ಪದ್ಯ ೧೯: ಹಸ್ತಿನಾಪುರಿಗೆ ಹೆಸರು ಹೇಗೆ ಬಂದಿತು?

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತ ವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರ ಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ (ಆದಿ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ದುಷ್ಯಂತನ ಮಗನು ಭರತ, ಅವನು ತನ್ನ ಪೂರ್ವಜರಿಗಿಂತ ಹಿರಿದಾಗಿ ಬಾಳಿದನು. ಅವನ ವಮ್ಶಕ್ಕೆ ಭಾರತವಂಶವೆಂದು ಹೆಸರಾಯ್ತು. ಭರತನ ಮಗನು ಸುಹೋತ್ರ, ಅವನ ಮಗನು ಹಸ್ತಿ, ಚಂದ್ರವಂಶದ ಅರಸರ ರಾಜಧಾನಿಯಾಗಿ ಹಸ್ತಿಯಿಂದ ಹಸ್ತಿನಾಪುರಿ ಎಂಬ ಹೆಸರು ಬಂದಿತು.

ಅರ್ಥ:
ಅವತರಿಸು: ಹುಟ್ಟು; ಪೂರ್ವ: ಹಿಂದಿನ; ನೃಪ: ರಾಜ; ಹಿರಿದು: ದೊಡ್ಡ; ಸಂದ: ಕಳೆದ, ಹಿಂದಿನ; ಬಳಿಕ: ನಂತರ; ವಂಶ: ಕುಲ; ಸೂನು: ಮಗ; ವರ: ಶ್ರೇಷ್ಠ; ಕುಮಾರ: ಮಗ; ಹೆಸರು: ನಾಮ; ಕೇಳು: ಆಲಿಸು;

ಪದವಿಂಗಡಣೆ:
ಭರತನ್+ಆ+ ದುಷ್ಯಂತನಿಂದ್+ಅವ
ತರಿಸಿದನು +ತತ್ಪೂರ್ವ+ ನೃಪರಿಂ
ಹಿರಿದು +ಸಂದನು +ಬಳಿಕ +ಭಾರತ +ವಂಶವಾಯ್ತಲ್ಲಿ
ಭರತಸೂನು +ಸುಹೋತ್ರನ್+ಆತನ
ವರ+ ಕುಮಾರಕ +ಹಸ್ತಿ+ ಹಸ್ತಿನ
ಪುರಿಗೆ+ ಹೆಸರಾಯ್ತ್+ಆತನಿಂದವೆ +ನೃಪತಿ+ ಕೇಳೆಂದ

ಅಚ್ಚರಿ:
(೧) ಸೂನು, ಕುಮಾರ – ಸಮಾನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹಸ್ತಿ ಹಸ್ತಿನಪುರಿಗೆ ಹೆಸರಾಯ್ತಾತನಿಂದವೆ

ಪದ್ಯ ೩೨: ಮುನಿವರ್ಯರ ಮಂತ್ರೋಪದೇಶದಿಂದ ಮಕ್ಕಳಾಗಬಹುದು ಎಂದು ಪಾಂಡು ಹೇಳಿದಕ್ಕೆ ಕುಂತಿಯ ಉತ್ತರವೇನು?

ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭವಿಸಿದರೆ ದುಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನೆಂದಳಾ ಕುಂತಿ (ಆದಿ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡು, ನಮ್ಮಂತ ಪಾಪ ಮಾಡಿದವರಿಗೆ ಮುನಿಯವರು ತೋರಿದ ಪ್ರಾಯಶ್ಚಿತ್ತ ಮಾರ್ಗ ಮತ್ತು ಮನ್ತ್ರೋಪದೆಶದಿಂದಲೇ ಮಕ್ಕಳಾಗಲು ಸಾಧ್ಯ ಎಂದು ಹೇಳಿದ ಕೂಡಲೆ, ಕುಂತಿಗೆ ದುರ್ವಾಸರು ಹಿಂದೆ ಉಪದೇಶಿಸಿದ ಮಂತ್ರ ಜ್ಞಾಪಕಕ್ಕೆ ಬಂದಿರಬೇಕು, ಇದನ್ನು ಪಾಂಡುವಿನ ಮುಂದೆ ಹೇಳುವುದ ಹೇಗೆ ಎಂದು ಯೋಚಿಸಿ ಹೇಳುತ್ತಾಳೆ, ” ಆರ್ಯ, ನಿನ್ನ ಅನುಗ್ರಹದಿಂದ ಮಕ್ಕಳಾದರೆ ಅದು ಕುಲಕ್ಕೆ ಶ್ರೇಯಸ್ಸು, ಇಲ್ಲದಿದ್ದರೆ ನಳ ನಹುಷ, ಪುರವ ಸುಹೋತ್ರ ಮುಂತಾದ ಮಹಾಮಹಿಮರು ಹುಟ್ಟಿದ ವಂಶದ ಗತಿಯೇನಾಗುವುದು ಎಂದು ಕೇಳುತ್ತಾಳೆ. ಕುಂತಿಯ ತೀಕ್ಷ್ಣ ಬುದ್ಧಿ ಇಲ್ಲಿ ಪ್ರಕಟವಾಗುತ್ತದೆ.

ಅರ್ಥ:
ಅನುಗ್ರಹ: ಆಶೀರ್ವಾದ, ಕೃಪೆ
ಸುತರು: ಮಕ್ಕಳು
ಉದ್ಭವಿಸು: ಹುಟ್ಟು
ದುಷ್ಕೀರ್ತಿ: ಅಪಯಷಸ್ಸು, ಅಪಕೀರ್ತಿ
ಪಾರಂಪರೆ: ಸಂಪ್ರದಾಯ, ಆಚಾರ
ಗತಿ: ಮಾರ್ಗ, ಆಧಾರ
ಅವನಿಪತಿ: ರಾಜ
ಸಂಭವಿಸು: ಹುಟ್ಟು

ಪದವಿಂಗಡನೆ:
ಭವದ್ +ಅನುಗ್ರಹ; ಸುತರ್ +ಉದ್ಭವಿಸಿದರೆ; ಲೇಸ್+ಅನ್ಯಥಾ; ದುಷ್ಕೀರ್ತಿ+ವಧು+ವೆಂಜ್+ಅಲಿಸಳೇ; ಸುಹೋತ್ರ+ಆದ್ಯರ; ನಿಜಾತ್ಮ+ಉದ್ಭವರ; ಗತಿಯೇನ್+ಎಂದಳಾ

ಅಚ್ಚರಿ:
(೧) ಭವ ಎಂಬ ಪದ ೪ ಸಾಲಿನ ಮೊದಲನೆ ಪದವಾಗಿರುವುದು
(೨) ಉದ್ಭವಿಸು, ಸಂಭವಿಸು – ಒಂದೇ ಅರ್ಥ ಕೊಡುವ ೨ ಪದಗಳು