ಪದ್ಯ ೨೨: ಸಂಜಯನು ರಣರಸವನ್ನು ಹೇಗೆ ವಿವರಿಸಿದನು?

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ (ಗದಾ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನ ಪ್ರಶ್ನೆಯನ್ನು ವಿವರಿಸುತ್ತಾ, ಎಲೈ ರಾಜನೇ ಯುದ್ಧರಂಗದ ಸಾರವನ್ನು ಹೇಳುತ್ತೇನೆ ಕೇಳು. ಸಹದೇವನ ಕೈಯಲ್ಲಿ ಶಕುನಿಯು ಇಹಲೋಕವನ್ನು ತ್ಯಜಿಸಿದನು. ನಕುಲನ ಬಾಣಗಳಿಂದ ಉಲೂಕನು ಮಡಿದನು. ಅರ್ಜುನನ ಬಾಣಗಳಿಂದ ತಮ್ಮ ಸಮಸ್ತ ಸೇನೆಯೊಂದಿಗೆ ತ್ರಿಗರ್ತ ದೇಶಾಧಿಪತಿಗಳಾದ ಸುಶರ್ಮನೇ ಮೊದಲಾದ ಪರಾಕ್ರಮಿಗಳು ಅಪ್ಸರೆಯರ ಗುಂಪನ್ನು ಸೇರಿದರು ಎಂದು ಸಂಜಯನು ವಿವರಿಸಿದನು.

ಅರ್ಥ:
ಬಿದ್ದು: ಬೀಳು, ಕುಸಿ; ಜೀಯ: ಒಡೆಯ; ಮಡಿ: ಸಾಯಿ, ಸಾವನಪ್ಪು; ಅಂಬು: ಬಾಣ; ಆದಿ: ಮುಂತಾದ; ಸಕಲ: ಎಲ್ಲಾ; ಗಜ: ಆನೆ; ಹಯ: ಕುದುರೆ; ಸೇನೆ: ಸೈನ್ಯ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಶರ: ಬಾಣ; ಅಮರಿ: ಅಪ್ಸರೆ; ನಿಕರ: ಗುಂಪು; ಸೇರು: ಜೊತೆಗೂಡು; ಹೇಳು: ತಿಳಿಸು; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಶಕುನಿ +ಬಿದ್ದನು +ಜೀಯ +ಸಹದೇ
ವಕನ +ಕೈಯಲ್+ಉಳೂಕ+ ಮಡಿದನು
ನಕುಲನ್+ಅಂಬಿನಲ್+ಆ ತ್ರಿಗರ್ತ+ ಸುಶರ್ಮಕ+ಆದಿಗಳು
ಸಕಲ+ ಗಜ+ಹಯ+ಸೇನೆ +ಸಮಸ
ಪ್ತಕರು +ಪಾರ್ಥನ +ಶರದಲ್+ಅಮರೀ
ನಿಕರವನು+ ಸೇರಿದರು +ಹೇಳುವುದೇನು+ ರಣರಸವ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಿದ್ದನು, ಮಡಿದನು, ಅಮರೀನಿಕರ ಸೇರಿದನು

ಪದ್ಯ ೨೨: ಅರ್ಜುನನು ಏನೆಂದು ಕೂಗಿದನು?

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ (ಗದಾ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸತ್ಯಕರ್ಮ, ಸುಶರ್ಮ, ಅವರ ಸಹೋದರರು, ಗೋತ್ರ ಬಾಂಧವರೆಲ್ಲರನ್ನು ಅರ್ಜುನನು ಸಂಹರಿಸಿ, ದುರ್ಯೋಧನ ನಿನ್ನಪ್ತರೆಲ್ಲರನ್ನೂ ಕೊಂದಿದ್ದೇನೆ, ಯುದ್ಧಕ್ಕೆ ಬಾ ತಡಮಾಡಬೇಡ ಎಂದು ಕೂಗಿದನು.

