ಪದ್ಯ ೧೩: ಭೀಷ್ಮನು ಯಾರೊಡನೆ ಯುದ್ಧಕ್ಕೆ ಬಂದನು?

ಹೊಗರೊಗುವ ಝಳಪಿಸುವಡಾಯುಧ
ನೆಗಹಿ ತೂಗುವ ಲೌಡಿಗಳ ಮೊನೆ
ಝಗಝಗಿಸಿ ಝಾಡಿಸುವ ಸಬಳದ ತಿರುಹುವಂಕುಶದ
ಬಿಗಿದುಗಿವ ಬಿಲ್ಲುಗಳ ಬೆರಳೊಳ
ಗೊಗೆವ ಕೂರಂಬುಗಳ ಸುಭಟಾ
ಳಿಗಳೊಡನೆ ಗಾಂಗೇಯ ಹೊಕ್ಕನು ಕಾಳೆಗದ ಕಳನ (ಭೀಷ್ಮ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಕಾಂತಿ, ಮೇಲೆತ್ತಿ ತೂಗುವ ಲೌಡಿಗಳು, ಝಾಡಿಸುವ ಸಬಳಗಳ ಹೊಳಪು, ತಿರುವುತ್ತಿದ್ದ ಅಂಕುಶಗಳು ಹೆದೆಯೇರಿಸಿದ ಬಿಲ್ಲು, ಕೈಯಲ್ಲಿ ಹಿಡಿದ ಕೂರಂಬುಗಳು ಇವನ್ನು ಧರಿಸಿದ ಸುಭಟರೊಡನೆ ಭೀಷ್ಮನು ಕಾಳಗದ ಕಣವನ್ನು ಹೊಕ್ಕನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಝಳ; ಪ್ರಕಾಶ, ಕಾಂತಿ; ಆಯುಧ: ಶಸ್ತ್ರ; ನೆಗಹು: ಮೇಲೆತ್ತು; ತೂಗು: ಅಲ್ಲಾಡಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಮೊನೆ: ಚೂಪು, ತುದಿ; ಝಗಿಸು: ಕಾಂತಿಯುಕ್ತವಾಗಿ ಹೊಳೆ; ಝಾಡಿ: ಕಾಂತಿ; ಸಬಳ: ಈಟಿ, ಭರ್ಜಿ; ತಿರುಹು: ತಿರುಗಿಸು; ಅಂಕುಶ: ಹಿಡಿತ, ಹತೋಟಿ; ಬಿಗಿ: ಕಟ್ಟು, ಬಂಧಿಸು; ಬಿಲ್ಲು: ಚಾಪ; ಬೆರಳು: ಅಂಗುಲಿ; ಒಗೆ: ಎಸೆ, ಹೊಡೆ; ಕೂರಂಬು: ಹರಿತವಾದ ಬಾಣ; ಸುಭಟ: ಸೈನಿಕ; ಆಳಿ: ಗುಂಪು; ಗಾಂಗೇಯ: ಭೀಷ್ಮ; ಹೊಕ್ಕು: ಸೇರು; ಕಾಳೆಗ: ಯುದ್ಧ; ಕಳ: ರಣರಂಗ;

ಪದವಿಂಗಡಣೆ:
ಹೊಗರೊಗುವ +ಝಳಪಿಸುವಡ್+ಆಯುಧ
ನೆಗಹಿ+ ತೂಗುವ +ಲೌಡಿಗಳ +ಮೊನೆ
ಝಗಝಗಿಸಿ +ಝಾಡಿಸುವ +ಸಬಳದ +ತಿರುಹುವ್+ಅಂಕುಶದ
ಬಿಗಿದುಗಿವ+ ಬಿಲ್ಲುಗಳ+ ಬೆರಳೊಳಗ್
ಒಗೆವ +ಕೂರಂಬುಗಳ +ಸುಭಟಾ
ಳಿಗಳೊಡನೆ +ಗಾಂಗೇಯ +ಹೊಕ್ಕನು +ಕಾಳೆಗದ+ ಕಳನ

ಅಚ್ಚರಿ:
(೧) ಹೊಗರು, ಝಳ, ಝಗ, ಝಾಡಿ – ಸಾಮ್ಯಾರ್ಥ ಪದಗಳು