ಪದ್ಯ ೪: ಆನೆಯ ಮೊಗದಲ್ಲಿ ಯಾವುದು ರಂಜಿಸುತ್ತಿತ್ತು?

ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ (ದ್ರೋಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಯ ಸುತ್ತಲೂ ಬಿಗಿದ ಗುಳದಲ್ಲಿದ್ದ ಬಂಗಾರದ ರೇಖೆಗಳು ಆಗಸದಲ್ಲಿ ಹರಡುವ ಸೂರ್ಯ ರಶ್ಮಿಯಂತಿದ್ದವು. ಆಕಾಶ ಗಂಗೆಯ ಕಾಲುವೆಯಂತೆ ಅಳವಡಿಸಿದ್ದ ಧ್ವಜದಂಡವು ಆನೆಯ ಮೊಗರಂಬದಲ್ಲಿ ರಂಜಿಸುತ್ತಿತ್ತು.

ಅರ್ಥ:
ಮುಗಿಲು: ಆಗಸ; ಹೊದರು: ಗುಂಪು, ಸಮೂಹ; ಎಳೆ: ನೂಲಿನ ಎಳೆ, ಸೂತ್ರ; ರವಿ: ಸೂರ್ಯ; ರಶ್ಮಿ: ಕಿರಣ; ಪಸರಿಸು: ಹರಡು; ಸುತ್ತ: ಎಲ್ಲಾ ಕಡೆ; ಬಿಗಿ: ಬಂಧಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಹೊಳೆ: ಪ್ರಕಾಶ; ಹೊಂಗೆಲಸ: ಚಿನ್ನದ ಕಾರ್ಯದ; ಸುರೇಖೆ: ಚೆಲುವಾದ ಸಾಲು; ಗಗನ: ಆಗಸ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಠೆಕ್ಕೆಯ: ಬಾವುಟ; ಪಲ್ಲವ:ಚಿಗುರು; ಅಗಿ: ಜಗಿ, ಆವರಿಸು; ಮೆರೆ: ಹೊಳೆ; ಬಿಗಿ: ಭದ್ರವಾಗಿರುವುದು; ಮೊಗ: ಮುಖ; ವಿಳಾಸ: ವಿಹಾರ, ಚೆಲುವು; ಮೊಗರಂಬ: ಮೊಗಮುಟ್ಟು;

ಪದವಿಂಗಡಣೆ:
ಮುಗಿಲ +ಹೊದರಿನೊಳ್+ಎಳೆಯ +ರವಿ +ರ
ಶ್ಮಿಗಳು +ಪಸರಿಸುವಂತೆ +ಸುತ್ತಲು
ಬಿಗಿದ +ಗುಳದಲಿ +ಹೊಳೆಯೆ +ಹೊಂಗೆಲಸದ+ ಸುರೇಖೆಗಳು
ಗಗನ+ ಗಂಗಾನದಿಯ +ಕಾಲುವೆ
ತೆಗೆದರ್+ಎನೆ+ ಠೆಕ್ಕೆಯದ +ಪಲ್ಲವವ್
ಅಗಿಯೆ+ ಮೆರೆದುದು+ ಬಿಗಿದ +ಮೊಗರಂಬದ +ವಿಳಾಸದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಗನ ಗಂಗಾನದಿಯ ಕಾಲುವೆತೆಗೆದರೆನೆ

ಪದ್ಯ ೧೦: ಭೀಷ್ಮನು ಹೇಗೆ ತೋರಿದನು?

ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ (ಭೀಷ್ಮ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೈರಿಗಳನ್ನು ಎಲ್ಲಾದಿಕ್ಕುಗಳಿಗೆ ಚದುರಿಸುವ ಚತುರನಾದ ಭೀಷ್ಮನು ಅಲಂಕೃತನಾಗಿ ರಥದ ಮಧ್ಯದಲ್ಲಿ ಕುಳಿತಿದ್ದನು. ಸೂರ್ಯನ ತತ್ತಿಗಳೆಂಬಂತೆ ಅವನ ಕವಚಕ್ಕೆ ಮಾಡಿದ್ದ ಹೊಂಗೆಲಸದ ನಡುವೆ ಮಾಣಿಕ್ಯಗಳು ಹೊಳೆಯುತ್ತಿದ್ದವು. ಅವನ ಕೊರಳಿನಲ್ಲಿ ಮುತ್ತಿನಹಾರ ತೂಗಾಡುತ್ತಿತ್ತು.

