ಪದ್ಯ ೫೮: ಅಭಿಮನ್ಯುವಿನ ರಥವ ವೇಗ ಹೇಗಿತ್ತು?

ಸುರನದಿಗೆ ಶಿವನಾಯ್ತು ಮಕರಾ
ಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ
ಅರರೆ ಸತ್ವ ರಜಸ್ತಮಂಗಳೊ
ಳೆರಡು ಗುಣವಡಗಿತು ರಜೋ ಗುಣ
ದುರುಳಿಯಾದುದು ಲೋಕವೆನೆ ಘಾಡಿಸಿತು ಪದಧೂಳಿ (ದ್ರೋಣ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ಗಂಗಾನದಿಯು ಶಿವನಲ್ಲಿ ಬಂಧಿಸಲ್ಪಟ್ಟಹಾಗೆ, ಸಾಗರವನ್ನು ಅಗಸ್ತ್ಯರು ತಮ್ಮ ಕಮಂಡಲದಲ್ಲಿ ಹಿಡಿದಹಾಗೆ, ರಾಹುವು ಸೂರ್ಯನನ್ನು ಕಬಳಿಸಿದಹಾಗೆ ಅಭಿಮನ್ಯುವಿನ ರಥದ ಪಾದಧೂಳಿಯು ಸತ್ವ, ತಮ ಗುಣಗಳನ್ನು ಕಬಳಿಸಿ ಕೇವಲ ರಜೋಗುಣವೊಂದೇ ಉಳಿಯಿತು. ರಥದಪದಧೂಳಿಯು ಗಂಗಾನದಿಯನ್ನೂ ಸಾಗರವನ್ನೂ ಶೋಷಿಸಿತು, ಸೂರ್ಯಮಂಡಲವನ್ನು ಮುಚ್ಚಿತು.

ಅರ್ಥ:
ಸುರನದಿ: ಗಂಗೆ; ಶಿವ: ಶಂಕರ; ಮಕರ: ಮೊಸಳೆ; ಮಕರಾಕರ: ಸಮುದ್ರ; ಕಳಶಜ: ಅಗಸ್ತ್ಯ; ತರಣಿ: ಸೂರ್ಯ; ಅರಿ: ವೈರಿ; ವಿಧುಂತುದ: ರಾಹು; ರಥ: ಬಂಡಿ; ಪದ: ಚರಣ; ತಳಿತ: ಚಿಗುರಿದ; ಧೂಳು: ಮಣ್ಣಿನ ಕಣ; ಸತ್ವ: ಸಾರ, ಸಾತ್ವಿಕ ಗುಣ; ರಜ: ರಜಸ್ಸು ಗುಣ, ಧೂಳು; ತಮ: ಅಂಧಕಾರ, ತಮೋಗುಣ; ಗುಣ: ನಡತೆ, ಸ್ವಭಾವ; ಅಡಗು: ಅವಿತುಕೊಳ್ಳು; ಲೋಕ: ಜಗತ್ತು; ಘಾಡಿಸು: ವ್ಯಾಪಿಸು; ಪದ: ಪಾದ; ಧೂಳು: ರಜ;

ಪದವಿಂಗಡಣೆ:
ಸುರನದಿಗೆ +ಶಿವನಾಯ್ತು +ಮಕರಾ
ಕರಕೆ +ಕಳಶಜನಾಯ್ತು +ತರಣಿಗೆ
ಅರಿ+ ವಿಧುಂತುದನಾಯ್ತು +ರಥ+ಪದ+ತಳಿತ+ ಧೂಳಿಯಲಿ
ಅರರೆ+ ಸತ್ವ+ ರಜಸ್+ ತಮಂಗಳೊಳ್
ಎರಡು +ಗುಣವ್+ಅಡಗಿತು +ರಜೋ +ಗುಣ
ದುರುಳಿಯಾದುದು +ಲೋಕವೆನೆ +ಘಾಡಿಸಿತು+ ಪದಧೂಳಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರನದಿಗೆ ಶಿವನಾಯ್ತು ಮಕರಾಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ

ಪದ್ಯ ೪೮: ಸೈನ್ಯದ ಓಡಾಟವು ಹೇಗಿತ್ತು?