ಅರ್ಥ:
ತರಿ: ಸೀಳು; ಅಗ್ಗ: ಶ್ರೇಷ್ಠ; ಧುರ: ಯುದ್ಧ, ಕಾಳಗ; ಸಂತೈಸು: ತಾಳ್ಮೆ, ಸಹಿಸು; ದೊರೆ: ರಾಜ; ಸಹಭವ: ಸಹೋದರ; ಗೋತ್ರ: ವಂಶ; ಬಾಂಧವ: ಸಂಬಂಧಿಕ, ಆಪ್ತ; ಒರಸು: ನಾಶ; ಬರಲಿ: ಆಗಮಿಸು; ಆಪ್ತ: ಹತ್ತಿರದ; ಕೊಡು: ನೀಡು; ಹರಿ: ನಾಶ; ಆಹವ: ಯುದ್ಧ; ವಿಲಂಬ: ತಡ;

ಪದವಿಂಗಡಣೆ:
ತರಿದನ್+ಅಗ್ಗದ +ಸತ್ಯಕರ್ಮನ
ಧುರವ +ಸಂತೈಸುವ +ತ್ರಿಗರ್ತರ
ದೊರೆ +ಸುಶರ್ಮನನ್+ ಅವನ +ಸಹಭವ +ಗೋತ್ರ +ಬಾಂಧವರ
ಒರಸಿದನು +ಕುರುರಾಯನ್+ಆವೆಡೆ
ಬರಲಿ+ ತನ್ನಾಪ್ತರಿಗೆ +ಕೊಟ್ಟೆನು
ಹರಿವನಿನ್+ಆಹವ +ವಿಲಂಬವ +ಮಾಡಬೇಡೆಂದ

ಅಚ್ಚರಿ:
(೧) ಸಹೋದರ ಎಂದು ಹೇಳುವ ಪರಿ – ಅವನ ಸಹಭವ ಗೋತ್ರ ಬಾಂಧವರ

ಪದ್ಯ ೨೧: ಅರ್ಜುನನ ಬಾಣಗಳಿಂದ ಯಾರು ಮಲಗಿದರು?

ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ (ಗದಾ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ದ್ರೋಣನ ಸೇನಾಧಿಪತ್ಯದ ಎರಡನೆಯದಿನ ತ್ರಿಗರ್ತ ರಾಜನಾದ ಸುಶರ್ಮ ಅವನ ಸಹೋದರರಾದ ಸತ್ಯಕರ್ಮ, ಸತ್ಯದೇವ, ಸತೇಷು, ಸತ್ಯರಥರು ಅಗ್ನಿಸಾಕ್ಷಿಯಾಗಿ ಶಪಥಮಾಡಿ ಯುದ್ಧಕ್ಕ್ ಅರ್ಜುನನನ್ನು ಕರೆದರು. ಯುದ್ಧದಲ್ಲಿ ಅರ್ಜುನನನ್ನು ಬೇಸರಿಸಿದರು. ಅವರೀಗ ಅರ್ಜುನನ ಅಸ್ತ್ರಗಳಿಂದ ಮಡಿದು ಮಲಗಿದರು.

ಅರ್ಥ:
ದೊರೆ: ರಾಜ; ವರ: ಶ್ರೇಷ್ಠ; ಸಮರ: ಯುದ್ಧ; ದಿವಸ: ದಿನ; ರಚಿಸು: ನಿರ್ಮಿಸು; ಅಗ್ನಿ: ಬೆಂಕಿ; ಸಾಕ್ಷಿ: ಪುರಾವೆ, ರುಜುವಾತು; ಧುರ: ಯುದ್ಧ, ಕಾಳಗ; ಶಪಥ: ಪ್ರಮಾಣ; ಸಂಗರ: ಯುದ್ಧ; ಬೇಸರ: ಬೇಜಾರು, ನೋವು; ಪರಾಕ್ರಮ: ಆಕ್ರಮಣ, ಶೌರ್ಯ; ಪರಿಗತ: ಆವರಿಸು; ಪವಡಿಸು: ಮಲಗು; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ದೊರೆಗಳ್+ಅವರಲಿ +ಸತ್ಯಕರ್ಮನು
ವರ +ಸುಶರ್ಮನು +ದ್ರೋಣ+ಸಮರದೊಳ್
ಎರಡನೆಯ+ ದಿವಸದಲಿ+ ರಚಿಸಿದರ್+ಅಗ್ನಿ +ಸಾಕ್ಷಿಕವ
ಧುರದ +ಶಪಥದೊಳ್+ಅರ್ಜುನನ +ಸಂ
ಗರಕೆ +ಬೇಸರಿಸಿದ+ ಪರಾಕ್ರಮ
ಪರಿಗತರು +ಪವಡಿಸಿದರ್+ಅಂದು +ಧನಂಜಯ+ಅಸ್ತ್ರದಲಿ

