ಪದ್ಯ ೫೪: ಭೀಮ ದುರ್ಯೋಧನರ ಯುದ್ಧವನ್ನು ನೋಡಲು ಯಾರು ಬಂದರು?

ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡೆಯರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ (ಗದಾ ಪರ್ವ, ೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನು ಗದೆಯನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ಅಣ್ಣತಮ್ಮಂದಿರು ಪಕ್ಕದಲ್ಲಿ ನಿಂತರು. ಯುದ್ಧದ ಅಂಕಣವನ್ನು ತಿಳಿದು ಚತುರಂಗ ಸೈನ್ಯವು ಸುತ್ತಲೂ ನಿಂತಿತು. ಆಕಾಶದಲ್ಲಿ ದೇವತೆಗಳು ವಿಮಾನಗಳಲ್ಲಿ ನೆರೆದರು.

ಅರ್ಥ:
ಗದೆ: ಮುದ್ಗರ; ಕೊಂಡು: ಪಡೆದು; ಇದಿರು: ಎದುರು; ಬಲ: ದಕ್ಷಿಣಭಾಗ; ವಾಮ: ಎಡಭಾಗ; ಬಳಸು: ಆವರಿಸುವಿಕೆ; ಅಗ್ರಜ: ಅಣ್ಣ; ಅನುಜ: ತಮ್ಮ; ಕದನ: ಯುದ್ಧ; ಭೂಮಿ: ಅವನಿ; ಬಿಡೆ: ತೊರೆ; ಅರಿ: ತಿಳಿ; ನಿಂದು: ನಿಲ್ಲು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸುತ್ತು: ತಿರುಗು; ಗಗನ: ಆಗಸ; ಒದಗು: ಲಭ್ಯ, ದೊರೆತುದು; ಸುರ: ದೇವತೆ; ನಿಕರ: ಗುಂಪು; ತೀವಿ: ಚುಚ್ಚು; ವಿಮಾನವೀಥಿ: ಆಗಸ ಮಾರ್ಗ;

ಪದವಿಂಗಡಣೆ:
ಗದೆಯ +ಕೊಂಡನು +ಕೌರವೇಂದ್ರನನ್
ಇದಿರುಗೊಂಡನು +ಭೀಮ +ಬಲವಂ
ಕದಲಿ +ವಾಮಾಂಗದಲಿ +ಬಳಸಿದರ್+ಅಗ್ರಜ+ಅನುಜರು
ಕದನಭೂಮಿಯ +ಬಿಡೆಯರಿದು +ನಿಂ
ದುದು +ಚತುರ್ಬಲ +ಸುತ್ತಿ+ ಗಗನದೊಳ್
ಒದಗಿದುದು +ಸುರನಿಕರ+ ತೀವಿ +ವಿಮಾನವೀಥಿಯಲಿ

ಅಚ್ಚರಿ:
(೧) ಬಲವಂಕ, ವಾಮಾಂಕ – ವಿರುದ್ಧ ಪದಗಳು
(೨) ಆಗಸ ಎಂದು ಹೇಳಲು – ವಿಮಾನವೀಥಿ ಪದದ ಬಳಕೆ

ಪದ್ಯ ೮೬: ದೇವತೆಗಳು ಏನೆಂದು ಕೂಗಿದರು?

ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆ ಜಡಿದುದು ಝಳದಝಾಡಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ (ಅರಣ್ಯ ಪರ್ವ, ೮ ಸಂಧಿ, ೮೬ ಪದ್ಯ)

ತಾತ್ಪರ್ಯ:
ಆ ದಿನದ ಉತ್ಸವಕ್ಕೆ ದೇವತೆಗಳು ಗುಂಪುಗುಂಪಾಗಿ ದೇವೇಂದ್ರನರಮನೆಗೆ ಬಂದು ಅರಮನೆಯಲ್ಲಿ ಝಳದಂತಹ ಶಾಖವುಂಟಾಯಿತು. ದೇವತೆಗಳ ಮಂದಿಯನ್ನು ತೊಲಗಿಸು. ಜಾಗ ಬಿಡು, ಮುಂದೆ ನಿಂತವರನ್ನು ಹೊಯ್ಯಿ, ಸದ್ದು ಮಾಡುವುದನ್ನು ನಿಲ್ಲಿಸಿ ಎಂದು ದೇವತೆಗಳು ಕೂಗಿದರು.

ಅರ್ಥ:
ಉತ್ಸವ: ಸಮಾರಂಭ; ಅಮರ: ಸುರರು, ದೇವತೆ; ನಿಕರ: ಗುಂಪು; ಸಂದಣಿ: ಸಮೂಹ; ಇಂದ್ರ: ಸುರಪತಿ; ಮಂದಿರ: ಆಲಯ; ಒತ್ತೊತ್ತು: ಹತ್ತಿರ; ಜಡಿ:ಝಳಪಿಸು, ಹರಡು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಮಂದಿ: ಜನ; ತೊಲಗು: ಹೊರನಡೆ; ತೆರಹು: ಎಡೆ, ಜಾಗ; ಮುಂದಣ: ಮುಂದಿನ; ಗಜಬಜ: ಗೊಂದಲ; ಮಾಣು: ನಿಲ್ಲಿಸು; ಗರ್ಜಿಸು: ಜೋರಾಗಿ ಹೇಳು; ಆಸ್ಥಾನ: ಓಲಗ; ಸುರನಿಕರ: ದೇವತೆಗಳ ಗುಂಪು;

ಪದವಿಂಗಡಣೆ:
ಅಂದಿನ್+ಉತ್ಸವದ್+ಅಮರ +ನಿಕರದ
ಸಂದಣಿಯನ್+ಏನೆಂಬೆನ್+ಇಂದ್ರನ
ಮಂದಿರದೊಳ್+ಒತ್ತೊತ್ತೆ +ಜಡಿದುದು+ ಝಳದ+ಝಾಡಿಯಲಿ
ಮಂದಿ +ತೊಲಗಲಿ+ ತೆರಹುಗೊಡು+ ಹೊಯ್
ಮುಂದಣವರನು+ ಗಜಬಜವ+ ಮಾ
ಣೆಂದು +ಗರ್ಜಿಸಿತ್+ಇಂದ್ರನ್+ಆಸ್ಥಾನದಲಿ+ ಸುರ+ನಿಕರ

ಅಚ್ಚರಿ:
(೧) ಅಮರ, ಸುರ; ಸಂದಣಿ, ನಿಕರ; ಝಳ, ಝಾಡಿ – ಸಮನಾರ್ಥಕ ಪದಗಳು