; ಮಝ: ಕೊಂಡಾಟದ ಮಾತು; ಅಬ್ಬರಣೆ: ಆರ್ಭಟ; ಸುರ: ದೇವತೆಗಳು; ರೂಢಿ: ವಾಡಿಕೆ, ಬಳಕೆ; ಝೊಂಪಿಸು: ಭಯಗೊಳ್ಳು, ಬೆಚ್ಚಿಬೀಳು; ಮೂಜಗ: ಮೂರು ಪ್ರಪಂಚ;

ಪದವಿಂಗಡಣೆ:
ಗಬ್ಬರಿಸಿದುದು +ಗಗನವನು +ಬಲು
ಬೊಬ್ಬೆ +ಬಹುವಿಧ+ವಾದ್ಯ+ರಭಸದ
ನಿಬ್ಬರದ +ನಿಡುಸೂಳು +ಸೂಳೈಸಿದುದು +ದಿಗುತಟವ
ಉಬ್ಬು+ಕೆಡದಿರಿ +ಕರ್ಣಪಾರ್ಥ +ಸ
ಗರ್ಭರಹಿತೋ +ಪೂತು +ಮಝ +ಎಂಬ್
ಅಬ್ಬರಣೆ +ಸುರರೂಢಿಯಲಿ +ಝೊಂಪಿಸಿತು+ ಮೂಜಗವ

ಅಚ್ಚರಿ:
(೧) ಒಂದೇ ಅಕ್ಷರದ ಜೋಡಿ ಪದಗಳು – ಗಬ್ಬರಿಸುದುದು ಗಗನ, ನಿಬ್ಬರದ ನಿಡುಸೂಳು
(೨) ಬೊಬ್ಬೆ, ಅಬ್ಬರಣೆ, ಸೂಳು, ಸೂಳೈಸು – ಸಾಮ್ಯಾರ್ಥ ಪದಗಳು

ಪದ್ಯ ೯೬: ಯಾರನ್ನು ಗಾಯಕರೆನ್ನಬಹುದು?

ತಾಳಲಯ ಬೊಂಬಾಳ ಮಿಶ್ರದ
ಹೇಳಿಕೆಯನಾ ರಾಗ ಶುದ್ಧದ
ಸಾಳಗದ ಸಂಕೀರ್ಣ ದೇಸಿಯ ವಿವಿಧ ರಚನೆಗಳ
ಮೇಳವರಿವುತ ವಾದ್ಯ ಸಾಧನ
ದೇಳಿಗೆಯ ಸಂಪೂರ್ಣ ಮಾರ್ಗದ
ಸೂಳುಗಳ ಲಯಮಾನವರಿದವನವನೆ ಗಾಯಕನು (ಉದ್ಯೋಗ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ತಾಳ, ಲಯ, ಧ್ವನಿ ಭೇದಗಳನ್ನೊಳಗೊಂಡು, ಶುದ್ಧಸ್ಥಾಯಿಯಲ್ಲಿ ನಾನಾ ವಿಧವಾದ ದೇಶೀ ರಚನೆಗಳನ್ನರಿತು, ಸಹಕಾರಿ ವಾದ್ಯಗಳನ್ನು ಉಪಯೋಗಿಸುವುದನ್ನರಿತು ಶಾಸ್ತ್ರೀಯ ಸಂಗೀತದ ವರಸೆಗಳ ಲಯವನ್ನರಿತವನೇ ಗಾಯಕ ಎಂದು ವಿದುರ ಧೃತರಾಷ್ಟ್ರನಿಗೆ ಹೇಳಿದ.

ಅರ್ಥ:
ತಾಳ: ಹಾಡುವಾಗ ಯಾ ವಾದ್ಯವನ್ನು ನುಡಿಸುವಾಗ ನಿಯತಗತಿಯನ್ನು ಸೂಚಿಸಲು ಕೈ ಗಳಿಂದ ಹಾಕುವ ಪೆಟ್ಟು; ಬೊಂಬಾಳ:ನಾಲ್ಕು ಧ್ವನಿ ಭೇದಗಳಲ್ಲಿ ಒಂದು; ಮಿಶ್ರ: ಸೇರುವಿಕೆ; ಹೇಳಿಕೆ: ತಿಳಿಸುವಿಕೆ ; ಶುದ್ಧ: ತಪ್ಪಿಲ್ಲದ; ರಾಯ: ರಾಜ; ಸಾಳಗ: ಒಂದು ವಾದ್ಯ; ಸಂಕೀರ್ಣ: ಸೇರಿಕೊಂಡಿರುವುದು; ದೇಸಿ: ಒಂದು ದೇಶದಲ್ಲಿ ಪರಂಪರಾನುಗತವಾಗಿ ಬಂದಿರುವ ಸಂಸ್ಕೃತಿ, ಆಚಾರ; ವಿವಿಧ: ಹಲವಾರು; ರಚನೆ: ಸೃಷ್ಟಿ; ಮೇಳ: ಸಂಗೀತಗಾರ, ವಾದ್ಯಗಾರ ಯಾ ನರ್ತಕರ ಗುಂಪು ; ಅರಿ: ತಿಳಿ; ವಾದ್ಯ: ಸಂಗೀತದ ಸಾಧನ; ಸಾಧನ: ಅಭ್ಯಾಸ; ಏಳಿಗೆ: ಮೇಲೇಳು, ಮುಂದುವರಿ; ಸಂಪೂರ್ಣ: ಎಲ್ಲಾ; ಮಾರ್ಗ: ದಾರಿ; ಸೂಳು:ಆವೃತ್ತಿ, ಬಾರಿ, ಸರದಿ; ಲಯ: ಸಂಗೀತದಲ್ಲಿ ತಾಳ, ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ; ಮಾನ: ಗಣನೆ, ಎಣಿಕೆ; ಗಾಯಕ: ಹಾಡುಗಾರ, ಸಂಗೀತಗಾರ; ರಾಗ: ಹೊಂದಿಸಿದ ಸ್ವರಗಳ ಮೇಳೈಕೆ;

ಪದವಿಂಗಡಣೆ:
ತಾಳ+ಲಯ +ಬೊಂಬಾಳ +ಮಿಶ್ರದ
ಹೇಳಿಕೆಯನಾ +ರಾಗ +ಶುದ್ಧದ
ಸಾಳಗದ +ಸಂಕೀರ್ಣ +ದೇಸಿಯ +ವಿವಿಧ +ರಚನೆಗಳ
ಮೇಳವರಿವುತ+ ವಾದ್ಯ +ಸಾಧನದ್
ಏಳಿಗೆಯ +ಸಂಪೂರ್ಣ +ಮಾರ್ಗದ
ಸೂಳುಗಳ +ಲಯಮಾನವರಿದವನ್+ಅವನೆ+ ಗಾಯಕನು

ಅಚ್ಚರಿ:
(೧) ಏಳಿಗೆ, ಹೇಳಿಕೆ – ಪ್ರಾಸ ಪದ