ಅಚ್ಚರಿ:
(೧) ಸತ್ತರು ಎಂದು ಹೇಳಲು – ಅರ್ಜುನನ ಸಂಗರಕೆ ಬೇಸರಿಸಿದಪರಾಕ್ರಮ ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ

ಪದ್ಯ ೩: ಪಾಂಡವ ಸೇನೆಯು ಹೇಗೆ ಹತವಾಯಿತು?

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ (ಶಲ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಈಚೆಕಡೆಯಲ್ಲಿ ಅಶ್ವತ್ಥಾಮ, ಸುಧರ್ಮ, ದುರ್ಯೋಧನ ಕೃತವರ್ಮ, ಕೃಪನೇ ಮೊದಲಾದವರು ಮುನ್ನುಗ್ಗಿ ಹೊಡೆಯಲು, ಅವರ ಬಾಣಗಳ ಏಟಿಗೆ ಬಿಸಿಗೆ ತುಪ್ಪದ ಸಾಗರವು ಕರಗಿದಂತೆ ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಕ್ಷಿತಿಪ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಗ; ಆದಿ: ಮುಂತಾದ; ಮಸಗು: ಕೆರಳು; ತಿಕ್ಕು; ಘೃತ: ತುಪ್ಪ; ಸಮುದ್ರ: ಸಾಗರ; ಸೆರಗು: ಅಂಚು, ತುದಿ; ಸೋಂಕು: ಮುಟ್ಟು, ತಾಗು; ಹುತವಹ: ಅಗ್ನಿ; ಸೊಂಪು: ಸೊಗಸು, ಚೆಲುವು; ವೈರಿ: ಅರಿ, ಶತ್ರು; ಪ್ರತತಿ: ಗುಂಪು; ತರುಬು: ತಡೆ, ನಿಲ್ಲಿಸು; ತರಿ: ಕಡಿ, ಕತ್ತರಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕ್ಷಿತಿಪ +ಚಿತ್ತೈಸ್+ಈಚೆಯಲಿ +ಗುರು
ಸುತ +ಸುಶರ್ಮಕ +ಶಲ್ಯ+ ನಿನ್ನಯ
ಸುತನು +ಕೃತವರ್ಮನು +ಕೃಪಾಚಾರ್ಯ+ಆದಿಗಳು+ ಮಸಗಿ
ಘೃತ+ಸಮುದ್ರದ +ಸೆರಗ+ ಸೋಂಕಿದ
ಹುತವಹನ+ ಸೊಂಪಿನಲಿ +ವೈರಿ
ಪ್ರತತಿಯನು +ತರುಬಿದರು +ತರಿದರು+ ಸರಳ+ ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಘೃತಸಮುದ್ರದ ಸೆರಗ ಸೋಂಕಿದ ಹುತವಹನ ಸೊಂಪಿನಲಿ ವೈರಿ ಪ್ರತತಿಯನು ತರುಬಿದರು
(೨) ಸುತ – ೨, ೩ ಸಾಲಿನ ಮೊದಲ ಪದ

ಪದ್ಯ ೧೦: ಎಷ್ಟು ಸೈನ್ಯದೊಡನೆ ಸಂಶಪ್ತಕರು ಯುದ್ಧಕ್ಕೆ ಬಂದರು?

ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರವ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು (ದ್ರೋಣ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಂಶಪ್ತಕರಲ್ಲಿ ಸತ್ಯರಥನ ಬಳಿ ಹತ್ತು ಸಾವಿರ ರಥಗಳು, ಲೋಕದಲ್ಲೇ ವೀರನಾದ ಸುಧರ್ಮನ ಮೂವತ್ತು ಸಾವಿರ ರಥಗಳು, ಮಾಳವ, ಯವನ ಬಳಿ ಹತ್ತು ಸಾವಿರ ಹೀಗೆ ಐವತ್ತು ಸಾವಿರ ರಥಗಳು ಸಜ್ಜಾದವು.

ಅರ್ಥ:
ಮೊದಲು: ಆದಿ; ಬಳಿ: ಹತ್ತಿರ; ರಥ: ಬಂಡಿ; ಸೇರು: ಕೂದು; ಸಾವಿರ: ಸಹಸ್ರ; ಭುವನ: ಭೂಮಿ; ವೀರ: ಶೂರ; ಬವರ: ಕಾಳಗ, ಯುದ್ಧ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಇವರ +ಮೊದಲಿಗ +ಸತ್ಯರಥನ್+
ಇಂತಿವನ +ಬಳಿ +ರಥ +ಹತ್ತು +ಸಾವಿರವ್
ಇವನೊಡನೆ +ಸೇರುವೆಯ +ರಥ +ಮೂವತ್ತು +ಸಾವಿರವ
ಭುವನವೀರ +ಸುಶರ್ಮ +ಮಾಳವ
ಯವನರ್+ಅತಿರಥ +ಹತ್ತು +ಸಾವಿರ
ಬವರಕಿಂತ್+ಐವತ್ತು +ಸಾವಿರ +ರಥಗಳ್+ಒಗ್ಗಾಯ್ತು

ಅಚ್ಚರಿ:
(೧) ವೀರ, ಅತಿರಥ – ಸಮಾನಾರ್ಥಕ ಪದ

ಪದ್ಯ ೨೬: ಯಾರು ಯಾರರ ಮೇಲೆ ಯುದ್ಧವನ್ನು ಮಾಡಿದರು?

ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಯಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಧರ್ಮ ತಾಗಿದನರಸ ಕೇಳೆಂದ (ಭೀಷ್ಮ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಭೀಷ್ಮನೊಡನೆ ದುಶ್ಯಾಸನನು ಅರ್ಜುನನೊಡನೆ, ಘಟೋತ್ಕಚನು ಭಗದತ್ತನೊಡನೆ, ಯಾದವ ಬಲದೊಡನೆ ಸಹದೇವ, ವಿರಾಟನೊಡನೆ ಸುಶರ್ಮರು ಯುದ್ಧವನ್ನು ಮಾಡಿದರು.

ಅರ್ಥ:
ಸೆಣಸು: ಹೋರಾಡು; ಮಿಗಲು: ಹೆಚ್ಚು; ಕೆಣಕು: ರೇಗಿಸು, ಪ್ರಚೋದಿಸು; ತರುಬು: ತಡೆ, ನಿಲ್ಲಿಸು; ಕಣೆ: ಬಾಣ; ಕೆದರು: ಹರಡು; ಬಲ: ಶಕ್ತಿ; ನಾರಾಯಣಬಲ: ಯಾದವರ ಬಲದೊಡನೆ; ಬೆರಸು: ಜೋಡಿಸು; ಹೋಣಕೆ: ಯುದ್ಧ, ಕಾಳಗ; ತಾಗು: ಎದುರಿಸು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೆಣಸು +ಮಿಗಲ್+ಅಭಿಮನ್ಯು +ಭೀಷ್ಮನ
ಕೆಣಕಿದನು +ದುಶ್ಯಾಸನನು +ಫಲು
ಗುಣನ +ತರುಬಿದನಾ+ ಘಟೋತ್ಕಚನೊಡನೆ +ಭಗದತ್ತ
ಕಣೆಗೆದರಿ +ಸಹದೇವ+ ನಾರಾ
ಯಣ+ಬಲವ +ಬೆರಸಿದನು +ಮತ್ಸ್ಯನ
ಹೊಣಕೆಯಿಂದ +ಸುಶರ್ಮ +ತಾಗಿದನ್+ಅರಸ +ಕೇಳೆಂದ