ಜಲಧಿಗಳ ಕುದಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ (ಭೀಷ್ಮ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲು ತುಳಿತದಿಂದ ಎದ್ದ ಧೂಳು ಸಮುದ್ರಗಳನ್ನು ಕುಡಿದಿತು, ಆಕಾಶ ಮಂಡಲವನ್ನೆಳೆಯಿತು. ಗಂಗಾನದಿಯನ್ನು ಮುಕ್ಕುಳಿಸಿತು. ಎಲ್ಲಾ ಪರ್ವತಗಳನ್ನು ನುಂಗಿ ಆಕಾಶವನ್ನು ಬೆದರಿಸಿತು. ನೆಲವು ಸವೆಯಿತು. ಸೂರ್ಯನ ಕಣ್ಣುಗಳೊಳಹೊಕ್ಕಿತು, ಇದೇನು ಬ್ರಹ್ಮನು ಪ್ರಳಯ ರುದ್ರನಾದನೇ ಎನ್ನಿಸಿತು.

ಅರ್ಥ:
ಜಲಧಿ: ಸಾಗರ; ಕುಡಿ: ಪಾನಮಾಡು; ನಭ: ಆಗಸ; ಮಂಡಲ: ಗುಂಡಾಗಿರುವ; ಸೆಳೆ: ಆಕರ್ಷಿಸು; ಸುರನದಿ; ಗಂಗಾನದಿ; ಮುಕ್ಕುಳಿಸು: ಹೊರಹಾಕು; ಅಖಿಲ: ಎಲ್ಲಾ; ಅದ್ರಿ: ಬೆಟ್ಟ; ನುಂಗು: ಕಬಳಿಸು; ದಿವ: ಆಕಾಶ, ದಿನ; ಅಳುಕಿಸು: ಹೆದರು; ನೆಲ: ಭೂಮಿ; ಸವೆ: ನಶಿಸು; ನೇಸರ: ಸೂರ್ಯ; ಕಂಗಳು: ಕಣ್ಣು; ಕದುಕು: ಕೊಕ್ಕಿನಿಂದ ಕುಕ್ಕು, ಕಡಿ; ನೆನೆ: ಜ್ಞಾಪಿಸು; ನಳಿನಭವ: ಬ್ರಹ್ಮ; ಹರ: ಶಿವ; ಉಚ್ಚಳಿಸು: ಮೇಲಕ್ಕೆ ಹಾರು; ಪದ: ಪಾದ; ಧೂಳಿ: ಮಣ್ಣಿನ ಕಣಗಳು;

ಪದವಿಂಗಡಣೆ:
ಜಲಧಿಗಳ +ಕುಡಿದುದು +ನಭೋಮಂ
ಡಲವ +ಸೆಳೆದುದು +ಸುರನದಿಯ +ಮು
ಕ್ಕುಳಿಸಿತ್+ಅಖಿಲ+ಅದ್ರಿಗಳ+ ನುಂಗಿತು+ ದಿವವನ್+ಅಳುಕಿಸಿತು
ನೆಲನ +ಸವೆಸಿತು +ನೇಸರಿನ+ಕಂ
ಗಳನು +ಕದುಕಿತು +ನೆನೆಯ +ಬಾರದು
ನಳಿನಭವ+ ಹರನಾದನ್+ಎನಲ್+ಉಚ್ಚಳಿಸೆ +ಪದಧೂಳಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆಲನ ಸವೆಸಿತು ನೇಸರಿನ ಕಂಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ

ಪದ್ಯ ೧೩: ಮಲ್ಲರು ಎಲ್ಲಿ ಬೀಡು ಬಿಟ್ಟರು?

ಸುರನದಿಯನುತ್ತರಿಸಿ ಗೋದಾ
ವರಿಯ ಹೊರೆಗೈದಿದರು ತರಣಿಯ
ಕಿರಣಲಹರಿಯ ಹೊಯ್ಲಿನಲಿ ಶ್ರಮವಾಗೆ ಪರಿಹರಿಸಿ
ಮರುದಿವಸ ತೆರಳಿದರು ಮಲ್ಲರು
ನೆರೆದು ನಡೆದುದು ಬಂದು ಕೃಷ್ಣೆಯ
ವರನದಿಯ ತೀರದಲಿ ಬೀಡು ವಿನಾಥಪುರದಲ್ಲಿ (ವಿರಾಟ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಂಗಾ ಯಮುನಾ ನದಿಗಳನ್ನು ದಟಿ, ಬಿಸಿಲ ಬೇಗೆಯನ್ನು ಗೋದಾವರೀ ತೀರದಲ್ಲಿ ಪರಿಹರಿಸಿಕೊಂಡು, ಮರುದಿನ ಪ್ರ್ಯಾಣ ಬೆಳೆಸಿದರು. ಪ್ರಯಾಣ ಮಾಡುತ್ತಾ ಕೃಷ್ಣಾ ನದಿಯ ತೀರದ ವಿನಾಥಪುರದಲ್ಲಿ ಬೀಡು ಬಿಟ್ಟರು.

