ಪದ್ಯ ೫: ಜೋಧರು ಆನೆಯನ್ನು ಹೇಗೆ ಏರಿದರು?

ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು (ದ್ರೋಣ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರೆಂಚೆಯಲ್ಲಿ ಬಾಣಗಳು ಬಿಲ್ಲುಗಳು ಸೂನಿಗೆಗಳು ಸೇರಿಕೊಂಡಿದ್ದವು. ಸರಿಹಗ್ಗಗಳು ಕೈಗುಂಡು, ಕವಣೆಗಲ್ಲು, ಲೌಡಿ, ಖಡ್ಗಗಳನ್ನು ಜೋಡಿಸಿ ಮಾವುತರು ಗರ್ಜಿಸಿ ಆನೆಯನ್ನೇರಿದರು.

ಅರ್ಥ:
ಗಗನ: ಆಗಸ; ತಳ: ಕೆಳಗು, ಪಾತಾಳ, ನೆಲ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ತುಂಬು: ಅತಿಶಯ, ಬಾಹುಳ್ಯ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕಣೆ: ಬಾಣ; ಬಿಗಿ: ಭದ್ರವಾಗಿರುವುದು; ಆಳಿ: ಮೋಸ, ವಂಚನೆ, ಗುಂಪು; ಬಿಲ್ಲು: ಚಾಪ; ತೆತ್ತಿಸು: ಜೋಡಿಸು, ಕೂಡಿಸು; ಸೂನಿಗೆ: ಒಂದು ಬಗೆಯ ಆಯುಧ; ಉಗಿ: ಹೊರಹಾಕು; ನೇಣು: ಹಗ್ಗ, ಹುರಿ; ಗುಂಡು: ತುಪಾಕಿಯ ಗೋಲಿ, ಗುಂಡುಕಲ್ಲು; ಕವಣೆ: ಕಲ್ಲಿನಿಂದ ಬೀಸಿ ಹೊಡೆಯಲು ಮಾಡಿದ ಜಾಳಿಗೆಯ ಸಾಧನ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ಜೋಡಿಸು: ಕೂಡಿಸು; ಜೋಧ: ಆನೆ ಮೇಲೆ ಕೂತು ಯುದ್ಧ ಮಾಡುವವ; ಅಡರು: ಮೇಲಕ್ಕೆ ಹತ್ತು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಗಗನ+ ತಳವನು +ಬಿಗಿದ+ ಬಲು +ರೆಂ
ಚೆಗಳ +ತುಂಬಿದ +ಹೊದೆಯ +ಕಣೆಗಳ
ಬಿಗಿದನ್ + ಆಳಿಯ +ಬಿಲ್ಲುಗಳ +ತೆತ್ತಿಸಿದ +ಸೂನಿಗೆಯ
ಉಗಿವ+ ಸರಿನೇಣುಗಳ +ಕೈಗುಂ
ಡುಗಳ+ ಕವಣೆಯ +ಲೌಡಿ +ಕರವಾ
ಳುಗಳ+ ಜೋಡಿಸಿ +ಜೋದರ್+ಅಡರಿದರ್+ಅಂದು +ಬೊಬ್ಬಿರಿದು

ಪದ್ಯ ೨೧: ಭೂರಿಶ್ರವನ ಸೈನ್ಯ ಹೇಗಿತ್ತು?

ಹೊಗರೊಗುವ ಸೂನಿಗೆಯ ಸುಪತಾ
ಕೆಗಳ ಸಿಂಧದ ಹೊಳೆವ ಹೊಂಗಂ
ಬುಗೆಯ ಹೂಡಿದ ಹಯದ ಸೂತರ ಗಳದ ಗರ್ಜನೆಯ
ಅಗಿವ ಚೀತ್ಕಾರದ ಛಡಾಳದ
ವಿಗಡ ರಥಿಕರ ರಹಿಯ ರಥವಾ
ಜಿಗಳ ನೋಡೈ ಪಾರ್ಥ ಭೂರಿಶ್ರವನ ಸೈನ್ಯವಿದು (ಭೀಷ್ಮ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅರ್ಜುನ ಅದೋ ಭೂರಿಶ್ರವನ ರಥ ಸೈನ್ಯವನ್ನು ನೋಡು, ಹೊಳೆ ಹೊಳೆವ ಪತಾಕೆಗಳನ್ನು ಕಟ್ಟಿ, ಬಂಗಾರದಿಂದ ಮಾಡಿದ ಕಂಬುಗೆಗಳಲ್ಲಿ ಬಾಣಗಳನ್ನು ತುಂಬಿ, ಸೂನಿಗೆಗಳ ಕಾಂತಿ ಹರಡಿರಲು, ಸಾರಥಿಗಳು ಗರ್ಜಿಸುತ್ತಿರಲು ಉಂಟಾಗುವ ಮಹಾಶಬ್ದದಿಂದ ಕೂಡಿದೆ.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಸೂನಿಗೆ: ಒಂದು ಬಗೆಯ ಆಯುಧ; ಪತಾಕೆ: ಬಾವುಟ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಹೊಳೆ: ಪ್ರಕಾಶ; ಹೊಂಗಂಬು: ಚಿನ್ನದ ಕಂಬ; ಹೂಡು: ಅಣಿಗೊಳಿಸು; ಹಯ: ಕುದುರೆ; ಸೂತ: ರಥವನ್ನು ನಡೆಸುವವನು; ಗಳ: ಗಂಟಲು; ಗರ್ಜನೆ: ಆರ್ಭಟ; ಅಗಿ: ಆವರಿಸು; ಛಡಾಳ: ಹೆಚ್ಚಳ, ಆಧಿಕ್ಯ; ವಿಗಡ: ಶೌರ್ಯ, ಪರಾಕ್ರಮ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ರಹಿ: ರೀತಿ, ಆಡಂಬರ; ರಥ: ಬಂದಿ; ವಾಜಿ: ಕುದುರೆ; ನೋಡು: ವೀಕ್ಷಿಸು; ಸೈನ್ಯ: ಸೇನೆ;

ಪದವಿಂಗಡಣೆ:
ಹೊಗರೊಗುವ +ಸೂನಿಗೆಯ +ಸುಪತಾ
ಕೆಗಳ +ಸಿಂಧದ +ಹೊಳೆವ +ಹೊಂಗಂ
ಬುಗೆಯ+ ಹೂಡಿದ+ ಹಯದ +ಸೂತರ +ಗಳದ +ಗರ್ಜನೆಯ
ಅಗಿವ+ ಚೀತ್ಕಾರದ +ಛಡಾಳದ
ವಿಗಡ+ ರಥಿಕರ+ ರಹಿಯ +ರಥವಾ
ಜಿಗಳ +ನೋಡೈ +ಪಾರ್ಥ +ಭೂರಿಶ್ರವನ +ಸೈನ್ಯವಿದು

ಅಚ್ಚರಿ:
(೧) ಸ, ಹ, ರ ಕಾರದ ತ್ರಿವಳಿ ಪದಗಳು – ಸೂನಿಗೆಯ ಸುಪತಾಕೆಗಳ ಸಿಂಧದ; ಹೊಳೆವ ಹೊಂಗಂಬುಗೆಯ ಹೂಡಿದ ಹಯದ; ರಥಿಕರ ರಹಿಯ ರಥವಾಜಿಗಳ