ಅಚ್ಚರಿ:
(೧) ಹೋರಾಟವನ್ನು ವಿವರಿಸಲು ಬಳಸಿದ ಪದಗಳು – ಸೆಣಸು, ಕೆಣಕು, ತರುಬು, ಬೆರಸು

ಪದ್ಯ ೧೧: ಧರ್ಮಜನು ಕೃಷ್ಣನಿಗೆ ಏನು ಕೇಳಿದ?

ಹದುಳವೇ ಪಾರ್ಥಂಗೆ ಹೇರಾ
ಲದಲಿ ಕಾದಿದನಾ ಸುಶರ್ಮನ
ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ
ಕೆದರಿದನು ಕೊಲ್ಲಣಿಗೆಯಲಿ ಬಂ
ದೊದಗಿ ನೀವವದಿರಲಿ ಸುಯ್ದಾ
ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ (ಕರ್ಣ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮಜನು ಕೃಷ್ಣಾರ್ಜುನರನ್ನು ನೋಡಿ, ಪಾರ್ಥನು ಕ್ಷೇಮವಾಗಿದ್ದಾನೆಯೇ? ಸುಧರ್ಮನ ಜೊತೆಯ ಕಾಳಗ ಬಲು ಕಷ್ಟಕರವಾದುದು, ತಮ್ತಮ್ಮಲ್ಲಿ ಶಪಥ ಮಾಡಿ ಯುದ್ಧಕ್ಕೆ ಬಂದವರಲ್ಲವೇ! ಅವರೊಡನೆ ಯುದ್ಧ ಮಾಡುವುದು ಅವನಿಗೊಂದು ಆಟ, ಅಂತಹ ಯುದ್ಧದಲ್ಲಿ ನೀವು ಕ್ಷೇಮವಾಗಿ ಬಂದುದೇ ಒಂದು ಹೆಚ್ಚಿನ ಸಂತೋಷವಲ್ಲವೇ? ಎಂದು ಧರ್ಮಜನು ಕೃಷ್ಣನಿಗೆ ಕೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ಹೇರಾಳ: ದೊಡ್ಡ, ವಿಶೇಷ; ಕಾದು: ಯುದ್ಧ ಮಾಡಿ; ಕದನ: ಯುದ್ಧ; ಬೆಟ್ಟು: ಹೊಡೆ, ಬಡಿ; ಶಪಥ: ಪ್ರಮಾಣ; ಅನಿಬರು: ಅಷ್ಟುಜನ; ಕೆದರು: ಚೆದರು; ಕೊಲ್ಲಣಿಗೆ: ಸಂದಣಿ; ಒದಗು: ಲಭ್ಯ, ದೊರೆತುದು; ಸುಯ್ದು: ನಿಟ್ಟುಸಿರುಬಿಟ್ಟು; ಬಂದುದೆ: ಆಗಮಿಸು; ಲಕ್ಷ: ಚೆನ್ನಾದ; ನೃಪತಿ: ರಾಜ;

ಪದವಿಂಗಡಣೆ:
ಹದುಳವೇ +ಪಾರ್ಥಂಗೆ +ಹೇರಾ
ಲದಲಿ +ಕಾದಿದನಾ+ ಸುಶರ್ಮನ
ಕದನ +ಬೆಟ್ಟಿತು +ಶಪಥವಲ್ಲಾ +ತಮ್ಮೊಳ್+ಅನಿಬರಿಗೆ
ಕೆದರಿದನು +ಕೊಲ್ಲಣಿಗೆಯಲಿ +ಬಂದ್
ಒದಗಿ+ ನೀವ್+ಅವದಿರಲಿ +ಸುಯ್ದಾ
ನದಲಿ +ಬಂದುದೆ +ಲಕ್ಷವೆಂದನು +ನೃಪತಿ +ಕೃಷ್ಣಂಗೆ