ಅರ್ಥ:
ಸುರನದಿ: ಗಂಘೆ; ಉತ್ತರಿಸು: ದಾಟಿಸು; ಐದು: ಬಂದುಸೇರು; ತರಣಿ: ಸೂರ್ಯ; ಕಿರಣ: ರಶ್ಮಿ; ಲಹರಿ: ಅಲೆ, ತೆರೆ; ಹೊಯ್ಲು: ಹೊಡೆತ; ಶ್ರಮ: ಕಷ್ಟ, ದಣಿವು; ಪರಿಹರಿಸು: ನಿವಾರಿಸು; ದಿವಸ: ದಿನ; ತೆರಳು: ಹೋಗು; ಮಲ್ಲ: ಜಟ್ಟಿ; ನೆರೆ: ಸೇರು; ನಡೆ: ಚಲಿಸು; ಬಂದು: ಆಗಮಿಸು; ವರನದಿ: ಶ್ರೇಷ್ಠ ಸರೋವರ; ತೀರ: ದಡ; ಬೀಡು: ಆವಾಸ, ನೆಲೆ; ಪುರ: ಊರು;

ಪದವಿಂಗಡಣೆ:
ಸುರನದಿಯನ್+ಉತ್ತರಿಸಿ +ಗೋದಾ
ವರಿಯ +ಹೊರೆಗೈದಿದರು +ತರಣಿಯ
ಕಿರಣ+ಲಹರಿಯ +ಹೊಯ್ಲಿನಲಿ +ಶ್ರಮವಾಗೆ +ಪರಿಹರಿಸಿ
ಮರುದಿವಸ +ತೆರಳಿದರು +ಮಲ್ಲರು
ನೆರೆದು +ನಡೆದುದು +ಬಂದು+ ಕೃಷ್ಣೆಯ
ವರನದಿಯ+ ತೀರದಲಿ +ಬೀಡು +ವಿನಾಥಪುರದಲ್ಲಿ

ಅಚ್ಚರಿ:
(೧) ದಕ್ಷಿಣಕ್ಕೆ ತೆರಳಿದರು ಎಂದು ಹೇಳಲು ನದಿಗಳ ಹೆಸರ ಬಳಕೆ – ಸುರನದಿ, ಗೋದಾವರಿ, ಕೃಷ್ಣೆ

ಪದ್ಯ ೧೫: ದುರ್ಯೋಧನ ನಿಟ್ಟುಸಿರು ಬಿಡಲು ಕಾರಣವೇನು?

ಹೊಗಲಿ ಪಾಳೆಯ ಪುರವನೆಂದು
ಬ್ಬೆಗದ ಬೆಳೆ ಸಿರಿವಂತನೆತ್ತಿದ
ದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ
ಹೊಗೆವ ಮೋರೆಯ ನೆಲಕೆ ನೆಟ್ಟಾ
ಲಿಗಳ ನಿಖಿಳೇಂದ್ರಿಯದ ರೋಚಕ
ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ (ಅರಣ್ಯ ಪರ್ವ, ೨೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಳೆಯವು ನಗರವನ್ನು ಪ್ರವೇಶಿಸಲಿ ಎಂದು ಕೌರವನು ಆಜ್ಞೆಮಾಡಿದನು. ಹೇರಳವಾದ ಉದ್ವೇಗದ ಬೆಳೆಯನ್ನು ಬೆಳೆದ ಸಿರಿವಂತನಾದ ಕೌರವನ ಮುಖವು ಕಪ್ಪೇರಿತು, ಕಣ್ಣುಗಳು ನೆಲವನ್ನೇ ನೋಡಿತು, ಸಮಸ್ತ ಇಂದ್ರಿಯಗಳ ಸುಖವನ್ನು ಬೇಸರದ ಬೇಗೆಯು ಬಿಗಿದಿತ್ತು, ನಿಟ್ಟುಸಿರನ್ನು ಬಿಡುತ್ತಾ ಗಂಗಾನದಿಯ ತೀರದಲ್ಲಿ ಕುಳಿತನು.

