ಪದ್ಯ ೨: ದುರ್ಯೋಧನನು ದಾಸಿಯರನ್ನು ಯಾಕೆ ದೂರವಿಟ್ಟನು

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ (ಸಭಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಅರಮನೆಯನ್ನು ಪ್ರವೇಶಿಸುತ್ತಿರುವುದನ್ನು ತಿಳಿದ ದಾಸಿಯರು ಆರತಿ, ಉಪ್ಪಾರತಿ ಯನ್ನು ತಂದರು, ಹೊಗಳುಭಟ್ಟರು ಮಂಗಳವಚನವನ್ನು ಹೇಳಲು ಮುಂದಾದರು, ಅಲ್ಲಿಗೆ ಬಂದಿದ್ದ ದಾಸಿಯರು, ಗಣಿಕೆಯರು, ಸೇವಕಿಯರು, ವಂದಿ ಮಾಗಧರನ್ನು ದೂರದಲ್ಲೇ ನಿಲ್ಲಿಸಿ, ಅತಿಶಯ ಅಪಮಾನದ ದೆಸೆಯಿಂದ ಬಂದ ಬಿಸಿಯ ನಿಟ್ಟುಸಿರಿಡುತ್ತಾ ತನ್ನ ತಾಳ್ಮೆಯ ಎಲ್ಲೆ ಮೀರಿ ತನ್ನ ಮಂಚದ ಮೇಲೆ ಮಲಗಿದನು.

ಅರ್ಥ:
ಗಣಿಕೆ: ವೇಶ್ಯೆ; ಆರತಿ:ನೀರಾಜನ; ಸುಳಿವು: ಗುರುತು, ಕುರುಹು; ಉಪ್ಪಾರತಿ: ಉಪ್ಪಿನ ಆರತಿ; ದಾದಿ: ದಾಸಿ; ಪಾಯವಧಾರು: ಎಚ್ಚರಿಕೆ, ಪಾದಕ್ಕೆ ಎಚ್ಚರಿಕೆ; ಸೂಳಾಯತ: ಮಂಗಳ ಪಾಠಕ, ವಂದಿ; ಮಂಗಳ: ಶುಭ; ವಚನ: ಮಾತು, ವಾಣಿ; ಐದು: ಹೋಗಿ ಸೇರು; ಐದೆ: ವಿಶೇಷವಾಗಿ; ದೂರ: ಅಂತರ; ನಿಲಿಸು: ತಡೆ; ಭಂಗ: ಸೀಳು; ಭಾರಣೆ: ಮಹಿಮೆ, ಗೌರವ; ಬಿಸುಸುಯ್ಲ: ಬಿಸಿಯುಸಿರು; ಸೂರೆ: ಕೊಳ್ಳೆ, ಲೂಟಿ; ಸೈರಣೆ: ತಾಳ್ಮೆ, ಸಹನೆ; ಸೀವಟ: ಅಲಂಕಾರ; ಸಿರಿ: ಐಶ್ವರ್ಯ; ಮಂಚ: ಶಯನಕ್ಕೆ ಉಪಯೋಗಿಸುವ ಸಾಧನ, ಪರ್ಯಂಕ; ಪವಡಿಸು: ಮಲಗು;

ಪದವಿಂಗಡಣೆ:
ಆರತಿಯ +ಗಣಿಕೆಯರ +ಸುಳಿವ್
ಉಪ್ಪಾರತಿಯ +ದಾದಿಯರ +ಪಾಯವ
ಧಾರು +ಸೂಳಾಯತರ+ ಮಂಗಳ+ ವಚನದ್+ಐದೆಯರ
ದೂರದಲಿ +ನಿಲಿಸಿದನು +ಭಂಗದ
ಭಾರಣೆಯ+ ಬಿಸುಸುಯ್ಲ+ ಸೂರೆಯ
ಸೈರಣೆಯ +ಸೀವಟದ +ಸಿರಿಮಂಚದಲಿ+ ಪವಡಿಸಿದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಂಗದ ಭಾರಣೆಯ ಬಿಸುಸುಯ್ಲ
(೨) ಸ ಕಾರದ ಸಾಲು ಪದ – ಸೂರೆಯ ಸೈರಣೆಯ ಸೀವಟದ ಸಿರಿಮಂಚದಲಿ
(೩) ಗಣಿಕೆ, ದಾದಿ, ಸೂಳಾಯತ – ವಿವಿಧ ಸಹಾಯಕರ ಹೆಸರು