ಅಚ್ಚರಿ:
(೧) ಕೃಷ್ಣ ಪಾರ್ಥನನ್ನು ಮೆಚ್ಚುವ ಸಾಲು – ಕೊಲ್ಲಣಿಗೆಯಲಿ ಬಂದೊದಗಿ ನೀವವದಿರಲಿ ಸುಯ್ದಾನದಲಿ ಬಂದುದೆ ಲಕ್ಷವೆಂದನು

ಪದ್ಯ ೬೯: ಭಾನುಮತಿಯು ಸುಶರ್ಮನನ್ನು ಏನು ಕೇಳಿದಳು?

ಏನಿದೇನು ಸುಶರ್ಮ ನಿನ್ನೆಯ
ನೀನಿದೆತ್ತಲು ಹೋದೆ ನಿನ್ನಯ
ಸೇನೆ ಗಜಹಯವೆತ್ತ ಹೋದವು ರಥವದೇನಾಯ್ತು
ಹೀನಕಳೆಯಾಯ್ತೆನುತಲಾ ವರ
ಭಾನುಮತಿ ನೆರೆ ನುಡಿಯೆ ಜೀಯವ
ಧಾನ ಬಿನ್ನಹ ನಡೆದುದನು ಅವಧರಿಸಿ ಕೇಳೆಂದ (ವಿರಾಟ ಪರ್ವ, ೫ ಸಂಧಿ, ೬೯ ಪದ್ಯ)

ತಾತ್ಪರ್ಯ:
ಸುಶರ್ಮನು ಮುಸುಕನ್ನು ಹಾಕಿಕೊಂಡು ಬರಲು, ಭಾನುಮತಿಯು ಇದನ್ನು ಗಮನಿಸಿ, ಸುಶರ್ಮ ಏನಿದು, ನಿನ್ನೆಯ ನೀನು ಇಂದು ಎತ್ತ ಹೋದೆ? ನಿನ್ನ ಸೇನೆ, ಆನೆ, ಕುದುರೆಗಳು, ರಥ ಎಲ್ಲಿಗೆ ಹೋದವು? ಏನಾಯಿತು, ನಿನಗೇಕೆ ಈ ಹೀನಕಳೆ ಎನಲು, ಸುಶರ್ಮನು ನಡೆದುದನ್ನು ಮನಸಿಟ್ಟು ಕೇಳು ಎಂದು ಹೇಳು ನಡೆದ ವೃತ್ತಾಂತವನ್ನು ಹೇಳಿದನು.

ಅರ್ಥ:
ಸೇನೆ: ಸೈನ್ಯ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಹೀನ:ಕಳಪೆಯಾದುದು; ಕಳೆ: ಪ್ರಭೆ; ವರ: ಶ್ರೇಷ್ಠ; ನೆರೆ:ಅತಿಶಯ; ನುಡಿ: ಮಾತು; ಜೀಯ:ಯಜಮಾನ; ಅವಧಾನ:ಎಚ್ಚರಿಕೆ; ಬಿನ್ನಹ: ಮನವಿ; ಅವಧರಿಸು:ಮನಸ್ಸಿಟ್ಟು ಕೇಳು; ಕೇಳು: ಆಲಿಸು;

ಪದವಿಂಗಡಣೆ:
ಏನಿದ್+ಏನು +ಸುಶರ್ಮ +ನಿನ್ನೆಯ
ನೀನ್+ಇದ್+ಎತ್ತಲು +ಹೋದೆ +ನಿನ್ನಯ
ಸೇನೆ +ಗಜ+ಹಯ+ವೆತ್ತ ಹೋದವು +ರಥವದೇನಾಯ್ತು
ಹೀನ+ಕಳೆ+ಯಾಯ್ತ್+ಎನುತಲಾ+ ವರ
ಭಾನುಮತಿ+ ನೆರೆ +ನುಡಿಯೆ+ ಜೀಯ್+ಅವ
ಧಾನ +ಬಿನ್ನಹ +ನಡೆದುದನು +ಅವಧರಿಸಿ+ ಕೇಳೆಂದ