ಅರ್ಥ:
ಹೊಗು: ಪ್ರವೇಶಿಸು; ಪಾಳೆಯ: ಬೀಡು, ಶಿಬಿರ; ಪುರ: ಊರು; ಉಬ್ಬೆಗ: ದುಃಖ; ಬೆಳೆ: ಪೈರು; ಸಿರಿವಂತ: ಶ್ರೀಮಂತ; ದುಗುಡ: ದುಃಖ; ಕುಳ್ಳಿರ್ದ: ಆಸೀನನಾಗು; ಸುರನದಿ: ಗಂಗೆ; ತೀರ: ದಡ; ಮೋರೆ: ಮುಖ; ನೆಲ: ಭೂಮಿ; ನೆಟ್ಟು: ಒಂದೇ ಕಡೆ ನೋಡುತ್ತಾ; ಆಲಿ: ಕಣ್ಣು; ನಿಖಿಳ: ಎಲ್ಲಾ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ರೋಚಕ: ಹಸಿವು; ಬಿಗಿ: ಗಟ್ಟಿ, ಕಟ್ಟು; ಬೇಗೆ: ಬೆಂಕಿ, ಕಿಚ್ಚು; ಬೇಸರ: ನೋವು, ದುಃಖ; ಬಿಸುಗುದಿ: ಉದ್ವೇಗ, ಕುದಿ; ಸುಯ್ಲು: ನಿಟ್ಟುಸಿರು;

ಪದವಿಂಗಡಣೆ:
ಹೊಗಲಿ +ಪಾಳೆಯ +ಪುರವನೆಂದ್+
ಉಬ್ಬೆಗದ +ಬೆಳೆ +ಸಿರಿವಂತನ್+ಎತ್ತಿದ
ದುಗುಡದಲಿ +ಕುಳ್ಳೀರ್ದನಾ +ಸುರನದಿಯ+ ತೀರದಲಿ
ಹೊಗೆವ+ ಮೋರೆಯ +ನೆಲಕೆ +ನೆಟ್ಟ
ಆಲಿಗಳ +ನಿಖಿಳ+ ಇಂದ್ರಿಯದ +ರೋಚಕ
ಬಿಗಿದ +ಬೇಗೆಯ +ಬೇಸರಿನ +ಬಿಸುಗುದಿಯ +ಸುಯ್ಲಿನಲಿ

ಅಚ್ಚರಿ:
(೧) ದುರ್ಯೋಧನನ ದುಃಖದ ಚಿತ್ರಣ – ಉಬ್ಬೆಗದ ಬೆಳೆ ಸಿರಿವಂತನೆತ್ತಿದದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ;
(೨) ಬ ಕಾರದ ಸಾಲು ಪದ – ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ

ಪದ್ಯ ೧೨೧: ಯಾರು ಶ್ರೇಷ್ಠರು?

ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನು ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥಗಳಲ್ಲಿ ಗಂಗಾನದಿ, ಮುನಿಗಳಲ್ಲಿ ವೇದವ್ಯಾಸ, ವ್ರತಿಗಳಲ್ಲಿ ಹನುಮಂತ, ದೇವತೆಗಳಲ್ಲಿ ವಿಷ್ಣು, ರಾಜರಲ್ಲಿ ಧರ್ಮರಾಯ ಇವರು ಶ್ರೇಷ್ಠರು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ; ದುಗ್ಧ: ಹಾಲು; ಅಬ್ಧಿ: ಸಮುದ್ರ; ತೀರ್ಥ:ಪವಿತ್ರವಾದ ಜಲ; ಸುರನದಿ: ಗಂಗಾ; ಮುನಿ: ಋಷಿ; ವ್ರತಿ:ನಿಯಮಬದ್ಧವಾದ ನಡವಳಿಕೆಯುಳ್ಳವನು;ಜಲ: ನೀರು; ಜಲರುಹ: ಕಮಲ; ಅಕ್ಷ: ಕಣ್ಣು; ದೈವ: ದೇವತೆ; ಧರಣಿ: ಭೂಮಿ; ಧರಣೀಪಾಲ: ರಾಜ; ಅಗ್ಗ: ಶ್ರೇಷ್ಠತೆ; ಚಿತ್ತೈಸು: ಗಮನಿಸು; ಆವಳಿ: ಗುಂಪು, ಸಾಲು;

ಪದವಿಂಗಡಣೆ:
ಜಲಧಿಯೊಳು +ದುಗ್ಧ+ಅಬ್ಧಿ +ತೀರ್ಥ
ಆವಳಿಗಳೊಳು +ಸುರನದಿ+ ಮುನೀಶ್ವರ
ರೊಳಗೆ+ ವೇದವ್ಯಾಸನಾ+ ವ್ರತಿಗಳೊಳು +ಹನುಮಂತ
ಜಲರುಹಾಕ್ಷನು +ದೈವದೊಳು +ಕೇಳ್
ಉಳಿದ +ಧರಣೀಪಾಲರೊಳಗ್
ಅಗ್ಗಳೆಯನೈ+ ಧರ್ಮಜನು +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಕಮಲಕ್ಕೆ ಜಲರುಹ, ಗಂಗೆಗೆ ಸುರನದಿ ಎಂಬ ಪದದ ಬಳಕೆ