ಅರ್ಥ:
ತರುಣ: ಚಿಕ್ಕವ; ರವಿ: ಸೂರ್ಯ; ತತಿ: ಸಕಾಲ, ಗುಂಪು; ಸಂವರಿಸು: ಗುಂಪುಗೂಡು; ಮಾಣಿಕ: ಮಾಣಿಕ್ಯ; ತರತರದ: ಬೇರೆ, ಹಲವಾರು; ಕೊರಳು: ಗಂಟಲು; ಹೀರ: ನವರತ್ನಗಳಲ್ಲಿ ಒಂದು, ವಜ್ರ; ಆವಳಿ: ಸಾಲು, ಗುಂಪು; ರಶ್ಮಿ: ಕಿರಣ, ಕಾಂತಿ; ಹೊರಳಿ: ಗುಂಪು, ಸಮೂಹ; ಹೊದಕೆ: ಮುಸುಕು; ಕವಚ: ಹೊದಿಕೆ, ಉಕ್ಕಿನ ಅಂಗಿ; ಅರಿ: ವೈರಿ; ದಿಶ: ದಿಕ್ಕು; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವವ; ಎಸೆ: ಶೋಭಿಸು, ಬಾಣ ಬಿಡು; ರಥ: ಬಂಡಿ; ಮಧ್ಯ: ನಡುವೆ;

ಪದವಿಂಗಡಣೆ:
ತರುಣ +ರವಿಗಳ +ತತ್ತಿಗಳ +ಸಂ
ವರಿಸದಿರರ್+ಎನೆ +ಮಾಣಿಕಂಗಳ
ತರತರದ +ಕೀಲಣೆಯ +ಹೊಂಗೆಲಸದ +ಸುರೇಖೆಗಳ
ಕೊರಳ +ಹೀರಾವಳಿಯ +ರಶ್ಮಿಯ
ಹೊರಳಿಗಳ+ ಹೊದಕೆಗಳ+ ಕವಚದಲ್
ಅರಿದಿಶಾಪಟ+ ಭೀಷ್ಮನ್+ಎಸೆದನು +ರಥದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಣ ರವಿಗಳ ತತ್ತಿಗಳ ಸಂವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ

ಪದ್ಯ ೧೦: ಸಖಿಯರು ಹೇಗೆ ಸಿದ್ಧರಾದರು?

ಇದಿರಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು (ವಿರಾಟ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಉತ್ತರನನ್ನು ಇದಿರುಗೊಳ್ಳಲು ವಿರಾಟನು ಆಜ್ಞೆಯನ್ನು ನೀಡಿದನು. ಅರಮನೆಯ ಸ್ತ್ರೀಯರು ಮುತ್ತು ರತ್ನದ ಆಭರಣಗಳಿಂದ ಅಲಂಕಾರ ಮಾಡಿಕೊಂಡು, ಚಿತ್ರ ವಿಚಿತ್ರವಾದ ವಸ್ತ್ರಗಳನ್ನು ಧರಿಸಿ, ಮೃದಂಗ, ಕಹಳೆಗಳ ಧ್ವನಿ ಮಾಡುತ್ತಿರಲು, ಸಖಿಯರು ಸ್ವಾಗತಿಸಲು ಸಿದ್ಧರಾಗಲು, ಉತ್ತರನು ಇದಿರುಗೊಳ್ಳಲು ತಯಾರಾದನು.

ಅರ್ಥ:
ಇದಿರು: ಎದುರು; ಹೇಳು: ತಿಳಿಸು; ಸರ್ವಾಂಗ: ಎಲ್ಲಾ ಅಂಗಗಳು; ಮಣಿ: ಬೆಲೆಬಾಳುವ ರತ್ನ; ಮೌಕ್ತಿಕ: ಮುತ್ತು; ಸಿಂಗಾರ: ಅಲಂಕಾರ; ಸುರೇಖೆ: ಚೆಲುವಿನ ಮಾಟ; ಲಲಿತ: ಸುಂದರ; ಚಿತ್ರಾವಳಿ: ಬರೆದ ಆಕೃತಿಗಳ ಸಾಲು; ಮುಸುಕು: ಬಟ್ಟೆ, ಹೊದಿಕೆ; ಸುದತಿ: ಸುಂದರಿ, ಚೆಲುವಾದ ಹಲ್ಲುಳ್ಳವಳು; ಹೊರವಂಟು: ತೆರಳು; ಒಗ್ಗು: ಗುಂಪು, ಸಮೂಹ; ಮೃದು: ಮೆದು, ಕೋಮಲ; ಮೃದಂಗ: ಸಂಗೀತದ ತಾಲ ವಾದ್ಯ; ಕಹಳೆ: ತುತ್ತೂರಿ; ಸಂಪದ: ಐಶ್ವರ್ಯ, ಸಂಪತ್ತು; ಸೊಂಪು: ಸೊಗಸು, ಚೆಲುವು; ರಾಜಾಂಗನೆ: ರಾಜರ ಅರಮನೆಯ ಸಖಿಯರು; ಅನುವು:ಸೊಗಸು;

ಪದವಿಂಗಡಣೆ:
ಇದಿರಗೊಳ +ಹೇಳ್+ಎನಲು +ಸರ್ವಾಂ
ಗದಲಿ +ಮಣಿ +ಮೌಕ್ತಿಕದ +ಸಿಂಗಾ
ರದ +ಸುರೇಖೆಯ +ಲಲಿತ +ಚಿತ್ರಾವಳಿಯ +ಮುಸುಕುಗಳ
ಸುದತಿಯರು +ಹೊರವಂಟರ್+ಒಗ್ಗಿನ
ಮೃದು +ಮೃದಂಗದ +ಕಹಳೆಗಳು +ಸಂ
ಪದದ +ಸೊಂಪಿನಲ್+ಎಸೆಯೆ +ರಾಜಾಂಗನೆಯರ್+ಅನುವಾಯ್ತು