ಅಚ್ಚರಿ:
(೧) ನಿನ್ನೆಯ, ನಿನ್ನಯ – ಪದಬಳಕೆ
(೨) ಆಶ್ಚರ್ಯವನ್ನು ಸೂಚಿಸುವ – ಏನಾಯಿತು ಎಂದು ಹೇಳಲು – ಏನಿದೇನು
(೩) ಏನಿದು, ಏನು, ಎತ್ತ, ಏನಾಯ್ತು – ಪದದ ಬಳಕೆ

ಪದ್ಯ ೬೫: ವಿರಾಟ ರಾಜನು ಭೀಮನಿಗೆ ಏನು ಹೇಳಿದನು?

ವಲಲ ಮೆಚ್ಚಿದೆನೈ ಮಹಾದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದೆನು ಹಗೆಗೆನುತ ಬೋಳೈಸಿದ ವಿರಾಟನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳು ಕಾಳಗ
ದೊಳಗೆ ತುರುಮರಳಿದವು ಗೆಲಿದರು ಪಾಂಡುನಂದನರು (ವಿರಾಟ ಪರ್ವ, ೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭೀಮನ ಶೌರ್ಯ, ಪರಾಕ್ರಮಗಳನ್ನು ಕಂಡ ವಿರಾಟ ರಾಜನು, “ವಲಲ ನಿನ್ನ ಶೌರ್ಯಕೆ ನಾನು ಮೆಚ್ಚಿದ್ದೇನೆ, ನಾನು ಶತ್ರುವಿಗೆ ಸಿಕ್ಕಿದ್ದೆ ಎಂದು ಆನಂದದಿಂದ ಹೊಗಳಿದರು”, ಧರ್ಮಜನು ಸುಶರ್ಮನನ್ನು ಸೆರೆಯಿಂದ ಬಿಡಿಸಿದನು. ವಿರಾಟನ ಗೋವುಗಳು ಮರಳಿದವು. ರಾತ್ರಿಯ ಯುದ್ಧವನ್ನು ಪಾಂಡವರು ಗೆದ್ದರು.

ಅರ್ಥ:
ವಲಲ: ಭೀಮನ ಹೆಸರು; ಮೆಚ್ಚು: ಪ್ರಶಂಶಿಸು; ಲಘು: ಸರಳ; ಸಾಹಸಿ: ಶೌರ್ಯ, ಬಲಶಾಲಿ; ಬಿಡಿಸು: ಬಂಧಮುಕ್ತನಾಗಿ ಮಾಡು; ಸಿಲುಕು: ಬಂಧನಕ್ಕೊಳಗಾದುದು; ಹಗೆ: ವೈರ; ಬೋಳೈಸು: ಸಂತೈಸು; ನೃಪ: ರಾಜ; ಬಳಿಕ: ನಂತರ; ನಂದನ: ಮಗ; ಕಲಿ: ವೀರ; ಇರುಳು: ರಾತ್ರಿ; ಕಾಳಗ: ಯುದ್ಧ; ತುರು: ಹಸು; ಮರಳು: ಹಿಂದಿರುಗು; ಗೆಲಿ: ಜಯ;

ಪದವಿಂಗಡಣೆ:
ವಲಲ +ಮೆಚ್ಚಿದೆನೈ+ ಮಹಾದೇ
ವಲಘು+ ಸಾಹಸಿ+ ತನ್ನ +ಬಿಡಿಸಿದೆ
ಸಿಲುಕಿದೆನು +ಹಗೆಗೆನುತ +ಬೋಳೈಸಿದ +ವಿರಾಟ+ನೃಪ
ಬಳಿಕ +ಯಮ+ನಂದನನು +ಬಿಡಿಸಿದ
ಕಲಿ +ಸುಶರ್ಮನನ್+ಇರುಳು +ಕಾಳಗ
ದೊಳಗೆ +ತುರು+ಮರಳಿದವು+ ಗೆಲಿದರು+ ಪಾಂಡು+ನಂದನರು

ಅಚ್ಚರಿ:
(೧) ೪, ೫ ಸಾಲಿನ ಮೊದಲ ಕೊನೆ ಪದ ಒಂದೇ ಅಕ್ಷರದ್ದು
(೨) ನಂದನ – ೨ ಬಾರಿ ಪ್ರಯೋಗ, ಯಮನಂದನ, ಪಾಂಡುನಂದನ

ಪದ್ಯ ೫೬: ಸುಶರ್ಮನು ವಿರಾಟನನ್ನು ಹೇಗೆ ಎದುರಿಸಿದನು?

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರಸುಶರ್ಮನಂಬಿನ
ಮಳೆಯ ಕರೆಯುತ ರಿಪು ವಿರಾಟನ ರಥವ ತರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ (ವಿರಾಟ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಸುಶರ್ಮನ ಸೈನ್ಯವು ಭಂಗವಾಗಿ ಹಿಂತಿರುಗುತ್ತಿರಲು, ಕೋಪಗೊಂಡ ಸುಶರ್ಮನು ವೀರಾವೇಶದಿಂದ ಬಾಣಗಳೆ ಸುರಿಮಳೆಯನ್ನು ಕರೆಯುತ್ತಾ ಶತ್ರುವಾದ ವಿರಾಟನ ರಥವನ್ನು ನಿಲ್ಲಿಸಿದನು. ನಂತರ ಅವನನ್ನುದ್ದೇಶಿಸಿ, ಎಲವೋ ಹುಲು ಮಾಂಡಲಿಕನಾದ ವಿರಾಟ, ನಿನಗೇಕೆ ಯೋಧನೆಂಬ ಕೂಗು” ಎಂದು ಹೇಳಿ ವಿರಾಟನೊಡನೆ ಯುದ್ಧಮಾಡಲು ಆರಂಭಿಸಿದ.

ಅರ್ಥ:
ಬಲ: ಶಕ್ತಿ; ಮುರಿ: ಬಾಗು, ಚೂರುಮಾಡು; ಬರುತಿರಲು: ಆಗಮಿಸುತಿರಲು; ಖಾತಿ:ಕೋಪ; ತಳೆದು: ತೋರಿ; ವೀರ: ಕಲಿ, ಶೌರ್ಯ; ಅಂಬು: ಬಾಣ; ಮಳೆ: ವರ್ಷ; ಕರೆ: ಬರೆಮಾಡು; ರಿಪು: ಶತ್ರು; ರಥ: ಬಂಡಿ; ತರುಬು:ತಡೆ, ನಿಲ್ಲಿಸು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹುಲು: ಕ್ಷುದ್ರ, ಅಲ್ಪ; ಮಂಡಳಿಕ: ಚಿಕ್ಕ ಜಾಗದ (ಮಂಡಲ) ಒಡೆಯ; ಆಳು: ಯೋಧ; ಉಲಿ: ಕೂಗು; ಕಾದಿದನು: ಹೋರಾಡಿದನು;

ಪದವಿಂಗಡಣೆ:
ಬಲ +ಮುರಿದು +ಬರುತಿರಲು +ಖಾತಿಯ
ತಳೆದು +ವೀರ+ಸುಶರ್ಮನ್+ಅಂಬಿನ
ಮಳೆಯ +ಕರೆಯುತ +ರಿಪು +ವಿರಾಟನ+ ರಥವ+ ತರುಬಿದನು
ಎಲವೊ +ಫಡ +ಫಡ +ಮತ್ಸ್ಯ +ಹುಲು+ಮಂ
ಡಳಿಕ+ ನಿನಗೇಕ್+ಆಳುತನವೆಂದ್
ಉಲಿದು+ ಕೈಕೊಂಡೆಚ್ಚು +ಕಾದಿದನಾ +ವಿರಾಟನಲಿ

ಅಚ್ಚರಿ:
(೧) ವಿರಾಟನನ್ನು ಕರೆದ ಪರಿ – ಫಡ ಫಡ, ಮತ್ಸ್ಯ ಹುಲು ಮಂಡಲಿಕ