ಅಚ್ಚರಿ:
(೧) ಸರ್ವಾಂಗ, ಸಿಂಗಾರ, ಸುರೇಖೆ, ಸುದತಿ, ಸೊಂಪಿನಲೆಸೆಯೆ – ಸ ಕಾರದ ಪದಗಳ ಬಳಕೆ

ಪದ್ಯ ೨೨: ಬಾಣದ ಪ್ರವಾಹ ಹೇಗಿತ್ತು?

ಮೊರೆವ ಗರಿಗಳ ಮೊನೆಯಲುದುರುವ
ಹೊರಳಿಗಿಡಿಗಳ ಬಾಯಧಾರೆಗ
ಳುರಿಯ ಹೊದರಿನ ಹುದಿದ ಹೊಂಬರಹದ ಸುರೇಖೆಗಳ
ಸರಳು ಹೊಕ್ಕವು ಹೆಕ್ಕಿದವು ಖೇ
ಚರಬಲವನೊಕ್ಕಿದವು ತೂರಿದ
ವರಿಭಟರ ಚುಚ್ಚಿದವು ಹೆಚ್ಚಿದವೆಂಟುದೆಸೆಗಳಲಿ (ಅರಣ್ಯ ಪರ್ವ, ೨೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬಾಣದ ಗರಿಗಳು ಸದ್ದುಮಾಡುತ್ತಾ ಹೋಗುತ್ತಿರಲು, ಕಿಡಿಗಳು ಉದುರಿದವು ಬಾಣಗಲ ಮೊನೆಗಳು ಉರಿಯನ್ನು ಕರಿದವು. ಸುವರ್ಣರೇಖೆಗಳುಳ್ಳ ಬಾಣಗಳು ಗಂಧರ್ವ ಬಲವನ್ನು ಹೊಕ್ಕು ಯೋಧರನ್ನು ಆಯ್ದು ಒಕ್ಕಿದವು. ಶತ್ರುಗಳಿಗೆ ಚುಚ್ಚಿದವು, ತೂರಿದವು. ಎಂಟೂ ದಿಕ್ಕುಗಳಲ್ಲಿ ಹೆಚ್ಚುತ್ತಾ ಬಂದವು.

ಅರ್ಥ:
ಮೊರೆ: ಗರ್ಜಿಸು; ಗರಿ: ಬಾಣದ ಹಿಂಭಾಗ; ಮೊನೆ: ತುದಿ, ಕೊನೆ; ಉದುರು: ಕೆಳಗೆ ಬೀಳು; ಹೊರಳು: ತಿರುವು, ಬಾಗು; ಕಿಡಿ: ಬೆಂಕಿ; ಹೊದರು: ತೊಡಕು, ತೊಂದರೆ; ಧಾರೆ: ಪ್ರವಾಹ; ಉರಿ: ಬೆಂಕಿ; ಹುದಿ: ಆವೃತವಾಗು; ಹೊಂಬರಹ: ಸುವರ್ಣ ಬರವಣಿಗೆ; ರೇಖೆ: ಗೆರೆ, ಗೀಟು; ಸರಳು: ಬಾಣ; ಹೊಕ್ಕು: ಸೇರು; ಹೆಕ್ಕು: ಕೆದಕು, ಬೆದಕು; ಖೇಚರ: ಗಂಧರ್ವ; ಬಲ:ಸೈನ್ಯ; ಒಕ್ಕು: ಪ್ರವಹಿಸು; ತೂರು: ಎಸೆ, ಬೀಸು; ಅರಿ: ವೈರಿ; ಭಟ: ಸೈನಿಕ; ಚುಚ್ಚು; ತಿವಿ; ಹೆಚ್ಚು: ಅಧಿಕ; ದೆಸೆ: ದಿಕ್ಕು;

ಪದವಿಂಗಡಣೆ:
ಮೊರೆವ +ಗರಿಗಳ+ ಮೊನೆಯಲ್+ಉದುರುವ
ಹೊರಳಿ+ಕಿಡಿಗಳ+ ಬಾಯ+ಧಾರೆಗಳ್
ಉರಿಯ +ಹೊದರಿನ+ ಹುದಿದ +ಹೊಂಬರಹದ+ ಸುರೇಖೆಗಳ
ಸರಳು +ಹೊಕ್ಕವು +ಹೆಕ್ಕಿದವು +ಖೇ
ಚರ+ಬಲವನ್+ಒಕ್ಕಿದವು +ತೂರಿದವ್
ಅರಿಭಟರ +ಚುಚ್ಚಿದವು +ಹೆಚ್ಚಿದವ್+ಎಂಟು+ದೆಸೆಗಳಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊದರಿನ ಹುದಿದ ಹೊಂಬರಹದ